ಬೈಂದೂರು: ದಿನಾಂಕ:06-05-2023(ಹಾಯ್ ಉಡುಪಿ ನ್ಯೂಸ್) ಚುನಾವಣಾ ಮಾದರಿ ನೀತಿ ಸಂಹಿತೆ ಯನ್ನು ಉಲ್ಲಂಘಿಸಿ ಸಭೆ ನಡೆಸಿ, ಊಟ ವಿತರಿಸಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಾ.ಚಂದ್ರ ಶೇಖರ ಮೊಗೇರ (42) ಎಫ್.ಎಸ್.ಟಿ -1, 118- ಬೈಂದೂರು ವಿಧಾನಸಭಾ ಕ್ಷೇತ್ರ ಚುನಾವಣಾ ಅಧಿಕಾರಿ ಅವರಿಗೆ ಉಪ್ಪುಂದ ನಂದನವನ ಪರಿಚಯ ಹೋಟೆಲ್ ಮತ್ತು ಅದರ ಸಭಾಭವನದಲ್ಲಿ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ಸಭೆ ಅನುಮತಿಯಿಲ್ಲದೇ ನಡೆಯುತ್ತಿರುವ ಬಗ್ಗೆ ಮತ್ತು ಊಟ ಹಂಚಿಕೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಪ್ರಕಾರ ಡಾ.ಚಂದ್ರಶೇಖರ ಮೊಗೇರ ಅವರು ಎಫ್.ಎಸ್.ಟಿ -1 ಟೀಂ ಜೊತೆಯಲ್ಲಿ ದಿನಾಂಕ 03/05/2023 ರಂದು ರಾತ್ರಿ 9:10 ಗಂಟೆಗೆ ದೂರು ಬಂದ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪರಿಚಯ ಹೋಟೆಲ್ ಗೆ ಹೊಂದಿಕೊಂಡ ಸಭಾಭವನದಲ್ಲಿ ಮೊದಲನೇ ಮಹಡಿ ಪ್ರವೇಶಿಸಿದಾಗ ಸಭೆ ನಡೆಯುತ್ತಿದ್ದು, ಸುಮಾರು 600 ಕುರ್ಚಿಯ ವ್ಯವಸ್ಥೆ ಇದ್ದು, ಜನರು ಆಸೀನರಾಗಿದ್ದು, ವೇದಿಕೆಯ ಮೇಲೆ ಡಾ. ಗೋವಿಂದ ಬಾಬು ಪೂಜಾರಿ, ಮಹೇಂದ್ರ ಪೂಜಾರಿ ಹಾಗೂ ಇತರ ಬಿ.ಜೆ.ಪಿ ಪದಾಧಿಕಾರಿಯವರಿದ್ದು, ಡಾ.ಚಂದ್ರ ಶೇಖರ ಮೊಗೇರ ಅವರು ವೀಡಿಯೋ ಚಿತ್ರೀಕರಣ ಮಾಡುವ ಸಂದರ್ಭ ಗೋವಿಂದ ಬಾಬು ಪೂಜಾರಿಯವರು ವೇದಿಕೆಯ ಮೇಲೆ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದು, ಎಲ್ಲರೂ ಸೇರಿ ಈ ಬಾರಿ ಸಪೋರ್ಟ್ ಮಾಡೋಣ ಎಂಬುದಾಗಿ ಹೇಳಿದ್ದು, ನಂತರ ಕಾರ್ಯಕ್ರಮ ಇಲ್ಲಿಗೆ ಮುಕ್ತಾಯವಾಗಿದ್ದು, ಸಭಾಭವನದ ಕೆಳಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಲ್ಲರೂ ಊಟ ಮಾಡುವಂತೆ ತಿಳಿಸಿರುತ್ತಾರೆ. ನಂತರ ಸಭಾಭವನದಲ್ಲಿ ಇದ್ದ ಜನರು ಕೆಳಗೆ ಇಳಿದು ಬಂದು, ಕೆಳಗೆ ವ್ಯವಸ್ಥೆ ಮಾಡಲಾದ ಊಟವನ್ನು ಸೇವಿಸಿರುತ್ತಾರೆ. ಸದ್ರಿ ಹೋಟೆಲ್ ನ ಮಾಲೀಕರ ಬಗ್ಗೆ ಚುನಾವಣಾ ಅಧಿಕಾರಿಗಳು ಹೋಟೆಲ್ ನಲ್ಲಿ ವಿಚಾರಿಸಿದಾಗ ಸಭೆ ನಡೆದ ಪರಿಚಯ ಹೋಟೆಲ್ ಗೋವಿಂದ ಬಾಬು ಪೂಜಾರಿಯವರಿಗೆ ಸೇರಿದ್ದಾಗಿಯೂ, ಸಭೆಯನ್ನು ಹಾಗೂ ಊಟದ ವ್ಯವಸ್ಥೆಯನ್ನು ಗೋವಿಂದ ಬಾಬು ಪೂಜಾರಿಯವರೇ ಮಾಡಿರುವುದಾಗಿ ಹಾಗೂ ಈ ಕಾರ್ಯಕ್ರಮಕ್ಕೆ ಚುನಾವಣಾ ಆಯೋಗದಿಂದ ಯಾವುದೇ ಅನುಮತಿ ಪಡೆದುಕೊಂಡಿರುವುದಿಲ್ಲ ಎಂದು ಚುನಾವಣಾ ಅಧಿಕಾರಿ ಅವರಿಗೆ ತಿಳಿದು ಬಂದಿರುತ್ತದೆ. ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿಯಾದ ಡಾ. ಗೋವಿಂದ ಬಾಬು ಪೂಜಾರಿಯವರು ಚುನಾವಣಾ ಆಯೋಗದಿಂದ ಯಾವುದೇ ಅನುಮತಿ ಪಡೆಯದೇ ತಮ್ಮ ಪರಿಚಯ ಹೋಟೆಲ್ ಸಭಾಭವನದಲ್ಲಿ ಬಿಜೆಪಿ ಪಕ್ಷದ ಪರವಾಗಿ ಸಭೆ ನಡೆಸಿ, ಸಭೆಯ ಬಳಿಕ ಸಭೆಯಲ್ಲಿ ಹಾಜರಾದವರಿಗೆ ಊಟದ ವ್ಯವಸ್ಥೆಯನ್ನು ಮಾಡಿ, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿರುತ್ತಾರೆ ಎಂದು ಚುನಾವಣಾ ಅಧಿಕಾರಿ ಯವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 171 (ಹೆಚ್) ಐಪಿಸಿಯಂತೆ ಪ್ರಕರಣ ದಾಖಲಾಗಿದೆ.