ಉಡುಪಿ:24-06-2023(ಹಾಯ್ ಉಡುಪಿ ನ್ಯೂಸ್) ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ವಿದ್ಯಾರ್ಥಿನಿಯೋರ್ವಳು ಮ್ರತಪಟ್ಟಿದ್ದಾಳೆ ಎಂದು ವಿದ್ಯಾರ್ಥಿನಿಯ ಹೆತ್ತವರು ಮತ್ತು ಇತರ ಸಂಘಟನೆಗಳು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಉಡುಪಿ ನಗರದ ಸಿಟಿ ಆಸ್ಪತ್ರೆಯಲ್ಲಿ ಹೊಟ್ಟೆ ನೋವೆಂದು ಚಿಕಿತ್ಸೆ ಗೆಂದು ದಾಖಲಾಗಿದ್ದ ಕಾಪು ತಾಲೂಕು ಎರ್ಮಾಳು ನಿವಾಸಿ ಡಿಪ್ಲೋಮಾ ವಿದ್ಯಾರ್ಥಿನಿ ನಿಖಿತಾ ಕುಲಾಲ್ ಳನ್ನು ಆಸ್ಪತ್ರೆಯ ವೈದ್ಯರು ಖಾಯಿಲೆ ಏನೆಂದು ನಿಖರವಾಗಿ ತಿಳಿದು ಕೊಳ್ಳದೆ ದಿನಕ್ಕೊಂದು ಖಾಯಿಲೆಯ ಹೆಸರನ್ನು ಹೇಳಿ ಕೊನೆಗೆ ಆಕೆಯ ಆರೋಗ್ಯ ಸಂಪೂರ್ಣ ಹದಗೆಟ್ಟಾಗ ಹೆತ್ತವರಿಗೆ ಸರಿಯಾದ ಮಾಹಿತಿಯನ್ನು ನೀಡದೆ ಆಪರೇಷನ್ ನಡೆಸಿ ಯುವತಿಯ ಸಾವಿಗೆ ಕಾರಣರಾಗಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಸಿಟಿ ಆಸ್ಪತ್ರೆಯ ವೈದ್ಯರ ಲೋಪ ಎದ್ದು ಕಾಣುತ್ತಿದೆ. ರೋಗಿಯ ಖಾಯಿಲೆ ಕ್ಲಿಷ್ಟಕರ ವೆಂದು ತಿಳಿದು ಕೊಂಡ ನಂತರವೂ ತಮ್ಮ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ವೈದ್ಯಕೀಯ ಚಿಕಿತ್ಸೆ ಲಭ್ಯವಿಲ್ಲ ಎಂದು ತಿಳಿದು ಕೊಂಡಿದ್ದರೂ ರೋಗಿಯನ್ನು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಶಿಫ್ಟ್ ಮಾಡಲು ಸಲಹೆ ನೀಡದಿರುವುದು ಸಿಟಿ ಆಸ್ಪತ್ರೆ ಯವರು ಮಾಡಿರುವ ದೊಡ್ಡ ತಪ್ಪು ಆಗಿದೆ ಎನ್ನಲಾಗಿದೆ.
ಸಿಟಿ ಆಸ್ಪತ್ರೆಯವರ ಈ ಒಂದು ತಪ್ಪಿನಿಂದಾಗಿ ಬಾಳಿ ಬದುಕ ಬೇಕಾಗಿದ್ದ ಒಂದು ಜೀವ ಇಂದು ಕಣ್ಮರೆಯಾಗಿದೆ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿನಿಯ ಹೆತ್ತವರು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವುದಾಗಿ ವಿನಂತಿಸಿದರೂ ಸಿಟಿ ಆಸ್ಪತ್ರೆಯ ವೈದ್ಯರು ಅವಕಾಶ ನೀಡಿಲ್ಲ ಎಂದು ನಿಖಿತಾಳ ಹೆತ್ತವರು ಆರೋಪಿಸಿದ್ದಾರೆ. ಖಾಸಗಿ ಆಸ್ಪತ್ರೆ ನಡೆಸಿದ ಎಡವಟ್ಟಿ ನಿಂದಾಗಿ ನಿಖಿತಾ ಸಾವು ಸಂಭವಿಸಿದೆ ಎಂದು ಹೆತ್ತವರು ಆರೋಪಿಸಿದ್ದಾರೆ.
ಖಾಸಗಿ ಆಸ್ಪತ್ರೆಯವರ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿನಿಯ ಸಾವು ಸಂಭವಿಸಿದೆ. ಆಕೆಗೆ ನ್ಯಾಯ ಸಿಗಬೇಕು, ಈಬಗ್ಗೆ ತನಿಖೆ ಯಾಗ ಬೇಕು, ಆಕೆಯ ಹೆತ್ತವರಿಗೆ ಸಿಟಿ ಆಸ್ಪತ್ರೆಯವರು ಐವತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದ ಕುಲಾಲ ಸಂಘಟನೆಯ ಒಕ್ಕೂಟದ ನಾಯಕರು ಹಾಗೂ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಆಗ್ರಹಿಸಿದೆ. ಪರಿಹಾರ ನೀಡದಿದ್ದಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ.
ಇನ್ನಾದರೂ ಖಾಸಗಿ ಆಸ್ಪತ್ರೆಗಳು ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ಆಡದೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಕೊಂಡೊಯ್ಯುವಂತೆ ರೋಗಿಗಳ ಸಂಬಂಧಿಕರಿಗೆ ಪರಿಸ್ಥಿತಿ ಕೈ ಮೀರುವ ಮೊದಲೇ ಸಲಹೆ ನೀಡುವ ಮೂಲಕ ರೋಗಿಗಳ ಪ್ರಾಣ ಉಳಿಸಲು ಪ್ರಯತ್ನಿಸುವಂತಾಗಲಿ.