- ಕುಂದಾಪುರ: ನವೆಂಬರ್ 24 (ಹಾಯ್ ಉಡುಪಿ ನ್ಯೂಸ್ ) ಸಹಕಾರಿ ಬ್ಯಾಂಕ್ ಒಂದರಲ್ಲಿ ಜಮೀನು ಅಡವಿಟ್ಟು ಸಾಲ ಪಡೆದು ಆನಂತರ ನಕಲಿ ಸಾಲ ಚುಕ್ತಾ ಧ್ರಡೀಕರಣ ಪತ್ರವನ್ನು ಮಾಡಿ ಬ್ಯಾಂಕ್ ಗೆ ಸಾಲಗಾರರು ವಂಚನೆ ಮಾಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.
- ಪದ್ಮ ವಿ ಶೆಟ್ಟಿ ಇವರು ಕುಂದಾಪುರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿಯಮಿತ ಇದರ ಶಾಖಾಧಿಕಾರಿಯಾಗಿದ್ದು, ಕುಂದಾಪುರ ತಾಲೂಕು ಬಳ್ಕೂರು ಗ್ರಾಮದ ಸಸಿಹಿತ್ಲು ಎಂಬಲ್ಲಿ ವಾಸವಾಗಿರುವ ಕುಷ್ಟ ಆಚಾರಿ ಇವರ ಮಗ ಲಚ್ಚ ಆಚಾರಿ, ಹಾಗೂ ಲಚ್ಚ ಆಚಾರಿಯವರ ಪತ್ನಿಯಾದ ಲಕ್ಷ್ಮೀ, ಹಾಗೂ ಬಾಬು ಆಚಾರಿಯವರ ಮಕ್ಕಳಾದ ಹರೀಶ ಮತ್ತು ದಿನೇಶ ಎನ್ನುವವರು ಬ್ಯಾಂಕ್ ನಿಂದ 5 ಲಕ್ಷ ರೂಪಾಯಿ ಹಣವನ್ನು ಸಾಲ ಪಡೆದಿದ್ದು, ದಿನಾಂಕ 30/05/2016 ರಂದು ಕುಂದಾಪುರ ಸಬ್ ರಿಜಿಸ್ಟ್ರಾರ್ ಆಫೀಸಿನ ದಸ್ತಾವೇಜು ನಂಬ್ರ 982/2017-18 ಜಮೀನನ್ನು 5 ಲಕ್ಷ ಸಾಲಕ್ಕೆ ಅಡಮಾನವಾಗಿ ಅಡವು ಪತ್ರ ಮತ್ತು ಸಾಲದ ದಾಖಲಾತಿಗಳನ್ನು ಬ್ಯಾಂಕ್ ಗೆ ಬರೆದುಕೊಟ್ಟಿರುತ್ತಾರೆ ಎನ್ನಲಾಗಿದೆ.
- ಪಡೆದುಕೊಂಡ ಸಾಲಕ್ಕೆ ಪ್ರತಿಯಾಗಿ ಸಾಲದ ಕಂತನ್ನು ಸರಿಯಾಗಿ ಮರು ಪಾವತಿ ಮಾಡದೇ ಇದ್ದು, ಈ ಬಗ್ಗೆ ಬ್ಯಾಂಕಿನ ವತಿಯಿಂದ ಸಹಕಾರಿ ಸಂಘಗಳ ಉಪನಿಭಂದಕರು ಉಡುಪಿ ಇವರ ನ್ಯಾಯಾಲಯದಲ್ಲಿ ಸಾಲಗಾರರ ವಿರುದ್ದ ದಾವೆ ನಂಬ್ರ 282/2017-18 ರಂತೆ ದಾವೆ ಹೂಡಿದ್ದು, ನಂತರ ನ್ಯಾಯಾಲಯದ ತೀರ್ಪಿನಂತೆ ಹಣದ ವಸೂಲಾತಿಗಾಗಿ ಬ್ಯಾಂಕ್ ಗೆ ಅಡಮಾನ ಇಟ್ಟ ಗೋಪಾಡಿ ಗ್ರಾಮದ ಸ.ನಂ 96/7ರಲ್ಲಿ 0.02.50+0.02.50 ನೇಯ ಜಮೀನಿನ ದಾಖಲೆಗಳನ್ನು ಪರಿಶೀಲಿಸಿದಾಗ ಬ್ಯಾಂಕ್ ನ ಸಾಲವು ಮರು ಸಂದಾಯವಾಗಿರುವುದಾಗಿ ಪೋರ್ಜರಿ ದೃಡೀಕರಣವನ್ನು ಸೃಷ್ಟಿಸಿ ದಿನಾಂಕ 07/05/2022 ರಂದು ಕುಂದಾಪುರ ಸಬ್ ರಿಜಿಸ್ಟ್ರಾರ್ ಆಫೀಸಿನ ದಸ್ತಾವೇಜು ನಂಬ್ರ 910/2022-23 ರಂತೆ ನೋಂದಾವಣಿ ಮಾಡಿದ್ದು ಬ್ಯಾಂಕ್ ನ ಗಮನಕ್ಕೆ ಬಂದಿದ್ದು, ಸಾಲ ಚುಕ್ತಾ ದೃಡೀಕರಣ ಪತ್ರಕ್ಕೆ ಪದ್ಮಾ ವಿ ಶೆಟ್ಟಿ ಮತ್ತು ಬ್ಯಾಂಕ್ ನವರು ಸಹಿ ಮಾಡದೇ ಇದ್ದು,ಬ್ಯಾಂಕ್ ಗೆ ಬರಬೇಕಾಗಿದ್ದ ಸಾಲವನ್ನು ಮರುಪಾವತಿ ಮಾಡದೇ ಸಾಲಗಾರರಾದ ಲಕ್ಷ್ಮೀ ಮತ್ತು ಬಾಬು ಆಚಾರಿಯವರ ಮಕ್ಕಳಾದ ದಿನೇಶ ಮತ್ತು ಹರೀಶ ಎನ್ನುವವರು ಪೋರ್ಜರಿ ಅಧಿಕಾರ ಪತ್ರ ತಯಾರು ಮಾಡಿ ಪೋರ್ಜರಿ ಸಾಲ ಚುಕ್ತಾ ದೃಡೀಕರಣ ಪತ್ರವನ್ನು ದಿನಾಂಕ 7-05-2022 ರಂದು ಕುಂದಾಪುರ ನೋಂದಣಿ ಕಛೇರಿಯಲ್ಲಿ ನೋಂದಾವಣೆ ಮಾಡಿ ಬ್ಯಾಂಕ್ ಗೆ ಮೋಸ ಮತ್ತು ವಂಚನೆಯನ್ನುಂಟು ಮಾಡಿರುತ್ತಾರೆ ಎಂದು ಬ್ಯಾಂಕ್ ಶಾಖಾಧಿಕಾರಿ ಪದ್ಮಾ ವಿ ಶೆಟ್ಟಿ ಯವರು ಪೊಲೀಸರಿಗೆ ದೂರನ್ನು ನೀಡಿರುತ್ತಾರೆ.ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.