ಬೈಂದೂರು: ನವೆಂಬರ್ 21(ಹಾಯ್ ಉಡುಪಿ ನ್ಯೂಸ್) ಫೇಸ್ ಬುಕ್ ನಲ್ಲಿ ಪರಿಚಯವಾದ ಗೆಳೆಯನೊಬ್ಬ ಆತ್ಮೀಯನಂತೆ ಬಂದು ಮನೆಗೆ ಸೇರಿಕೊಂಡು ಉಂಡು,ತಿಂದು ಕೊನೆಗೆ ಎಲ್ಲಾ ಕದ್ದು ಕೊಂಡು ಹೋದ ಘಟನೆ ನಡೆದಿದೆ.
ಬೈಂದೂರು ತಾಲೂಕು , ಶಿರೂರು ಗ್ರಾಮದ ಕಳಿಹಿತ್ಲು ನಿವಾಸಿ ಸಂತೋಷ್ ಮೊಗವೀರ (34) ಇವರು ಯಕ್ಷಗಾನ ಕಲಾವಿದರಾಗಿದ್ದು ಚಿಕ್ಕ ಮೇಳ ಎಂಬ ಯಕ್ಷಗಾನವನ್ನು ನಡೆಸಿಕೊಂಡಿರುತ್ತಾರೆ. ಇವರು ಮೇಳದ ಸಾಮಾಗ್ರಿಗಳೊಂದಿಗೆ ಶಿರೂರು ಗ್ರಾಮದ ಶಿರೂರು ಮೇಲ್ಪೆಟೆ ಎಂಬಲ್ಲಿ ಸುಭಾಷ್ ಪ್ರಭು ರವರ ಒಂದು ಕೊಠಡಿಯಲ್ಲಿ ವಾಸವಾಗಿರುತ್ತಾರೆ, ಯಕ್ಷಾಗಾನ ಪ್ರಯುಕ್ತ ಊರೂರು ತಿರುಗಿ ತಮ್ಮ ಕಾರ್ಯಕ್ರಮ ನಡೆಸಿಕೊಂಡಿರುತ್ತಾರೆ.
ಸಂತೋಷ್ ಮೊಗವೀರರವರಿಗೆ ಗುರುರಾಜ್ ಎಂಬುವವನು ಫೇಸ್ ಬುಕ್ ನಲ್ಲಿ 2 ವರ್ಷದ ಹಿಂದೆ ಪರಿಚಯವಾಗಿದ್ದು ದಿನಾಂಕ 09/11/2022 ರಂದು ಸಂತೋಷ್ ಮೊಗವೀರರವರ ಕೊಠಡಿಗೆ ಬಂದು ನಂಬಿಸಿ ಅವರೊಂದಿಗೆ ಉಳಿದುಕೊಂಡಿರುತ್ತಾನೆ. ದಿನಾಂಕ 12/11/2022 ರಂದು ಸಂತೋಷ್ ಮೊಗವೀರರವರು ಚಿಕ್ಕ ಮೇಳ ಕಾರ್ಯಕ್ರಮದ ಪ್ರಯುಕ್ತ ಹೊರಟಾಗ ಅವರೊಂದಿಗೆ ಗುರುರಾಜನೂ ಹೋಗಿದ್ದು ಕುಂದಾಪುರ ತಾಲೂಕಿನ ಹೆರಿಕುದ್ರು ಎಂಬಲ್ಲಿ ಕಾರ್ಯಕ್ರಮ ನಡೆದಿದ್ದು ಅಲ್ಲಿ ಸಂತೋಷರಿಂದ ಗುರುರಾಜನು Realme ಕಂಪೆನಿಯ ಮೊಬೈಲನ್ನು ಯಕ್ಷಗಾನದ ವೀಡಿಯೋ ಮಾಡಲೆಂದು ಹೇಳಿ ಪಡೆದುಕೊಂಡು ನಂತರ ಅಲ್ಲಿಂದ ಸಂತೋಷರಿಗೆ ತಿಳಿಸದೇ ಶಿರೂರು ಮೇಲ್ಪೆಟೆಗೆ ಬಂದು ಸಂತೋಷ್ ರವರು ವಾಸ್ಥವ್ಯವಿರುವ ಕೊಠಡಿಯ ಬೀಗವನ್ನು ಒಡೆದು ಅಲ್ಲಿ ಸಂತೋಷರು ಬ್ಯಾಗ್ ನಲ್ಲಿಟ್ಟಿದ್ದ 1) 12 ಗ್ರಾಂ ತೂಕದ ಚಿನ್ನದ ಕೊರಳಿನ ಚೈನ್ ಮೌಲ್ಯ ರೂಪಾಯಿ 45,000/-, 2) 4 ಗ್ರಾಂ ತೂಕದ ಚಿನ್ನದ ಉಂಗುರ ಮೌಲ್ಯ ರೂಪಾಯಿ 15,000, 3) ಕಾಣಿಕೆ ಡಬ್ಬಿಯಲ್ಲಿದ್ದ ರೂಪಾಯಿ 10,000/- ನಗದು , 4) ಇನ್ನೊಂದು ಡಬ್ಬಿಯಲ್ಲಿದ್ದ ನಗದು 1000/- ರೂಪಾಯಿ, 5) 14,000 ಮೌಲ್ಯದ Realme ಮೊಬೈಲ್ ಫೋನ್ ನ್ನು ದಿನಾಂಕ 12/11/2022 ರಂದು ಕಳವು ಮಾಡಿಕೊಂಡು ಹೋಗಿರುತ್ತಾನೆ ಎಂದು, ಕಳವಾದ ಸ್ವೊತ್ತಿನ ಒಟ್ಟು ಮೌಲ್ಯ 85,000 /- ರೂಪಾಯಿ ಆಗಿರುತ್ತದೆ ಎಂದು ಸಂತೋಷ ಮೊಗವೀರ ಪೊಲೀಸರಿಗೆ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .