ರಾಜಕಾರಣಿಗಳೇ ರೌಡಿಗಳೋ ಅಥವಾ ರೌಡಿಗಳೇ ರಾಜಕಾರಣಿಗಳೋ ಎಂಬ ಅನುಮಾನದ ಹುತ್ತದಲ್ಲಿ ಸೇರಿಕೊಂಡಿರುವ ಹಾವುಗಳನ್ನು ಹುಡುಕುವುದು ತುಂಬಾ ಕಷ್ಟ.
ಏಕೆಂದರೆ, ರಾಜಕಾರಣ ಎಂಬುದು ಸೇವೆ, ರೌಡಿಸಂ ಎಂಬುದು ದೌರ್ಜನ್ಯ ಎಂಬ ಸಾಮಾನ್ಯ ಅರ್ಥದ ನಡುವಿನ ಗೆರೆಯನ್ನು ಎಳೆಯುವುದು ಕಷ್ಟವಾಗುತ್ತಿದೆ. ಹೇಗೆ ನೋಡಿದರೂ ಒಂದಕ್ಕೊಂದು ಬೆಸೆದು ಕೊಂಡಿದೆ. ಮಾಧ್ಯಮಗಳಲ್ಲಿ ಆಳವಾದ ಪ್ರಜಾಪ್ರಭುತ್ವೀಯ ಚರ್ಚೆಗಳು ಸಾಧ್ಯವಾಗದೆ ಕೇವಲ ಒಣ ವಾದಗಳು ಮತ್ತು ಪಕ್ಷಗಳ ವಕ್ತಾರರ ಸಮರ್ಥನೆ – ವಿರೋಧಗಳನ್ನು ಮಾತ್ರ ಕಾಣಬಹುದಾಗಿದೆ.
ರಾಜಕೀಯವು ವ್ಯಾಪಾರ ಮತ್ತು ದೌರ್ಜನ್ಯ, ರೌಡಿಸಂ ಸಹ ಅದೇ ಅರ್ಥದಲ್ಲಿ ಚಲಾವಣೆಯಲ್ಲಿರುವಾಗ………
ರೌಡಿಸಂ, ಅಂದು – ಇಂದು………..
ವ್ಯಕ್ತಿ ಒಬ್ಬನೇ ಅಥವಾ ತನ್ನ ಸಹಚರರೊಂದಿಗೆ ಸೇರಿ ಕಾನೂನು ಬಾಹಿರವಾಗಿ ಖಾಸಗಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಹೆದರಿಸಿ ಹಣ ವಸ್ತುಗಳನ್ನು ತೆಗೆದುಕೊಂಡು ಹೋಗುವುದು, ಹೆಣ್ಣುಮಕ್ಕಳನ್ನು ಶೋಷಿಸುವುದು, ತನಗೆ ಪ್ರತಿರೋಧ ತೋರುವವರ ಮೇಲೆ ಹಲ್ಲೆ ನಡೆಸುವುದು, ಪೋಲೀಸರಿಗೂ ಹೆದರದೆ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಅದನ್ನು ಒಂದು ಗೌರವ ಎಂಬಂತೆ ಭಾವಿಸಿ ಮತ್ತೆ ಕಸುಬು ಮುಂದುವರಿಸುವುದು, ರಾಜಕಾರಣಿಗಳ ಸಹವಾಸದಲ್ಲಿ ರಕ್ಷಣೆ ಪಡೆಯುವುದು, ಜೂಜು ಮದ್ಯಪಾನ ಸೇರಿ ಕೆಟ್ಟ ಅಭ್ಯಾಸಗಳ ದಾಸರಾಗಿ ಅಸಭ್ಯವಾಗಿ ವರ್ತಿಸುವುದು, ಒಟ್ಟಿನಲ್ಲಿ ಸಾರ್ವಜನಿಕರಲ್ಲಿ ವಿನಾಕಾರಣ ಭೀತಿ ಹುಟ್ಟಿಸಿ ಅದನ್ನೇ ಉದ್ಯೋಗ ಮಾಡಿಕೊಂಡಿರುವ ವರ್ಗಕ್ಕೆ ರೌಡಿಸಂ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ.
70/80/90 ರ ದಶಕದಲ್ಲಿ ಇದು ತುಂಬಾ ಜೋರಾಗಿತ್ತು. ರೌಡಿಗಳನ್ನು ಕಂಡರೆ ಜನ ಹೆದರುತ್ತಿದ್ದರು. ಅವರ ಸಹವಾಸಕ್ಕೆ ಯಾರೂ ಹೋಗುತ್ತಿರಲಿಲ್ಲ. ಪೋಲೀಸರು ಸಹ ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗಿ ರೌಡಿಗಳ ಬಗ್ಗೆ ಗಂಭೀರ ಕ್ರಮ ಕೈಗೊಳ್ಳುತ್ತಿರಲಿಲ್ಲ. ಬದಲಾಗಿ ಸಾರ್ವಜನಿಕರಿಗೆ ಅವರ ಸಹವಾಸಕ್ಕೆ ಹೋಗಬೇಡಿ ಎಂದು ಬುದ್ದಿ ಹೇಳುತ್ತಿದ್ದರು.
ಕಳ್ಳ ದಂಧೆಗಳು, ಕಾಳಸಂತೆಕೋರರು, ಪಿಕ್ ಪಾಕೆಟ್ ನವರು, ವೇಶ್ಯಾವಾಟಿಕೆಗಳು, ಬಾರು ಕ್ಯಾಬರೆಗಳು, ಚುನಾವಣಾ ಅಕ್ರಮಗಳು, ಮಾದಕ ವಸ್ತುಗಳ ಸಾಗಣೆ, ಬಂದ್ ಸಮಯದಲ್ಲಿ ಹಿಂಸಾಚಾರ, ಕಾಲೇಜು ಚುನಾವಣೆಯಲ್ಲಿ ಹಸ್ತಕ್ಷೇಪ, ಜಮೀನು ವ್ಯವಹಾರಗಳಲ್ಲಿ ಬೆದರಿಕೆ, ಪೆಟ್ರೋಲ್ ಡೀಸೆಲ್ ಕಲಬೆರಕೆ, ಪ್ರಯಾಣಿಕರ ಖಾಸಗಿ ವಾಹನಗಳ ಮೇಲೆ ನಿಯಂತ್ರಣ, ಬಾಡಿಗೆ ಮನೆ ಖಾಲಿ ಮಾಡಿಸುವುದು, ಪ್ರೇಮಿಗಳನ್ನು ಬೇರ್ಪಡಿಸುವುದು ಮುಂತಾದ ದೋ ನಂಬರ್ ವ್ಯವಹಾರಗಳಲ್ಲಿ ಭಾಗಿ ಮತ್ತು ರಕ್ಷಣೆ ಕೊಡುವುದು ಇವರ ಮುಖ್ಯ ಕೆಲಸವಾಗಿತ್ತು.
ರೌಡಿಗಳು ಕೆಲವು ಪ್ರದೇಶಗಳ ಮೇಲೆ ಹಿಡಿತ ಹೊಂದಿರುತ್ತಿದ್ದರು. ಅದನ್ನೆಲ್ಲಾ ನಿರ್ವಹಿಸಲು ಮತ್ತೊಬ್ಬ ದೊಡ್ಡ ರೌಡಿ ಇರುತ್ತಿದ್ದ. ಈ ಪ್ರದೇಶಗಳ ಮೇಲೆ ಇನ್ನೊಬ್ಬರ ಹಸ್ತಕ್ಷೇಪವಾದಾಗ ಅವರ ಮಧ್ಯೆಯೇ ಹೊಡೆದಾಟಗಳಾಗಿ ಕೊಲೆಗಳಾಗುತ್ತಿದ್ದವು. ಜೈಲಿನಲ್ಲಿಯೂ ಈ ಗ್ಯಾಂಗುಗಳು ಹಿಡಿತ ಸಾಧಿಸಿದ್ದವು.
ಆಗಿನ ಕಾಲಕ್ಕೆ ರೌಡಿಸಂ ಪ್ರತಿಷ್ಠಿತ ಉದ್ಯೋಗವೇ ಆಗಿದ್ದಿತು. ಅದಕ್ಕೆ ತುಂಬಾ ಧೈರ್ಯ ಮತ್ತು ಚಾಣಾಕ್ಷತೆ ಬೇಕಾಗಿತ್ತು. ಮುಂದಿನ ಪರಿಣಾಮಗಳನ್ನು ಯೋಚಿಸದೆ ನುಗ್ಗುವ ತಾಖತ್ತು ಬಹುಮುಖ್ಯವಾಗಿತ್ತು. ತಪ್ಪಿಸಿಕೊಳ್ಳುವ ಮಾರ್ಗಗಳು ತಿಳಿದಿರಬೇಕಿತ್ತು. ಕುಟುಂಬದ ಭಾವನಾತ್ಮಕ ಸಂಬಂಧಗಳನ್ನು ಗೆಲ್ಲಬೇಕಿತ್ತು.
ಈ ರೌಡಿಸಂನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದ್ದುದು ವಕೀಲರು. ಪ್ರಖ್ಯಾತ ಕ್ರಿಮಿನಲ್ ವಕೀಲರಗಳು ಇವರ ಪರವಾಗಿ ಸಮರ್ಥವಾಗಿ ವಾದಿಸಿ ಇವರಿಗೆ ಜಾಮೀನು ಕೊಡಿಸುತ್ತಿದ್ದರು. ಇಲ್ಲಿ ನಾವು ಸಿನಿಮಾಗಳಲ್ಲಿ ನೋಡುವಂತೆ ವಕೀಲರು ರಾಜಕಾರಣಿಗಳು ಪೋಲೀಸರು ಮತ್ತು ರೌಡಿಗಳ ಒಂದು ಅನೈತಿಕ ಸಮನ್ವಯವೇ ಈ ರೌಡಿಸಂ. ಇದರಲ್ಲಿ ಹೆಚ್ಚಿನ ಲಾಭ ರಾಜಕಾರಣಿಗಳಿಗೆ ಮತ್ತು ಹೆಚ್ಚಿನ ತೊಂದರೆ ರೌಡಿಗಳಿಗೆ ಆಗುತ್ತಿತ್ತು. ಕಾನೂನುಗಳ ದುರುಪಯೋಗ ಕಣ್ಣಿಗೆ ಕಾಣುವಂತೆ ಇರುತ್ತಿತ್ತು.
ನಾವು ಗಮನಿಸಿದಂತೆ ಅನೇಕ ಯುವಕರು ಇದಕ್ಕೆ ಆಕರ್ಷಿತರಾಗಿ ಇಡೀ ಬದುಕನ್ನೇ ನಾಶಮಾಡಿಕೊಂಡರು. ಕೆಲವರು ಕೊಲೆಯಾಗಿ ಹೋದರು. ಎಲ್ಲೋ ಬೆರಳೆಣಿಕೆಯಷ್ಟು ಜನ ರಾಜಕೀಯ ವ್ಯವಹಾರಗಳಲ್ಲಿ ಇದನ್ನು ಉಪಯೋಗಿಸಿಕೊಂಡು ಉದ್ದಾರವಾದರು.
ಕೆಲವರು ನೇರ ಬಡಿದಾಡುವ ರೌಡಿಗಳಾದರೆ, ಕೆಲವರು ಹುಡುಗರನ್ನು ಜೊತೆಯಲ್ಲಿ ಇಟ್ಟುಕೊಂಡು ಜನರನ್ನು ಬೆದರಿಸಿ ಹವಾ ಎಬ್ಬಿಸುವ ರೌಡಿಗಳು, ಹಲವರು ದೊಡ್ಡ ರೌಡಿಗಳ ಹೆಸರೇಳಿ ತಾವೂ ಸಹ ರೌಡಿಗಳೆಂದು ಬಿಂಬಿಸುವ ಮರಿ ರೌಡಿಗಳು.
ಹಾಗೆಂದು ಆಗ ಕಾನೂನು ವ್ಯವಸ್ಥೆಯೇ ಇರಲಿಲ್ಲ, ಪೋಲೀಸರು ರೌಡಿಗಳಿಗೆ ಶರಣಾಗಿದ್ದರು ಎಂದಲ್ಲ. ಆಗಲೂ ಕೆಲವು ದಕ್ಷ ಮತ್ತು ಕಠಿಣ ಅಧಿಕಾರಿಗಳು ರೌಡಿಗಳ ಎದೆ ನಡುಗಿಸಿದ್ದರು. ಆದರೂ ರೌಡಿಸಂ ತುಂಬಾ ಆಕ್ಟೀವ್ ಆಗಿತ್ತು.
ಆದರೆ ಈಗ,
ಖಂಡಿತ ರೌಡಿಸಂ ಬಹಳ ಕಡಿಮೆಯಾಗಿದೆ. ಮೊದಲಿನಂತೆ ಸಾಮಾನ್ಯರ ಮೇಲೆ ರೌಡಿಗಳು ದೌರ್ಜನ್ಯ ಮಾಡುವುದು ತುಂಬಾ ಅಪರೂಪ. ಪೋಲೀಸ್ ವ್ಯವಸ್ಥೆಯ ಸುಧಾರಣೆ, ಮಾಧ್ಯಮಗಳ ಬೆಳವಣಿಗೆ, ಸಂಪರ್ಕ ಕ್ರಾಂತಿ, ಆರ್ಥಿಕ ಮೂಲಗಳ ಬದಲಾವಣೆ, ನ್ಯಾಯಾಲಯಗಳ ಹೆಚ್ಚಿನ ಜವಾಬ್ದಾರಿ ಮತ್ತು ಜನರ ಜಾಗೃತಿ ಈಗ ರೌಡಿಸಂ ಕಡಿಮೆಯಾಗಲು ಕಾರಣವಾಗಿದೆ.
ಇದೇ ಸಮಯದಲ್ಲಿ ಪರೋಕ್ಷವಾಗಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಬೇರೆ ರೀತಿಯ ರೌಡಿಸಂ ಅನ್ನು ಸಾರ್ವಜನಿಕರ ಮೇಲೆ ಮಾಡುತ್ತಾರೆ. ಜನರಲ್ಲಿ ಒಂದು ರೀತಿಯ ಭಯ ಹುಟ್ಟಿಸಿ ತಾವು ಹಣ ಅಧಿಕಾರ ಪಡೆಯುತ್ತಾರೆ. ಧಾರ್ಮಿಕ ನಾಯಕರು, ಜ್ಯೋತಿಷ್ಯರು,, ಮಾಧ್ಯಮದವರು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು ಮುಂತಾದವು ಸಹ ಪರೋಕ್ಷವಾಗಿ ಜನರಲ್ಲಿ ಭಯ ಹುಟ್ಟಿಸಿ ಅದರ ಲಾಭ ಪಡೆಯುತ್ತಾರೆ.
ಹೀಗೆ, ರೌಡಿಸಂ ಆಗಲೂ ಈಗಲೂ ಚಾಲ್ತಿಯಲ್ಲಿದೆ. ರೂಪ ಮಾತ್ರ ಬೇರೆ. ಜನ ಜಾಗೃತರಾದಾಗ ಇದು ಕಡಿಮೆಯಾಗುತ್ತದೆ. ರೌಡಿಗಳ ರಾಜಕೀಯ ಪ್ರವೇಶ ಹೊಸದಲ್ಲ. ಮಾಧ್ಯಮಗಳ ಅಬ್ಬರ ಮಾತ್ರ ಹೊಸದು.
ಮತದಾರರ ಆಯ್ಕೆಗಳ ಪ್ರಬುದ್ದವಾದರೆ ಇದು ಚರ್ಚೆಯ ವಿಷಯವೇ ಅಲ್ಲ.ರಾಜಕೀಯ ಎಂಬುದು ಸಾರ್ವಜನಿಕ ಸೇವೆ ಮಾತ್ರ ಎಂದು ಜನರು ಭಾವಿಸುವಂತಾಗಲಿ ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್. ಕೆ.
9844013068…