” ಆಲೋಚಿಸುವುದನ್ನು ಕಾರ್ಯಗತಗೊಳಿಸುವುದು ಇನ್ನೂ ಕಷ್ಟದ ಕೆಲಸ. ಹಾಗಾಗಿ ತೀರಾ ವಿರಳವಾಗಿ ಅಪರೂಪವಾಗಿ ಕೆಲವರಷ್ಟೇ ಆ ಕೆಲಸ ಮಾಡುತ್ತಾರೆ “
ಇಲ್ಲಿ ಆಲೋಚನೆ ಎಂದರೆ ವಿಷಯಗಳ ಕುರಿತು ಆಳವಾದ ಚಿಂತನೆ ಎಂದು ಭಾವಿಸಬೇಕು. ಏಕೆಂದರೆ ಮೆದುಳಿರುವ ಆರೋಗ್ಯವಂತ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಯೋಚಿಸುತ್ತಲೇ ಇರುತ್ತಾರೆ. ಆದರೆ ಆ ಯೋಚನೆ ಎಷ್ಟು ಪರಿಣಾಮಕಾರಿ ಮತ್ತು ಉಪಯುಕ್ತ ಎಂಬುದು ಮುಖ್ಯವಾಗುತ್ತದೆ.
ಇಲ್ಲದವರ ನೋವನ್ನು ಅರಿಯಲಾಗದ ಸಾಹಿತ್ಯ,
ಉಳ್ಳವರ ಕ್ರೌರ್ಯವನ್ನು ಖಂಡಿಸಲಾಗದ ಬರಹ,
ಶೋಷಿತರ ಧ್ವನಿಯನ್ನು ಎತ್ತಿಹಿಡಿಯಲಾಗದ ಲೇಖನ,
ಶೋಷಕರ ದೌರ್ಜನ್ಯ ಟೀಕಿಸಲಾಗದ ಪ್ರಬಂಧ,
ಸಮಾನತೆಯನ್ನು ಮೂಡಿಸಲಾಗದ ಚರ್ಚೆ,
ಅಮಾನವೀಯತೆಯನ್ನು ದಿಕ್ಕರಿಸಲಾಗದ ಕವಿತೆ,
ಪರಿಸರ ನಾಶವನ್ನು ತಡೆಯಲಾಗದ ಕಥೆ,
ಭ್ರಷ್ಟತೆಯನ್ನು ಹೋಗಲಾಡಿಸಲಾಗದ ಅಂಕಣಗಳು,
ಸಂಬಂಧಗಳನ್ನು ಬೆಸೆಯಲಾಗದ ಕಾದಂಬರಿ,
ವಿಷವಿಕ್ಕುವ ಜನರನ್ನು ಗುರುತಿಸಲಾಗದ ಅಕ್ಷರಗಳು,
ಪ್ರೀತಿಯನ್ನು ಪ್ರೀತಿಸಲಾಗದ ಮನಸ್ಸುಗಳು,
ಮೌಲ್ಯಗಳನ್ನು ನಾಶ ಮಾಡುವ ಪದಗಳು,
ಇತರರ ಮನ ನೋಯಿಸುವ ವಾಕ್ಯಗಳು,
ಕಷ್ಠಗಳನ್ನು ನಿವಾರಿಸಲಾಗದ ಪ್ರವಚನಗಳು,
ದುಷ್ಟತನವನ್ನು ಮೆಟ್ಟಿ ನಿಲ್ಲದ ಭಾಷಣಗಳು,
ಭ್ರಮೆಗಳನ್ನು ಸೃಷ್ಟಿ ಮಾಡುವ ಹರಿಕಥೆಗಳು,
ಅವಾಸ್ತವಿಕ ಆದರ್ಶಗಳನ್ನು ತುಂಬುವ ಗ್ರಂಥಗಳು,
ಮನಸ್ಸಿನ ದುಗುಡವನ್ನು ಕಡಿಮೆ ಮಾಡಲಾಗದ ಜ್ಞಾನ,
ಭಾವನೆಗಳನ್ನು ನಿಯಂತ್ರಿಸಲಾಗದ ಭಕ್ತಿ,
ಇವು ನಿಮ್ಮ ಅಭಿವ್ಯಕ್ತಿಯ ಮಾಧ್ಯಮಗಳಾದರೂ,
ಅದನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನಿಮಗಿದ್ದರೂ,
ಅದು ಕೇವಲ ನಿಮ್ಮ ಬುದ್ದಿಯ ಪ್ರದರ್ಶನ, ಸ್ವಾರ್ಥದ ಪ್ರತಿಬಿಂಬ,
ಅಹಂನ ತೋರ್ಪಡೆ, ಅಂತರಾಳದ ಅಸಹಿಷ್ಣುತೆಯ ಪ್ರಕಟಣೆ,
ಪ್ರಶಸ್ತಿ, ಬಿರುದು ಬಾವಲಿಗಳ ಆಸೆ ಅಷ್ಟೆ.
ಮೇಲೆ ಹೇಳಿದ ಎಲ್ಲವೂ ವ್ಯಕ್ತಿಯ, ಸಮಾಜದ, ದೇಶದ, ವಿಶ್ವದ,
ಜೀವಪರ ಹಿತದೃಷ್ಟಿ ಹೊಂದಿದ್ದರೆ ಅದು ನಿಜಕ್ಕೂ, ನಿಸ್ವಾರ್ಥ ಹೃದಯಗಳ ಆತ್ಮಸಾಕ್ಷಿಯ ಪ್ರತಿಬಿಂಬ,
ಅದು ಸಾಧ್ಯವಾದದ್ದೇ ಆದರೆ, ನಿಮ್ಮ ವ್ಯಕ್ತಿತ್ವ, ಉತ್ಕೃಷ್ಟ ಮಟ್ಟದಲ್ಲಿದೆ ಎಂದೇ ಅರ್ಥ.
ಐನ್ಸ್ಟೈನ್ ಆಲೋಚನೆ ಎಂಬುದು ಸಾಧನೆ ಮತ್ತು ಮಾನವೀಯ ಮೌಲ್ಯಗಳ ಕುರಿತೇ ಹೇಳಿರಬೇಕು. ಏಕೆಂದರೆ ಈ ಜಗತ್ತು ಕಂಡ ಅತ್ಯಂತ ಬುದ್ದಿವಂತ ವ್ಯಕ್ತಿ ಎಂದು ಐನ್ಸ್ಟೈನ್ ಅವರನ್ನು ಕರೆಯಲಾಗುತ್ತದೆ. ಅವರು ಸದಾ ಪ್ರಗತಿಪರವಾಗಿಯೇ ಆಲೋಚಿಸುತ್ತಾರೆ.
ಇಂದು ನಮ್ಮ ಸಮಾಜದಲ್ಲಿ ಆಲೋಚಿಸುವವರ ಸಂಖ್ಯೆ ಹೆಚ್ಚಾದರೆ ವ್ಯವಸ್ಥೆಯ ಗುಣಮಟ್ಟ ಮತ್ತು ನಮ್ಮ ಜೀವನಮಟ್ಟ ಹೆಚ್ಚಾಗುತ್ತದೆ. ದಯವಿಟ್ಟು ವಿಷಯ ಯಾವುದೇ ಇರಲಿ ಸಾಧ್ಯವಾದಷ್ಟು ಸೃಷ್ಟಿಯ ಮೂಲದಿಂದ ಸಮಗ್ರವಾಗಿ ಯೋಚಿಸಿ.
ಆ ಮೂಲಕ ನಿಮ್ಮ ನಿರ್ಧಾರ ಮತ್ತು ಅಭಿಪ್ರಾಯ ರೂಪಿಸಿಕೊಳ್ಳಿ.
ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಕೇವಲ ಮಾಹಿತಿಗಳ ದಾಸರಾಗಿ ಸ್ವತಂತ್ರವಾಗಿ ಯೋಚಿಸುವುದನ್ನೇ ಮರೆತಿದ್ದೇವೆ. ಮತ್ತೆ ಅದು ನಿಮ್ಮಲ್ಲಿ ಅರ್ಥಪೂರ್ಣವಾಗಿ ಚಿಗುರೊಡೆಯಲಿ ಎಂದು ಆಶಿಸುತ್ತಾ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..