Spread the love

ಈಗಾಗಲೇ ಚುನಾವಣೆಯನ್ನು ಅಕ್ರಮವಾಗಿ ಗೆಲ್ಲಲು ಹಣ ಹೆಂಡ ಸೀರೆ ಪಂಚೆ ಧೋತಿ ತೋಳ್ಬಲ ಮಿಕ್ಸಿ ಕುಕ್ಕರ್ ಜಾತಿ ಧರ್ಮ ಸುಳ್ಳು ಭರವಸೆ ಹೀಗೆ ಸಾಕಷ್ಟು ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ದುರುಪಯೋಗವೂ ಆಗುತ್ತಿದೆ. ಈಗ ಮಾಹಿತಿ ತಂತ್ರಜ್ಞಾನದ ಮೂಲಕ ಮತ್ತೊಂದು ರೀತಿಯ ವಂಚನೆಯನ್ನು ಪತ್ತೆ ಹಚ್ಚಲಾಗಿದೆ.

ಒಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡಿ ಜನರ ಮನಸ್ಸು ಗೆದ್ದು ಚುನಾವಣೆ ಗೆಲ್ಲುವುದನ್ನು ಹೊರತುಪಡಿಸಿ ಇತರ ಎಲ್ಲಾ ಮಾರ್ಗಗಳ ಹುಡುಕಾಟ ಮಾತ್ರ ಯಶಸ್ವಿಯಾಗಿ ಸಾಗುತ್ತಿದೆ.

ಜನರನ್ನು ಮರುಳು ಮಾಡುವುದು ಒಂದು ಕಡೆ, ಚುನಾವಣಾ ಪ್ರಕ್ರಿಯೆಯನ್ನೇ ವಂಚಿಸುವುದು ಮತ್ತೊಂದು ಕಡೆ.
ವಾಸ್ತವ ಮಾತ್ರ ಜನರೇ ಆರಿಸಿದ ಜನ ಪ್ರತಿನಿಧಿಗಳು ಎಂಬ ಪ್ರಜಾಪ್ರಭುತ್ವ ಹೆಸರಿನ ಒಂದು ಅಣಕ.

ಇದರಲ್ಲಿ ಮಾಧ್ಯಮಗಳ ಪಾತ್ರವೂ ಇದೆ. ಚುನಾವಣೆಯನ್ನು ಒಂದು ಯುದ್ಧದಂತೆ ಚಿತ್ರಿಸುವುದು, ಅನಾವಶ್ಯಕ ಕುತೂಹಲ ಕೆರಳಿಸುವಂತೆ ಮಾಡಲು ಸಮೀಕ್ಷೆಗಳನ್ನು ನಡೆಸುವುದು, ರೋಚಕ ಹಣಾಹಣಿ ಎಂದು ಭ್ರಮೆ ಉಂಟುಮಾಡುವುದು. ಅದರ ಪರಿಣಾಮ ಈ ರೀತಿಯ ವಾಮ ಮಾರ್ಗಗಳಿಗೆ ಪ್ರಚೋದನೆಯಾಗಿದೆ.

ಸಮೀಕ್ಷೆಗಳನ್ನು ಮಾಡುವುದೇ ಆದಲ್ಲಿ ಎಷ್ಟೊಂದು ವಿಷಯಗಳಿವೆ. ರಾಜ್ಯದಲ್ಲಿ ಇರುವ ಕೆರೆ ಕಾಲುವೆಗಳ ಸ್ಥಿತಿ ಗತಿ, ಆಹಾರ ವ್ಯರ್ಥವಾಗುತ್ತಿರುವ ಪ್ರಮಾಣ,
ಕ್ರೀಡಾಂಗಣ – ಗ್ರಂಥಾಲಯಗಳ ಪರಿಸ್ಥಿತಿ,
ಆಹಾರ ಪದಾರ್ಥಗಳ ಕಲಬೆರಕೆ, ಮನುಷ್ಯ ಸಂಬಂಧಗಳ ಬಿರುಕಿನ ಕಾರಣಗಳು ಹೀಗೆ ಸಮಾಜಕ್ಕೆ ಅತ್ಯಂತ ಉಪಯುಕ್ತ ಮಾಹಿತಿಯನ್ನು ಸಂಗ್ರಹಿಸಲು ಸಾಕಷ್ಟು ಅವಕಾಶಗಳಿವೆ.

ಆದರೆ ಒಂದು ಗುಪ್ತ ಮತದಾನ ಪ್ರಕ್ರಿಯೆಯ ಚುನಾವಣಾ ಕ್ಷೇತ್ರಗಳಲ್ಲಿ ಯಾರು ಯಾವ ಪಕ್ಷಕ್ಕೆ ಮತ ಹಾಕುತ್ತಾರೆ ಎಂದು ಆರು ತಿಂಗಳ ಮೊದಲೇ ಮಾಹಿತಿ ಸಂಗ್ರಹಿಸುವುದು, ಅದಕ್ಕೆ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಬೆಂಬಲಿಸುವುದು, ಅದಕ್ಕಾಗಿ ಅಪಾರ ಹಣ ಖರ್ಚು ಮಾಡುವುದು, ಆ ಸಮೀಕ್ಷೆಯ ಆಧಾರದ ಮೇಲೆ ತಂತ್ರ – ಪ್ರತಿ ತಂತ್ರ – ಕುತಂತ್ರ – ಕಾನೂನು ಬಾಹಿರ ಕೆಲಸಗಳನ್ನು ಮಾಡುವುದು. ಇದೇ ಪ್ರಜಾಪ್ರಭುತ್ವವೇ…….

1825 ದಿನಗಳ ತಮ್ಮ ಆಡಳಿತ ಅವಧಿಯಲ್ಲಿ ಜನರಿಗೆ ಇಷ್ಟವಾಗುವ ಆಡಳಿತ ನಡೆಸಿ ಮತ್ತೆ ಧೈರ್ಯದಿಂದ ಜನರ ಬಳಿಗೆ ಹೋಗಿ ಮತದಾನ ಮಾಡುವುದು ಕಲಿಯದೇ ಮತ್ತೆ ದುಷ್ಟತನದ ಹಾದಿ ಹಿಡಿಯುವ ಈ ರಾಜಕೀಯ ವ್ಯವಸ್ಥೆಯನ್ನು ಬಣ್ಣಿಸಲು ತುಂಬಾ ಕಷ್ಟವಾಗುತ್ತದೆ. ಅದಕ್ಕೆ ಬಲಿಯಾಗಿರುವ ಮತದಾರರ ಮನಸ್ಥಿತಿಯ ಬಗ್ಗೆ ಮರುಕವೂ ಇದೆ.

ಆದಷ್ಟು ಬೇಗ ಇದಕ್ಕೆ ಒಂದು ಪರಿಹಾರ ಸಿಗದಿದ್ದರೆ ಗುಲಾಮಿ ಸಂತತಿ ಮತ್ತೊಮ್ಮೆ ದೇಶದಲ್ಲಿ ತಲೆ ಎತ್ತಲಿದೆ. ಆಗ ನಾವು ಸಂಪೂರ್ಣವಾಗಿ ಆಡಳಿತ ವ್ಯವಸ್ಥೆಯ ಗುಲಾಮರಾಗುವುದು ನಿಶ್ಚಿತ.

ನಮ್ಮ ಎಲ್ಲಾ ಹಕ್ಕುಗಳು ಮತ್ತು ಸ್ವಾತಂತ್ರ್ಯ ಕೇವಲ ಕಾಗದದ ಮೇಲೆ ಮಾತ್ರ ಉಳಿದು ವಾಸ್ತವದಲ್ಲಿ ನಾವು ನಮ್ಮದೇ ಜನರ ದೌರ್ಜನ್ಯಕ್ಕೆ ಒಳಗಾಗುವುದು ಬಹುತೇಕ ಖಚಿತ.

ಚಿಲುಮೆ ಎಂಬ ಸಂಸ್ಥೆಯ ಮೇಲೆ ನಡೆದ ದಾಳಿ ಮತ್ತು ಅದರ ಕಾರ್ಯಚಟುವಟಿಕೆಗಳ ಬಗ್ಗೆ ವರದಿಯಾಗುತ್ತಿರುವ ಸುದ್ದಿಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿ ಸಂದೇಶಗಳನ್ನು ನೀಡುತ್ತಿದೆ.

ಈಗಾಗಲೇ ಕಾರ್ಪೊರೇಟ್ ಸಂಸ್ಥೆಗಳು,
ಪ್ರಶಾಂತ್ ಕಿಶೋರ್ ರೀತಿಯ ಚುನಾವಣಾ ತಂತ್ರಗಾರರು, ಅನೇಕ ಧಾರ್ಮಿಕ ಮುಖಂಡರು,‌ ಸಾಮಾಜಿಕ ಜಾಲತಾಣಗಳ ಏಜೆಂಟರು ಮತದಾರರನ್ನು ಪರೋಕ್ಷವಾಗಿ ನಿಯಂತ್ರಿಸಿ ಚುನಾವಣೆ ಗೆಲ್ಲುವ ತಂತ್ರಗಾರಿಕೆ ಅಳವಡಿಸಿಕೊಂಡಿದ್ದಾರೆ.

ಇದು ಮತ್ತಷ್ಟು ವ್ಯಾಪಕವಾಗಿ ಹರಡಿದರೆ ಪ್ರಜಾಪ್ರಭುತ್ವದ ಸಮಾಧಿಯ ಮೇಲೆ ಕಾರ್ಪೊರೇಟ್ ತಂತ್ರಗಾರಿಕೆಯ ಹೊಸ ಚುನಾವಣಾ ವ್ಯವಸ್ಥೆ ಅರಮನೆ ಕಟ್ಟಲಿದೆ.
ಆ ಅರಮನೆಯ ಆಳುಗಳು ನಾವಾಗಲಿದ್ದೇವೆ. ದಯವಿಟ್ಟು ಗಂಭೀರವಾಗಿ ಯೋಚಿಸಿ.

ರಾಜಕೀಯ ಒಂದು ತಂತ್ರಗಾರಿಕೆಯಲ್ಲ.
ರಾಜಕೀಯ ಅಧಿಕಾರ ದಾಹದ ಅಂಕಣವಲ್ಲ,
ರಾಜಕೀಯ ಶಕ್ತಿ ಪ್ರದರ್ಶನವಲ್ಲ,
ರಾಜಕೀಯ ಒಂದು ಸಮಾಜ ಸೇವೆ,
ರಾಜಕೀಯ ಸಂವಿಧಾನದ ರಕ್ಷಣಾ ಕವಚ,
ರಾಜಕೀಯ ಈ ನೆಲದ ರಕ್ಷಣೆಯ ಜವಾಬ್ದಾರಿ,
ರಾಜಕೀಯ ನಮ್ಮ ಜನರ ಕಲ್ಯಾಣದ ಮಾರ್ಗ,
ರಾಜಕೀಯ ನಮ್ಮ ಬದುಕಿನ ಭಾಗ,
ರಾಜಕೀಯ ನಮ್ಮ ಜೀವನ ಮಟ್ಟ ಸುಧಾರಿಸುವ ವಿಧಾನ………..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……

error: No Copying!