ನವದೆಹಲಿ: ದಿನಾಂಕ 27-02-2023 (ಹಾಯ್ ಉಡುಪಿ ನ್ಯೂಸ್) ದೆಹಲಿ ಸರ್ಕಾರದ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್‌ಶೀಟ್ ಸಲ್ಲಿಸಿದ ಸುಮಾರು ಮೂರು ತಿಂಗಳ ಬಳಿಕ ಸಿಬಿಐ ಅಧಿಕಾರಿಗಳು ಮನೀಶ್ ಸಿಸೋಡಿಯಾ ಅವರನ್ನು ಭಾನುವಾರ ಬೆಳಿಗ್ಗೆ ವಿಚಾರಣೆಗೆ ಒಳಪಡಿಸಿದ್ದರು. ಸತತ ಎಂಟು ಗಂಟೆಗಳ ವಿಚಾರಣೆ ಬಳಿಕ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಆಮ್ ಆದ್ಮಿ ಪಕ್ಷದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಮನೀಶ್ ಸಿಸೋಡಿಯಾ ಅವರು ಅಬಕಾರಿ ಇಲಾಖೆಯ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದರು. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಅಕ್ಟೋಬರ್ 17ರಂದು ವಿಚಾರಣೆ ನಡೆಸಲಾಗಿತ್ತು. ಅಷ್ಟೇ ಅಲ್ಲ ಅವರ ಮನೆ ಮತ್ತು ಬ್ಯಾಂಕ್ ಲಾಕರ್‌ಗಳನ್ನೂ ಶೋಧಿಸಲಾಗಿತ್ತು.
ಸಿಬಿಐ ಕಚೇರಿಗಳ ಎದುರು ಪ್ರತಿಭಟನೆಗೆ ನಿರ್ಧಾರ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನ ಖಂಡಿಸಿ ದೇಶದಾದ್ಯಂತ ಸಿಬಿಐ ಕಚೇರಿಗಳ ಎದುರು ನಾಳೆ (ಸೋಮವಾರ) ಬೃಹತ್ ಪ್ರತಿಭಟನೆ ನಡೆಸಲು ಆಮ್ ಆದ್ಮಿ ಪಕ್ಷ (ಎಎಪಿ) ನಿರ್ಧರಿಸಿದೆ ಎನ್ನಲಾಗಿದೆ .