ಉಡುಪಿ: ದಿನಾಂಕ 11-04-2023(ಹಾಯ್ ಉಡುಪಿ ನ್ಯೂಸ್) ಸಾಮಾಜಿಕ ಜಾಲತಾಣದಲ್ಲಿ ತನಗೆ ಪರಿಚಯವಾದ ವ್ಯಕ್ತಿಯೋರ್ವ ಬಿಟ್ ಕಾಯಿನ್ ನಲ್ಲಿ ಹಣ ಹೂಡುವಂತೆ ಆಸೆ ತೋರಿಸಿ 26 ಲಕ್ಷ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಆತ್ರೇಯ ಆಚಾರ್ಯ ಎಂಬವರು ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.
ಆತ್ರೇಯ ಆಚಾರ್ಯ ಎಂಬವರಿಗೆ ತುಷಾರ್ ಕಪೂರ್ ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡು ಬಿಟ್ ಕಾಯಿನ್ ನಲ್ಲಿ ಇನ್‌ವೆಸ್ಟ್‌ಮೆಂಟ್ ಮಾಡಿದಲ್ಲಿ ಅತೀ ಲಾಭ ಬರುವ ಬಗ್ಗೆ ಆಸೆ ತೋರಿಸಿ, ಆತ್ರೇಯ ಆಚಾರ್ಯ ಅವರಿಂದ Binance ಹಾಗೂ Noones.com ನಲ್ಲಿ ವ್ಯಾಲೆಟ್ ಓಪನ್ ಮಾಡಿಸಿ, ಹಣ ಪಾವತಿಸುವಂತೆ ತಿಳಿಸಿರುತ್ತಾನೆ ಎಂದು ಆತ್ರೇಯ ಆಚಾರ್ಯ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನು ನಂಬಿದ ಆತ್ರೇಯ ಆಚಾರ್ಯ ರು ದಿನಾಂಕ 19/03/2023 ರಿಂದ ದಿನಾಂಕ 09/04/2023 ರವರೆಗೆ ಆರೋಪಿ ತುಷಾರ್ ಕಪೂರ್ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂಪಾಯಿ 25,52,300/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿರುತ್ತಾರೆ ಎಂದಿದ್ದಾರೆ. ಆ ಬಳಿಕ ಆತ್ರೇಯ ಆಚಾರ್ಯರ ವ್ಯಾಲೇಟ್ ನಲ್ಲಿದ್ದ ಬಿಟ್ ಕಾಯಿನ್ ಅನ್ನು ಆರೋಪಿ ತುಷಾರ್ ಕಪೂರ್ ದಿನಾಂಕ 09/04/2023 ರಂದು ಟ್ರಾನ್ಸ್‌ಫರ್ ಮಾಡಿ, ಬಿಟ್ ಕಾಯಿನ್ ನೀಡದೇ ಪಡೆದ ಹಣ ವಾಪಾಸು ನೀಡದೇ ಮೋಸ ಮಾಡಿರುತ್ತಾನೆ ಎಂದು ದೂರಿದ್ದಾರೆ.ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಕಲಂ: 66(C) 66(D) ಐ.ಟಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ.