ಪ್ರೀತಿಯ ವ್ಯಾಪಾರ ಮಾಡಿ ಭಾರತ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಕರ್ನಾಟಕದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದವರೇ – ದ್ವೇಷ ಸೇಡಿನ ವ್ಯಾಪಾರ ನಿಲ್ಲಿಸಿ……..
ಸೇಡು ದ್ವೇಷ ದುರಹಂಕಾರ ಮತ್ತು ಸರ್ವಾಧಿಕಾರದ ಆಡಳಿತ ಮತ್ತು ಭಾಷಣಗಳನ್ನು ಭಾರತದ ಮತದಾರರು ತಿರಸ್ಕರಿಸಿರುವ ಅನೇಕ ರಾಜಕೀಯ ಉದಾಹರಣೆಗಳನ್ನು ಇತಿಹಾಸದಲ್ಲಿ ನೋಡಬಹುದು. ಬಹುಶಃ ಶ್ರೀಮತಿ ಇಂದಿರಾಗಾಂಧಿ ಅವರಿಗೆ ಕಲಿಸಿದ ಪಾಠ ಚುನಾವಣಾ ರಾಜಕೀಯದಲ್ಲಿ ಅತ್ಯಂತ ಗಮನಾರ್ಹವಾದ ಮೊದಲ ಘಟನೆ ಎಂದು ನೆನಪಾಗುತ್ತಿದೆ.
ಕಾಶ್ಮೀರದ ಅಬ್ದುಲ್ಲಾ ಕುಟುಂಬ ಮತ್ತು ಮಪ್ತಿ ಮಹಮ್ಮದ್ ಸಯೀದ್ ಕುಟುಂಬದಿಂದ ಹಿಡಿದು ತಮಿಳುನಾಡಿನ ಕರುಣಾನಿಧಿ ಜಯಲಲಿತಾ ರಾಜಕೀಯದವರೆಗೆ ಇದು ಬಹುತೇಕ ರಾಜ್ಯಗಳಲ್ಲಿ ಪುನರಾವರ್ತನೆ ಆಗುತ್ತಲೇ ಇದೆ. ಆದರೂ ರಾಜಕೀಯ ಸೇಡಿನ ಮನೋಭಾವ ರಾಜಕಾರಣಿಗಳಲ್ಲಿ ಅಂತರ್ಗತವಾಗಿದೆ. ಅದಕ್ಕೆ ರಾಜಕಾರಣಿಗಳ ಬಗ್ಗೆ ಜನಕ್ಕೆ ಜಿಗುಪ್ಸೆ ಉಂಟಾಗಿದೆ. ಇದಕ್ಕೆ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಹೊರತಾಗಿಲ್ಲ ಅಥವಾ ಈಗ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ – ಶಿವಕುಮಾರ್ ಎಂ ಬಿ ಪಾಟೀಲರು ಹೊರತಾಗಿಲ್ಲ.
ಆಡಳಿತಕ್ಕೆ ಬಂದ ಪ್ರಾರಂಭದಲ್ಲಿ ಅಧಿಕಾರಸ್ಥರು ಮಾಡಬೇಕಾಗಿರುವ ಮೊದಲ ಕೆಲಸ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮತ್ತು ವಿನಯವಾಗಿ ಅಭಿವೃದ್ಧಿ ಸಾಧಿಸುವುದು. ವಿರೋಧ ಪಕ್ಷಗಳ ಮೇಲೆ ಅನಾವಶ್ಯಕ ಟೀಕಾ ಪ್ರಹಾರ ಮಾಡದೆ ಜನರೇ ಅವರನ್ನು ಸೋಲಿಸಿರುವಾಗ ಮೌನವಾಗಿ ಅಕ್ರಮಗಳನ್ನು ತನಿಖೆ ಮಾಡಿ ಕಾನೂನು ತನ್ನ ಕ್ರಮ ಕೈಗೊಳ್ಳಲು ಅನುವು ಮಾಡಿ ತಾವು ಬೇರೆ ಕೆಲಸದತ್ತ ಗಮನ ಹರಿಸಬೇಕು.
ಮೋದಿಯವರು ಸಹ ಒಂಬತ್ತು ವರ್ಷಗಳ ನಂತರವೂ ಆಡಳಿತ ವೈಫಲ್ಯಕ್ಕೆ ವಿರೋಧ ಪಕ್ಷಗಳನ್ನೇ ಟೀಕಿಸುವುದು, ಈಗ ಸಿದ್ದರಾಮಯ್ಯನವರ ಸರ್ಕಾರ ಯಾರನ್ನೋ ಬಂಧಿಸುತ್ತೇವೆ ಎಂಬುದು ಸೇಡಿನ ಕ್ರಮವಾಗುತ್ತದೆ. ಪ್ರಜಾಪ್ರಭುತ್ವದ ನೆರಳಿನಲ್ಲಿ ಸೇಡು ಸಹ್ಯವಲ್ಲ ಎಂಬ ಪರಿಜ್ಞಾನ ಎಲ್ಲರಿಗೂ ಇರಬೇಕು.
ಮುಖ್ಯವಾಗಿ ದೇಶಭಕ್ತರು ಅಥವಾ ಬುದ್ಧಿಜೀವಿಗಳು ಎಂಬ ಅತಿರೇಕಿಗಳನ್ನು ಸ್ವಲ್ಪ ನಿರ್ಲಕ್ಷಿಸಿ ಜನ ಸಾಮಾನ್ಯರ ಒಳಿತಿಗಾಗಿ ಕೆಲಸ ಮಾಡಬೇಕು. ಈ ದೇಶ ಅಥವಾ ರಾಜ್ಯ ಯಾವುದೋ ವ್ಯಕ್ತಿ ಅಥವಾ ಸಂಘಟನೆಗೆ ಸೇರಿದ್ದಲ್ಲ. ಸಾಮಾನ್ಯ ಜನರಿಗೆ ಸೇರಿದ್ದು. ನಿಮ್ಮ ಸೇಡಿನ ಮುಖಾಂತರ ನಿಮ್ಮ ತೆವಲು ತೀರಿಸಿಕೊಳ್ಳಲು ಜನ ಅಧಿಕಾರ ಮತ್ತು ಖಜಾನೆ ನೀಡಿಲ್ಲ. ಮೊದಲು ಕೆಲಸ ಮಾಡುವುದನ್ನು ಕಲಿಯಿರಿ.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ನರೇಂದ್ರ ಮೋದಿಯವರ ಮಾತಾಗಲಿ, ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ಎಂಬ ರಾಹುಲ್ ಗಾಂಧಿಯವರ ಮಾತಾಗಲಿ, ಸರ್ವೇ ಜನೋ ಸುಖಿನೋ ಭವಂತು ಎಂಬ ಬಲಪಂಥೀಯ ಚಿಂತನೆಯಾಗಲಿ, ಎಲ್ಲಾ ಮನುಷ್ಯರು ಒಂದೇ ಎಂಬ ಎಡಪಂಥೀಯ ಚಿಂತನೆಗಳಾಗಲಿ ಕೇವಲ ಪುಸ್ತಕ ಅಥವಾ ಮಾತಿನ ಬದನೇಕಾಯಿಯಾಗದೆ ಅದು ಸ್ವಲ್ಪವಾದರೂ ನಡವಳಿಕೆ ರೂಪದಲ್ಲಿ ಆಚರಣೆಗೆ ಬರಬೇಕು.
ಹಿಂದಿನ ಬಸವರಾಜ್ ಬೊಮ್ಮಾಯಿ ಸರ್ಕಾರ ಎಡಪಂಥೀಯ ಚಿಂತನೆಗಳ ವಿರುದ್ಧ ಅತಿಯಾಗಿ ಆಕ್ರಮಣ ಮಾಡಿತು. ಈಗ ಸಿದ್ದರಾಮಯ್ಯ – ಶಿವಕುಮಾರ್ ಸರ್ಕಾರ ಬಲಪಂಥೀಯರ ವಿರುದ್ಧ ಅದೇ ಆಕ್ರಮಣ ಮಾಡಿದರೆ ವ್ಯತ್ಯಾಸ ಏನು. ಮುಂದೆ ಬಲಪಂಥೀಯ ವಿಚಾರಗಳ ಸರ್ಕಾರ ಆಡಳಿತಕ್ಕೆ ಬಂದರೆ ಮತ್ತೆ ಅದೇ ಸೇಡು. ಅದಕ್ಕೆ ಒಂದು ವಿರಾಮ ನೀಡಲೇಬೇಕು.
ಅಧಿಕಾರ ಪ್ರಶಸ್ತಿಗಳಿಗಾಗಿ ಕಾದು ಕುಳಿತ ಎರಡೂ ಪಂಥಗಳ ಅತಿರೇಕಿಗಳೇ ಹೆಚ್ಚಾಗಿ ಈ ವಿಷ ಬೀಜ ಬಿತ್ತಿ ಮಾಧ್ಯಮಗಳ ಬೆಂಬಲದಿಂದ ಸದಾ ಗಲಭೆಕೋರ ಮನಸ್ಥಿತಿಯನ್ನು ಸಮಾಜದಲ್ಲಿ ಸೃಷ್ಟಿಸುತ್ತಾರೆ.
ಅದಕ್ಕಾಗಿಯೇ ಪ್ರತಿ ಬಾರಿ ಹೇಳುವುದು. ಜೀವಪರ ನಿಲುವಿನ ಮಾನವೀಯ ಪಂಥ ಅತ್ಯಂತ ಸಹಜ ಮತ್ತು ಸ್ವಾಭಾವಿಕ. ಅದು ಕಾಲಕ್ಕೆ ತಕ್ಕಂತೆ ಸದಾ ಪ್ರಕೃತಿಯ ಜೊತೆ ಬದಲಾವಣೆ ಹೊಂದುತ್ತಾ ಸಾಗುತ್ತಿರುತ್ತದೆ. ಅದನ್ನು ಮುನ್ನಲೆಗೆ ತರುವ ಅವಶ್ಯಕತೆ ಇದೆ.
ಎಡಬಲದ ಚಿಂತಕರು ಅಸಹ್ಯ ಸೃಷ್ಟಿಸುತ್ತಿದ್ದಾರೆ. ಸಮಸ್ಯೆಗಳನ್ನು ಜೀವಂತ ಇಡುವ ಮೂಲಕ ತಮ್ಮ ಸ್ವಾರ್ಥ ಸಾಧಿಸಿಕೊಳ್ಳಲು ಹವಣಿಸುತ್ತಿದ್ದಾರೆ.
ಅರೆ, ಸೃಷ್ಟಿಯಲ್ಲಿ ಹೇಗೆ ಜಾತಿ ಮತಗಳಿಲ್ಲವೋ ಹಾಗೆ ಎಡಬಲದ ಸೈದ್ದಾಂತಿಕತೆಯೂ ಇಲ್ಲ. ಅವು ಕೇವಲ ಪರಿಸ್ಥಿತಿಯ ಅನುಗುಣವಾಗಿ ರೂಪಗೊಂಡ ವಿಚಾರಗಳು ಮಾತ್ರ. ನಿಜಕ್ಕೂ ಆಳವಾಗಿ ಈ ಎಡಬಲದ ಚಿಂತಕರ ನಡವಳಿಕೆ ಗಮನಿಸಿದರೆ ಅವರ ಮುಖವಾಡಗಳು ಕಳಚಿ ಬೀಳುತ್ತದೆ. ಆದರೆ ಜನ ಸಾಮಾನ್ಯರಿಗೆ ಅಷ್ಟು ಮಾಹಿತಿ, ಆಸಕ್ತಿ ಮತ್ತು ಸಮಯವಿಲ್ಲ. ಅದರ ಲಾಭ ಈ ಎಡಬಲದವರು ಮಾಡಿಕೊಳ್ಳುತ್ತಿದ್ದಾರೆ.
ಕಾರ್ಪೊರೇಟ್ ಸಂಸ್ಕೃತಿ ಹೇಗೆ ಜನ ಸಾಮಾನ್ಯರಿಗೆ ಮಾರಕವೋ ಹಾಗೆಯೇ ಈ ಎಡಬಲದ ಅತಿರೇಕಿಗಳು ಕೂಡ ಅಷ್ಟೇ ಅಪಾಯಕಾರಿ. ಸಮನ್ವಯದ ಹಾದಿ ಹುಡುಕದೆ ತಮ್ಮ ಚಿಂತನೆಗಳೇ ಶ್ರೇಷ್ಠ ಎಂದು ನಾಟಕ ಮಾಡಿ ಸಮನ್ವಯದ ಹಾದಿ ಮುಚ್ಚಿ ಯಥಾಸ್ಥಿತಿ ಕಾಪಾಡುವ ಉಡಾಫೆ ಮನೋಭಾವದವರು.
ಸಮನ್ವಯದ ಪ್ರಯತ್ನ ಮಾಡಿದರೆ ಅವಕಾಶವಾದಿ ಎಂದು ಜರಿಯುತ್ತಾರೆ. ದೇವರೇ ಇಲ್ಲ ಎಂದರೆ ಧರ್ಮಾಧಿಕಾರಿಗಳಿಗೆ ಕೆಲಸವೇ ಇಲ್ಲ. ಹಾಗೆಯೇ ಎಡಬಲದ ಚಿಂತನೆಗಳು ಇಲ್ಲವಾದರೆ ಇವರು ಸಹ ಅಸ್ತಿತ್ವ ಕಳೆದುಕೊಳ್ಳುತ್ತಾರೆ.
ಕಾಂಗ್ರೇಸ್ ನವರಾಗಲಿ ಬಿಜೆಪಿಯವರಾಗಲಿ ಬೇರೆ ದೇಶದಿಂದ ಬಂದವರಲ್ಲ. ಎಲ್ಲರೂ ನಮ್ಮವರೇ. ಜೊತೆಗೆ ಈ ಎಲ್ಲಾ ಪಕ್ಷಗಳ ಶಾಸಕರು ಒಳಗೆ ತುಂಬಾ ಅನ್ಯೋನ್ಯವಾಗಿಯೇ ಇರುತ್ತಾರೆ. ಮೇಲ್ನೋಟಕ್ಕೆ ಮಾತ್ರ ಕಾರ್ಯಕರ್ತರನ್ನು ಕೆರಳಿಸಿ ಮಜಾ ನೋಡುತ್ತಾರೆ.
ಆದ್ದರಿಂದ ದಯವಿಟ್ಟು ಸೇಡು ದ್ವೇಷ, ಎಡಬಲದ ಅತಿರೇಕಿಗಳನ್ನು ನಿರ್ಲಕ್ಷಿಸಿ ಸರ್ಕಾರ ಸಿಕ್ಕ ಅವಕಾಶವನ್ನು ಇಡೀ ಸಮಾಜದ ಒಳಿತಿಗಾಗಿ ಉಪಯೋಗಿಸಲಿ. ಕಾಡು ಹರಟೆಯಲ್ಲಿ ಕಳೆದು ಹೋಗದಿರಲಿ. ಜನರು ಆದಷ್ಟು ಬೇಗ ರಾಜಕೀಯ ಚಿಂತನೆಯಲ್ಲಿ ಜಾಗೃತವಾಗಿ ಸಾಮಾಜಿಕ ಬದಲಾವಣೆಯ ಜವಾಬ್ದಾರಿ ಹೊರುವಂತಾಗಲಿ ಎಂದು ಆಶಿಸುತ್ತಾ……
ಜನರು ತೋರಿಸಿರುವ ಪ್ರೀತಿಯನ್ನು ದಯವಿಟ್ಟು ಕಳೆದುಕೊಳ್ಳದಿರಿ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..