Spread the love

ಬಂಡವಾಳ ಶಾಹಿ ವ್ಯವಸ್ಥೆಯ ಕಾರ್ಪೊರೇಟ್ ಸಂಸ್ಕೃತಿ ಬಹುತೇಕ ಇಡೀ ಜಗತ್ತನ್ನು ಆಕ್ರಮಿಸಿರುವಾಗ, ಜಾಗತೀಕರಣದ ಮುಕ್ತ ಮಾರುಕಟ್ಟೆಯ ಹೊಸ ಪೀಳಿಗೆ ಮುಖ್ಯವಾಹಿನಿಯಲ್ಲಿ ಮಹತ್ವ ಪಡೆದಿರುವಾಗ ಕಾರ್ಲ್ ಮಾರ್ಕ್ಸ್, ಮಾವೋ, ಸ್ಟಾಲಿನ್, ಕ್ಯಾಸ್ಟ್ರೋ ಮುಂತಾದವರು ಈ ಕೊಳ್ಳುಬಾಕ ಸಂಸ್ಕೃತಿಯ ಜನರ ನಡುವೆ ವಿಲನ್ ರೀತಿಯಲ್ಲಿ ಬಿಂಬಿತವಾಗುತ್ತಿರುವಾಗ, ಬಹುತೇಕ ಯುವ ಸಮೂಹ ಸಂಪರ್ಕ ಕ್ರಾಂತಿಯ ಪರಿಣಾಮವಾಗಿ ಸೂಕ್ಷ್ಮತೆ ಕಳೆದುಕೊಂಡಿರುವಾಗ, ಈಗಲೂ ಈ ವ್ಯವಸ್ಥೆಯ ಬಂಡಾಯಗಾರರಿಗೆ
” ಚೆ ” ಅತ್ಯಂತ ಆಕರ್ಷಕ ಮತ್ತು ಸ್ಪೂರ್ತಿದಾಯಕವಾಗಿದ್ದಾರೆ.

ಚೆಗುವಾರ ಅವರ ಹೋರಾಟದ ಹಾದಿಯನ್ನು ಮೆಚ್ಚುತ್ತಲೇ ಅವರ ಅಭಿಮಾನಿಗಳಾಗಿ ಈಗಲೂ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಪಿಕ್ಚರ್ ಚೆಗುವಾರ ಆಗಿರುವುದನ್ನು ಕಾಣಬಹುದು.

ಆಧುನಿಕ ಸಂಕೀರ್ಣ ಜೀವನಶೈಲಿಯ ಮೋಹಕ್ಕೆ ಒಳಗಾಗಿ ವಸ್ತು ಸಂಸ್ಕೃತಿ ಮಾನವೀಯ ಮೌಲ್ಯಗಳನ್ನು ವ್ಯಾಪಾರವಾಗಿಸಿರುವಾಗ ಪ್ರತಿಯೊಬ್ಬರು ಕಮ್ಯುನಿಸ್ಟರೇ. ಆದರೆ ಕಾರಣ ಮತ್ತು ರೂಪಗಳು – ಸ್ವರೂಪಗಳು ಮಾತ್ರ ಭಿನ್ನ.

ಇಡೀ ಸಾಮಾಜಿಕ ಶೈಕ್ಷಣಿಕ ರಾಜಕೀಯ ಕೌಟುಂಬಿಕ ಧಾರ್ಮಿಕ ಮುಂತಾದ ಎಲ್ಲಾ ಕ್ಷೇತ್ರಗಳು ಹಣ ಕೇಂದ್ರಿತವಾಗಿರುವಾಗ ಶೋಷಣೆಯೇ ಅದರ ಮೂಲ ಧರ್ಮವಾಗಿರುವಾಗ ಶೋಷಿತರೆದೆಯಲ್ಲಿ ಬಂಡಾಯದ ಕಿಚ್ಚು‌ ಸಹಜವಾಗಿ ಕಿಡಿ ಹೊತ್ತುತ್ತದೆ. ಅಲ್ಲೆಲ್ಲಾ ಚೆಗುವಾರ ನೆನಪಾಗುತ್ತಲೇ ಇರುತ್ತಾರೆ.

ಇಷ್ಟು ವಿಶಾಲ ಮತ್ತು ವ್ಯಾಪಕತೆ ಪಡೆದ ಕಮ್ಯುನಿಸಂ ಇಂದು ಏಕೆ ತನ್ನ ಅಸ್ತಿತ್ವಕ್ಕಾಗಿ ಚಡಪಡಿಸುತ್ತಿದೆ ಎಂಬ ಪ್ರಶ್ನೆ ಸಹಜವಾಗಿ ಸಾಮಾನ್ಯ ಜನರಲ್ಲಿ ಮೂಡುತ್ತದೆ. ಶೋಷಿತರ ಪರ ಶೋಷಕರ ವಿರುದ್ಧದ ಧ್ವನಿ ಏರುತ್ತಲೇ ಇರಬೇಕಾದ ಸಂದರ್ಭದಲ್ಲಿ ಕ್ಷೀಣವಾಗುತ್ತಿರುವುದು ಎಲ್ಲರನ್ನೂ ಕಾಡುತ್ತಿದೆ.

ಅಪ್ ಕೋರ್ಸ್ ಕಮ್ಯುನಿಸ್ಟ್ ಮೂಲಭೂತವಾದಿಗಳು ಇದನ್ನು ಒಪ್ಪುವುದಿಲ್ಲ. ಇದು ತಾತ್ಕಾಲಿಕ ಹಿನ್ನಡೆ. ಈ ಜಗತ್ತಿನಲ್ಲಿ ಮತ್ತೆ ತನ್ನ ಸಿದ್ದಾಂತ ಜನ ಸಾಮಾನ್ಯರ ಒಡಲಾಳದಿಂದ ಎದ್ದು ಬರುತ್ತದೆ. ಮನುಷ್ಯ ಜೀವಿಯ ನಿಜವಾದ ಪ್ರಗತಿ ಮತ್ತು ಸಮ ಸಮಾಜದ ಕನಸು ಈಡೇರಲು ಕಮ್ಯುನಿಸ್ಟ್ ಸಿದ್ದಾಂತ ಬೇಕೆ ಬೇಕು ಎನ್ನುತ್ತಾರೆ.

ಭವಿಷ್ಯ‌ ಏನೇ ಇರಲಿ ಈ ಕ್ಷಣದಲ್ಲಿ ಕಮ್ಯುನಿಸಂ ಖಂಡಿತ ಜನಪ್ರಿಯತೆ ಕಳೆದುಕೊಂಡು ಕುಸಿಯುತ್ತಿದೆ. ಅದಕ್ಕೆ ಹಲವಾರು ಕಾರಣಗಳು ಇರಬಹುದು. ಜಾಗತೀಕರಣದ ನಂತರ ಬದಲಾದ ಕಾರ್ಮಿಕ ಶೋಷಣೆಯ ವಿವಿಧ ರೂಪಗಳು ಪರೋಕ್ಷವಾಗಿ ಮೇಲ್ನೋಟಕ್ಕೆ ಗುರುತಿಸಲು ಸಾಧ್ಯವಾಗುತ್ತಿಲ್ಲ. ಜೀವನದ ಜಂಜಾಟದಲ್ಲಿ ಹಣ ಕೇಂದ್ರ ಬಿಂದುವಾಗಿ ಕುಳಿತುಕೊಂಡಿದೆ. ಸ್ಪರ್ಧೆ ಮನುಷ್ಯನ ಚಿಂತನಾ ಶಕ್ತಿಯನ್ನು ರಾಕ್ಷಸ ಪ್ರವೃತ್ತಿಯೆಡೆಗೆ ಕೊಂಡೊಯ್ದಿದೆ. ಬಹುತೇಕ ಜನರು ಮುಖವಾಡಗಳ ಮರೆಯಲ್ಲಿ ಬದುಕುತ್ತಿದ್ದಾರೆ. ನಡೆ ನುಡಿ ನಡುವೆ ಬೃಹತ್ ಕಂದಕ ಸೃಷ್ಟಿಯಾಗಿದೆ.

ಇಂತಹ ಸನ್ನಿವೇಶದಲ್ಲಿ ಕಮ್ಯುನಿಸಮ್ಗೆ ಹೆಚ್ಚು ಅವಕಾಶ ಇಲ್ಲ ಎಂದು ಭಾವಿಸಲಾಗುತ್ತದೆ. ಹಾಗೆಂದು ಶೋಷಣಾ ಮುಕ್ತ ಸಮ ಸಮಾಜ ಸೃಷ್ಟಿಯಾಗಿಲ್ಲ. ಈಗ ಹಿಂದಿಗಿಂತಲೂ ಹೆಚ್ಚು ಅಸಮಾನತೆ ಮತ್ತು ಅಮಾನವೀಯತೆ ಇದೆ. ಆದರೆ ಈಗ ಚೆಗುವಾರ ಇಲ್ಲ.

ಚೆ ಈಗ ಯಾಕೆ ಹೆಚ್ಚು ನೆನಪಾಗುತ್ತಾರೆ ಎಂದರೆ ಒಬ್ಬ ಹೋರಾಟಗಾರ ಹೇಗಿರಬೇಕು ಎಂಬುದಕ್ಕೆ ವಿಶ್ವದ ಕೆಲವೇ ಮಾದರಿ ವ್ಯಕ್ತಿತ್ವಗಳಲ್ಲಿ ಚೆಗುವಾರ ಸಹ ಒಬ್ಬರು. ಅವರ ಓದು, ಅಧ್ಯಯನ, ಚಿಂತನೆ, ಪ್ರವಾಸ, ಜನ ಸಂಪರ್ಕ, ಗ್ರಹಿಕೆ ಮತ್ತು ಅವೆಲ್ಲವನ್ನೂ ಮೀರಿದ ವಿಶಾಲ ಹೃದಯವಂತಿಕೆ ಮತ್ತು ಮನಸ್ಥಿತಿ ಅವರನ್ನು ಒಬ್ಬ ಅತ್ಯಂತ ಆಳದ ಮತ್ತು ತೀಕ್ಷ್ಣ ಹೋರಾಟಗಾನಾಗಿ ರೂಪಿಸಿದೆ.

” ಜಗತ್ತಿನ ಎಲ್ಲಾ ಶೋಷಿತರು ನನ್ನ ಸಂಗಾತಿಗಳು ” ಎಂಬ ಅರ್ಥದ ವಾಕ್ಯ ಮನದಲ್ಲಿ ಮೂಡಲು ಅಸಾಧ್ಯವಾದ – ಅಗಾಧವಾದ ಮಾನಸಿಕ ವಿಶಾಲತೆ ಬೇಕಾಗುತ್ತದೆ.
” ಆಸೆಯೇ ದುಃಖಕ್ಕೆ ಮೂಲ ” ಎಂಬ ಗೌತಮ ಬುದ್ಧರ ಚಿಂತನೆ ಒಡಮೂಡಲು ಅವರು ಸಹ ಅಪಾರ ದೇಹ ಮನಸ್ಸುಗಳನ್ನು ದಂಡಿಸಿದ್ದಾರೆ.

ಮಹಾತ್ಮ ಗಾಂಧಿ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ದಿಕ್ಕು ತೋರಿಸುವ ಮೊದಲು ಓದಿನ ಜೊತೆಗೆ ಇಡೀ ಅವಿಭಜಿತ ಭಾರತವನ್ನು ಮೂರನೇ ದರ್ಜೆಯ ರೈಲಿನಲ್ಲಿ ಪ್ರಯಾಣಿಸಿ ಇಲ್ಲಿನ ಸಾಮಾಜಿಕ ಭೌಗೋಳಿಕ ವ್ಯವಸ್ಥೆಯನ್ನು ಅಧ್ಯಯನ ಮಾಡುತ್ತಾರೆ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಭಾರತದ ಸಂವಿಧಾನದ ಕರಡು ರಚಿಸುವ ಮೊದಲು ಜಗತ್ತಿನ ಯಾರು ಓದದಷ್ಟು ವಿದ್ವತ್ಪೂರ್ಣ ಅಧ್ಯಾಯಗಳನ್ನು ಓದಿರುವವರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಸ್ವಾಮಿ ವಿವೇಕಾನಂದರು ಸಹ ವಿದೇಶ ಯಾತ್ರೆಗಳ ಜೊತೆಗೆ ಎರಡು ಬಾರಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡುತ್ತಾರೆ. ಆಧುನಿಕ ಹೋರಾಟಗಾರರು ಇದನ್ನು ಗಮನಿಸಬೇಕು.

ಮೊನ್ನೆ ಜನುಮದ ದಿನದ ನೆನಪಿನಲ್ಲಿ ಚೆ ಕುರಿತಾದ ಫೋಟೋ ಮತ್ತು ಲೇಖನಗಳ ‌ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದಾಗ ಈಗಲೂ ಕರುಳು ಚುರ್ ಎನ್ನುವ ಸೂಕ್ಷ್ಮತೆ ಹೊಂದಿರುವ ಅನೇಕರು ಇದ್ದಾರೆ. ಅವರೆಲ್ಲ ಸಣ್ಣ ಪ್ರಮಾಣದಲ್ಲಿಯಾದರೂ ಈ ಸಮಾಜದ ಶೋಷಿತರ ಧ್ವನಿಯಾಗುತ್ತಾರೆ ಎಂಬ ಭರವಸೆ ಮೂಡುತ್ತದೆ…..

ಕಮ್ಯುನಿಸಂ‌ ಎಂಬುದು ಈಗಿನ ಕೆಲವು ಮೂಲಭೂತವಾದಿ ಕಾಮ್ರೇಡ್ ಗಳ ಹಠವಾದಿ, ಪ್ರೀತಿಯಿಲ್ಲದ, ಕಲ್ಲು ಮನಸ್ಸಿನ ವರ್ತನೆಯ ಸಿದ್ದಾಂತವಲ್ಲ. ಅದು ಅತ್ಯಂತ ಜೀವಪರ ನಿಲುವಿನ ವೈಚಾರಿಕ ಪ್ರಜ್ಞೆ. ಇದನ್ನು ದ್ವೇಷಿಸುವ ಬಲಪಂಥೀಯ ಚಿಂತನೆಯವರು ಕೂಡ ಒಮ್ಮೆ ಕಣ್ಣಾಡಿಸಿ ಸರಿ ಎನಿಸಿದರೆ ಕೆಲವು ಅಂಶಗಳನ್ನು ತಮ್ಮ ಅಭಿಪ್ರಾಯಗಳಲ್ಲಿ ಸೇರಿಸಿಕೊಳ್ಳಬಹುದು.

ನಮ್ಮೊಳಗೂ ಒಬ್ಬ ಆರ್ನೆಸ್ಟ್ ಚೆಗುವಾರ ಯಾವುದೋ ಒಂದು ಮೂಲೆಯಲ್ಲಾದರೂ ಸದಾ ಜೀವಂತವಾಗಿರಲಿ. ಅದು ಮಾನವೀಯ ಮೌಲ್ಯಗಳ ಹೋರಾಟದ ಬಹುದೊಡ್ಡ ಲಕ್ಷಣ ಎಂದು ಭಾವಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..

error: No Copying!