Spread the love

ರಾಜಕಾರಣಿಗಳ ಜೊತೆ ಮಾಧ್ಯಮಗಳ ಅನೈತಿಕ ಸಂಬಂಧ – ಹೊಟ್ಟೆ ಪಾಡಿಗಾಗಿ ಕೆಲವರು – ಶೋಕಿಗಾಗಿ ಕೆಲವರು – ಐಷಾರಾಮಿಗಾಗಿ ಹಲವರು……..

ಇನ್ನೂ ಸುಮಾರು 5/6 ತಿಂಗಳು ಇರುವಾಗಲೇ ಈ ರಾಜ್ಯಕ್ಕೆ ಚುನಾವಣಾ ಜ್ವರ ಅಥವಾ ರೋಗ ಹಬ್ಬಿಸಿ ಆಡಳಿತ ವ್ಯವಸ್ಥೆಯನ್ನು ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ದಿಕ್ಕು ತಪ್ಪಿಸಿ ಅಷ್ಟೂ ದಿನಗಳ ಅಭಿವೃದ್ಧಿಯನ್ನು ನಾಶಪಡಿಸುತ್ತಿರುವ ಮಾಧ್ಯಮಗಳಿಗೆ ಧಿಕ್ಕಾರ……….

ಚುನಾವಣೆ ಎಂಬುದೇನು ಯುದ್ದವೇ ?
ಅಜನ್ಮ ವೈರಿಗಳ ಕಾದಾಟವೇ ?
ಶತ್ರುಗಳ ಮೇಲಿನ ಆಕ್ರಮಣವೇ ?
ಸಂಪತ್ತನ್ನು ಕೊಳ್ಳೆ ಹೊಡೆದು ಶಾಶ್ವತ ಅಧಿಕಾರ ಸ್ಥಾಪಿಸುವ ಶಕ್ತಿ ಪ್ರದರ್ಶನವೇ ? ಕುರುಕ್ಷೇತ್ರವೇ ?

ಭಾರತದ ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುದು ಕೇವಲ ಜನ ಪ್ರತಿನಿಧಿಗಳ ಒಂದು ಸರಳ ಆಯ್ಕೆ ಪ್ರಕ್ರಿಯೆ ಮಾತ್ರ. ಜನಸಂಖ್ಯೆ ಹೆಚ್ಚಿರುವುದರಿಂದ ಸುಮಾರು ಒಂದು ತಿಂಗಳಷ್ಟು ಸಮಯಾವಕಾಶ ಬೇಕಾಗುತ್ತದೆ.

ಯಾರೇ ಗೆದ್ದರು ಅವರಿಗೆ ಊರು ರಾಜ್ಯ ದೇಶವನ್ನು ಬರೆದು ಕೊಡುವುದಿಲ್ಲ. ನಮ್ಮ ಪ್ರತಿನಿಧಿಯಾಗಿ ಸಂವಿಧಾನಾತ್ಮಕ ಕಾನೂನುಗಳ ಅಡಿಯಲ್ಲಿ ನಮ್ಮದೇ ತೆರಿಗೆ ಹಣದಲ್ಲಿ ಸಂಬಳ ಪಡೆದು ಸುಮಾರು ಐದು ವರ್ಷ ನಮ್ಮ ಸೇವೆ ಮಾಡಲು ಆಯ್ಕೆಗೊಂಡ ಸೇವಕರು ಮಾತ್ರ….

ಆದರೆ ಈ ಮಾಧ್ಯಮಗಳು ಅವರನ್ನು ಸೂಪರ್ ಸ್ಟಾರ್ ಗಳಂತೆ ಚಿತ್ರಿಸುವುದು ನೋಡಿದರೆ ಇವರು ಹೊಟ್ಟೆ ಪಾಡಿಗಾಗಿ ಯಾವ ನೀಚತನಕ್ಕೂ ಇಳಿಯಲು ಸಿದ್ದರಿದ್ದಾರೆ ಎನಿಸುತ್ತದೆ.

ಸಿದ್ದರಾಮಯ್ಯ ಕೋಲಾರದಲ್ಲಿ ನಿಂತರೆ ನಮಗೇನು – ಮಂಗಳೂರಿನಲ್ಲಿ ನಿಂತರೆ ನಮಗೇನು ?
ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆದರೆ ನಮಗೇನು ?
ಕುಮಾರಸ್ವಾಮಿ ಯಾತ್ರೆ ಮಾಡಿದರೆ ನಮಗೇನು ? ಇನ್ಯಾರೋ ಗೆದ್ದರೆ ನಮಗೇನು ? ಸೋತರೆ ನಮಗೇನು ?
ಅದೂ ಇಷ್ಟು ಬೇಗ ತಲೆ ಕೆಡಿಸಿಕೊಳ್ಳುವ ವಿಷಯವೇ ಅಲ್ಲ.

ಇವರಲ್ಲಿ ಯಾರು ಗೆಲ್ಲುತ್ತಾರೆ ಎಂದು ಈ ಆರು ತಿಂಗಳಿನಿಂದ ಕುತೂಹಲ ಇಟ್ಟುಕೊಂಡು ಕಾಯಲು ಕರ್ನಾಟಕವೇನು ಇವರ ಮನೆಯ ಆಸ್ತಿಯೇ ?
ನಾವೇನು ಇವರ ಮನೆಯ ಗುಲಾಮರೇ ?

ಮಾಧ್ಯಮಗಳು ತಮ್ಮ ಸ್ವಾರ್ಥದ ಯಶಸ್ಸಿಗಾಗಿ ರಾಜಕಾರಣಿಗಳ ಜೊತೆ ಅನೈತಿಕ ಸಂಬಂಧ ಹೊಂದಿರಬಹುದು. ಆದರೆ ನಾವು ಪ್ರಜೆಗಳು. ನಾವು ನೈತಿಕವಾಗಿರೋಣ…..

ಈ ಕಲ್ಮಶ ನೀರು, ಮಲಿನ ಗಾಳಿ, ರಸಾಯನಿಕಯುಕ್ತ ಆಹಾರ, ಲಂಚಗುಳಿತನ, ಬೆಲೆ ಏರಿಕೆ, ನಿರುದ್ಯೋಗ, ಅಭದ್ರತೆ ಜೀವನ ಮಾಡುತ್ತಿರುವುದಕ್ಕೆ ಮೂಲ ಕಾರಣರಾದ ಕೆಲವೇ ರಾಜಕೀಯ ನಾಯಕರುಗಳ‌ ಹಿಡಿತಕ್ಕೆ ಸಿಲುಕಿ ನರಳಲು ಇವರೇನು ರಾಜ ಮಹಾರಾಜರಲ್ಲ. ಎಂ ಎಲ್ ಎ – ಮಂತ್ರಿ – ಮುಖ್ಯಮಂತ್ರಿ ಸ್ಥಾನ ಇವರ ಗುತ್ತಿಗೆಯಲ್ಲ. ಇವರ ಸುಳ್ಳು ಭರವಸೆಯ ಭಾಷಣ ಕೇಳಲು ನಾವು ಮೂರ್ಖರಲ್ಲ….

ಈ ಸಮೀಕ್ಷೆಗಳು, ಈ ಊಹೆಗಳು, ಈ ಅಭಿಪ್ರಾಯಗಳ ಅವಶ್ಯಕತೆ ಇದೆಯೇ ? ಮಾಡಲು ಬೇಕಾದಷ್ಟು ಕೆಲಸಗಳು ಮಾಧ್ಯಮಗಳಿಗೆ ಇರುವಾಗ ಈ ಚುನಾವಣಾ ಕಾವೇರಿಸುವ ಚೇಷ್ಟೇ ಬೇಕೆ ? ಹಾಗಾದರೆ ಚುನಾವಣಾ ಆಯೋಗ ಇರುವುದಾದರೂ ಏಕೆ ?
ಒಂದು ವೇಳೆ ಇವರ ಸಮೀಕ್ಷೆಗಳು ನಿಜವಾದರೂ ಅದರಿಂದ ಆಗಬಹುದಾದ ನೇರ ಪ್ರಯೋಜನವೇನು ?

ಚುನಾವಣೆ ಎಂದರೆ ಏನು ? ಮತದಾನ ಹೇಗಿರುತ್ತದೆ ? ಮತದಾನದ ಮಹತ್ವ ಏನು ? ಮತ ಹಾಕುವಾಗ ಅನುಸರಿಸಬೇಕಾದ ಮಾನದಂಡಗಳೇನು ? ಜನ ಪ್ರತಿನಿಧಿಗಳು ಹೇಗಿರಬೇಕು ? ಸೈದ್ಧಾಂತಿಕ ಸ್ಪಷ್ಟತೆ ಎಂದರೇನು ? ಮತದಾನ ತಪ್ಪಾದಲ್ಲಿ ಅಥವಾ ಮಾರಿ ಕೊಂಡಲ್ಲಿ ಅದರ ಪರಿಣಾಮ ಏನಾಗುತ್ತದೆ ? ಮತದಾನದ ಸಂದರ್ಭದಲ್ಲಿ ಹೇಗೆ ಯಾವುದೇ ಆಮಿಷ ಅಥವಾ ಭಾವನಾತ್ಮಕ ವಿಷಯಗಳಿಗೆ ಮರುಳಾಗದೆ ಮನಸ್ಸನ್ನು ನಿಯಂತ್ರಿಸಬೇಕು ? ಮುಂತಾದ ಅನೇಕ ವಿಷಯಗಳ ಬಗ್ಗೆ ಚರ್ಚಿಸಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡದೇ ಆ ಕ್ಷೇತ್ರದಲ್ಲಿ ಅವರು ಗೆಲ್ಲುತ್ತಾರೆ ಈ ಕ್ಷೇತ್ರದಲ್ಲಿ ಇವರು ಗೆಲ್ಲುತ್ತಾರೆ ಎಂದು ತುತ್ತೂರಿ ಊದುತ್ತಾ ಇರುವುದಕ್ಕೆ ಮಾತ್ರ ಮಾಧ್ಯಮಗಳು ಸೀಮಿತವೇ.

ಜನರ ಸಮಸ್ಯೆಗಳಿಗೆ ಕಾವಲಾಗಬೇಕಾದವರೇ ಸಮಸ್ಯೆಯಾಗಿದ್ದಾರೆ. ಇತ್ತೀಚೆಗಷ್ಟೇ ಭಾರತದ ಸರ್ವೋಚ್ಚ ನ್ಯಾಯಾಲಯ ” ಮಾಧ್ಯಮಗಳು ಸಮಾಜವನ್ನು ಒಡೆಯುತ್ತಿವೆ ” ಎಂದು ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ. ಇದು ಅವರ ಅನೈತಿಕ ಸಂಬಂಧಕ್ಕೆ ಸಾಕ್ಷಿಯಲ್ಲವೇ ?

ಇರುವ ಬಹುತೇಕ ಎಲ್ಲಾ ಚಾನಲ್ ಗಳು ಚುನಾವಣೆ ಚುನಾವಣೆ ರಣ ಕಹಳೆ ಕುರುಕ್ಷೇತ್ರ ಹೀಗೆ ಅನಾವಶ್ಯಕವಾಗಿ ಕಿರುಚುತ್ತಾ ಇದ್ದರೆ ಆಡಳಿತ ಮತ್ತು ಜನರ ಮನಸ್ಥಿತಿ ಎಷ್ಟು ಹಾಳಾಗಬಹುದು ಎಂಬ ಕಲ್ಪನೆಯೇ ಇಲ್ಲದ ಮೂರ್ಖರಿಗೆ ಹೇಗೆ ತಿಳಿವಳಿಕೆ ಹೇಳುವುದು ದಯವಿಟ್ಟು ತಿಳಿಸಿ.

ಮತದಾರರ ಜಾಗೃತಿಗಿಂತ ಮಾಧ್ಯಮಗಳ ಜಾಗೃತಿ ಮತ್ತು ಅವರ ಅನೈತಿಕ ಸಂಬಂಧವೇ ಇಂದು ಹೆಚ್ಚು ಚರ್ಚಿಸಬೇಕಾಗಿರುವುದು ಭಾರತದ ಪ್ರಜಾಪ್ರಭುತ್ವದ ದುರಂತ….

ಮಾಧ್ಯಮಗಳೆಂಬ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವನ್ನು ಶುದ್ದೀಕರಿಸುವ ಪ್ರಕ್ರಿಯೆ ಬೇಗ ಆರಂಭವಾಗಲಿ ಮತ್ತು ಅಲ್ಲಿನ ಕೆಲವೇ ಪ್ರಬುದ್ಧ ಮನಸ್ಸುಗಳ ಬೇಗ ಜಾಗೃತರಾಗಲಿ ಎಂದು ಆಶಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…

error: No Copying!