ಸತ್ಯದ ಹುಡುಕಾಟದಲ್ಲಿ ಅವರು – ಇವರು ಆಗಿರದೆ ಭಾರತೀಯ ಮನಸ್ಥಿತಿ ಹೊಂದುವಂತಾಗಲಿ……..
ಮಹಾತ್ಮ ಗಾಂಧಿ ಎಂದೂ ಹಿಂದು ಅಥವಾ ಮುಸ್ಲಿಮರ ಪರವಾಗಿ ಇರಲಿಲ್ಲ. ಅವರು ನ್ಯಾಯ ಮತ್ತು ಸತ್ಯದ ಪರವಾಗಿ ಇದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಂದೂ ಕೇವಲ ದಲಿತರ ಪರವಾಗಿ ಮಾತ್ರ ಇರಲಿಲ್ಲ ಮಾನವೀಯತೆಯ ಪರವಾಗಿ ಇದ್ದರು. ಬಸವಣ್ಣನವರು ಲಿಂಗಾಯತರ ಪರವಾಗಿ ಮಾತ್ರ ಇರಲಿಲ್ಲ ಸಮಾನತೆಯ ಪರವಾಗಿ ಇದ್ದರು. ಹಾಗೆಯೇ ನಾವು ನೀವು ಸಹ ಎಡಬಲದ ಪರವಾಗಿ ಅಥವಾ ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿಯವರ ಪರವಾಗಿ ಮಾತ್ರ ಇರಬಾರದು. ಭಾರತದ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಯ ಪರವಾಗಿ ಇರಬೇಕು.
ಒಂದು ವೇಳೆ ನಾವು ರಾಹುಲ್ ಅಥವಾ ಮೋದಿಯವರ ಜೈಲುವಾಸವನ್ನು ಬಯಸುವವರಾದರೆ ಅದು ದೇಶದ ಹಿತಾಸಕ್ತಿಗೆ ಮಾರಕ. ಸಹಜ ತಪ್ಪುಗಳಿಗೆ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ. ಆದರೆ ಉದ್ದೇಶ ಪೂರ್ವಕ ರಾಜಕೀಯ ಸೇಡು ಒಳ್ಳೆಯದಲ್ಲ.
ಈಗಿನ ಬಹುತೇಕ ರಾಜಕೀಯ ವ್ಯವಸ್ಥೆ ಮೋದಿ ಪರ ಅಥವಾ ವಿರುದ್ಧ ಎಂದು ವಿಭಾಗವಾಗಿ ಸಾಮಾನ್ಯ ಜನ ಸಹ ಅದೇ ರೀತಿಯ ಪ್ರತಿಕ್ರಿಯೆ ನೀಡುವುದು ದೇಶದ ಒಟ್ಟು ಹಿತಾಸಕ್ತಿಯ ದೃಷ್ಟಿಯಿಂದ ಕೆಟ್ಟ ಬೆಳವಣಿಗೆ.
ನಿನ್ನೆ ಶಿಕ್ಷೆಯ ಕಾರಣಕ್ಕೆ ರಾಹುಲ್ ಗಾಂಧಿಯವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ಮಾತ್ರಕ್ಕೆ ಅವರ ಎಲ್ಲಾ ನಡೆಗಳ ಬೆಂಬಲ ಎಂದು ಭಾವಿಸಬಾರದು.
ರಾಹುಲ್ ಗಾಂಧಿಯವರು ಇನ್ನೂ ಸಂಯಮ ಸಹನೆ ಮತ್ತು ವಿವೇಚನೆ ಬೆಳೆಸಿಕೊಂಡರೆ ಉತ್ತಮ. ಅದಕ್ಕೆ ಮತ್ತಷ್ಟು ಅಧ್ಯಯನ ಮತ್ತು ಹಿತೈಷಿಗಳ ಒಡನಾಟದ ಅವಶ್ಯಕತೆ ಇದೆ ಎನಿಸುತ್ತದೆ.
ಮೊದಲನೆಯದಾಗಿ, ವಿದೇಶಿ ನೆಲದಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯದ ಸಂವಾದ ಕಾರ್ಯಕ್ರಮದಲ್ಲಿ ಭಾರತದ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿದಿವೆ ಮತ್ತು ಅವು ಅಪಾಯಕಾರಿ ಹಂತ ತಲುಪಿದೆ ಅದನ್ನು ಉಳಿಸಲು ಪಾಶ್ಚಾತ್ಯ ದೇಶಗಳ ಸಹಾಯದ ಅವಶ್ಯಕತೆ ಇದೆ ಎಂದು ಹೇಳಲು ಅವರು ಸಾಮಾನ್ಯ ವ್ಯಕ್ತಿಯಲ್ಲ, ಪತ್ರಕರ್ತರಲ್ಲ, ಚಿಂತಕರಲ್ಲ, ವ್ಯವಸ್ಥೆಯ ವಿರುದ್ಧದ ಬಂಡಾಯಗಾರರಲ್ಲ. ಭಾರತದ ರಾಜಕೀಯ ವ್ಯವಸ್ಥೆಯ ಪ್ರಮುಖ ವಿರೋಧ ಪಕ್ಷದ ನಾಯಕರು. ಪ್ರಧಾನ ಮಂತ್ರಿ ಸ್ಪರ್ಧೆಯ ಸಮೀಕ್ಷೆಗಳಲ್ಲಿ ಎರಡನೇ ಸ್ಥಾನದಲ್ಲಿ ಇರುವವರು.
ಭಾರತ ರಾಷ್ಟ್ರೀಯ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಮತ್ತು ಸಂಸತ್ ಸದಸ್ಯರು. ಆ ಕಾರಣದಿಂದಲೇ ಅವರಿಗೆ ವಿದೇಶದ ಪ್ರತಿಷ್ಠಿತ ವೇದಿಕೆಗಳಲ್ಲಿ ಆಹ್ವಾನ ನೀಡಲಾಗುತ್ತದೆ. ಅಂತಹ ಸಂದರ್ಭದಲ್ಲಿ ಮಾತನಾಡಲು ಅನೇಕ ಇತರೆ ಮಹತ್ವದ ವಿಷಯಗಳು ಇರುತ್ತವೆ.
ಬಹುಶಃ ಆ ವಿಷಯದಲ್ಲಿ ಸ್ವಾಮಿ ವಿವೇಕಾನಂದರು ಇಡೀ ದೇಶಕ್ಕೆ ಬಹುದೊಡ್ಡ ಮಾದರಿ. ಏಕೆಂದರೆ ಅವರು ವಿದೇಶಗಳಲ್ಲಿ ಭಾರತದ ಸಾಂಸ್ಕೃತಿಕ ಮಹತ್ವವನ್ನು ಸಾರಿ ಹೇಳಿದರೆ ದೇಶದ ಒಳಗೆ ಇಲ್ಲಿನ ಧಾರ್ಮಿಕ ಹುಳುಕುಗಳನ್ನು, ಸಾಮಾಜಿಕ ಅಸಮಾನತೆಯನ್ನು, ಮೌಡ್ಯಗಳನ್ನು ಕಟು ಶಬ್ದಗಳಲ್ಲಿ ನಿಂದಿಸುತ್ತಾರೆ.
ರಾಹುಲ್ ಗಾಂಧಿಯವರು ದೇಶದ ಒಳಗಿನ ಜನರಿಗೆ ಆಡಳಿತ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಮನವರಿಕೆ ಮಾಡಿಕೊಟ್ಟು ಅವರ ವಿಶ್ವಾಸಗಳಿಸಿ ಚುನಾವಣಾ ರಾಜಕೀಯದಲ್ಲಿ ಯಶಸ್ಸು ಗಳಿಸುವ ಪ್ರಯತ್ನ ಮಾಡಬೇಕೆ ಹೊರತು ಹೊರ ದೇಶಗಳಲ್ಲಿ ನಮ್ಮ ದೇಶವನ್ನು ಟೀಕಿಸುವುದು ಅಷ್ಟು ಉತ್ತಮ ನಡೆಯಲ್ಲ. ಅದನ್ನು ಮಾಡುವ ಸ್ವಾತಂತ್ರ್ಯ ಅವರಿಗಿದೆ ನಿಜ. ಆದರೆ ವಾಸ್ತವದ ವಿವೇಚನೆ ಬಹಳ ಮುಖ್ಯ.
ಎರಡನೆಯದಾಗಿ, ಅನಾವಶ್ಯಕವಾಗಿ ಪ್ರತಿ ಬಾರಿಯು ನಾನು ಕ್ಷಮಾಪಣೆ ಕೇಳಲು ಸಾರ್ವಕರ್ ಅವರಂತೆ ಹೇಡಿಯಲ್ಲ ಎಂದು ಹೇಳುತ್ತಿರುತ್ತಾರೆ. ಸಾರ್ವಕರ್ ಅವರ ಸೈದ್ದಾಂತಿಕ ಹಿನ್ನೆಲೆ ಏನೇ ಇರಬಹುದು, ಧಾರ್ಮಿಕ ಸಂಕುಚಿತತೆ ಏನೇ ಇರಬಹುದು, ಮಹಾತ್ಮ ಗಾಂಧಿಯವರ ಹತ್ಯೆಗೆ ಸಹಕರಿಸಿದ ಆರೋಪ ಇರಬಹುದು ಆದರೆ ಸ್ವಾತಂತ್ರ್ಯ ಚಳವಳಿಯಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ಕಠಿಣ ಶಿಕ್ಷೆಗೆ ಒಳಗಾಗಿದ್ದು ನಿಜ. ಅನಂತರ ಯಾವುದೋ ಕಾರಣದಿಂದ ಅವರು ಬ್ರಿಟಿಷರಿಗೆ ಕ್ಷಮಾಪಣೆ ಬರೆದುಕೊಟ್ಟು ಬಿಡುಗಡೆ ಆಗಿದ್ದು ನಿಜ. ಅದು ಆಗಿನ ಪರಿಸ್ಥಿತಿಯ ಅವರ ವೈಯಕ್ತಿಕ ನಿರ್ಧಾರ. ಅದನ್ನು ಒಪ್ಪುವುದು ಬಿಡುವುದು ಇತರರಿಗೆ ಸೇರಿದ್ದು. ಆದರೆ ಅದನ್ನು ಅವಮಾನಕರ ರೀತಿಯಲ್ಲಿ ಪದೇ ಪದೇ ಪ್ರಸ್ತಾಪಿಸುವುದು ಉಚಿತವಲ್ಲ. ಅಪ್ರಬುದ್ಧತೆಯ ಲಕ್ಷಣ ಎನಿಸುತ್ತದೆ.
ಈಗಿನ ಚುನಾವಣಾ ರಾಜಕೀಯದಲ್ಲಿ ಆಡಳಿತ ಪಕ್ಷದ ವಿರುದ್ಧ ಹೊಸ ಪರ್ಯಾಯ ಆಲೋಚನೆಗಳ ಮೂಲಕ ಹೊಸ ಭರವಸೆ ಹುಟ್ಟುಹಾಕುವ ಮಾತುಗಳು ಬೇಕಿದೆ. ಕಪ್ಪು ಹಣದ ವಾಪಸು ತರಲು ವಿಫಲವಾದ ಬಗ್ಗೆ ಮಾತನಾಡುತ್ತಾ ಮತ್ತೇನಾದರೂ ಇರುವ ಹೊಸ ಮಾರ್ಗಗಳ ಬಗ್ಗೆ, ನಿರುದ್ಯೋಗ ನಿವಾರಣೆ ಭರವಸೆ ಸುಳ್ಳಾದ ಕಾರಣ ಮತ್ತೇನಾದರೂ ಹೊಸ ವಿಧಾನ, ಬೆಲೆ ಏರಿಕೆ ನಿಯಂತ್ರಿಸಲಾಗದ ಬಗ್ಗೆ ಹೇಳಿ ಅದಕ್ಕೆ ಪರ್ಯಾಯ ಮಾರ್ಗದ ಬಗ್ಗೆ,
” ಏಕ್ ಭಾರತ್ ಶ್ರೇಷ್ಠ ಭಾರತ್ ” ಗೆ ಪರ್ಯಾಯವಾಗಿ ” ಬಹುತ್ವ ಭಾರತ್ ಬಲಿಷ್ಠ ಭಾರತ್ ” ನಿರ್ಮಾಣದ ಬಗ್ಗೆ, ಮೌಲ್ಯಯುತ ವಿಶ್ವ ಶ್ರೇಷ್ಠ ಭಾರತದ ನಿರ್ಮಾಣದ ಬಗ್ಗೆ ಮಾತನಾಡಬೇಕಿದೆ.
ಅದನ್ನು ಬಿಟ್ಟು ಕೇವಲ ಟೀಕೆಗಳೇ ಎಲ್ಲವನ್ನೂ ನಿರ್ಧರಿಸುವುದಿಲ್ಲ.
ಇಲ್ಲಿ ನಾವುಗಳು ಸಹ ನಿಷ್ಪಕ್ಷಪಾತವಾಗಿ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಕು. ಉದಾಹರಣೆಗೆ,
ರಾಹುಲ್ ಗಾಂಧಿಯವರು ಅನೇಕ ಪತ್ರಿಕಾಗೋಷ್ಠಿಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ನರೇಂದ್ರ ಮೋದಿಯವರು ಇಲ್ಲಿಯವರೆಗೂ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ. ಭಾರತದ ಪ್ರಧಾನಿಯ ಈ ಧೋರಣೆಯೂ ಖಂಡನೀಯವಲ್ಲವೇ. ಅದು ಮೋದಿಯವರ ವೈಯಕ್ತಿಕ ವಿಷಯವಲ್ಲ. ಭಾರತದ ಪ್ರಧಾನಿಯ ಜವಾಬ್ದಾರಿ. ಅದನ್ನು ಸಹ ನಾವು ಮಾತನಾಡಬೇಕು. ಮಾಧ್ಯಮಗಳು ಈ ಬಗ್ಗೆ ಪ್ರಧಾನಿಯವರ ಮೇಲೆ ದೊಡ್ಡ ಮಟ್ಟದ ಒತ್ತಡ ತರದೇ ಮೌನವಾಗಿರುವುದು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗದ ಬೇಜವಾಬ್ದಾರಿಯಲ್ಲವೇ, ಪ್ರಜಾಪ್ರಭುತ್ವದ ವಿರೋಧಿ ನಿಲುವಲ್ಲವೇ……..
ಇರಲಿ ರಾಹುಲ್ – ಮೋದಿ ಇಬ್ಬರೂ ನಮ್ಮವರೆ. ಯಾರು ಹೆಚ್ಚು ಜನರಲ್ಲಿ ಭರವಸೆ ಮೂಡಿಸುತ್ತಾರೋ ಅವರು ಆಯ್ಕೆಯಾಗುತ್ತಾರೆ. ಇಲ್ಲಿ ಸೋತವರು ಮತ್ತು ಗೆದ್ದವರು ನಮ್ಮವರೇ. ಆದ್ದರಿಂದ ನಾವುಗಳು ಸಹ ಪಕ್ಷ ರಹಿತವಾಗಿ ದೇಶದ ಹಿತಾಸಕ್ತಿಯ ಪರವಾಗಿ ಮಾತ್ರ ಚಿಂತಿಸೋಣ.
ಒಟ್ಟಿನಲ್ಲಿ ನನಗೆ ಕಂಡಂತೆ ನಾ……
ಎಡವೂ ಅಲ್ಲ ಬಲವೂ ಅಲ್ಲ ಮಧ್ಯವೂ ಅಲ್ಲ,
ಸತ್ಯದ ಹುಡುಕಾಟದ ಅನಾಥ ನಾ……
ಬಿಜೆಪಿ ಅಲ್ಲ ಕಾಂಗ್ರೆಸ್ ಅಲ್ಲ ಕಮ್ಯುನಿಸ್ಟ್ ಅಲ್ಲ ,
ವಾಸ್ತವದ ಹುಡುಕಾಟದ ಸಾಮಾನ್ಯ ನಾ.
ಹಿಂದೂ ಅಲ್ಲ ಮುಸ್ಲಿಂ ಅಲ್ಲ ಕ್ರಿಶ್ಚಿಯನ್ ಅಲ್ಲ,
ಮಾನವೀಯತೆಯ ಹುಡುಕಾಟದ ಭಾರತೀಯ ನಾ………
ದಲಿತನಲ್ಲ ಬ್ರಾಹ್ಮಣನಲ್ಲ ಗೌಡನಲ್ಲ ಲಿಂಗಾಯಿತನೂ ಅಲ್ಲ,
ಸಮಾನತೆಯ ಹುಡುಕಾಟದ ಪ್ರಾಣಿ ನಾ………
ಬಡವನಲ್ಲ ಭಿಕ್ಷುಕನಲ್ಲ ಶ್ರೀಮಂತನಲ್ಲ,
ಹೊಟ್ಟೆ ಪಾಡಿನ ಹುಡುಕಾಟದ ಸಾಮಾನ್ಯ ನಾ……
ಕವಿಯೂ ಅಲ್ಲ ಸಾಹಿತಿಯೂ ಅಲ್ಲ ವಿಮರ್ಶಕನೂ ಅಲ್ಲ,
ಅಕ್ಷರದ ಮುಖಾಂತರ ನಿಮ್ಮ ಹೃದಯ ತಲುಪಲು ಆಸೆಪಡುವ ಸ್ವಾರ್ಥಿ ನಾ…….
ಮನಸ್ಸುಗಳ ಅಂತರಂಗದ ಚಳವಳಿ ರೂಪಿಸಿ ಜನರನ್ನು ಪ್ರಬುದ್ದತೆಯೆಡೆಗೆ ಕೊಂಡೊಯ್ದು, ಅವರ ಜೀವನಮಟ್ಟ ಸುಧಾರಿಸಲು ಪ್ರಯತ್ನಿಸುವ ಅಳಿಲು ಯತ್ನ ( ಸೇವೆ ಅಲ್ಲ )
ಮಾಡುವ ಬಯಕೆಯ ಕನಸುಗಾರ ನಾ……..
ನಿಮ್ಮ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಲು ಇಚ್ಚಿಸುವ ಹುಚ್ಚ ನಾ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…