ಗಂಗೊಳ್ಳಿ: ನವೆಂಬರ್ 12 (ಹಾಯ್ ಉಡುಪಿ ನ್ಯೂಸ್) ಕಾನೂನು ಬಾಹಿರವಾಗಿ , ಹಿಂಸಾತ್ಮಕವಾಗಿ ಜಾನುವಾರು ಗಳನ್ನು ಸಾಗಾಟ ಮಾಡುತ್ತಿದ್ದ ಮೂವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್ಐ ವಿನಯ್ ಕೊರ್ಲಹಳ್ಳಿಯವರು ದಿನಾಂಕ 11-11-2022 ರಂದು ಬೆಳಗ್ಗಿನ ಜಾವ ಕರ್ತವ್ಯ ದಲ್ಲಿದ್ದಾಗ ಅವರಿಗೆ KA-20-AA-6557ನೇ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಮೋವಾಡಿ ಕಡೆಯಿಂದ ಕುಂದಾಪುರ ಕಡೆಗೆ ಅಕ್ರಮವಾಗಿ ಸಾಗಿಸುತ್ತಿರುವುದಾಗಿ ಮಾಹಿತಿ ಬಂದಂತೆ ಹೊಸಾಡು ಗ್ರಾಮದ ಅರಾಟೆ ಬಸ್ ನಿಲ್ದಾಣದ ಬಳಿ ರಾ.ಹೆ.-66 ರ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುವ ಏಕ ಮುಖ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಮುಳ್ಳಿಕಟ್ಟೆ ಕಡೆಯಿಂದ ಒಂದು ಪಿಕಪ್ ವಾಹನ ಬರುವುದನ್ನು ನೋಡಿ ಪೊಲೀಸರು ನಿಲ್ಲಿಸಲು ಸೂಚನೆ ನೀಡಿದಾಗ ವಾಹನವನ್ನು ಅದರ ಚಾಲಕ ಸ್ವಲ್ಪ ಮುಂದೆ ಕೊಂಡು ಹೋಗಿ ನಿಲ್ಲಿಸಿದ್ದು, ವಾಹನದ ಬಳಿ ಹೋಗಿ ಪೊಲೀಸರು ನೋಡಿದಾಗ ಎದುರುಗಡೆ ಚಾಲಕ ಸೇರಿ 3 ಜನರಿದ್ದು, ಪಿಕಪ್ ವಾಹನದ ಹಿಂಬದಿಯಲ್ಲಿ ಪರಿಶೀಲಿಸಿದಾಗ 2 ದನಗಳಿದ್ದು, ದನಗಳ ಬಗ್ಗೆ ಪೊಲೀಸರು ವಿಚಾರಿಸಿದಾಗ ಮೋವಾಡಿಯಿಂದ ಕುಂದಾಪುರಕ್ಕೆ ದನಗಳನ್ನು ಸಾಗಿಸುತ್ತಿದ್ದೇವೆ ಎಂದು ವಾಹನದಲ್ಲಿದ್ದವರು ತಿಳಿಸಿದ್ದಾರೆ.
ದನಗಳನ್ನು ಸಾಗಿಸಲು ಹಾಗೂ ಖರೀದಿ ಮಾಡಿದ ಬಗ್ಗೆ ಪರವಾನಿಗೆ, ಕ್ರಯ ಚೀಟಿ ಹಾಗೂ ಇತರ ದಾಖಲಾತಿಗಳ ಬಗ್ಗೆ ಪೊಲೀಸರು ವಿಚಾರಿಸಿದಾಗ ಅವರಲ್ಲಿ ಯಾವುದೇ ಪರವಾನಿಗೆ/ದಾಖಲಾತಿ ಇಲ್ಲ ಎಂಬುದಾಗಿ ತಿಳಿಸಿದ ಕಾರಣ ವಾಹನದಲ್ಲಿದ್ದ 1)ಉಸ್ಮಾನ್, 2)ಜೋಸೆಫ್ ಡಿಸೋಜಾ ,3)ಶೇಖರ ಶೆಟ್ಟಿ ಎಂಬವರುಗಳನ್ನು ಪಿಕಪ್ ವಾಹನದಲ್ಲಿ 2 ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಮೇವು, ನೀರು ಇಡದೇ, ಯಾವುದೇ ಕಂಪಾರ್ಟ್‌ಮೆಂಟ್ ವ್ಯವಸ್ಥೆಯನ್ನು ಮಾಡದೇ ಹಗ್ಗದಿಂದ ಕಟ್ಟಿ ಸಾಗಾಟ ಮಾಡುತ್ತಿರುವ ಅಪರಾಧದ ಮೇಲೆ ಬಂಧಿಸಿ ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.