Spread the love

ವಸ್ತುಗಳು ಮತ್ತು ವಿಷಯಗಳ ಪ್ರಚಾರಕ್ಕಾಗಿ ಪ್ರಾರಂಭವಾದ ಜಾಹೀರಾತು ಆಧುನಿಕ ಕಾಲದಲ್ಲಿ ಅದರಲ್ಲೂ ಪತ್ರಿಕಾ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಬೆಳವಣಿಗೆಯೊಂದಿಗೆ ಸುಳ್ಳು ಸೃಷ್ಟಿಸುವ, ಭ್ರಮೆ ಉಂಟುಮಾಡುವ, ಅಮಾಯಕರ ಶೋಷಣೆಯ ಅಸ್ತ್ರವಾಗಿ ಪರಿವರ್ತನೆ ಹೊಂದಿರುವುದು ಇದರ ಬಗ್ಗೆ ಆಳವಾಗಿ ಚಿಂತಿಸಿದಾಗ ಅರ್ಥವಾಗುತ್ತದೆ.

ಈಗಾಗಲೇ ಮೌಡ್ಯ ಅಜ್ಞಾನದ ಬಲೆಯೊಳಗೆ ಸಿಲುಕಿರುವ ಜನರಿಗೆ ಈ ಜಾಹೀರಾತುಗಳು ಮತ್ತಷ್ಟು ಅಂಧಕಾರಕ್ಕೆ ತಳ್ಳುತ್ತಿವೆ.

ಇದು ಎಷ್ಟು ಅಸಹ್ಯವಾಗಿದೆ ಎಂದರೆ, ಮಾಧ್ಯಮಗಳು ” ಇದು ಜಾಹೀರಾತು. ಇಲ್ಲಿ ಪ್ರಸಾರವಾಗುವ ಅಭಿಪ್ರಾಯಗಳಿಗೆ ನಾವು ಜವಾಬ್ದಾರರಲ್ಲ ” ಎಂಬ ಒಂದು ಪಲಾಯನವಾದದ ವಾಕ್ಯ ಸೇರಿಸಿ ಹಸಿ ಹಸಿ ಸುಳ್ಳು ಪ್ರಸಾರ ಮಾಡುತ್ತಾರೆ.

2000/3000 ರೂಪಾಯಿ ಒಂದು ಮಹಾಲಕ್ಷ್ಮಿ ಯಂತ್ರ ನಮ್ಮ ಕಷ್ಟ ಪರಿಹರಿಸಲು ಸಾಧ್ಯವೇ ?
ಒಂದು ವಾಸ್ತು ಯಂತ್ರ ನಮಗೆ ಹಣದ ಮಳೆ ಸುರಿಸುತ್ತದೆಯೇ ?
ಒಂದು ಹನುಮಾನ್ ಯಂತ್ರ ನಮಗೆ ಕೆಲಸ ಕೊಡಿಸಲು ಮತ್ತು ಮದುವೆ ಮಾಡಿಸಲು ಸಾಧ್ಯವೇ ?
ಒಬ್ಬ ಜ್ಯೋತಿಷಿ ನಮ್ಮ ಎಲ್ಲಾ ಸಂಕಷ್ಟಗಳಿಗೆ ಪರಿಹಾರ ಸೂಚಿಸಲು ಸಾಧ್ಯವೇ ?

ಒಂದು ಯಾವುದೋ ಔಷಧಿ ನಿಮ್ಮ ತಲೆಯ ಬೋಡು ಕೂದಲನ್ನು ಬೆಳೆಸಲು ಸಾಧ್ಯವೇ ?
ಯಾವುದೋ ಒಂದು ಗಿಡಮೂಲಿಕೆ ಅಥವಾ ಔಷಧಿ ನಿಮ್ಮ ಬಿಪಿ ಶುಗರ್ ಕ್ಯಾನ್ಸರ್ ಕೊಲೆಸ್ಟ್ರಾಲ್ ಸಂಪೂರ್ಣ ವಾಸಿಮಾಡಲು ಸಾಧ್ಯವೇ ?

ಯಾವುದೋ ಒಂದು ಕ್ರೀಮ್ ನಿಮ್ಮನ್ನು ಬೆಳ್ಳಗೆ ಮಾಡಲು ಸಾಧ್ಯವೇ ?
ಯಾವುದೇ ಒಂದು ಟಾನಿಕ್ ನಿಮ್ಮನ್ನು ಆರೋಗ್ಯವಂತ ಬಾಡಿ ಬಿಲ್ಡರ್ ಮಾಡಲು ಸಾಧ್ಯವೇ ?

ಒಂದು ವೇಳೆ ಈ ಜಾಹೀರಾತುಗಳು ನಿಜವೇ ಆಗಿದ್ದರೆ ಸರ್ಕಾರವೇ ಎಲ್ಲರ ಮನೆಗೂ ಒಂದೊಂದು ಮಹಾಲಕ್ಷ್ಮಿ ಯಂತ್ರ ಜೈಹನುಮಾನ್ ಯಂತ್ರ ವಾಸ್ತು ಯಂತ್ರ ಗಳನ್ನು ಸರಬರಾಜು ಮಾಡಬಹುದಲ್ಲವೇ ?

ಟಿವಿ ಜಾಹೀರಾತಿನ ಒಂದು ಔಷಧಿ ಬಹಳಷ್ಟು ಖಾಯಿಲೆಗಳಿಗೆ ಸಂಜೀವಿನಿಯಾದರೆ ಅದನ್ನೇ ಮೆಡಿಕಲ್ ಅಸೋಸಿಯೇಶನ್ ಅಧೀಕೃತ ಮಾಡಬಹುದಲ್ಲವೇ ?

ಹಣ ಕೊಟ್ಟ ಮಾತ್ರಕ್ಕೆ ಎಲ್ಲಾ ಸುಳ್ಳುಗಳನ್ನು ಪ್ರಸಾರ ಮಾಡಬಹುದಾದರೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳನ್ನು ಕೇಳುವ ನೈತಿಕತೆ ಮಾಧ್ಯಮಗಳಿಗೆ ಇದೆಯೇ ?

ನಂಬುವುದು ಬಿಡುವುದು ಜನರ ಆಯ್ಕೆ ಎಂಬ ಪಲಾಯನವಾದ ಸರಿಯೇ ?

ಮಾಧ್ಯಮ ಎಂಬುದು ಒಂದು ವಿವೇಚನೆ, ಒಂದು ದೃಷ್ಟಿಕೋನ, ಒಂದು ವ್ಯಕ್ತಿತ್ವ.
ಜಾಹೀರಾತು ಆಧುನಿಕ ಯುಗದ ಪ್ರಬಲ ಮಾಧ್ಯಮ ನಿಜ. ಜಾಹೀರಾತು ಅದರ ಬಹುಮುಖ್ಯ ಆದಾಯ ನಿಜ. ಆದರೆ ಹಣ ಮಾಡುವ ಉದ್ದೇಶದಿಂದ ಸುಳ್ಳು ವಿಕೃತಗಳನ್ನು ಪ್ರಸಾರ ಮಾಡಿದರೆ ಹೇಗೆ.

ಕೊಹ್ಲಿಯೋ, ತೆಂಡೂಲ್ಕರೋ ” ಬೂಸ್ಟ್ ಇಸ್ ದ ಸೀಕ್ರೆಟ್ ಆಫ್ ಮೈ ಎನರ್ಜಿ ” ಎಂದು ಹೇಳಿದರೆ ಮಕ್ಕಳು ಅದನ್ನು ನಿಜ ಎಂದು ನಂಬುವ ಸಾಧ್ಯತೆ ಇದೆ. ಆದರೆ ಇದು ನಿಜವೇ ? ಅವರ ಪ್ರತಿಭೆ ಶಕ್ತಿ ಮತ್ತು ನೈಪುಣ್ಯತೆಗೆ ಇದು ಕಾರಣವೇ ? ಹಾರ್ಲಿಕ್ಸ್ ಅಥವಾ ಬೇರೆ ಕಂಪನಿಯವರು ಇನ್ಯಾರೋ ಸಲ್ಮಾನ್ ಖಾನ್ ಅಕ್ಷಯ್ ಕುಮಾರ್ ಅವರನ್ನು ಉಪಯೋಗಿಸಿಕೊಂಡು ಜಾಹೀರಾತು ಮಾಡುತ್ತಾರೆ. ಇದು ಹಸಿ ಸುಳ್ಳು ಅಲ್ಲವೇ ? ಸತ್ಯವೇ ಆಗಿದ್ದರೆ ಸರ್ಕಾರವೇ ಎಲ್ಲಾ ಕ್ರೀಡಾ ಪಟುಗಳಿಗೆ ಇದನ್ನು ಅಧೀಕೃತ ಮಾಡಬಹುದಲ್ಲವೇ ?

ಧೂಮಪಾನ ಮತ್ತು ಮದ್ಯಪಾನ ಹಾಗು ಗಾಂಜಾ ಮುಂತಾದ ವಸ್ತುಗಳ ಜಾಹೀರಾತಿಗೆ ಕಾನೂನಿನ ನಿಷೇಧಿವಿದೆ. ಇಲ್ಲದಿದ್ದರೆ ಬಹುಶಃ ಹಣಕ್ಕಾಗಿ ಅದನ್ನೂ ಪ್ರಸಾರ ಮಾಡುವ ಎಲ್ಲಾ ಸಾಧ್ಯತೆಯೂ ಇತ್ತು.

ಇತ್ತೀಚೆಗೆ ಅನೇಕ ಆನ್ ಲೈನ್ ಜೂಜುಗಳ ಜಾಹೀರಾತು ವ್ಯಾಪಕವಾಗಿ ಪ್ರಸಾರವಾಗುತ್ತಾ ಅನೇಕ ಬದುಕುಗಳು ನಾಶವಾಗುತ್ತಿರುವ ದುರಂತ ವ್ಯವಸ್ಥೆಯಲ್ಲಿ ನಾವಿದ್ದೇವೆ.

ಸಮಾಜ ಸುಧಾರಣೆ ಎಂದರೆ ಎಲ್ಲಾ ಅಂಶಗಳ ಸಂಪೂರ್ಣ ಮತ್ತು ಕೂಲಂಕುಶ ಪರಿಶೀಲನೆ ಬಳಿಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕೆ ಹೊರತು ಕೇವಲ ವ್ಯವಹಾರಕ್ಕಾಗಿ ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಎಂದಾದರೆ ಅದು ವ್ಯವಸ್ಥೆಯ ವಿಫಲತೆ ಎಂದು ನಿಸ್ಸಂಶಯವಾಗಿ ಹೇಳಬಹುದು.

ಜಾಹೀರಾತುಗಳು ಅನಿವಾರ್ಯ ಒಪ್ಪೋಣ. ಅದು ಆರ್ಥಿಕ ಪ್ರಗತಿಯ ಒಂದು ಮಾರ್ಗವೂ ಹೌದು. ಆದರೆ ಬಗ್ಗೆ ಜಾಗೃತರಾಗುವ ಸಮಯ ಬಂದಿದೆ. ಸತ್ಯ ಮತ್ತು ವಾಸ್ತವವೇ ಜಾಹೀರಾತಾಗುವ, ರಾಜಕಾರಣಿಗಳ ಭರವಸೆ ವಾಸ್ತವವಾಗುವ, ಮಾಧ್ಯಮಗಳ ಪ್ರಕಟಣೆ ನಂಬಿಕೆಗೆ ಅರ್ಹವಾಗುವ, ಅಧಿಕಾರಿಗಳ ಸೇವೆ ಜನಪ್ರಿಯವಾಗುವ ದಿನಗಳ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……

error: No Copying!