ದಲಿತ ಹೆಣ್ಣು ನೀರು ಕುಡಿದಿದೆ ಎಂದು ಬಾವಿಯ ಗೋ ಮೂತ್ರದಿಂದ ತೊಳೆದ ತೊಟ್ಟಿ ಮನುಜರೇ ನಿಮ್ಮ ಅಂತಃಕರಣ ಶುದ್ಧಿಗೆ ಯಾವ ಮೂತ್ರವನು ಕುಡಿವಿರಿ ||
ಇವರ ವಚನ ಬೆಲ್ಲದಂತೆ ! ಹೃದಯದಲಿಪ್ಪುದೆಲ್ಲಾ ನಂಜು ಕಾಣಿರೋ !! ಭಕ್ತಿಗೆ ಅಣ್ಣ ಬಸವಣ್ಣ ಆಚಾರಕ್ಕೆ ಕಮಠಾಧಿಪ ||
ಕೆಸರಲ್ಲಿ ಬಿದ್ದ ಪಶುವಿನಂತೆ ನಡೆದುಕೊಂಡರಲ್ಲ ! ಇವರ ಆವ ಲಿಂಗವು ನುಡಿಯಿತಿಂದು ಅಕಟಕಟಾ ! ಮನುಜಕುಲವು ಶಿರಬಾಗಿಸಿದೆ ನೋಡಾ ||
ಗೋ ಮೂತ್ರವ ಕುಡಿದು ಸಗಣಿಯ ತಿಂದರೆ !! ಮನದ ಸಂಪಗೆ ಅರಳುವುದೇ ? ಒಳಗೆ ಕುಟಿಲವಿರುವಾಗ ನಿಮ್ಮಲ್ಲಿ ಸತ್ಪಥವ ಬಯಸುವುದುಂಟೆ ? ||
ತನುವಿನಲಿ ಹುಸಿ, ಮನದಲಿ ರಜ ಎನಿಸು ಕಾಲ ಇರುವವೋ ಅನಿಸು ಗುರು ಬಸವಣ್ಣನ ಪೂಜಿಸಿ ಫಲವೇನು ? ಬರಿ ನೆಪವಾಗಿ ಧರ್ಮವ ಕಡೆಗಣಿಸಿದಿರಯ್ಯಾ ! ಶಿವಲಿಂಗವ ಪೂಜಿಸಿ ಮಾರಿಮಸಣಿಯ ತೆರದಿ ಆಡಿದರೆ ಆರು ನಂಬರು, ನಚ್ಚರು ||
ಗೀತೆ ಶಾಸ್ತ್ರ ಪುರಾಣ ವೇದವೇದಾಂತ ಲಿಂಗಜಂಗಮವ ಅರಿತು, ಆಚಾರ ಹೇಳುವುದಕೆ, ಬದನೆಕಾಯಿ ತಿನ್ನುವುದಕೆ ಎಂಬ ನಾಣ್ನುಡಿಯ ಮೆರೆವರು ನೋಡಾ ||
ಅನ್ಯರಿಗೆ ಅಸಹ್ಯಪಡಬೇಡ ಎಂದ ಗುರು ಕೂಡಲಸಂಗಯ್ಯ ಗುರುವಿಗೆ ಮೂರು ನಾಮವ ಹಾಕಿ ಹೊಲಸು ನೇಮವನು ನೆರವಿದರು ನೋಡಾ ||
ಏನನೋದಿ, ಏನ ಕೇಳಿ, ಏನ ಮಾಡಿಯೂ ಫಲವೇನು? ನಿಮ್ಮ ಮನದಂತೆ ನಿಮ್ಮ ಘನ ! ನಿಮ್ಮ ಅಂತರಂಗದ ಕೊಳಕ ಶುಚಿಗೊಳಿಸದ ವಿನಾ ನಿಮ್ಮ ಜಾತಿಯ ದೊಂಬರಾಟ ನಿಲದಣ್ಣಾ ||
*ಸಿದ್ದಯ್ಯ ಆರ್. ಎಸ್. ರೆಡ್ಡಿಹಳ್ಳಿ ಮೊ. ನಂ : 9449899520