Spread the love

ಬೆಲೆ ಏರಿಕೆ ಒಂದು ಕಡೆ – ಪ್ರತಿಮೆಗಳ ನಿರ್ಮಾಣ ಇನ್ನೊಂದು ಕಡೆ – ನಮ್ಮ ಗುಲಾಮಿತನದ ಮೌನ ಮತ್ತೊಂದು ಕಡೆ…….

ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದ ಬೊಕ್ಕಸದಿಂದ 64 ಕೋಟಿ ಖರ್ಚು ಮಾಡಲಾಗಿದೆ. ಅದರ ಉದ್ಘಾಟನೆಗೆ ಇನ್ನೊಂದಿಷ್ಟು ಕೋಟಿ ಖಜಾನೆಯಿಂದ ಖಾಲಿಯಾಗಿದೆ.

ಇಂದಿನಿಂದ ನಂದಿನಿ ಹಾಲು – ಮೊಸರಿನ ಬೆಲೆಯನ್ನು 3 ರೂಪಾಯಿ ಹೆಚ್ಚಿಸಲಾಗಿದೆ.

ಇದನ್ನು ನೋಡಿಕೊಂಡು – ಸಹಿಸಿಕೊಂಡು ನಾವು ಇರಬೇಕು. ನಾವು ಗುಲಾಮರು. ಅದಕ್ಷ ಅಸಮರ್ಪಕ ಆಡಳಿತವನ್ನು ಪಕ್ಷ ರಹಿತವಾಗಿ, ಜಾತಿ ರಹಿತವಾಗಿ, ಧರ್ಮ ರಹಿತವಾಗಿ ಪ್ರಶ್ನಿಸಬಾರದಲ್ಲವೇ….

ಹಿಂದಿನ ಆಡಳಿತಲ್ಲಿ ಬೆಲೆ ಏರಿಸಿಲ್ಲವೇ ? ಇಂದಿನ ಆಡಳಿತದಲ್ಲಿ ಬೆಲೆ ಏರಿಸಿದ್ದಾರಲ್ಲವೇ ? ಮುಂದಿನ ಆಡಳಿತದಲ್ಲೂ‌ ಏರಿಸುತ್ತಾರಲ್ಲವೇ ?

ಹಿಂದಿನ ಆಡಳಿದಲ್ಲಿ ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್ – ಜವಹರಲಾಲ್ ನೆಹರು – ವಿಶ್ವ ಮಾನವ ಬಸವಣ್ಣ ಮುಂತಾದವರ ಪ್ರತಿಮೆ ಸ್ಥಾಪಿಸಿಲ್ಲವೇ ? ಈಗಿನ ಆಡಳಿತದಲ್ಲಿ ನಾಡ ಪ್ರಭು ಕೆಂಪೇಗೌಡ, ವೀರ ಸಾರ್ವಕರ್, ಸರ್ದಾರ್ ವಲ್ಲಭಭಾಯ್ ಪಟೇಲ್, ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆ ಸ್ಥಾಪಿಸಿಲ್ಲವೇ ?
ಮುಂದಿನ ಆಡಳಿತದಲ್ಲಿ ಟಿಪ್ಪು ಸುಲ್ತಾನ್, ನಾಥುರಾಂ ಘೋಡ್ಸೆ, ಆದಿ ಶಂಕರಾಚಾರ್ಯ ಮುಂತಾದವರ ಪ್ರತಿಮೆ ಸ್ಥಾಪಿಸಬಹುದಲ್ಲವೇ ?

ಪ್ರತಿಮೆಗಳು ಹಾಲು ಕುಡಿಯುವುದಿಲ್ಲ, ಆಹಾರ ಸೇವಿಸುವುದಿಲ್ಲ, ಮಾತನಾಡುವುದಿಲ್ಲ, ಪ್ರತಿಕ್ರಿಯಿಸುವುದಿಲ್ಲ. ಒಂದು ಸಣ್ಣ ಕಲ್ಲು ಮಣ್ಣು ಕಬ್ಬಿಣ ಹಿತ್ತಾಳೆ ತಾಮ್ರ ಅಥವಾ ಬೇರೆ ಲೋಹದಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಾಂಕೇತಿಕವಾಗಿ ಪ್ರತಿಮೆ ಸ್ಥಾಪಿಸಿ ಉಳಿದ ಹಣವನ್ನು ಅವರ ವಿಚಾರ ಚಿಂತನೆಗಳನ್ನು ಜನರಿಗೆ ತಲುಪಿಸಲು ಪುಸ್ತಕಗಳು ಸೇರಿದಂತೆ ಬೇರೆ ರೀತಿಯ ಉಪಯೋಗ ಮಾಡಬಹುದಲ್ಲವೇ…

ಉದ್ಘಾಟನೆಯನ್ನು ಕೇವಲ ಸಣ್ಣ ಮೊತ್ತದಲ್ಲಿ ಒಬ್ಬ ಪ್ರಾಮಾಣಿಕ ಸಾಮಾನ್ಯ ವ್ಯಕ್ತಿ ಮಾಡಬಹುದಿತ್ತಲ್ಲವೇ. ಏಕೆಂದರೆ ಸರ್ಕಾರ ಎಂಬುದು ರಾಜಕೀಯ ಪಕ್ಷಗಳ ಆಸ್ತಿಯಲ್ಲ. ಸಾಮಾನ್ಯ ಜನರ ಆಸ್ತಿ.

ಶಿಕ್ಷಣ ಆರೋಗ್ಯ ಆಹಾರ ವಸತಿಗಳ ಬೆಲೆ ಏರಿಸಿ ಆ ಹಣದಲ್ಲಿ ಜಾತಿ ರಾಜಕೀಯದ ಆಧಾರದ ಮೇಲೆ ಪ್ರತಿಮೆ ಸ್ಥಾಪಿಸಲು ವಿನಿಯೋಗಿಸುವುದನ್ನು‌ ಆ ಪ್ರತಿಮೆಗಳ ಪ್ರತಿಮಾಕಾರರೇ ಒಪ್ಪುವುದಿಲ್ಲ.

ನಾನು ಸತ್ತಾಗ….
ನನ್ನ ‌ದೇಹವನ್ನು ಸಮುದ್ರದಲ್ಲಿ ಹಾಕಿ ಜಲಚರಗಳಿಗೆ ಆಹಾರವಾಗಲಿ,
ನನ್ನ ದೇಹವನ್ನು ಸುಟ್ಟು ಬೂದಿಯನ್ನು ಗಾಳಿಯಲ್ಲಿ ತೇಲಿ ಬಿಡಿ ಸಸ್ಯಗಳಿಗೆ ಆಹಾರವಾಗಲಿ,
ನಾನು ಸತ್ತಾಗ ನನ್ನ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡಿ. ಅದು ರೋಗ ನಿರೋಧಕ ಪ್ರಯೋಗಗಳಿಗೆ ಉಪಯೋಗವಾಗಲಿ…
ಎಂದು ತಮ್ಮ ದೇಹವನ್ನೇ ಪರೋಪಕಾರಿಯಾಗಿ ಮಾರ್ಪಡಿಸಿದ ಮಹಾತ್ಮರ ಪ್ರತಿಮೆಗಳಿಗೆ ಕೋಟಿ ಕೋಟಿ ಹಣ…..

ಇದನ್ನು ನಾವು ನಮಗೆ ಸಂಬಂಧಿಸಿಲ್ಲ ಎಂದು ಸುಮ್ಮನೆ ಇರಬೇಕೇ ?

ಹಿಂದೆ ಯಾಕೆ ಕೇಳಲಿಲ್ಲ,
ಈಗ ಯಾಕೆ ಕೇಳುವಿರಿ,
ಮುಂದೆ ನೋಡೋಣ,
ಇದೇ ಪ್ರಶ್ನೆ ಮತ್ತು ಉತ್ತರಗಳು….

ಟೋಲ್ ಗೆ ಕಟ್ಟುವ ಹಣ, ಪಾರ್ಕಿಂಗ್ ಗೆ ಕಟ್ಟುವ ಹಣ, ನೀರಿಗೆ ಕಟ್ಟುವ ಹಣ, ವಿದ್ಯುತ್ ಗೆ ಕಟ್ಟುವ ಹಣ, ಊಟ ಬಟ್ಟೆ ವಸತಿಗೆ ಕಟ್ಟುವ ತೆರಿಗೆಯ ಹಣ ಎಲ್ಲವೂ ಈ ರೀತಿಯ ದುಂದು ವೆಚ್ಚಗಳಿಗೆ ಖರ್ಚು ಮಾಡಿದರೆ ಹೇಗೆ. ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿರುವುದರ ಅರಿವು ಇವರಿಗೆ ಇಲ್ಲವೇ…..

ಮತ್ತೆ ಅಧಿಕಾರ ಪಡೆಯಲು ಆ ಪಕ್ಷ, ಇರುವ ಅಧಿಕಾರ ಉಳಿಸಿಕೊಳ್ಳಲು ಈ ಪಕ್ಷ, ನನಗೊಂದು ಅವಕಾಶ ಸಿಗಬಹುದೇ ಎಂದು ಇನ್ನೊಂದು ಪಕ್ಷ, ಹೊಸ ಭರವಸೆಯ ಮತ್ತಷ್ಟು ಪಕ್ಷಗಳು……..

” ಸ್ಥಾವರಕ್ಕಳಿವುಂಟು
ಜಂಗಮಕ್ಕಳಿವಿಲ್ಲ “

ಪ್ರತಿಮೆಗಳ ಎತ್ತರದ ಮುಖಾಂತರವೇ ಆ ವ್ಯಕ್ತಿಗಳ ವ್ಯಕ್ತಿತ್ವವನ್ನು ಅಳೆಯುವ ಹೊಸ ಟ್ರೆಂಡ್ ನ ಕಾಲಘಟ್ಟದತ್ತ ನಾವು ಸಾಗುತ್ತಿದ್ದೇವೆಯೇ ಎಂಬ ಅನುಮಾನ ಕಾಡಲು ಶುರುವಾಗಿದೆ…………

ಸಿನಿಮಾಗಳಿಗೆ ಖರ್ಚು ಮಾಡುವ ಬಜೆಟ್ ನಿಂದ ಅದರ ಗುಣಮಟ್ಟವನ್ನು, ಕಟೌಟ್ ಎತ್ತರದ ಆಧಾರದಲ್ಲಿ ನಾಯಕ ನಟನ ಅಭಿನಯ ಮತ್ತು ಜನಪ್ರಿಯತೆಯನ್ನು,
ಅಳೆಯುವಂತೆ ಇದು ಕೂಡ ಆಗುತ್ತಿದೆಯೇ …………

ಈ ಪ್ರತಿಮಾ ಸಂಸ್ಕೃತಿ ಬಹಳ ಹಿಂದಿನಿಂದಲೂ ಇದೆ. ಅಭಿಮಾನಿಗಳ ಆರಾಧಕರ ಭಕ್ತರ ಅನುಯಾಯಿಗಳ ಒಗ್ಗೂಡುವಿಕೆಯ ನೆಪದಲ್ಲಿ ಅವರ ಪ್ರೀತಿ ಪಾತ್ರರ ಪ್ರತಿಮೆಗಳನ್ನು ಎಲ್ಲೆಂದರಲ್ಲಿ ಸ್ಥಾಪಿಸಲಾಗಿದೆ. ಎಲ್ಲಾ ಕ್ಷೇತ್ರಗಳ ಸಾಧಕರು ಮತ್ತು ಜನಪ್ರಿಯರು ಇದರಲ್ಲಿ ಸೇರಿದ್ದಾರೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ವಿಶ್ವದ ಅತಿ ಎತ್ತರದ ಮೂರ್ತಿ ಸ್ಥಾಪನೆಯ ನಂತರ ಅದಕ್ಕಿಂತ ಎತ್ತರಕ್ಕೆ ಮತ್ತೊಬ್ಬರ ಪ್ರತಿಮೆ ಸ್ಥಾಪಿಸುವ ಪ್ರಯತ್ನಗಳು ಹೆಚ್ಚಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಶಿವಾಜಿ ಪ್ರತಿಮೆ, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಮೆ, ಕರ್ನಾಟಕದಲ್ಲಿ ಕೆಂಪೇಗೌಡ ಪ್ರತಿಮೆ, ಇನ್ನೆಲ್ಲೋ ಶಿವನ ಪ್ರತಿಮೆ, ಮತ್ತೆಲ್ಲೋ ಜೀಸಸ್ ಪ್ರತಿಮೆ, ಈಗ ಟಿಪ್ಪು ಸುಲ್ತಾನ್ ಪ್ರತಿಮೆ ಹೀಗೆ ಸಾಗುತ್ತಿರುವ ಈ ಟ್ರೆಂಡ್ ಮುಂದೆ ಪ್ರತಿ ರಾಜ್ಯ ಜಿಲ್ಲೆಗಳಲ್ಲೂ ಎತ್ತರದ ನಿರ್ಜೀವ ಪ್ರತಿಮೆಗಳ ನಿರ್ಮಾಣದ ಕಾರ್ಯದತ್ತ ಸಾಗಬಹುದೆ…….

ಮಸೀದಿ ಚರ್ಚು ಮಂದಿರ ಪ್ರತಿಮೆಗಳ ಸಂಖ್ಯೆ ಹೆಚ್ಚಾದಷ್ಟು ಅದರ ಶ್ರೇಷ್ಠತೆಯ ಅಮಲಿನಲ್ಲಿ ಇತರರ ಬಗ್ಗೆ ಅಸಹನೆಯೂ ಹೆಚ್ಚಾಗುತ್ತಿದೆ. ಆ ಕಟ್ಟಡಗಳ ಭವ್ಯತೆ – ಎತ್ತರ ಹೆಚ್ಚಾದಷ್ಟು ಭಕ್ತಿಯ ಜಾಗದಲ್ಲಿ ಆಡಂಬರ ಗೋಚರಿಸುತ್ತಿದೆ.

ಆ ವ್ಯಕ್ತಿಗಳ ನಿಜವಾದ ವಿಚಾರಗಳು ಆದರ್ಶಗಳು ಹಿನ್ನೆಲೆಗೆ ಸರಿದು ಕೇವಲ ಎತ್ತರ ಮತ್ತು ರಾಜಕೀಕರಣ ಜೊತೆಯಾಗತ್ತಿದೆ.

ಪ್ರತಿಮೆಗಳ ಎತ್ತರವೇ ನಾವು ಆ ಸಾಧಕರಿಗೆ ತೋರಿಸುವ ಬಹುದೊಡ್ಡ ಗೌರವ ಎಂಬ ಮೂಢನಂಬಿಕೆ ಶುರುವಾಗಿದೆ.

ಇದಕ್ಕಾಗಿ
ಮಾಡುತ್ತಿರುವ ನೂರಾರು ಕೋಟಿಗಳ ಹಣವೂ ಮತ್ತೊಂದು ಆಯಾಮದ ಆರ್ಥಿಕ ದುಂದು ವೆಚ್ಚದ ಚರ್ಚೆಗೆ ಕಾರಣವಾಗುತ್ತಿದೆ.

ಹಿಂದೆ ನಡೆದ ಪ್ರತಿಮೆಗಳ ಸ್ಥಾಪನೆಯ ದುರುಪಯೋಗದ ಉದಾಹರಣೆಯನ್ನು ಸಮರ್ಥನೆಗೆ ನೆಪವಾಗಿ ಬಳಸುತ್ತಾ ಇನ್ನೂ ಮುಂದುವರಿಸಿದರೆ ಇದೊಂದು ಕೆಟ್ಟ ಸಂಪ್ರದಾಯವಾಗಬಹುದು.

” ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ” ಎಂಬ ಬಸವಣ್ಣನವರ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ಅದ್ದೂರಿ ವೆಚ್ಚದ ಪ್ರತಿಮೆಗಳ ನಿರ್ಮಾಣಕ್ಕೆ ಪ್ರೋತ್ಸಾಹ, ಸಹಕಾರ ಮತ್ತು ಹಣಕಾಸಿನ ನೆರವು ನೀಡುವುದನ್ನು ಸರ್ಕಾರಗಳು ನಿಲ್ಲಿಸಬೇಕು.

ಇನ್ನೂ ಬಡತನ ಅಜ್ಞಾನ ಅಪೌಷ್ಟಿಕತೆ ರೈತರ ಆತ್ಮಹತ್ಯೆ ಹಸಿವಿನ ಸಾವಿನ ಪ್ರಕರಣಗಳು ನಡೆಯುತ್ತಿರುವ ನಮ್ಮ ಸಮಾಜದಲ್ಲಿ ಎತ್ತರದ ಪ್ರತಿಮೆಗಳ ಸ್ಥಾಪನೆ ಒಂದು ಹುಚ್ಚು ಹೆಚ್ಚಿಸುವ ಪ್ರಕ್ರಿಯೆ ಎಂದು ಕರೆಯಬಹುದು.

ಈ ಹಂತದಲ್ಲಿ ಎಲ್ಲರೂ ಎಚ್ಚೆತ್ತುಕೊಂಡರೆ ಉತ್ತಮ. ಇಲ್ಲದಿದ್ದರೆ ಮುಂದೆ ಅಂಬಾನಿ ಅದಾನಿಗಳು ಹಣ ಬಲದಿಂದ ತಮ್ಮ ಪ್ರತಿಮೆಗಳನ್ನು ಆಕಾಶದೆತ್ತರಕ್ಕೆ ಸ್ಥಾಪಿಸಿ ತಾವೇ ಭಾರತದ ಅತ್ಯಂತ ಜನಪ್ರಿಯ ಪ್ರಖ್ಯಾತ ವ್ಯಕ್ತಿಗಳು ಎಂದು ಕರೆದುಕೊಳ್ಳಬಹುದು………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……

error: No Copying!