Spread the love

ಅಸಮಾನತೆಯ ಕುಲುಮೆಯೊಳಗೆ ಸಮಾನತೆಯ ಬೆಳಕಿನ ಕಿರಣ ……….

ಒಂದು ಪಶ್ಚಾತ್ತಾಪದ ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ಆಧುನಿಕ ಮನಸ್ಸಿನ ಕ್ಷಮಾಗುಣ…………

ಬೆಳಗಿನ ನಾಲ್ಕು ಗಂಟೆಗೆ ನನ್ನ ಹೊದಿಕೆಯನ್ನು ಕಿತ್ತೆಸೆದು ಜೋರು ಧ್ವನಿಯಲ್ಲಿ ಎಬ್ಬಿಸುತ್ತಿದ್ದರು ನನ್ನಪ್ಪ. ಕಾರ್ತಿಕ ಮಾಸದ ದಿನಗಳವು. ಚಳಿಗೆ ದೇಹ ನಡುಗುತ್ತಿತ್ತು. ಆದರೂ ಬೇಗ ಎದ್ದು ಕೊರೆಯುವ ತಣ್ಣೀರನ್ನೇ ಸ್ನಾನ ಮಾಡಿ 4/30 ಕ್ಕೆಲ್ಲಾ ಮನೆ ಬಿಟ್ಟು ಅಪ್ಪನೊಂದಿಗೆ ಮಡಿಯುಟ್ಟು ಪೂಜೆ ಸಾಮಾನುಗಳೊಂದಿಗೆ ಊರಿನಿಂದ 5/6 ಕಿಲೋಮೀಟರ್ ದೂರದಲ್ಲಿ ದಟ್ಟ ಮರಗಳ ಮಧ್ಯದ ಹಾದಿಯಲ್ಲಿದ್ದ ಕಾಶಿ ವಿಶ್ವನಾಥನ ದೇವಸ್ಥಾನಕ್ಕೆ ನಡೆದೇ ಹೋಗುತ್ತಿದ್ದೆವು.

ಆ ದೇವಸ್ಥಾನದ ಒಬ್ಬರೇ ಅರ್ಚಕರು ಅಪ್ಪ. ಅಪ್ಪನಿಗೆ ಸಹಾಯಕ ನಾನು. ನಾನಾಗ ಏಳನೇ ತರಗತಿ ಓದುತ್ತಿದ್ದೆ.

ಆ ದೇವಸ್ಥಾನದ ಮಂಗಳಾರತಿಯ ದಕ್ಷಿಣೆ ಹಣ ಮತ್ತು ಊರಿನವರು ಕೊಡುತ್ತಿದ್ದ ಧವಸ ಧಾನ್ಯಗಳು ಮತ್ತು ಅಪರೂಪಕ್ಕೆ ನಡೆಯುತ್ತಿದ್ದ ಮದುವೆಯ ಪೌರೋಹಿತ್ಯದ ಗೌರವ ಧನವೇ ನಮ್ಮ ಮನೆಯ ಆದಾಯ.

ಆಗ ಈಗಿನಂತೆ ಗೃಹ ಪ್ರವೇಶ, ನಾಮಕರಣ, ಸತ್ಯನಾರಾಯಣ ಪೂಜೆ ಇರಲಿಲ್ಲ. ಬಡತನ ಬರಗಾಲದ ದಿನಗಳವು. ನಮ್ಮದು ಬಯಲು ಸೀಮೆಯ ಹಳ್ಳಿ. ಹೊಸ ಮನೆ ಕಟ್ಟುತ್ತಿದ್ದುದು ಅಪರೂಪ. ನಾಮಕರಣ ಸಹ ಉಚಿತವಾಗಿ ಜಾತಕ – ಹೆಸರು ಬಲ ನೋಡಿ ಹೇಳಿದರೆ ಅವರ ಮನೆಯಲ್ಲಿಯೇ ತೊಟ್ಟಿಲು ಕಟ್ಟಿ ಮಾಡಿಕೊಳ್ಳುತ್ತಿದ್ದರು. ಅಪ್ಪ ಸಹ ಊರಿನ ಒಬ್ಬರೇ ಅರ್ಚಕರಾದುದರಿಂದ ಯಾರನ್ನೂ ಹಣಕ್ಕಾಗಿ ಒತ್ತಾಯ ಅಥವಾ ನಿಷ್ಠುರ ಮಾಡಿಕೊಳ್ಳುತ್ತಿರಲಿಲ್ಲ. ಹಣಕ್ಕಿಂತ ಅವರಿಗೆ ಗೌರವ ಮರ್ಯಾದೆ ಪ್ರಾಣಕ್ಕಿಂತ ಹೆಚ್ಚು ಎಂದೇ ಭಾವಿಸಿದ್ದರು.

5 ಗಂಟೆಗೆ ದೇವಸ್ಥಾನ ತಲುಪುತ್ತಿದ್ದೆವು. ಅದು ಸ್ವಲ್ಪ ವಿಶಾಲವಾದ ಕಲ್ಲಿನ ಕಟ್ಟಡ. ಅಲ್ಲಲ್ಲಿ ಬಿಲ್ವಪತ್ರೆಯ ಮರಗಳಿದ್ದವು. ಪಕ್ಕದಲ್ಲಿಯೇ ಒಂದು ಸಣ್ಣ ಕಲ್ಯಾಣಿ. ಅಪ್ಪ ದೇವರ ವಿಗ್ರಹ, ಲಿಂಗ, ನಂದಿ, ಒಳ ಪ್ರಾಂಗಣ ಮತ್ತು ಸುತ್ತಲಿನ ಜಾಗವನ್ನು ಕಲ್ಯಾಣಿ ನೀರಿನಿಂದ ಶುಚಿಗೊಳಿಸಿ ಪೂಜೆಗೆ ಸಿದ್ದ ಮಾಡಿಕೊಳ್ಳುತ್ತಿದ್ದರು. ನಾನು, ಭಕ್ತಾದಿಗಳು ಕುಳಿತುಕೊಳ್ಳುವ ಮತ್ತು ಹೊರಾಂಗಣವನ್ನು ಕಸ ಗುಡಿಸಿ ಸ್ವಚ್ಛಗೊಳಿಸುತ್ತಿದ್ದೆ.

ಸುಮಾರು 5/30 ಕ್ಕೆಲ್ಲಾ ಜನ ಒಬ್ಬೊಬ್ಬರಾಗಿ ಹೂವು ಹಣ್ಣು ಕಡ್ಡಿ ಕರ್ಪೂರ ಅರಿಶಿನ ಕುಂಕುಮ ಸಮೇತ ಮಕ್ಕಳೊಂದಿಗೆ ಬರುತ್ತಿದ್ದರು. ಸೋಮವಾರದಂದು ವಿಶೇಷ ಪೂಜೆ. ಅಂದು ಮಂಗಳ ವಾದ್ಯಗಳು ಮತ್ತು ಊರಿನ ಶ್ರೀಮಂತರ ಮನೆಯ ರುಚಿಕಟ್ಟಾದ ಪ್ರಸಾದ ವಿನಿಯೋಗ ನಡೆಯುತ್ತಿತ್ತು.
ಜೊತೆಗೆ ಭಕ್ತರು ನೀಡುತ್ತಿದ್ದ ಬಾಳೆಹಣ್ಣು ಮತ್ತು ತೆಂಗಿನಕಾಯಿಯ ಸ್ವಲ್ಪ ಭಾಗವನ್ನು ನಾನು ಒಂದು ತಪ್ಪಲೆಯಲ್ಲಿ ನೀಟಾಗಿ ಕತ್ತರಿಸಿ ಮನೆಯಿಂದ ತಂದ ಹಾಲು ಸಕ್ಕರೆ/ಬೆಲ್ಲ ಏಲಕ್ಕಿ ಬೆರಸಿ ಮಾಡುತ್ತಿದ್ದ ರಸಾಯನ ಎಲ್ಲರಿಗೂ ಬಹಳ ಇಷ್ಟವಾಗಿತ್ತಿತ್ತು. ಪೂಜೆ ಅಭಿಷೇಕ ನೈವೇದ್ಯದ ನಂತರ ಅದನ್ನು ಜನರಿಗೆ ಸಣ್ಣಗೆ ಕತ್ತರಿಸಿದ ಬಾಳೆ ಎಲೆಯಲ್ಲಿ ಪ್ರಸಾದ ಹಂಚುವ ಜವಾಬ್ದಾರಿ ನನ್ನದಾಗಿತ್ತು. ಆ ಸಮಯದಲ್ಲಿ ಅಪ್ಪ ಹೂ ಮತ್ತು ತೀರ್ಥ ಕೊಡುತ್ತಾ ಕೆಲವು ವಿಶೇಷ ಸಂದರ್ಭಗಳಲ್ಲಿ ಅರ್ಚನೆ ಮಾಡುತ್ತಿದ್ದರು.

ಆಗ ಜನರ ಭಯ ಭಕ್ತಿ, ನನ್ನಂತ ಸಣ್ಣವನಿಗೂ ಅವರು ಪಾದ ಮುಟ್ಟಿ ನಮಸ್ಕರಿಸುತ್ತಿದ್ದುದು ನನ್ನಲ್ಲಿ ಹೆಮ್ಮೆ ಮೂಡಿಸಿ ಆತ್ಮವಿಶ್ವಾಸ ಹೆಚ್ಚಿಸುತ್ತಿತ್ತು.

” ಅಸ್ಪೃಶ್ಯರೇ/ದಲಿತ ವರ್ಗದವರೇ, ಕಾರಣ, ಸಂದರ್ಭ, ಉದ್ದೇಶ, ಅರ್ಥ ಏನೇ ಇರಲಿ, ಅಸ್ಪೃಶ್ಯತೆ ಎಂಬ ಒಂದು ಜನಾಂಗವನ್ನು ಸೃಷ್ಟಿಸಿದ, ಆ ಮೃಗೀಯ ಭಾವನೆಯೊಂದಿಗೆ ಒಂದು ಸಮುದಾಯವನ್ನು ಹುಟ್ಟುಹಾಕಿದ ಮತ್ತು ಅದನ್ನು ಈಗಲೂ ಪಾಲಿಸುತ್ತಿರುವ ಕಾರಣಕ್ಕಾಗಿ ಜಾತಿಯಿಂದ ಬ್ರಾಹ್ಮಣನಾದ ನಾನು ನಿಮ್ಮಲ್ಲಿ ಪರಿಪರಿಯಾಗಿ ಕ್ಷಮೆ ಕೇಳುತ್ತೇನೆ. ಇಂತಹ ಒಂದು ವ್ಯವಸ್ಥೆಯ ಭಾಗವಾಗಿದ್ದಕ್ಕಾಗಿ ನಾಚಿಕೆಯಿಂದ ತಲೆ ತಗ್ಗಿಸುತ್ತೇನೆ ಮತ್ತು ಪಶ್ಚಾತ್ತಾಪ ಪಡುತ್ತಿದ್ದೇನೆ.

8 ಗಂಟೆಯ ಒಳಗೆ ಪೂಜೆ ಮುಗಿಸಿ 8/30 ರ ಒಳಗೆ ಎಲ್ಲವನ್ನೂ ಸ್ವಲ್ಪ ಮಾತ್ರ ಸ್ವಚ್ಛಗೊಳಿಸಿ 9 ಗಂಟೆಗೆ ಮನೆಗೆ ವಾಪಸ್ಸಾಗುತ್ತಿದ್ದೆವು.
ನಾನು ಬೇಗ ತಿಂಡಿ ತಿಂದು ಮನೆಯ ಬಳಿಯೇ ಇದ್ದ 10 ಗಂಟೆಗೆ ಪ್ರಾರಂಭವಾಗುತ್ತಿದ್ದ ಶಾಲೆಗೆ ಹೋಗುತ್ತಿದ್ದೆ.
ಮತ್ತೆ ಸಂಜೆ 5 ಕ್ಕೆ ದೇವಸ್ಥಾನಕ್ಕೆ ಹೊರಟು ಬೆಳಗಿನಂತೆ ಎಲ್ಲಾ ಕೆಲಸ ಮುಗಿಸಿ ರಾತ್ರಿ ಸುಮಾರು 9 ಗಂಟೆಗೆ ಮನೆಗೆ ವಾಪಸ್ಸಾಗುತ್ತಿದ್ದೆವು.

ಆಗಿನ ನಮ್ಮ ಊರಿನಲ್ಲಿ ಕುರುಬರ ಪೇಟೆ, ನಾಯಕರ ಹಟ್ಟಿ, ಹೊಲೆಯರ ಬೀದಿ, ಮಾದಿಗರ ಕೇರಿ, ಸಾಬರ ಗಲ್ಲಿ, ಗೌಡರ ಪಾಳ್ಯ, ಲಿಂಗಾಯಿತರ ಮಠಬೀದಿ, ತಿಗಳರ ಪೇಟೆ, ಗೊಲ್ಲರ ಹಟ್ಟಿ ಹೀಗೆ ಬೇರೆ ಬೇರೆ ಹೆಸರುಗಳ ಸ್ಥಳಗಳಿದ್ದವು. ನಾವು ಇದ್ದ ಜಾಗವನ್ನು ಅಗ್ರಹಾರ ಎಂದು ಕರೆಯುತ್ತಿದ್ದರು.

ಆಗ ನನ್ನನ್ನು ಊರಿನ ಜನ ಚಿಕ್ಕ ಸ್ವಾಮಿ, ಮರಿಸ್ವಾಮಿ, ಪುಟ್ಟ ಬುದ್ದಿ, ಅಯ್ನೋರು, ಮರಿ ಪೂಜಾರಿ, ಸಣ್ಣ ಭಟ್ಟ, ಕಿರಿ ಜೋಯಿಸ ಮುಂತಾದ ಹೆಸರುಗಳಿಂದ ಕರೆಯುತ್ತಿದ್ದರು ಮತ್ತು ನನ್ನ ವಯಸ್ಸಿಗೆ ಮೀರಿ ದೊಡ್ಡವನು ಎಂಬಷ್ಟು ಗೌರವ ಕೊಡುತ್ತಿದ್ದರು. ಶಾಲೆಯ ಓದಿನಲ್ಲೂ ನಾನು ಎಲ್ಲರಿಗಿಂತ ಮುಂದೆ. ಆಗ ನನಗೆ ನಾನು ಇತರರಿಗಿಂತ ಉತ್ತಮ ಸ್ಥಾನವನ್ನು ಹೊಂದಿದ್ದೇನೆ, ಇಡೀ ಊರಿನ ಗೌರವವನ್ನು ಹೊಂದಿದ ಶ್ರೇಷ್ಠ ವ್ಯಕ್ತಿ ಅನಿಸುತ್ತಿತ್ತು……..

ಕಾಲಚಕ್ರ ಉರುಳಿದಂತೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನಗರ ಸೇರಿದೆ. ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ನಲ್ಲಿ ಅತಿ ಹೆಚ್ಚು ಅಂಕ ಪಡೆದು ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಅಮೆರಿಕಾದ ಟೆಕ್ಸಾಸ್‌ನ ಪ್ರತಿಷ್ಠಿತ ಸಾಫ್ಟವೇರ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದೆ.

ಕೆಲವು ವರ್ಷಗಳ ಪ್ರಾಮಾಣಿಕ ಮತ್ತು ದಕ್ಷ ಸೇವೆಯ ನಂತರ ಈಗ ಅಲ್ಲಿನ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥನಾಗಿದ್ದೇನೆ. ಆದರೆ ಈಗಲೂ ಭಾರತದ ಪೌರತ್ವವನ್ನೇ ಹೊಂದಿದ್ದೇನೆ.

ಅಪ್ಪ ಇತ್ತೀಚೆಗಷ್ಟೇ ತೀರಿಕೊಂಡರು. ಅಮ್ಮ ಬಹಳ ಹಿಂದೆಯೇ ನಮ್ಮನ್ನು ಅಗಲಿದ್ದರು. ನಾವು ಇದ್ದ ಮನೆ ಮತ್ತು ಆ ದೇವಸ್ಥಾನದ ಅರ್ಚಕ ವೃತ್ತಿಯನ್ನು ಚಿಕ್ಕಪ್ಪ ಮತ್ತು ಅವರ ಮಕ್ಕಳು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಗೆಳೆಯರೆ,
ಸುಮಾರು ‌55 ವರ್ಷಗಳ ನನ್ನ ಸುದೀರ್ಘ ಬದುಕಿನ ಅನುಭವದಲ್ಲಿ ನನ್ನೆರಡು ಮಾತುಗಳು.
” ಹೌದು, ನಾನೊಬ್ಬ ಬ್ರಾಹ್ಮಣ. ಭಾರತೀಯ ಸಮಾಜದ ವರ್ಣಾಶ್ರಮ ವ್ಯವಸ್ಥೆಯ ಮೇಲಿನ ಸ್ಥಾನದಲ್ಲಿರುವವನು. ಹಾಗೆಯೇ ಅದೇ ವ್ಯವಸ್ಥೆಯಲ್ಲಿ ಮುಟ್ಟಿಸಿಕೊಳ್ಳದ ಒಂದು ಅಸ್ಪೃಶ್ಯ ವರ್ಗವೊಂದು ಅಸ್ತಿತ್ವದಲ್ಲಿದೆ.

ಆಫೀಸಿನ ಕೆಲಸದ ಮೇಲೆ ನ್ಯೂಯಾರ್ಕ್ ಪ್ರವಾಸದಲ್ಲಿರುವ ನಾನು ಮೊಟ್ಟಮೊದಲ ಬಾರಿಗೆ ಅಲ್ಲಿನ Statue of liberty ನೋಡುತ್ತಿದ್ದಾಗ ಭಾವ ತೀವ್ರತೆಗೆ ಒಳಗಾಗಿ, ಕಳೆದ ತಿಂಗಳಷ್ಟೇ ನಾನು ಓದಿದ್ದ
” Un touchables of India ” A tragedy behind Indian social structure even today “
ಎಂಬ ಅನಾಮಧೇಯ ಲೇಖಕನ ಪುಸ್ತಕ ಮತ್ತು ನನ್ನ ಬಾಲ್ಯದಲ್ಲಿ ನನ್ನೂರಿನ ಅಸ್ಪೃಶ್ಯತೆ ಹಾಗೂ ಈಗಲೂ ಆಗಾಗ ಭಾರತದಿಂದ ವರದಿಯಾಗುತ್ತಿರುವ ಅಸ್ಪೃಶ್ಯರ ಮೇಲಿನ ದೌರ್ಜನ್ಯ, ಭಾರತದ ಈಗಿನ ಸಾಮಾಜಿಕ ವ್ಯವಸ್ಥೆ ನೆನಪಾಗಿ ನನ್ನ ಸುತ್ತಲಿನ ಜನರ ಇರುವಿಕೆಯನ್ನು ಮರೆತು ಜೋರಾಗಿ ದುಃಖದಿಂದ ಉಮ್ಮಳಿಸುತ್ತಿದ್ದೇನೆ. ನಾನೊಬ್ಬ ಸಾಮಾನ್ಯ ವ್ಯಕ್ತಿ. ನನ್ನೊಬ್ಬನಿಂದ ಈ ಬೃಹತ್ ಜಾತಿ ವ್ಯವಸ್ಥೆಗೆ ಏನೂ ಮಾಡಲು ಸಾಧ್ಯವಿಲ್ಲ. ಆದರೆ ವೈಯಕ್ತಿಕವಾಗಿ ಆತ್ಮಸಾಕ್ಷಿಯಿಂದ ಹೇಳುತ್ತೇನೆ.

ನಿಮ್ಮೆಲ್ಲರ ಮುಂದೆ ಸಾರ್ವಜನಿಕವಾಗಿ ಪ್ರಮಾಣ ಮಾಡುತ್ತೇನೆ. ” ಇನ್ನೆಂದಿಗೂ ನಾನು ಯಾವ ಕಾರಣಕ್ಕೂ ನನ್ನ ಜಾತಿಯನ್ನು ಉಳಿಸಿಕೊಳ್ಳದೆ ಇಡೀ ಕುಟುಂಬದ ಸಮೇತ ಭಾರತದ ಸುಪ್ರೀಂಕೋರ್ಟ್ ನಲ್ಲಿ ಕಾನೂನಿನ ರೀತಿಯಲ್ಲಿ ನನ್ನ ಜಾತಿ ಭಾರತೀಯ ಎಂದು ಘೋಷಿಸಿಕೊಳ್ಳುತ್ತೇನೆ. ನನ್ನ ಮುಂದಿನ ವಂಶ ಭಾರತೀಯ ಜನಾಂಗವಾಗಿಯೇ ಗುರುತಿಸಲ್ಪಡಬೇಕು ಎಂದು ಆಶಿಸುತ್ತೇನೆ .
ಜಾತಿಯ ಶ್ರೇಷ್ಠತೆಗಿಂತ ಮನುಷ್ಯ ಶ್ರೇಷ್ಠತೆಯನ್ನು ಬೆಂಬಲಿಸುತ್ತೇನೆ. ಇಡೀ ಭಾರತೀಯ ಸಮುದಾಯ ಇದನ್ನೇ ಅನುಸರಿಸಲಿ ಎಂಬ ಬಯಕೆಯೊಂದಿಗೆ …….. “

ಮತ್ತೊಮ್ಮೆ ಕ್ಷಮಾಪಣೆ ಕೇಳುತ್ತಾ………

ಒಂದು ಸಮ ಸಮಾಜದ ಕನಸಿನ ಬಸವಾಶಯ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……

error: No Copying!