ಭಾರತ ಮತ್ತು ಉಕ್ರೇನ್ ನಡುವಿನ ಆಕಾಶ ಮಾರ್ಗದ ಅಂತರ ಸುಮಾರು 5000 ಕಿಲೋಮೀಟರ್.
ಗಾಳಿಯ ಸಾಮಾನ್ಯ ವೇಗ ಗಂಟೆಗೆ ಸುಮಾರು 30/40 ಕಿಲೋಮೀಟರ್.
ಆ ವೇಗದಲ್ಲಿ ಉಕ್ರೇನಿನ ಗಾಳಿ ಭಾರತ ತಲುಪಲು ಸುಮಾರು 6/7 ದಿನಗಳು ಬೇಕಾಗಬಹುದು.
ಟರ್ಕಿ, ಇರಾನ್, ಇರಾಕ್, ಅಫ್ಘಾನಿಸ್ತಾನ ದಾಟಿ ಭಾರತ ತಲುಪಲು ಬೇಕಾದ ಸಮಯ. ಇದು ಗಾಳಿಯ ಚಲನೆಯ ವೇಗ ಮತ್ತು ದಿಕ್ಕನ್ನು ಅವಲಂಭಿಸಿರುತ್ತದೆ.
ಇದರ ಬಗ್ಗೆ ಈಗ ತಲೆಕೆಡಿಸಿಕೊಳ್ಳಲು ಕಾರಣ ರಷ್ಯಾ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಉಕ್ರೇನಿನ ಮೇಲೆ ಪ್ರಯೋಗಿಸಲು ಸಿದ್ದತೆ ಮಾಡಿಕೊಂಡು ಪಕ್ಕದ ಮಿತ್ರ ಬೆಲೊರೂಸ್ ದೇಶಕ್ಕೆ ರವಾನಿಸಿದೆ. ಈ ಅಣು ಬಾಂಬು ಎರಡನೇ ವಿಶ್ವ ಮಹಾಯುದ್ಧದಲ್ಲಿ ಜಪಾನಿನ ಹಿರೋಷಿಮಾ ನಾಗಸಾಕಿಯ ಮೇಲೆ ಅಮೆರಿಕ ಪ್ರಯೋಗಿಸಿದ ಬಾಂಬಿಗಿಂತ ಮೂರು ಪಟ್ಟು ಹೆಚ್ಚು ಶಕ್ತಿಶಾಲಿ ವಿಕಿರಣವನ್ನು ಹೊರಸೂಸುತ್ತದೆ ಎಂದು ಹೇಳಲಾಗುತ್ತದೆ. ಅಂದರೆ ಅದರ ದುಷ್ಪರಿಣಾಮ ಊಹಿಸಿ.
ಹಿರೋಷಿಮಾ ನಾಗಸಾಕಿಯಲ್ಲಿ ಈಗಲೂ ಅಣು ವಿಕಿರಣದ ಕೆಟ್ಟ ಪರಿಣಾಮ ಆಗುತ್ತಲೇ ಇದೆ. ಭೀಕರ ಭಯಾನಕ ಆಪತ್ತೊಂದು ವಿಶ್ವದ ಮನೆ ಬಾಗಿಲಿನಲ್ಲಿ ನಿಂತಿರುವಾಗ ಇಡೀ ವಿಶ್ವದ ಸಾಮಾನ್ಯ ಜನ ಅದರ ಬಗ್ಗೆ ನಿರ್ಲಕ್ಷ್ಯವಾಗಿ ಇರುವುದು ಆಶ್ಚರ್ಯ ಮತ್ತು ಆತಂಕವನ್ನು ಉಂಟುಮಾಡುತ್ತಿದೆ. ಒಂದು ವೇಳೆ ಏನೋ ಮಾತುಕತೆಯಾಗಿ ಏನೂ ಆಗಿದಿದ್ದರೆ ಸಂತೋಷ. ಆಗಿಬಿಟ್ಟರೆ…..
ಏಕೆಂದರೆ ಇಸ್ರೇಲ್ ತನ್ನ ಬಳಿ ಇರುವ ಕೆಲವು ಮಾರಕ ಅಸ್ತ್ರಗಳನ್ನು ಅಮೆರಿಕದ ಕೋರಿಕೆಯ ಮೇರೆಗೆ ಉಕ್ರೇನ್ ಗೆ ನೀಡುವ ಸೂಚನೆ ಇದೆ ಎಂಬ ಸುದ್ದಿ ಕೇಳಿಬರುತ್ತಿದೆ.
ಇಲ್ಲಿ ಉಕ್ರೇನ್ ಮೇಲೆ ರಷ್ಯಾ ಜಲಜನಕದ ಬಾಂಬು ಹಾಕಿದರೆ ಯುದ್ಧ ಅಷ್ಟಕ್ಕೇ ನಿಲ್ಲುವುದಿಲ್ಲ. ಮತ್ತೆ ರಷ್ಯಾ ಮೇಲೆ ಅಮೆರಿಕ ಅಥವಾ ಇತರ ದೇಶಗಳು ಅಣುಬಾಂಬು ಹಾಕುತ್ತವೆ. ಆಗ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವೇನು. ಆದರೆ ಈ ಕ್ಷಣದಲ್ಲಿ ಕಾಲ ಇನ್ನೂ ಮಿಂಚಿಲ್ಲ. ಶಾಂತಿಯ ಅವಕಾಶದ ಬಾಗಿಲು ತೆರೆದಿದೆ.
ವಿಶ್ವಸಂಸ್ಥೆ – ವ್ಯಾಟಿಕನ್ ಸಿಟಿಯ ಪೋಪ್ – ದಲೈಲಾಮ – ಯುಎಇ ದೊರೆ – ಭಾರತದ ನೊಬೆಲ್ ಪ್ರಶಸ್ತಿ ವಿಜೇತ ಕೈಲಾಸ್ ಸತ್ಯಾರ್ಥಿ – ವಿಶ್ವದ ಹತ್ತು ಮೊದಲ ಸಾಲಿನ ಶ್ರೀಮಂತರು – ಹಾಲಿವುಡ್ – ಬಾಲಿವುಡ್ ನ ಆಸ್ಕರ್ ಪ್ರಶಸ್ತಿ ವಿಜೇತ ಸೂಪರ್ ಸ್ಟಾರ್ ಗಳು – ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಒಂದಷ್ಟು ಪ್ರಮುಖರು – ಮಹತ್ವದ ವಿಜ್ಞಾನಿಗಳು – ಹೀಗೆ ಕೆಲವು ವಿಶ್ವಮಟ್ಟದ ಜನಪ್ರಿಯರು ಒಂದು ತಂಡವಾಗಿ ವಿಶ್ವಸಂಸ್ಥೆಯ ನೇತೃತ್ವದಲ್ಲಿ ಸಭೆ ನಡೆಸಿ ಪರಿಹಾರ ಸೂತ್ರಗಳನ್ನು ರೂಪಿಸಿ ರಷ್ಯಾ – ಉಕ್ರೇನ್ ಮಧ್ಯೆ ಸಂಧಾನ ಏರ್ಪಡಿಸಲು ಪ್ರಯತ್ನಿಸಬೇಕು.
ವಿಶ್ವದ ಜನರಿಂದ ಕೇವಲ ಹಣ ಅಧಿಕಾರ ಜನಪ್ರಿಯತೆ ಪ್ರಶಸ್ತಿ ಪಡೆಯುವುದಕ್ಕಷ್ಟೇ ಈ ನಾಯಕರು ಸೀಮಿತವಾಗಬಾರದು. ವಿಶ್ವ ವಿನಾಶದ ಆತಂಕದಲ್ಲಿದೆ. ಈಗ ತಮ್ಮ ಕೈಲಾದ ಪ್ರಯತ್ನ ಪಡುವುದು ಅವರ ಕರ್ತವ್ಯ ಮತ್ತು ಜವಾಬ್ದಾರಿ. ರಾಜಕೀಯ ನಾಯಕರು ವಿಶ್ವವನ್ನು ನಾಶಗೊಳಿಸುತ್ತಿರುವಾಗ ಪ್ರಖ್ಯಾತ ನಾಯಕರು ಅದನ್ನು ರಕ್ಷಿಸಬೇಕಿದೆ.
ಪ್ರಾರಂಭದಲ್ಲಿ ಅಣು ಯುದ್ಧದ ಸಾಧ್ಯತೆ ಕಡಿಮೆ ಇತ್ತು. ಆದರೆ ಯುದ್ಧ ದೀರ್ಘವಾದಷ್ಟು, ರಷ್ಯಾದ ಒತ್ತಡ ಹೆಚ್ಚಾಗುತ್ತಿದೆ. ಜೊತೆಗೆ ಉಕ್ರೇನ್ ಪಾಶ್ಚಾತ್ಯ ದೇಶಗಳ ಬೆಂಬಲದಿಂದ ರಷ್ಯಾದ ಮೇಲೆ ಆಕ್ರಮಣ ಮಾಡುವಷ್ಟು ಬಲಿಷ್ಠವಾಗುತ್ತಿದೆ. ಈ ಸನ್ನಿವೇಶದಲ್ಲಿ ರಷ್ಯಾ ಅಣು ಬಾಂಬ್ ಪ್ರಯೋಗಿಸುವ ಸಾಧ್ಯತೆ ಹೆಚ್ಚಿದೆ. ಅಮೆರಿಕದ ಅಧ್ಯಕ್ಷರು ಸಹ ಇದನ್ನು ಹೇಳಿದ್ದಾರೆ.
ಭೂಮಿಯನ್ನು ರಕ್ಷಿಸುವ ಹೊಣೆ ನಮ್ಮೆಲ್ಲರದು. ಬಹುಶಃ ಅಣು ಬಾಂಬು ಏನಾದರೂ ಈ ಬಾರಿ ದೊಡ್ಡ ಮಟ್ಟದಲ್ಲಿ ಪ್ರಯೋಗಿಸಿದರೆ ಈ ಭೂಮಿ ಇನ್ನೆಂದಿಗೂ ಈಗಿನ ಸ್ಥಿತಿಯಲ್ಲಿ ಉಳಿಯಲಾರದು.
ಆಯ್ಕೆಗಳು ನಮ್ಮ ಮುಂದಿವೆ. ದೇವರೇ ಎಲ್ಲವನ್ನೂ ನೋಡಿಕೊಳ್ಳುತ್ತಾನೆ ಎಂಬ ನಂಬಿಕೆ – ವೈರಾಗ್ಯ ಹೊರತುಪಡಿಸಿ ಬೇರೆ ದಾರಿಗಳಿವೆಯೇ……….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..