Spread the love

” ಕಾರ್ಖಾನೆಗಳ ಮಸೂದೆ ( ಕರ್ನಾಟಕ ತಿದ್ದುಪಡಿ ) 2023 ” ಸರ್ಕಾರದಿಂದ ಅಂಗೀಕಾರ……..

ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಇದೊಂದು ಅತ್ಯಂತ ಅಪಾಯಕಾರಿ ತಿದ್ದುಪಡಿ. ಈಗಾಗಲೇ ಬಸವಳಿದಿರುವ ಉದ್ಯೋಗಿಗಳು ಮತ್ತು ಅವರ ಬದುಕು ಮತ್ತಷ್ಟು ಅಧೋಗತಿಗೆ ಇಳೆಯಳಿದೆ. ಜೀವನ ಮತ್ತೂ ಯಾಂತ್ರೀಕೃತವಾಗಲಿದೆ.

” ದಿನದ ಕೆಲಸದ ಅವಧಿ 9 ರಿಂದ 12 ಗಂಟೆಗೆ ವಿಸ್ತರಣೆ ” ( ಷರತ್ತುಗಳು ಅನ್ವಯ ಎಂಬ ಕಣ್ಣೊರೆಸುವ ತಂತ್ರ……….

ಇಡೀ ವಿಶ್ವದ ಮನುಷ್ಯನ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಗಮನಿಸಿ ಆತನ ದುಡಿಯುವ ಅವಧಿಯನ್ನು ವೈಜ್ಞಾನಿಕವಾಗಿ 8 ಗಂಟೆ ಎಂದು ನಿರ್ಧರಿಸಲಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಇದೇ ನಿಯಮವಿದೆ.

ದಿನದ 24 ಗಂಟೆಗಳಲ್ಲಿ 8 ಗಂಟೆ ಉದ್ಯೋಗ, 8 ಗಂಟೆ ನಿದ್ರೆ, 8 ಗಂಟೆ ಇತರ ಚಟುವಟಿಕೆಗಳು. ಇದು ಸಾಮಾನ್ಯವಾಗಿ ಆರೋಗ್ಯವಂತ ಮನುಷ್ಯನ ದಿನಚರಿ ಇರಬೇಕು.

ಸೂಕ್ಷ್ಮವಾಗಿ ಗಮನಿಸಿದರೆ 8 ಗಂಟೆಗಳ ಕೆಲಸದ ಅವಧಿಯ ಜೊತೆ ಅಲ್ಲಿಗೆ ಹೋಗಿ ಬರಲು ಇತ್ತೀಚಿನ ವರ್ಷಗಳಲ್ಲಿ ಸುಮಾರು ಎರಡು ಗಂಟೆಯಷ್ಟು ಸಮಯ ತೆಗೆದುಕೊಳ್ಳುತ್ತದೆ. ನಗರಗಳಲ್ಲಿ ಇನ್ನೂ ಹೆಚ್ಚು. ಈಗಿನ‌ ನಿಯಮದಡಿ 12+2 = 14 ಗಂಟೆ ಎಂದಾದರೆ ನಿದ್ರೆ ಮತ್ತು ಇತರ ಕೆಲಸಗಳಿಗೆ ಉಳಿಯುವುದು ‌10 ಗಂಟೆಗಳು ಮಾತ್ರ. ಅದರಲ್ಲಿಯೇ ಸಂಸಾರ ಮನೆ ಮಕ್ಕಳು ಮನರಂಜನೆ ಕ್ರೀಡೆ ವಿಶ್ರಾಂತಿ ಓದು ಎಲ್ಲವೂ ನಡೆಯಬೇಕು.

ಇದಕ್ಕಾಗಿ ಹೆಚ್ಚಿನ ಸಂಬಳ ದೊರೆಯುತ್ತದೆ ನಿಜ. ಈಗಾಗಲೇ ಹಣ ಕೇಂದ್ರಿತ ಸಮಾಜ ನೆಮ್ಮದಿಯನ್ನು ಕಳೆದುಕೊಂಡು ಸಂಬಂಧಗಳನ್ನು ಕಳೆದುಕೊಂಡು ಅಸಹನೆ – ‌ಅತೃಪ್ತಿಯಿಂದ ಬಳಲುತ್ತಿದೆ. ಬಿಪಿ ಶುಗರ್ ಥೈರಾಯ್ಡ್ ಗ್ಯಾಸ್ಟ್ರಿಕ್‌ ನಿದ್ರಾಹೀನತೆ ಮೊದಲಾದ ಖಾಯಿಲೆಗಳು ಪ್ರತಿ ಮನೆಯ ಅತಿಥಿಗಳಾಗಿವೆ.

ಗಂಡ ಹೆಂಡತಿ ಇಬ್ಬರೂ ದುಡಿದರು ಬದುಕಿಗೆ ಹಣ ಸಾಕಾಗುತ್ತಿಲ್ಲ. ಸಂಬಳ ಜಾಸ್ತಿ ಮಾಡಿದರೂ ಪರೋಕ್ಷವಾಗಿ ಶಿಕ್ಷಣ ಆರೋಗ್ಯ ವಿದ್ಯುತ್ ನೀರು ಗ್ಯಾಸ್ ಸಾರಿಗೆ ಮೊಬೈಲ್ ಇಂಟರ್ನೆಟ್ ಆಹಾರ ಪದಾರ್ಥಗಳು ಮುಂತಾದ ಎಲ್ಲಾ ವಸ್ತುಗಳ ಬೆಲೆ ಏರಿಸಿ ಪರೋಕ್ಷವಾಗಿ ನಮ್ಮ ಹಣವನ್ನು ಹಗಲು ದರೋಡೆ ಮಾಡಲಾಗುತ್ತಿದೆ. ಈ ಕಡೆ ಕೊಟ್ಟು ಆ ಕಡೆ ಕಿತ್ತುಕೊಳ್ಳುವ ವ್ಯವಸ್ಥೆಯಲ್ಲಿ ಯಾರಿಗಾಗಿ ನಮ್ಮ ಅಪೂರ್ವ ಬದುಕನ್ನು ಕಳೆದುಕೊಳ್ಳಬೇಕು.

ಇದು ಮೇಲ್ನೋಟದ ಸಮಸ್ಯೆ. ಆಂತರಿಕವಾಗಿ ದಿನದಲ್ಲಿ ಇಷ್ಟು ದೀರ್ಘಕಾಲ ಕೆಲಸ ಮಾಡಿದರೆ ಕೆಲಸದ ಗುಣಮಟ್ಟ ಕುಸಿಯುತ್ತದೆ. ಆರೋಗ್ಯ ಹಾಳಾಗುತ್ತದೆ. ಉತ್ಪಾದನೆ ಕಡಿಮೆಯಾಗುತ್ತದೆ. ಕೌಟುಂಬಿಕ ವ್ಯವಸ್ಥೆಗೆ ತೊಂದರೆಯಾಗುತ್ತದೆ. ಮಕ್ಕಳ ಪಾಲನೆ ಪೋಷಣೆ ಹಿರಿಯರ ಬಗೆಗಿನ ಕಾಳಜಿ ಕಡಿಮೆಯಾಗುತ್ತದೆ.

ಪುರುಷರಂತೆ ಮಹಿಳೆಯರಿಗು ದಿನದ 24 ಗಂಟೆ ದುಡಿಯಲು ಅನುಮತಿಯನ್ನು ನೀಡಲಾಗಿದೆ. ರಾಜ್ಯದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿ ಆರ್ಥಿಕ ಅಭಿವೃದ್ಧಿ ಸಾಧಿಸುವ ಯೋಚನೆ ಮತ್ತು ಯೋಜನೆ ಇದರ ಹಿಂದಿದೆ. ಆದರೆ ಸಾಮಾಜಿಕ ಮತ್ತು ವೈಯಕ್ತಿಕ ಹಿತಾಸಕ್ತಿಗಳನ್ನು ಕಡೆಗಣಿಸಲಾಗಿದೆ. ಬಹುಶಃ ಇದನ್ನೇ ಅತಿಯಾಸೆ ಅಥವಾ ದುರಾಸೆ ಎನ್ನುವುದು.

ಇದಕ್ಕೆಲ್ಲ ಕೆಲಸಗಾರರ ಲಿಖಿತ ಒಪ್ಪಿಗೆ ಅವಶ್ಯಕ ಎಂಬ ಷರತ್ತು ವಿಧಿಸಲಾಗಿದೆ. ಇದು ಕೇವಲ ಒಂದು ತಂತ್ರ ಮಾತ್ರ. ಏಕೆಂದರೆ ಇದಕ್ಕೆಲ್ಲ ಒಪ್ಪಿದರೆ ಮಾತ್ರವೇ ಕೆಲಸ ಕೊಡುತ್ತಾರೆ. ಇಲ್ಲದಿದ್ದರೆ ಇಲ್ಲ. ಒಪ್ಪದಿದ್ದರೆ ಬೇರೆ ಕಾರಣ ನೀಡಿ ಕೆಲಸದಿಂದ ತೆಗೆಯುತ್ತಾರೆ. ಇದು ಬಹಿರಂಗ ಸತ್ಯ. ಉದ್ಯೋಗದ ಅನಿವಾರ್ಯತೆ ಸೃಷ್ಟಿಸಿರುವಾಗ ಕೆಲಸಗಾರನೊಬ್ಬ ತನಗೆ ಅನುಕೂಲಕರ ನಿಯಮ ರೂಪಿಸಲು ‌ಸಾಧ್ಯವೇ……

ದಿನಕ್ಕೆ8 ಗಂಟೆಗಳ ಕೆಲಸವೇ ಅತ್ಯುತ್ತಮ. ಆ ಕೆಲಸದ ಸಮಯದಲ್ಲಿಯೇ ಅತ್ಯಂತ ಪ್ರಾಮಾಣಿಕವಾಗಿ, ದಕ್ಷವಾಗಿ, ಆತ್ಮಸಾಕ್ಷಿಯಾಗಿ ಕೆಲಸ ಮಾಡಲು ಬೇಕಾದ ವಾತಾವರಣ ಮತ್ತು ಮನಸ್ಥಿತಿ ಕಲ್ಪಿಸುವ ನಿಟ್ಟಿನಲ್ಲಿ ಮತ್ತಷ್ಟು ಸುಧಾರಣೆಯ ಕ್ರಮಗಳು ಸ್ವಾಗತಾರ್ಹ. ಶಿಕ್ಷಣ ಆರೋಗ್ಯ ಮತ್ತು ಮಾರುಕಟ್ಟೆಯ ಬೆಲೆಗಳ ಮೇಲೆ ನಿಯಂತ್ರಣ ಸಾಧಿಸುವುದು ಅಷ್ಟೇ ಮುಖ್ಯ. ಅಪಘಾತ, ಅಪರಾಧ, ಅನಾರೋಗ್ಯ, ಆತ್ಮಹತ್ಯೆ ಇವುಗಳ ನಿಯಂತ್ರಣ ಸಹ ಬಹುಮುಖ್ಯ. ಗಾಳಿ ನೀರು ಆಹಾರ ಪರಿಸರದ ಶುದ್ದತೆಗೂ ಪ್ರಾಮುಖ್ಯತೆ ನೀಡಬೇಕು. ಆಗ ಕೆಲಸದ ಅವಧಿಯ ಹೆಚ್ಚಳದ ಅವಶ್ಯಕತೆಯೇ ಇರುವುದಿಲ್ಲ.

ಇಲ್ಲದಿದ್ದರೆ ದಿನದ 24 ಗಂಟೆ ದುಡಿದರು, ಲಕ್ಷ ಲಕ್ಷ ಸಂಬಳ ಪಡೆದರು ಪ್ರಯೋಜನವಿಲ್ಲ. ಬದುಕು ಅತೃಪ್ತ‌ ಆತ್ಮವಾಗಿಯೇ ಉಳಿಯುತ್ತದೆ. ಯೋಚಿಸಿ ಮತ್ತು ಸರ್ಕಾರದ ಕ್ರಮವನ್ನು ಪ್ರಶ್ನಿಸಿ. ಪಕ್ಷ ಯಾವುದಾದರೂ ಇರಲಿ ಸಮಾಜ – ಬದುಕು ಜನಸಾಮಾನ್ಯರಾದ ನಮ್ಮದು. ಕೆಲಸ ಮಾಡುವವರು ನಾವು ಮತ್ತು ನಮ್ಮ ಹೆಂಡತಿ ಮಕ್ಕಳು…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…

error: No Copying!