ರಾಹುಲ್ ಗಾಂಧಿ ಜೈಲು ಪಾಲು – ಸಂಸತ್ ಸದಸ್ಯತ್ವ ಅನರ್ಹ……..
ಕಾರಣ 2019 ರ ಕೋಲಾರದ ಚುನಾವಣಾ ಭಾಷಣದಲ್ಲಿ ಮೋದಿ ಎಂಬ ಗುಜರಾತಿನ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದ ಆರೋಪ ಸಾಬೀತಾಗಿ ಅಪರಾಧಿಯಾಗಿ ಅದಕ್ಕೆ ವಿಧಿಸಬಹುದಾದ ಗರಿಷ್ಠ 2 ವರ್ಷಗಳ ಶಿಕ್ಷೆಯನ್ನು ನೀಡಲಾಗಿದೆ. ಮುಂದೆ ಮುಂದಿನ ಹಂತದ ನ್ಯಾಯಾಲಯಗಳಲ್ಲಿ ಇದು ಯಾವ ತಿರುವು ಪಡೆಯುವುದೋ ಕಾದು ನೋಡಬೇಕು.
ಇದು ಭಾರತದ ನ್ಯಾಯಾಂಗ ವ್ಯವಸ್ಥೆಯ ಶ್ರೇಷ್ಠತೆಯನ್ನು ಎತ್ತಿಹಿಡಿಯುತ್ತದೆಯೇ ?
ದೇಶದ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೇಳುತ್ತದೆಯೇ ?
ರಾಜಕಾರಣಿಗಳು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂಬ ಸಂದೇಶ ಸಾರುತ್ತದೆಯೇ ?
ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯೇ ?
ಪ್ರಧಾನಿ ನರೇಂದ್ರ ಮೋದಿಯವರ ಸರ್ವಾಧಿಕಾರಿ ಧೋರಣೆಯ ಭಾಗವೇ ?
ಪ್ರಜಾಪ್ರಭುತ್ವದ ದಾರಿ ಸಾಗುತ್ತಿರುವ ಅಪಾಯಕಾರಿ ತಿರುವುಗಳೇ ?
ವಿರೋಧ ಪಕ್ಷಗಳ ಧ್ವನಿ ಅಡಗಿಸುವ ಹೇಡಿತನದ ಕೃತ್ಯವೇ ?
ಹೀಗೆ ನಾನಾ ರೀತಿಯ ಪ್ರಶ್ನೆಗಳು – ಅನುಮಾನಗಳು ಸಾಮಾನ್ಯ ಜನರಿಗೆ ಕಾಡುತ್ತದೆ.
ಆದರೆ ಮೂಲಭೂತವಾಗಿ ಈ ತೀರ್ಪಿನಲ್ಲಿ ನ್ಯಾಯಾಧೀಶರ ಅಸೂಕ್ಷ್ಮತೆ ಎದ್ದು ಕಾಣುತ್ತದೆ. ರಾಹುಲ್ ಗಾಂಧಿಯವರ ಆ ಸನ್ನಿವೇಶದ ಪೂರ್ಣ ಭಾಷಣ ಕೇಳಿದಾಗ ಅವರು ಲಲಿತ್ ಮೋದಿ ಮತ್ತು ನೀರವ್ ಮೋದಿ ಎಂಬ ಇಬ್ಬರು ದೇಶದಿಂದ ಆರ್ಥಿಕ ಅಪರಾಧಗಳಿಗಾಗಿ ವಿದೇಶಕ್ಕೆ ಕಳ್ಳ ಮಾರ್ಗದಲ್ಲಿ ಪಲಾಯನ ಮಾಡಿದ ವಿಷಯವನ್ನು ನೆಪವಾಗಿ ಇಟ್ಟುಕೊಂಡು ಅವರ ರಾಜಕೀಯ ವಿರೋಧಿಯಾದ ಪ್ರಧಾನಿ ನರೇಂದ್ರ ಮೋದಿಯವರನ್ನು ಸಹ ಕಳ್ಳರಂತೆ ಎಂದು ಪರೋಕ್ಷವಾಗಿ ಟೀಕಿಸುತ್ತಾರೆ. ಅವರ ಮೂಲ ಆಶಯ ನರೇಂದ್ರ ಮೋದಿಯವರ ಟೀಕೆಯೇ ಹೊರತು ಮೋದಿ ಎಂಬ ಸಮುದಾಯವನ್ನು ಸಾರಾಸಗಟಾಗಿ ಟೀಕಿಸುವುದಲ್ಲ. ಪದಗಳ ಜೋಡಣೆಯಲ್ಲಿ ಸ್ವಲ್ಪ ಅದೇ ಅರ್ಥ ಆಕಸ್ಮಿಕವಾಗಿ ಬರಬಹುದಾದರು ಯಾರೇ ಆಗಲಿ ಒಂದು ಸಮುದಾಯವನ್ನು ಬಹಿರಂಗವಾಗಿ ಕಳ್ಳರು ಎಂದು ಟೀಕಿಸುವ ತಪ್ಪು ಮತ್ತು ಧೈರ್ಯ ಮಾಡಲಾರರು.
ನ್ಯಾಯಾಧೀಶರು ಗಮನಿಸಬೇಕಿದ್ದ ಸೂಕ್ಷ್ಮತೆ ಇಲ್ಲಿ ಮಾಯವಾಗಿದೆ. ಅಲ್ಲದೇ ಒಂದು ವೇಳೆ ರಾಹುಲ್ ಗಾಂಧಿಯವರ ಟೀಕೆ ಉದ್ದೇಶ ಪೂರ್ವಕ ಎಂದು ಮನವರಿಕೆಯಾಗಿ ಅಪರಾಧಿ ಎಂದು ಸಾಬೀತಾದಮೇಲೂ ಅವರ ಕೊನೆಯ ಹೇಳಿಕೆಯಲ್ಲಿ ನಾನು ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಮಾತನ್ನು ಉದ್ದೇಶ ಪೂರ್ವಕವಾಗಿ ಹೇಳಿಲ್ಲ ಅದು ಆಕಸ್ಮಿಕ ಎಂಬ ಹೇಳಿಕೆಯ ಆಧಾರದ ಮೇಲೆ ಅವರಿಗೆ ಒಂದು ದಿನದ ಸಾಂಕೇತಿಕ ಶಿಕ್ಷೆ ನೀಡಿ ಸ್ವಲ್ಪ ದಂಡ ವಿಧಿಸಿ ಎಚ್ಚರಿಕೆ ನೀಡಿ ಬಿಡುಗಡೆ ಮಾಡಬಹುದಿತ್ತು. ಏಕೆಂದರೆ ಅವರು ದೇಶದ ವಿರೋಧ ಪಕ್ಷದ ಪ್ರಮುಖ ನಾಯಕರು. ಪ್ರಪಂಚದ ಬಹುದೊಡ್ಡ ಅಭಿವ್ಯಕ್ತಿ ಸ್ವಾತಂತ್ರ್ಯ ಹೊಂದಿರುವ ಪ್ರಜಾಪ್ರಭುತ್ವದ ದೇಶ ಭಾರತ. ಆ ಪ್ರಜ್ಞೆ ಸಹ ನ್ಯಾಯಾಧೀಶರಿಗೆ ಇರಬೇಕು. ಗರಿಷ್ಠ ಶಿಕ್ಷೆಯ ಅವಶ್ಯಕತೆ ಇರಲಿಲ್ಲ.
ಜೊತೆಗೆ ಇದಕ್ಕಿಂತ ಅತ್ಯಂತ ಅಪಾಯಕಾರಿ ಭಾಷಣಗಳನ್ನು ಪ್ರತಿನಿತ್ಯ ಧಾರ್ಮಿಕ ಮತ್ತು ರಾಜಕೀಯ ನಾಯಕರು ಬಹಿರಂಗವಾಗಿ ಹೇಳುತ್ತಲೇ ಇದ್ದಾರೆ. ಕೊಚ್ಚು, ಕೊಲ್ಲು, ಕಡಿ, ಕತ್ತರಿಸು, ಹೊಡೆದಾಕು, ಗೋಲಿ ಮಾರ್ದೋ ಹೀಗೆ ಹೇಳುವುದಲ್ಲದೇ ಕೆಲವೊಮ್ಮೆ ಗಾಂಧಿ ಪ್ರತಿಮೆಗೆ ಗುಂಡು ಹೊಡೆದು ಕೃತಕ ರಕ್ತ ಹರಿಸಿದ ದೃಶ್ಯಗಳನ್ನು ಸಹ ನೋಡಿದ್ದೇವೆ.
ಇದು ವೈಯಕ್ತಿಕವಾಗಿ ರಾಹುಲ್ ಗಾಂಧಿಯವರ ಪ್ರಶ್ನೆಯಲ್ಲ. ಏಕೆಂದರೆ ಬಹುಶಃ ಮುಂದಿನ ನ್ಯಾಯಾಲಯಗಳಲ್ಲಿ ವಾದ ಮಾಡಿಯೋ ಕ್ಷಮೆ ಕೇಳಿಯೋ ಅವರು ಶಿಕ್ಷೆಯಿಂದ ಪಾರಾಗಬಹುದು ಅಥವಾ ಶಿಕ್ಷೆ ಅನುಭವಿಸಿದರು ಅದು ಮುಖ್ಯವಲ್ಲ. ಹಿಂದಿನ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರೇ ಹೇಳಿದಂತೆ ನ್ಯಾಯಾಂಗದ ಅಸೂಕ್ಷ್ಮತೆ ಅಥವಾ ಅದರ ಮೇಲಿನ ನಂಬಿಕೆ ನಶಿಸಿದರೆ ಅರಾಜಕತೆ ಉಂಟಾಗುತ್ತದೆ.
ಇತ್ತೀಚೆಗೆ ಮತ್ತೊಬ್ಬ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹೇಳಿದಂತೆ ಅನಾವಶ್ಯಕವಾಗಿ ಆರೋಪಿಗಳನ್ನು ಜೈಲಿಗೆ ಕಳುಹಿಸುವ ವಿಷಯದಲ್ಲಿ ನ್ಯಾಯಾಧೀಶರಿಗೆ ಕೌನ್ಸಿಲಿಂಗ್ ಅಗತ್ಯವಿದೆ.
ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಜಿದ್ದಾಜಿದ್ದಿ ಸಹಜವೇ. ಆದರೆ ಇವುಗಳ ಮಧ್ಯೆ ದೇಶದ ಪ್ರಜಾಪ್ರಭುತ್ವದ ಸಮಗ್ರತೆ ಮತ್ತು ಶ್ರೇಷ್ಠತೆ ಅರ್ಥೈಸುವ ಹೊಣೆಗಾರಿಕೆ ನ್ಯಾಯಾಲಯಗಳಿಗೆ ಸೇರಿರುತ್ತದೆ. ಅದರಲ್ಲೂ ವಿರೋಧ ಪಕ್ಷಗಳ ರಾಜಕೀಯ ಭಾಷಣಗಳ ವಿಷಯದಲ್ಲಿ ಸದಸ್ಯತ್ವವನ್ನೇ ಅನರ್ಹ ಗೊಳಿಸುವ ಮತ್ತು ಜೈಲಿಗೆ ಕಳಿಸುವ ಶಿಕ್ಷೆ ನೀಡುವಾಗ ಎಚ್ಚರಿಕೆ ಅಗತ್ಯ.
ಕ್ರಿಮಿನಲ್ ಮತ್ತು ಭ್ರಷ್ಟಾಚಾರದ ವಿಷಯದಲ್ಲಿ ಸದಸ್ಯತ್ವ ರದ್ದು ಸ್ವೀಕಾರಾರ್ಹ. ಆದರೆ ರಾಜಕೀಯ ಭಾಷಣಗಳ ವಿಷಯದಲ್ಲಿ ಸದಸ್ಯತ್ವ ರದ್ದುಗೊಳಿಸಿದರೆ ಮುಂದೆ ಟೀಕೆಗಳೇ ಮೊನಚು ಕಳೆದುಕೊಂಡು ಪ್ರಜಾಪ್ರಭುತ್ವ ತನ್ನ ಗಟ್ಟಿತನ ಉಳಿಸಿಕೊಳ್ಳುವುದು ಕಷ್ಟವಾಗಬಹುದು.
ಅಂತಿಮವಾಗಿ ನ್ಯಾಯಾಲಯದ ತೀರ್ಪನ್ನು ಗೌರವಪೂರ್ವಕವಾಗಿ ಒಪ್ಪಿಕೊಳ್ಳುತ್ತಾ ಆದರೆ ಅದರ ಅಸೂಕ್ಷ್ಮತೆ ಬಗ್ಗೆ ಅಸಮಾಧಾನವನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಗಂಭೀರ ಅಪಾಯದ ಹಿನ್ನಲೆಯಲ್ಲಿ ವಿಮರ್ಶೆ ಮಾಡುತ್ತಾ…..
ಒಂದು ಅನಿಸಿಕೆ – ಅಭಿಪ್ರಾಯ ಮಾತ್ರ….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…