Spread the love

” 9 ” ಅದೃಷ್ಟದ ಸಂಖ್ಯೆ ಎಂಬ ಒಂದು ಸುದ್ದಿ…………

ಮಳೆಗಾಗಿ ಕೆ ಅರ್ ಎಸ್ ಅಣೆಕಟ್ಟೆ ಸಮೀಪ ಹೋಮ ಹವನ ಎಂಬ ಮತ್ತೊಂದು ಸುದ್ದಿ……( ಮುಂಗಾರು ಪ್ರವೇಶಿಸುವ ಸಾಧ್ಯತೆ ಇರುವ ಜೂನ್ ತಿಂಗಳ ಪ್ರಾರಂಭದಲ್ಲಿ )

ಸಚಿವ ಸಂಪುಟದ ಹೊಸ ಕಾರುಗಳ ನೋಂದಣಿ ಸಂಖ್ಯೆ 9 ಕ್ಕೆ ಬಾರಿ ಬೇಡಿಕೆ ಇದೆ ಎಂಬ ಸುದ್ದಿ ನೋಡಿದೆ. 9 ಎಂಬ ಸಂಖ್ಯೆ ತುಂಬಾ ಅದೃಷ್ಟ ಎಂದು ನಂಬುವ ಅನೇಕ ರಾಜಕಾರಣಿಗಳು ಉದ್ಯಮಿಗಳು ಸಿನಿಮಾ ನಟರು ಪ್ರಖ್ಯಾತರು ಕುಖ್ಯಾತರು ಜೊತೆಗೆ ಸಾಮಾನ್ಯ ಜನರು ಇಡೀ ಭಾರತದಾದ್ಯಂತ ವ್ಯಾಪಕವಾಗಿ ಹರಡಿದ್ದಾರೆ.

ವಸ್ತು ವಿನಿಮಯ, ಅಳತೆ, ದೂರ, ಉದ್ದ, ಮೊತ್ತ, ತೂಕ ಮುಂತಾದ ಅನೇಕ ಗೊಂದಲಗಳಿಗೆ ಉತ್ತರವಾಗಿ ಈಜಿಪ್ಟ್ ಮತ್ತು ಬ್ಯಾಬಿಲೋನಿಯನ್ ನಾಗರಿಕತೆಯ ಬುದ್ದಿವಂತನೊಬ್ಬ ಸಂಖ್ಯೆಗಳನ್ನು ಕ್ರಮಬದ್ಧವಾಗಿ ಉಪಯೋಗಿಸಲು ಕಂಡುಹಿಡಿದ. ಅದು ಕೇವಲ‌ ಅಕ್ಷರಗಳ ಬರಹ ರೂಪ. ಆದರೆ ಅದರಲ್ಲೇ ಅದೃಷ್ಟ ದುರಾದೃಷ್ಟ ಎಂದು ಹೊಟ್ಟೆಪಾಡಿಗಾಗಿ ಕೆಲವರು ಜೀವನೋಪಾಯ ಕಂಡುಕೊಂಡರು.

ಆದರೆ ಮುಂದೆ ಅದೇ ಒಂದು ದಂಧೆಯಾಗಿ ವಿಜ್ಞಾನ ಎಷ್ಟೇ ಮುಂದುವರಿದರು ಜನಸಾಮಾನ್ಯರಿಂದ ಹಿಡಿದು ಇಡೀ ಆಡಳಿತ ವ್ಯವಸ್ಥೆ ಮಾಧ್ಯಮ ವೈದ್ಯರು ಖಗೋಳ ಶಾಸ್ತ್ರಜ್ಞರು ಕೊನೆಗೆ ಇಡೀ ಸಮಾಜವೇ ಅದರ ಬಲೆಯೊಳಗೆ ಸಿಲುಕಿತು.

ಹಾಗೆಯೇ ಕಳೆದ ಮೂರು ನಾಲ್ಕು ವರ್ಷಗಳಿಂದ ಹೆಚ್ಚು ಮಳೆಯಾಗುತ್ತಿದ್ದ ವಾತಾವರಣ ಈಗ ಸ್ವಲ್ಪ ತಡವಾಗಿರುವುದಕ್ಕೆ ಮಳೆಗಾಗಿ ಪ್ರಾರ್ಥಿಸಿ ಹೋಮ ಎಂಬ ದೈವದ ಮೊರೆ……..

ಜ್ಯೋತಿಷ್ಯ ವಿಜ್ಞಾನ ಅಥವಾ ಶಾಸ್ತ್ರ ಮತ್ತು ಪ್ರಕೃತಿಯ ವಿಸ್ಮಯಗಳ ನಿಗೂಡತೆಯ ಮುನ್ಸೂಚನೆ……

ಜ್ಯೋತಿಷಿಗಳು ಹೇಳುವ ಭವಿಷ್ಯದ ಬಗ್ಗೆ ಭಾರತೀಯ ಸಮಾಜದಲ್ಲಿ ಶೇಕಡ 80/90 ರಷ್ಟು ಮಹಿಳೆಯರು ಮತ್ತು ಶೇಕಡ 60/70 ರಷ್ಟು ಪುರುಷರಿಗೆ ನಂಬಿಕೆ ಗೌರವ ವಿಶ್ವಾಸವಿದೆ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅವರು ಇದಕ್ಕೆ ಶರಣಾಗಿದ್ದಾರೆ.

ಆರೋಗ್ಯ ಸಮಸ್ಯೆಗೆ ಡಾಕ್ಟರುಗಳು, ಜಮೀನು ವಿವಾದಗಳಿಗೆ ಲಾಯರ್ ಮತ್ತು ನ್ಯಾಯಾಧೀಶರು , ಸಾಂಸಾರಿಕ ಸಮಸ್ಯೆಗಳಿಗೆ ಪೋಲಿಸ್ ಮತ್ತು ಸಂಬಂಧಿಗಳು, ಶೈಕ್ಷಣಿಕ ಸಮಸ್ಯೆಗೆ ಶಿಕ್ಷಕರು ಮತ್ತು ವಿದ್ಯಾಸಂಸ್ಥೆಗಳು, ಆರ್ಥಿಕ ಸಮಸ್ಯೆಗಳಿಗೆ ಆಡಳಿತಾತ್ಮಕ ವ್ಯವಸ್ಥೆಗಳು ಇದ್ದರೂ ಜ್ಯೋತಿಷಿಗಳ ಮೊರೆ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಹಾಗಾದರೆ ಜ್ಯೋತಿಷ್ಯ ನಿಜವೇ. ಸಮಸ್ಯೆಗಳಿಗೆ ಪರಿಹಾರ ಮತ್ತು ಭವಿಷ್ಯದ ಭದ್ರ ಬುನಾದಿ ಇವರಿಂದ
ಸಾಧ್ಯವೇ ? ಸಂಖ್ಯೆ, ಬಣ್ಣ, ದಿಕ್ಕು, ಸಮಯ ಎಲ್ಲದರಲ್ಲೂ ಅದೃಷ್ಟ ಮತ್ತು ದುರಾದೃಷ್ಟ ಇದೆಯೇ ?

ನಿಜವಾದ ಕುತೂಹಲ ಇರುವುದೇ ಇಲ್ಲಿ. ಕೆಲವು ಚಾಣಾಕ್ಷ ಜ್ಯೋತಿಷಿಗಳು ಹೇಳುವ ಭವಿಷ್ಯ ಕೇಳಿದಾಗ ಶೇಕಡ 70/80 ರಷ್ಟು ಸರಿಯಾಗಿಯೇ ಹೇಳುತ್ತಾರೆ ಎಂದೆನಿಸುತ್ತದೆ.
ಇದು ಹೇಗೆ ಸಾಧ್ಯ ?
ಸೃಷ್ಟಿಯ ಸ್ವಾಭಾವಿಕತೆಯನ್ನು ಭೇದಿಸುವ ಶಕ್ತಿ ಜ್ಯೋತಿಷಿಗಳಿಗೆ ಅಥವಾ ಭವಿಷ್ಯಕಾರರಿಗೆ ಇದೆಯೇ ?

ಇದನ್ನು ಅರ್ಥಮಾಡಿಕೊಳ್ಳಲು ಭಾರತೀಯ ಸಮಾಜದ Social structure ಹೇಗೆ Construct ಆಗಿದೆ ಎಂಬುದನ್ನು ಗಮನಿಸಬೇಕು. ಅದರ ಆಧಾರದ ಮೇಲೆ ಅವಲಂಬಿತವಾಗಿರುವ ಇಲ್ಲಿನ ಜನರ ಮಾನಸಿಕ ಸ್ಥಿತಿಯ ಅವಲೋಕನ ಮಾಡಬೇಕು.

ಇಡೀ ಭಾರತೀಯರ ಸಾಮಾಜಿಕ ವ್ಯವಸ್ಥೆ ಭಕ್ತಿ ಭಾವನೆ ನಂಬಿಕೆಗಳ ಆಧಾರದ ಮೇಲೆ ನಿಂತಿದೆ. ಮನುಷ್ಯ ಸಂಬಂಧಗಳು ಮುಖ್ಯವಾಗಿ ತಂದೆ ತಾಯಿ ಮಕ್ಕಳು ಮುಂತಾದ ರಕ್ತ ಸಂಬಂಧಗಳು ಆಳವಾಗಿ ಬಹಳಷ್ಟು ಬೆಸೆದುಕೊಂಡಿದೆ. ಅಜ್ಞಾನ ಬಡತನ ಭಯ ಮತ್ತು ಮೌಢ್ಯ ಇಲ್ಲಿನ ಜನರ ಬದುಕಲ್ಲಿ ಹಾಸುಹೊಕ್ಕಾಗಿದೆ. ಪ್ರೀತಿ ಪ್ರೇಮ ಪ್ರಣಯಗಳ ಬಗ್ಗೆ ತೀರಾ ಸಂಕುಚಿತ ಮನೋಭಾವವಿದೆ. ಮಕ್ಕಳ ಪಾಲನೆ ಪೋಷಣೆಯಲ್ಲಿ ಯಾವುದೇ ವೈಜ್ಞಾನಿಕ ಮತ್ತು ವೈಚಾರಿಕ ಪ್ರಜ್ಞೆ ಇಲ್ಲ.

ಈ ಎಲ್ಲಾ ಹಿನ್ನೆಲೆಯಲ್ಲಿ ಮತ್ತು ಇತ್ತೀಚಿನ ಜಾಗತೀಕರಣದ ಪ್ರಭಾವದಿಂದಾಗಿ ಭಾರತೀಯ ಜನರ ಜೀವನಶೈಲಿ ತುಂಬಾ ಏರಿಳಿತಗಳನ್ನು ಉಂಟುಮಾಡುತ್ತಿದೆ. ಇದೇ ಈ ಜ್ಯೋತಿಷಿಗಳ ಮೂಲ ಬಂಡವಾಳ.
ಇಡೀ ವ್ಯವಸ್ಥೆಗೆ ಮತ್ತು ಸಾಮಾನ್ಯ ಜನರಿಗೆ ಅನ್ವಯಿಸುವ ಕೆಲವು ಅಂಶಗಳನ್ನು ಬಹಳ ಕಲಾತ್ಮಕವಾಗಿ ಹೇಳುತ್ತಾರೆ. ಅದನ್ನು ಕೇಳಿದರೆ ” ಅರೆ , ಇದೇನಿದು ಎಷ್ಟೊಂದು ಸತ್ಯ. ನನ್ನ ಜೀವನದಲ್ಲಿ ನಡೆದಿರುವುದೇ ಅಲ್ಲವೆ. ಜ್ಯೋತಿಷ್ಯ ನಿಜವಾಗಿ ಸತ್ಯ ” ಎಂಬ ನಂಬಿಕೆ ಬರುತ್ತದೆ.

ನಿಮ್ಮ ಹಿರಿಯರಿಗೆ ಆರೋಗ್ಯ ಸಮಸ್ಯೆ ಇದೆ, ನಿಮಗೆ ಸ್ನೇಹಿತರಿಂದ ಮೋಸವಾಗುತ್ತದೆ, ನಿಮ್ಮ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇದೆ, ನಿಮಗೆ ವಾಹನಗಳಿಂದ ಗಂಡಾಂತರವಿದೆ, ನೀವು ಬೇರೆಯವರನ್ನು ಸುಲಭವಾಗಿ ನಂಬುವಿರಿ, ಇತ್ಯಾದಿ ಇತ್ಯಾದಿ….
ಚುನಾವಣಾ ಸಂದರ್ಭದ ಫಲಿತಾಂಶ ಬಿಡಿ. ಈ ದೇಶದ ಪ್ರತಿಯೊಬ್ಬರೂ ಭವಿಷ್ಯಕಾರರೇ…!

ಆದರೆ ,
ವಾಸ್ತವದಲ್ಲಿ ಇದೊಂದು ಭ್ರಮೆ. ನಮ್ಮ ಮದುವೆ ಮಕ್ಕಳು ಉದ್ಯೋಗ ಆರೋಗ್ಯ ಕೌಟುಂಬಿಕ ಕಲಹ ಆರ್ಥಿಕ ಅಧೋಗತಿ ಶತ್ರುಗಳ ಕಾಟ ಕೆಲವೊಮ್ಮೆ ಯಶಸ್ಸು ಎಲ್ಲವೂ ಸಹಜ ಸ್ವಾಭಾವಿಕ ಮತ್ತು ನಾವು ವಾಸಿಸುವ ದೇಶ ಕಾಲ ಪರಿಸ್ಥಿತಿ ಮತ್ತು ನಮ್ಮ ಮನೋಭಾವವನ್ನು ಅವಲಂಬಿಸಿರುತ್ತದೆ. ಅದನ್ನು ಸಂಪೂರ್ಣ ಅರ್ಥಮಾಡಿಕೊಳ್ಳುವ ತಾಳ್ಮೆ ಮತ್ತು ಜಾಣತನ ನಮ್ಮ ಸಾಮಾನ್ಯ ಜನರಿಗೆ ಇನ್ನೂ ಮೂಡಿಲ್ಲ. ಅದಕ್ಕೆ ಬದಲಾಗಿ ಮೌಢ್ಯಕ್ಕೆ ಮತ್ತು ಸುಲಭ ಪರಿಹಾರದ ಆಕರ್ಷಣೆಗೆ ಒಳಗಾಗಿ ಜ್ಯೋತಿಷಿಗಳ ಮೊರೆ ಹೋಗುತ್ತಾರೆ.

ಮೊದಲು ಗಿಣಿ ಕವಡೆ ಹಸ್ತ ಮುದ್ರಿಕೆ ತಿಥಿ ನಕ್ಷತ್ರ ರಾಶಿ ಜಾತಕ ಮುಂತಾದ ಕೆಲವು ವಿಷಯಗಳ ಮೇಲೆ ಯಾರೋ ಕೆಲವರು ಹೊಟ್ಟೆಪಾಡಿಗಾಗಿ ಶಾಸ್ತ್ರ ಹೇಳುತ್ತಾ ಕೊಟ್ಟಷ್ಟು ಹಣ ಪಡೆಯುತ್ತಾ ಹೇಗೋ ಉಪ ಉದ್ಯೋಗದಂತೆ ಜೀವಿಸುತ್ತಿದ್ದರು. ಆದರೆ ಈ ಮಾಧ್ಯಮಗಳ ಪ್ರಭಾವ ಹೆಚ್ಚಾದ ಮೇಲೆ ಇದೊಂದು ಹಣ ಮಾಡುವ ದಂಧೆಯಾಗಿ ಮಾರ್ಪಟ್ಟಿತು ಮತ್ತು ಸಮಾಜಕ್ಕೆ ಅತ್ಯಂತ ಅಪಾಯಕಾರಿಯಾಯಿತು.
ಬದುಕಿನ ಅನಿಶ್ಚಿತತೆ ಹೆಚ್ಚಾದಷ್ಟು ಜ್ಯೋತಿಷ್ಯ ತನ್ನ ಪ್ರಾಮುಖ್ಯತೆ ಪಡೆಯುತ್ತಿದೆ. ಅವರು ಹೇಳುವುದು ನಿಜವೆಂಬ ಭ್ರಮೆ ಸೃಷ್ಟಿಸುತ್ತಿದೆ. ಪೌರಾಣಿಕ ದೇವರುಗಳನ್ನೇ Overtake ಮಾಡಿ ಹೊಸ ರೀತಿಯ ದೇವಮಾನವರೆಂಬ ನಕಲಿಗಳು ಜ್ಯೋತಿಷಿಗಳ ರೂಪದಲ್ಲಿ ಉಧ್ಭವವಾಗಿದ್ದಾರೆ. ಜಾಹೀರಾತುಗಳ ಮಾಡೆಲ್ ಗಳಾಗುವ ಮಟ್ಟಕ್ಕೆ ಬೆಳೆದಿದ್ದಾರೆ. ರಾಜಕೀಯ ವ್ಯವಸ್ಥೆಯಲ್ಲಿ ಪ್ರಭಾವ ಬೀರುವಷ್ಟು ಪ್ರಾಮುಖ್ಯತೆ ಪಡೆದಿದ್ದಾರೆ.

ಇತ್ತೀಚಿನ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಮತ್ತು ಕೊರೋನಾ ವೈರಸ್ ಹಾವಳಿ ಜನರ ಆರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡಿದೆ. ಇದು ಸಾಮಾಜಿಕವಾಗಿ ಮತ್ತು ಸಾಮೂಹಿಕವಾಗಿ ಎಲ್ಲರ ಮೇಲೂ ಪರಿಣಾಮ ಬೀರಿದೆ. ಆದರೆ ಸಾಮಾನ್ಯ ಜನ ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ ಮತ್ತು ಪರಿಹಾರಕ್ಕಾಗಿ ಭವಿಷ್ಯಕಾರರ ಮೊರೆ ಹೋಗುತ್ತಾರೆ.

ಕೆಲವರು ಜ್ಯೋತಿಷ್ಯ ಒಂದು ವಿಜ್ಞಾನ. ಶತಶತಮಾನಗಳಿಂದ ಅಸ್ತಿತ್ವದಲ್ಲಿದೆ ಮತ್ತು ಇದು ಬಹುತೇಕ ಸತ್ಯ. ಯಾರೋ ಕೆಲವರು ಮಾಡುವ ತಪ್ಪಿಗೆ ಜ್ಯೋತಿಷ್ಯ ಶಾಸ್ತ್ರವನ್ನೇ ಅಲ್ಲಗಳೆಯಬಾರದು. ಅದರ ಅನೇಕ ಮುನ್ಸೂಚನೆಗಳು ಸತ್ಯ ಎಂದು ಹೇಳುತ್ತಾರೆ. ಕೆಲವು ‌ಊಹೆಗಳು ನಿಜವಾದ ಮಾತ್ರಕ್ಕೆ ಅದನ್ನು ಒಂದು ವಿಜ್ಞಾನ ಎಂದು ಕರೆಯಬಹುದೆ ?
ಅವು ಸಾರ್ವತ್ರಿಕ ಸತ್ಯಗಳಾಗಬೇಕು ಮತ್ತು ಅದಕ್ಕೆ ನಿರ್ದಿಷ್ಟ ಸಮಯ, ಪ್ರದೇಶ ಮತ್ತು ಕಾರಣಗಳನ್ನು ಖಚಿತವಾಗಿ ನೀಡಬೇಕು. ಆಗ ಸಹಜವಾಗಿ ಅದನ್ನು ವಿಜ್ಞಾನ ಎಂದು ಪರಿಗಣಿಸಬಹುದು.

ಈ ಬಗೆಗೆ ಗಂಭೀರವಾಗಿ ಯೋಚಿಸುವ ಕಾಲ ಬಂದಿದೆ.
ಇದಕ್ಕೆ ಪರಿಹಾರವೆಂದರೆ,
ಹೆಚ್ಚು ಹೆಚ್ಚು ಸೃಷ್ಟಿಯನ್ನು ಅರಿಯಿರಿ. ಪ್ರಕೃತಿಗೆ ನಿಯತ್ತಾಗಿ ಬದುಕಿ. ಪರಿಸ್ಥಿತಿಯನ್ನು ವಿಶಾಲ ಅರ್ಥದಲ್ಲಿ ಗ್ರಹಿಸಿ. ಅದೇ ವಾಸ್ತವ.

ಈ ವಾಸ್ತವದ ಆಧಾರದಲ್ಲಿ ಭವಿಷ್ಯಕಾರರನ್ನು ಹೀಗೆ ಪ್ರಶ್ನಿಸಬೇಕೆನಿಸುತ್ತದೆ.

ತಾಕತಿದ್ದರೆ ಹೇಳಿ ನಿಮ್ಮ ಭವಿಷ್ಯ ಜ್ಯೆಲಿನಲ್ಲಿರುವ ಖೈದಿಗಳಿಗೆ,

ಧ್ಯೆರ್ಯವಿದ್ದರೆ ಹೇಳಿ ನಿಮ್ಮ ಜ್ಯೋತಿಷ್ಯ ಆಸ್ಪತ್ರೆಯಲ್ಲಿ ಮಲಗಿರುವ ರೋಗಿಗಳಿಗೆ,

ಗೊತ್ತಿದ್ದರೆ ಹೇಳಿ ನಿಮ್ಮ ರಾಶಿಗಳ ಚಲನೆ ಭಿಕ್ಷುಕರಿಗೆ,

ತಿಳಿದಿದ್ದರೆ ಹೇಳಿ ನಿಮ್ಮ ಮುನ್ಸೂಚನೆ ಹೊಟ್ಟೆಪಾಡಿನ ವೇಶ್ಯೆಯರಿಗೆ,

ಅರಿತಿದ್ದರೆ ಹೇಳಿ ನಿಮ್ಮ ರಾಹುಕೇತುಗಳ ಪರಿಣಾಮ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ,

ಅರ್ಥವಾದರೆ ಹೇಳಿ ನಿಮ್ಮ ಭವಿಷ್ಯ ಅನಾಥಾಶ್ರಮದ ಮಕ್ಕಳಿಗೆ,

ಬುದ್ದಿ ಇದ್ದರೆ ಹೇಳಿ ನಿಮ್ಮ ಜ್ಯೋತಿಷ್ಯ ವೃದ್ಧಾಶ್ರಮದ ಹಿರಿಯ ಜೀವಗಳಿಗೆ,

ಕುರಿ, ಕೋಳಿ, ನಾಯಿ, ಹಂದಿ, ಹಸುಗಳಿಗೆ ಹೇಳಿ ಅದರ ಆಯುಷ್ಯದ ಭವಿಷ್ಯ

ಗಾಳಿ,ನೀರು, ಬೆಳಕು, ಅರಣ್ಯಗಳಿಗೆ ಹೇಳಿ ನಿಮ್ಮ ಜ್ಯೋತಿಷ್ಯ,

ಮಾತಿಗೊಮ್ಮೆ ಉದಾಹರಿಸುವ, ತೆಂಡೂಲ್ಕರ್, ರಾಜ್ ಕುಮಾರ್, ಅಮಿತಾಭಚ್ಚನ್,
ಮೋದಿ, ಅಂಬಾನಿ, ಅದಾನಿ ಮುಂತಾದ ದೊಡ್ಡವರ ಹೆಸರು ಬಿಡಿ,
ಚರ್ಚೆಗಳು, ತರ್ಕಗಳು, ವಾಕ್ ಚಾತುರ್ಯಗಳು, ಗ್ರಂಥಗಳು , ನಂಬಿಕೆಗಳು, ದುರಾಸೆಗಳು, ಭಯ, ನಿಗೂಢಗಳು ಇವೇ ಏನು ನಿಮ್ಮ ಬಂಡವಾಳ,

ಬಿಡಿ ಇದೆಲ್ಲಾ, ಬದುಕಿ ಸಹಜವಾಗಿ, ಸರಳವಾಗಿ,
ಸೃಷ್ಟಿಗೆ ನಿಯತ್ತಾಗಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..

error: No Copying!