Spread the love

ಹಳೆ ಪಿಂಚಣಿ ಯೋಜನೆ ಜಾರಿಯಾಗಲಿ….
ಹೊಸ ಪಿಂಚಣಿ ಯೋಜನೆ ರದ್ದಾಗಲಿ….
( ಷರತ್ತುಗಳು ಅನ್ವಯ )

ಹಳೆ ಪಿಂಚಣಿ ಯೋಜನೆ,
ಹೊಸ ಪಿಂಚಣಿ ಯೋಜನೆ.
( OPS – NPS )
ಪ್ರತಿಭಟನೆ – ಆಶ್ವಾಸನೆ – ಚುನಾವಣಾ ಭರವಸೆ……

ಭ್ರಷ್ಟಾಚಾರ – ಪ್ರಾಮಾಣಿಕತೆ – ಮಾನವೀಯತೆ – ಭದ್ರತೆ….

ಈ ಪದಗಳ ಅರ್ಥದ ಸುತ್ತ ಈ‌ ವಿಷಯ ಅಡಗಿದೆ……

ಇದಕ್ಕೆ ಎರಡು ಮುಖಗಳಿವೆ.
ಇದನ್ನು ಸಮಗ್ರ ದೃಷ್ಟಿಕೋನದಿಂದ ನೋಡಬೇಕಾಗಿದೆ….

ಮೊದಲಿಗೆ ಹಳೆಯ ಪಿಂಚಣಿ ಯೋಜನೆ ಅತ್ಯುತ್ತಮ ಮತ್ತು ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಸ್ವೀಕಾರಾರ್ಹ. ಸಮಾಜದ ಮಾನವೀಯ ಮೌಲ್ಯಗಳ ಎತ್ತಿಹಿಡಿಯುವ ಅರ್ಥ ಹೊಂದಿದೆ. ಏಕೆಂದರೆ ‌ಒಬ್ಬ ವ್ಯಕ್ತಿ ಸುಮಾರು ‌30 ವರ್ಷಗಳಷ್ಟು ದೀರ್ಘಕಾಲ ತನ್ನ ಬದುಕನ್ನು ಸರ್ಕಾರಿ ಸೇವೆಗೆ ಮೀಸಲಿಟ್ಟು ಕೆಲಸ ಮಾಡಿರುವಾಗ ಆತನ ನಿವೃತ್ತಿ ಬದುಕನ್ನು ಉತ್ತಮವಾಗಿ ಕಳೆಯುವಂತೆ ಮಾಡುವುದು ಸರ್ಕಾರ ಮತ್ತು ಸಮಾಜದ ಕರ್ತವ್ಯ ಹಾಗು ಜವಾಬ್ದಾರಿ. ಜೊತೆಗೆ ಆತ ಅಥವಾ ಆಕೆ ನಿಧನ ಹೊಂದಿದ ನಂತರವೂ ಅವಲಂಬಿತ ಹೆಂಡತಿಗೂ ನಿವೃತ್ತಿ ವಿಸ್ತರಿಸುವುದು ತುಂಬಾ ಒಳ್ಳೆಯ ನಿರ್ಧಾರ. ಆದ್ದರಿಂದ ಹಳೆಯ ಪಿಂಚಣಿ ಯೋಜನೆ ಮರು ಜಾರಿ ಮಾಡುವುದು ಉತ್ತಮ.

ಇದರ ಇನ್ನೊಂದು ಮುಖವೂ ಇದೆ. ಪ್ರಾರಂಭದಲ್ಲಿ ಪಿಂಚಣಿ ಯೋಜನೆಯಿಂದ ಯಾವುದೇ ತೊಂದರೆಯೂ ಇರಲಿಲ್ಲ. ಆದರೆ ಜನಸಂಖ್ಯೆ ಹೆಚ್ಚಾದಂತೆ, ಸರ್ಕಾರಿ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿ ನಿವೃತ್ತರಾದವರ ಸಂಖ್ಯೆಯೂ ಹೆಚ್ಚಾಯಿತು. ಸಂಬಳಗಳೂ ಹೆಚ್ಚಾದವು. ಸಹಜವಾಗಿ ಸರ್ಕಾರದ ಖಜಾನೆಯ ಮೇಲೆ ಒತ್ತಡವೂ ಹೆಚ್ಚಾಯಿತು. ಜೊತೆಗೆ ಜಾಗತೀಕರಣದ ಪ್ರಭಾವದಿಂದಾಗಿ ಇಡೀ ಭಾರತೀಯ ವ್ಯವಸ್ಥೆ ಆರ್ಥಿಕ ಕೇಂದ್ರೀಕೃತವಾಯಿತು. ಸಾಮಾಜಿಕ ನ್ಯಾಯಕ್ಕಿಂತ, ಮಾನವೀಯ ಚಿಂತನೆಗಿಂತ ಹಣವೇ ಮುಖ್ಯವಾಯಿತು. ಖಾಸಗೀಕರಣ ಹೆಚ್ಚಾಯಿತು. ಅದರ ಪ್ರಭಾವದಿಂದಾಗಿ ನಿವೃತ್ತಿ ವೇತನ ಒಂದು ಹೊರೆ ಎಂದು ಸರ್ಕಾರ ತಪ್ಪಾಗಿ ಭಾವಿಸಿತು. ಅದರ ಪರಿಣಾಮ ಹೊಸ ಪಿಂಚಣಿ ಯೋಜನೆಯ ಜಾರಿ ಮಾಡಲಾಯಿತು.

ಹೊಸ ಪಿಂಚಣಿ ಯೋಜನೆ ಜಾರಿಯಾಗಿ ಸುಮಾರು 16 ವರ್ಷಗಳ ನಂತರ ಸಣ್ಣದಾಗಿ ಪ್ರಾರಂಭವಾದ ಹೋರಾಟ ಈಗ ಹೆಚ್ಚು ಪ್ರಬಲವಾಗಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಚಳವಳಿ ನಡೆಯುತ್ತಿದೆ.

ಅದಕ್ಕೆ ಬೆಂಬಲ ಸೂಚಿಸುತ್ತಾ….

ಏಕೆಂದರೆ ನಿವೃತ್ತಿ ಹೊಂದಿದವರಿಗೆ ಪಿಂಚಣಿ ಹಣ ಒದಗಿಸುವುದು ಒಂದು ದೊಡ್ಡ ಸಮಸ್ಯೆಯೇ ಅಲ್ಲ. ಬದಲಾಗಿ ಸಮಸ್ಯೆ ಇರುವುದು……..

ಸರ್ಕಾರಿ ಅಧಿಕಾರಿಗಳು – ರಾಜಕಾರಣಿಗಳು ರಾಜ್ಯ ಅಥವಾ ದೇಶದ ಸಂಪನ್ಮೂಲಗಳನ್ನು ಅನವಶ್ಯಕವಾಗಿ ವ್ಯರ್ಥ ಮತ್ತು ದುಂದು ವೆಚ್ಚ ಮಾಡುತ್ತಿರುವುದು. ಒಂದು ಅಂದಾಜಿನ ಪ್ರಕಾರ ಶೇಕಡಾ 25% ಗೂ ಹೆಚ್ಚು ಹಣ ಅಪವ್ಯಯವಾಗುತ್ತಿದೆ. ಉದ್ಘಾಟನೆ, ಶಂಕುಸ್ಥಾಪನೆ, ನವೀಕರಣ, ನಿರ್ಲಕ್ಷ್ಯ, ವಸ್ತುಗಳ ದುರ್ಬಳಕೆ, ಹಣಕಾಸಿನ ಅಶಿಸ್ತು, ಬೇಜವಾಬ್ದಾರಿ, ದುರಹಂಕಾರ, ದುರುಪಯೋಗ ಮುಂತಾದ ಕಾರಣಗಳಿಂದ ಹಣ ಪೋಲಾಗುತ್ತಿದೆ. ಅದನ್ನು ತಡೆದರೆ ಪಿಂಚಣಿ ಹಣ ಒಂದು ಹೊರೆಯೇ ಅಲ್ಲ.

ಭ್ರಷ್ಟಾಚಾರ ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಮೇಲಿರುವ ಮತ್ತೊಂದು ದೊಡ್ಡ ಆರೋಪ. ಇಷ್ಟು ದೊಡ್ಡ ಹಣ, ಅಧಿಕಾರ, ಸೌಲಭ್ಯ ನೀಡಿದರು ಜನರ ಸೇವೆ ಮಾಡಲು ಲಂಚವೆಂಬ ಹಣಕ್ಕೆ ಪೀಡಿಸುವುದು ಅತಿದೊಡ್ಡ ಸಮಸ್ಯೆಯಾಗಿದೆ. ಇದನ್ನು ಪಿಂಚಣಿ ಹೋರಾಟಗಾರರು ಗಮನಿಸಬೇಕು ಮತ್ತು ಪ್ರಾಮಾಣಿಕತೆಯ ಭರವಸೆ ನೀಡಬೇಕು.

ಸರ್ಕಾರಿ ಅಧಿಕಾರಿಗಳು ಈಗ ತಮಗೆ ಒಂದಷ್ಟು ಅನ್ಯಾಯವಾಗಿದೆ ಎಂದು ಪ್ರತಿಭಟಿಸುವುದು ಸರಿಯಾಗಿದೆ. ಹಾಗೆಯೇ ಈ ಸಮಾಜದ ಜಾತಿ ಪದ್ದತಿ, ಅಜ್ಞಾನ, ಮಾಧ್ಯಮಗಳ ಮೌಡ್ಯ ಪ್ರಸಾರ ಮುಂತಾದ ಅನ್ಯಾಯಗಳ ವಿರುದ್ಧ ಸಹ ಧ್ವನಿ ಎತ್ತಬೇಕು. ಇಲ್ಲದಿದ್ದರೆ ಸರ್ಕಾರದ ಸಂಬಳ ಪಡೆದು ಸಮಾಜಕ್ಕೆ ದ್ರೋಹ ಬಗೆದಂತೆ ಆಗುತ್ತದೆ. ( ಮಾತನಾಡಬೇಕಿರುವುದು ಶೋಷಿತ ವಿಷಯಗಳ ಬಗ್ಗೆ ಮಾತ್ರ. ಯಾವುದೇ ಸರ್ಕಾರದ ವಿರುದ್ದವಲ್ಲ )

ಮತ್ತೊಂದು ವಿಷಯ, ಸರ್ಕಾರಿ ಅಧಿಕಾರಿಗಳು ಖಾಸಗೀಕರಣ ವಿರುದ್ಧ ಪ್ರತಿಭಟಿಸಬೇಕು ಮತ್ತು ಸರ್ಕಾರಿ ಸಂಸ್ಥೆಗಳ ಸೇವಾ ಮನೋಭಾವ ಹೆಚ್ಚಿಸಬೇಕು. ಜನರಿಗೆ ಸರ್ಕಾರಿ ಸಂಸ್ಥೆಗಳ ಮೇಲೆ ವಿಶ್ವಾಸ ಹೆಚ್ಚಾಗುವಂತೆ ಮಾಡಬೇಕು.

ಹಾಗೆಯೇ, ಸರ್ಕಾರಿ ಮತ್ತು ಕೆಲವು ಖಾಸಗಿ ಕಂಪನಿಗಳನ್ನು ಹೊರತುಪಡಿಸಿ ಅನೇಕ ಅಸಂಘಟಿತ ಕಾರ್ಮಿಕರು, ಸಣ್ಣ ಪುಟ್ಟ ಉದ್ಯಮಿಗಳು ಮತ್ತು ವ್ಯಾಪಾರಿಗಳು ಯಾವುದೇ ಭದ್ರತೆ ಇಲ್ಲದೇ ಕಡಿಮೆ ಸಂಬಳವನ್ನು ಪಡೆಯುತ್ತಾ, ಯಾವುದೇ ಪಿಂಚಣಿ ಯೋಜನೆಯೂ ಇಲ್ಲದೇ ಈ ದುಬಾರಿ ವ್ಯವಸ್ಥೆಯಲ್ಲಿ ಬದುಕುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಅವರ ಬಗ್ಗೆಯೂ ಒಂದಷ್ಟು ಹೋರಾಟ ರೂಪಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತಾ…..

ಹಳೆಯ ಪಿಂಚಣಿ ಯೋಜನೆಗೆ ಪ್ರಬುದ್ಧ ಮನಸ್ಸುಗಳ ನೈತಿಕ ಬೆಂಬಲವಿದೆ…

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…

error: No Copying!