ಪಡುಬಿದ್ರಿ: ದಿನಾಂಕ:13-06-2023(ಹಾಯ್ ಉಡುಪಿ ನ್ಯೂಸ್) ಮದುವೆ ನೆಂಟಸ್ತಿಕೆ ಮುರಿದು ಬಿತ್ತು ಎಂದು ಯುವಕನೋರ್ವ ಯುವತಿಗೆ ಹಾಗೂ ಅವಳ ಹೆತ್ತವರಿಗೆ ಮಾನಹಾನಿ ಮಾಡಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಡಾ ಎರ್ಮಾಳು , ಜನಾರ್ಧನ ದೇವಸ್ಥಾನ ಬಳಿಯ ನಿವಾಸಿ ನಿಖಿತಾ (23) ಎಂಬವರಿಗೆ ಕಳೆದ ವರ್ಷ ಮೇ ತಿಂಗಳಿನಲ್ಲಿ ಕೇರಳ ರಾಜ್ಯದ ಪೈಯನೂರಿನ ರಾಜೇಶ್ ವಿಕ್ರಮ್ ಎಂಬುವವರಿಂದ ಮದುವೆಯ ಪ್ರಸ್ತಾಪ ಬಂದು, ಎರಡೂ ಮನೆಯವರಿಗೆ ಒಪ್ಪಿಗೆಯಾಗಿದ್ದು, ನಂತರ ಇಬ್ಬರೂ ಫೋನಿನಲ್ಲಿ ಮಾತನಾಡುತ್ತಾ, ಮೆಸೇಜ್ ಮಾಡಿಕೊಂಡಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕ್ರಮೇಣ ರಾಜೇಶ್ ವಿಕ್ರಮ್ ನು ನಿಖಿತಾರಿಗೆ ಮದುವೆಯಾದ ನಂತರ ಮೊಬೈಲ್ ಇಟ್ಟುಕೊಳ್ಳಬಾರದು, ಬೇರೆಯವರ ಜೊತೆ ,ಅವರ ಅಪ್ಪ-ಅಮ್ಮನ ಜೊತೆಯೂ ಮಾತನಾಡಬಾರದು ಎಂಬುದಾಗಿ ಹೇಳುತ್ತಿದ್ದು, ಕೆಲವೊಮ್ಮೆ ನಿಖಿತಾರ ಮೊಬೈಲ್ ಬ್ಯುಸಿ ಬಂದರೆ, ಆನ್‌ಲೈನ್ ಇದ್ದರೆ ಅನುಮಾನದಿಂದ ಪ್ರಶ್ನಿಸುತ್ತಿದ್ದರಿಂದ, ನಿಖಿತಾರವರು ಆತನನ್ನು ಮದುವೆಯಾಗುವುದು ಬೇಡವೆಂಬ ತೀರ್ಮಾನಕ್ಕೆ ಬಂದಿದ್ದರು ಎಂದಿದ್ದಾರೆ.
ಆದರೂ ನಂತರ ಮನೆಯವರ ಒತ್ತಾಯಕ್ಕೆ ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಮಂಗಳೂರಿನ ಮಂಗಳಾದೇವಿ ದೇವಸ್ಥಾನ ಮತ್ತು ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಹುಡುಗ-ಹುಡುಗಿ ನೋಡುವ ಶಾಸ್ತ್ರ ಮಾಡಿಕೊಂಡಿದ್ದು, ಅದಾದ ಎರಡೇ ದಿನಕ್ಕೆ ಮದುವೆಗೆ ನಿಖಿತಾ ರವರ ಕಡೆಯವರು ಮದುವೆಗೆ ಒಪ್ಪಿಗೆ ಇರುವುದಿಲ್ಲವಾಗಿ ಹೇಳಿರುತ್ತಾರೆ ಎಂದಿದ್ದಾರೆ. ನಂತರ ರಾಜೇಶ್ ವಿಕ್ರಮ್ ನು ನಿಖಿತಾರಿಗೆ ಪದೇ ಪದೇ ಫೋನ್ ಕರೆ ಮಾಡಿ, ಮೆಸೇಜ್‌ಮಾಡಿ ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದು, ಒಪ್ಪದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾನೆ ಎಂದು ದೂರಿದ್ದಾರೆ.
ನಂತರ ನಿಖಿತಾರಿಗೆ ಅವರ ಮನೆಯವರು ಬೇರೊಬ್ಬ ಹುಡುಗನನ್ನು ನೋಡಿ, ಆತನೊಂದಿಗೆ 05.02.2023 ರಂದು ವಿವಾಹ ನಿಶ್ಚಯವಾಗಿದ್ದು, ನವೆಂಬರ್ ತಿಂಗಳಿನಲ್ಲಿ ಮದುವೆಯ ಬಗ್ಗೆ ತಿರ್ಮಾನಿಸಿರುತ್ತಾರೆ ಎಂದಿದ್ದಾರೆ. ಆನಂತರ ಸಹ ರಾಜೇಶ್ ವಿಕ್ರಮ್ ನು ನಿಖಿತಾರಿಗೆ ಫೋನ್ ಕರೆ ಮಾಡಿ ಕಿರುಕುಳ ಕೊಡುತ್ತಿದ್ದು, ಈ ಮೊದಲು ನೆಂಟಸ್ತಿಕೆ ಪ್ರಾರಂಭವಾದಲ್ಲಿ ಫೋನ್‌ನಲ್ಲಿ ಮಾತನಾಡುತ್ತಿರುವಾಗ ರೆಕಾರ್ಡ್ ಮಾಡಿಕೊಂಡಿದ್ದನ್ನು ಮತ್ತು ವಾಟ್ಸ್‌ಆಪ್ ಚಾಟ್‌ಗಳನ್ನು ನಿಖಿತಾರ ಸಂಬಂಧಿಕರಿಗೆ ಕಳುಹಿಸಿ ಮಾನಹಾನಿ ಮಾಡಿರುತ್ತಾನೆ ಎಂದು ದೂರಿದ್ದಾರೆ.
ಅಲ್ಲದೇ ಈಗ ಮದುವೆ ನಿಶ್ಚಯವಾಗಿರುವ ಹುಡುಗನಿಗೆ ಹಾಗೂ ನಿಖಿತಾರ ತಂದೆಗೆ ಕರೆ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾನೆ ಎಂದಿದ್ದಾರೆ.
ದಿನಾಂಕ:12.06.2023 ರಂದು ಬೆಳಿಗ್ಗೆ 08:30 ಗಂಟೆಯ ವೇಳೆಗೆ ನಿಖಿತಾರ ಮನೆಗೆ ಬಂದು ಮನೆಯ ಒಳ ಹೊಕ್ಕು, ಅವರ ತಂದೆ, ತಾಯಿಯನ್ನು ದೂಡಿ ಹಾಕಿ ಹೊಡೆಯಲು ಬಂದಿದ್ದು, ನಂತರ ನಿಖಿತಾರನ್ನು ಹಾಗೂ ಅವರ ಮನೆಯವರನ್ನು ಮಾನಸಿಕ ಕಿರುಕುಳ ನೀಡಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ ಎಂದು ನಿಖಿತಾ ರವರು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 354, 354(ಡಿ), 506, 448, 323, 509 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.