Spread the love

ಬೀಜಿಂಗ್: ದಿನಾಂಕ 18-12-2022(ಹಾಯ್ ಉಡುಪಿ ನ್ಯೂಸ್ ) ಕೋವಿಡ್‌ ಸೋಂಕಿನ ಪ್ರಕರಣಗಳು ಚೀನಾ ದೇಶದ ಉತ್ತರದಿಂದ ದಕ್ಷಿಣದ ನಗರ ಕೇಂದ್ರಗಳಿಗೆ ವ್ಯಾಪಕವಾಗಿ ಹರಡುತ್ತಿದ್ದು . ಉಲ್ಬಣಿಸಿರುವ ಕೋವಿಡ್‌ ಪಿಡುಗಿನಿಂದ ಜನರು ತಮ್ಮನ್ನು ರಕ್ಷಿಸಿಕೊಳ್ಳಲು ಮನೆಯಿಂದ ಹೊರಗಡೆ ಇಂದು ಕಾಲಿಡಲಿಲ್ಲ. ಇದರಿಂದ ಶಾಂಘೈ, ಬೀಜಿಂಗ್‌, ಷಿಯಾನ್‌, ಚೆಂಗ್ಡುನಂತಹ ಪ್ರಮುಖ ನಗರಗಳಲ್ಲಿನ ಬೀದಿಗಳು ಭಾನುವಾರ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.  

ಬೀಜಿಂಗ್‌ನಲ್ಲಿ ಕ್ರೀಡಾಂಗಣದಲ್ಲಿ ತೆರೆದಿರುವ ತಾತ್ಕಾಲಿಕ ಜ್ವರ ಚಿಕಿತ್ಸಾಲಯದಲ್ಲಿ ಭಾನುವಾರ ಜನರು ಕೋವಿಡ್ ತಪಾಸಣೆಗೆ ಒಳಗಾಗಿ ಔಷಧಿ ಪಡೆದರು ಹೊಸ ವರ್ಷಾಚರಣೆಗೆ ಸಜ್ಜಾಗಿರುವ ಚೀನಾದಲ್ಲಿ ಕೋವಿಡ್ ಪಿಡುಗು ಭಾರಿ ಪ್ರಮಾಣದಲ್ಲಿ ವ್ಯಾಪಿಸುವ ಆತಂಕ ಎದುರಾಗಿದೆ. 2023ರಲ್ಲಿ ಸುಮಾರು 10 ಲಕ್ಷ ಚೀನಿಯರು ಕೋವಿಡ್‌ನಿಂದ ಮೃತಪಡುವ ಅಂದಾಜಿದೆ ಎಂದು ಅಮೆರಿಕ ಮೂಲದ ಅಧ್ಯಯನ ವರದಿಗಳು ಹೇಳಿವೆ.

ಈ ಚಳಿಗಾಲದ ಮೂರು ತಿಂಗಳು ದೇಶವು ಕೋವಿಡ್‌ ಪ್ರಕರಣಗಳ ಮೂರು ಅಲೆಗಳನ್ನು ಎದುರಿಸಲಿದೆ. ರಜೆಯಿಂದಾಗಿ, ಜನದಟ್ಟಣೆಯ ಪ್ರಯಾಣದಿಂದ ಕೋವಿಡ್‌ ಪ್ರಕರಣಗಳು ದ್ವಿಗುಣವಾಗುವ ಸಾಧ್ಯತೆ ಇದೆ ಎಂದು ಮುಖ್ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ವು ಜುನೌ ಹೇಳಿದ್ದಾರೆ. 

ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಕ್ಕೆ ಕೋವಿಡ್‌ನಿಂದ ಮಾರಣಹೋಮ ಸಂಭವಿಸುವ ಆತಂಕ ಎದುರಾಗಿದೆ. 

ಅಮೆರಿಕದ ಸಂಶೋಧನಾ ಸಂಸ್ಥೆಯು ಈ ವಾರ ಚೀನಾದಲ್ಲಿ ಕೋವಿಡ್‌ ಸ್ಫೋಟ ಸಂಭವಿಸಲಿದೆ. 2023ರಲ್ಲಿ ಚೀನದಾದ್ಯಂತ  10 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗುವ ಸಾಧ್ಯತೆ ಇದೆ ಎಂದು ಹೇಳಿದೆ. 

ಶೀಘ್ರವಾಗಿ ಹರಡುವ ಓಮೈಕ್ರಾನ್‌ ರೂಪಾಂತರದಿಂದ ಈಗಾಗಲೇ ಬೀಜಿಂಗ್‌ ನಗರದಲ್ಲಿ ಆಹಾರ ಪಾರ್ಸೆಲ್‌ ಪೂರೈಕೆ ಸೇವೆಗೆ ದೊಡ್ಡ ಹೊಡೆತ ನೀಡಿದೆ. 2.2 ಕೋಟಿ ಜನಸಂಖ್ಯೆ ಇರುವ ಈ ನಗರದಲ್ಲಿ ಅಗತ್ಯ ಸಂಖ್ಯೆಯ ಚಿತಾಗಾರ ಮತ್ತು ಸ್ಮಶಾನ ಸೌಲಭ್ಯ ಕಲ್ಪಿಸಲು ಆಡಳಿತ ಹೆಣಗಾಡುತ್ತಿದೆ. 

ಕೋವಿಡ್‌ ಪ್ರಕರಣ ಶೂನ್ಯಕ್ಕಿಳಿಸಲು ಹೇರಿದ ಕಠಿಣ ನಿರ್ಬಂಧಗಳನ್ನು ವಿರೋಧಿಸಿ ಚೀನಾದಲ್ಲಿ ನಾಗರಿಕರು ಬೃಹತ್‌ ಪ್ರತಿಭಟನೆ ನಡೆಸಿದರು. ಆ ನಂತರ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ಆಡಳಿತವು ನಿರ್ಬಂಧ ಸಡಿಲಗೊಳಿಸಿತು. ಡಿಸೆಂಬರ್‌ 7ರಿಂದ ಈವರೆಗೆ ಕೋವಿಡ್‌ ಸಂಬಂಧಿತ ಸಾವಿನ ಪ್ರಕರಣಗಳನ್ನು ಚೀನಾ ಇದುವರೆಗೂ ಅಧಿಕೃತವಾಗಿ ವರದಿ ಮಾಡಿಲ್ಲ. ಮುಂದಿನ ದಿನಗಳಲ್ಲಿ ಚೀನಾದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.

error: No Copying!