Spread the love

ದಲಿತರು ಹಾಗು ಅಸ್ಪೃಶ್ಯತೆಯ‌ನ್ನು ಅತ್ಯಂತ ಹೀನಾಯವಾಗಿ ಕೀಳು ಅಭಿರುಚಿಯಿಂದ ಕಾಂತಾರಾ ಚಿತ್ರದಲ್ಲಿ ತೋರಿಸಲಾಗಿದೆ ಎಂದು ದಲಿತರು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯವರಿಗೆ ಹಾಗು ಆಯುಕ್ತರಿಗೆ ಅದರ ವಿರುದ್ದ ಕಳೆದ ಎರಡು ದಿನದ ಹಿಂದೆ ದೂರನ್ನು
ಕೊಟ್ಟು ಪ್ರಕರಣವನ್ನು ದಾಖಲು ಮಾಡಿದ್ದಾರೆ.
ಆದರೆ ಈ ಪ್ರಕರಣದಿಂದ ದಲಿತರು ಯಾವಾಗಲೂ ಹಿಂದೆ ಉಳಿದಿದ್ದಾರೆ ಎಂದು ತೋರಿಸುತ್ತದೆ. ಏಕೆಂದರೆ ಈ ಕಾಂತಾರಾ ಚಿತ್ರವು 30 ನೇ ಸೆಪ್ಟಂಬರ್ 2022 ರಂದು ತೆರೆಗೆ ಬಂದಿದ್ದು ಈಗಾಗಾಲೇ ಸುಮಾರು ಒಂದು ತಿಂಗಳ ಮೇಲೆ ಆಗಿದೆ. ಆ ಚಿತ್ರ ಬಿಡುಗಡೆಯಾದ ದಿನವೇ ಎಚ್ಚೆತ್ತುಕೊಳ್ಳದ ನಮ್ಮ ದಲಿತರು ಕೊನೆಗಾದರೂ ಒಂದು ಪ್ರಕರಣವನ್ನು ಈಗಲಾದರೂ ದಾಖಲು ಮಾಡಿರುವುದು ಒಂದು ಖುಷಿಯ ವಿಚಾರವೇ ಹೌದು. ಆದರೆ ಈ ಚಿತ್ರ ಬಿಡುಗಡೆಯಾಗಿ ಇಷ್ಟು ದಿನಗಳಾದ ಮೇಲೆ ಹಾಗು‌ ಈ ಚಿತ್ರದ ಬಗ್ಗೆ ಎಲ್ಲಾ ವರ್ಗದ ಜನರು ಚಿತ್ರ ವಿಚಿತ್ರವಾಗಿ ಹೇಳಿಕೆಗಳನ್ನು ಮತ್ತು ಅದ್ಭುತ ಯಶಸ್ಸು, ಹಣವನ್ನು ಗಳಿಸಿ ಆದ ಮೇಲೆ ಬರಲು ಕಾರಣವೇನು ಎಂಬುದು ಈಗ ಪ್ರಶ್ನಾರ್ಹವಾಗಿದೆ.

ಈಗೀನ ಪ್ರಸ್ತುತ ಸನ್ನಿವೇಶವನ್ನು ಅವಲೋಕಿಸಿ ಹೇಳುವುದಾದರೆ ನಕಾರಾತ್ಮಕ ಪ್ರವೃತ್ತಿ
(ನೆಗೆಟಿವ್ ಟ್ರೆಂಡ್) ನ ಮೂಲಕ ಜನರಿಗೆ ಹೆಚ್ಚಿನ ಮಾಹಿತಿಯನ್ನು ಹರಡಿ ಅವರು ಆ ಸಿನಿಮಾ ಅಥವಾ ವಿಷಯದ ಬಗ್ಗೆ ಕುತೂಹಲ ಹೆಚ್ಚಿಸಿ
ಅವರನ್ನು ಸಿನಿಮಾ ಮಂದಿರಗಳಿಗೆ ಅಥವಾ ಇನ್ನಿತರ ವಿಷಯಗಳಿಗೆ ಸೆಳೆಯುವ ತಂತ್ರವನ್ನು ಬಳಸುವುದೇ ಈಗೀನ ಟ್ರೆಂಡ್ ಆಗಿದೆ.

ದಲಿತರು ಬಹುಷಃ ಇನ್ನೂ ಈ ಸಿನಿಮಾವನ್ನು ಹೆಚ್ಚಾಗಿ ನೋಡಿಲ್ಲ. ಅವರನ್ನೂ ಸಿನಿಮಾ ಮಂದಿರಗಳ ಕಡೆ ಸೆಳೆಯಬೇಕಾದರೆ ಅವರಿಗೊಂದು ಯಾವುದಾದರೊಂದು ರೀತಿಯಲ್ಲಿ ಕಿಚ್ಚು ಹತ್ತಿಸಲೇಬೇಕು‌. ಆಗ ಮಾತ್ರ ಹೆಚ್ಚಿನ ಜನರು ಸಿನಿಮಾ ಮಂದಿರಗಳಿಗೆ ತೆರಳಿದರೆ ಸಿನಿಮಾ ಮಂದಿರದವರಿಗೂ ನಿರ್ಮಾಪಕನಿಗೂ ಹಣದ ಸುರಿಮಳೆಯಾಗುತ್ತದೆ.
ಅಂತಹ ನೆಗೆಟಿವ್ ಟ್ರೆಂಡ್ ನ ಒಂದು ಹೊಸ ವಿಷಯವಾಗಿದೆ.
ಆದರೆ ಈಗ ದಲಿತರು ಈ ಕಾಂತಾರಾ ಸಿನಿಮಾದ ವಿರುದ್ದ ಮೆಟ್ಟಿಲೇರಿರುವುದು ಎಂಬದು ಒಳ್ಳೆಯ ವಿಷಯವಾಗಿದ್ದು ಇಷ್ಟು ದಿನ ಕಾಯುವ ಬದಲು ಮೊದಲೇ ಎಚ್ಚೆತ್ತುಕೊಂಡಿದ್ದರೆ ಯಾವಾಗಲೂ ಧರ್ಮ ದೇವರು ಜಾತಿ ಎಂದು ಮೇಲು ಕೀಳು ಎಂದು ಬೀಗುವ ಜಾತಿಯ ಮನಸ್ಸುಗಳಿಗೆ ಬಿಸಿ ಮುಟ್ಟಿಸಬಹುದಿತ್ತು ಅಲ್ಲವೇ?

ಈ ಕಾಂತಾರಾ ಚಿತ್ರ ಬಿಡುಗಡೆಯಾದ ಸುಮಾರು 22 ದಿನಗಳ ನಂತರ ಅಂದರೆ ಸೆಪ್ಟೆಂಬರ್ 21 ರಂದು ಧನಂಜಯ ಅಭಿನಯದ ಹೆಡ್ ಬುಷ್ ಚಿತ್ರ ಕರ್ನಾಟಕದಾದ್ಯಂತ ಬಿಡುಗಡೆಯಾಯಿತು.

ಈ ಹೆಡ್ ಬುಷ್ ಚಲನಚಿತ್ರ ಬಿಡುಗಡೆಯಾದ ದಿನವೇ ವೀರಾಗಾಸೆಯ ಕುಣಿತಕ್ಕೆ ಸಂಬಂಧಿಸಿದಂತೆ ವೀರಗಾಸೆ ಕುಣಿತವನ್ನು ಕೀಳಾಗಿ ತೋರಿಸಲಾಗಿದೆ ಎಂದು
ಇತರೆ ವರ್ಗದವರು ರಾಜ್ಯದಾದ್ಯಂತ ಹೋರಾಟ ರೂಪಿಸಿ ಕನ್ನಡ ಚಲನಚಿತ್ರ ಮಂಡಳಿಗೆ ದೂರು ನೀಡಿ ನಟ ನಿರ್ದೇಶಕ ನಿರ್ಮಾಪಕರನ್ನು ಹೊಣೆ ಮಾಡಿ ಒಂದೇ ದಿನದಲ್ಲಿ ಆ ದೃಶ್ಯಗಳಿಗೆ ಕತ್ತರಿ ಹಾಕಿಸಿ ಆ ನಟ ಸಮಾಜಮುಖಿ ಚಿಂತನೆಗಳನ್ನೇ ತನ್ನ ವೈಯಕ್ತಿಕ ಜೀವನದಲ್ಲೂ ಯಥಾವತ್ತಾಗಿ ಅಳವಡಿಸಿಕೊಂಡಿದ್ದರೂ ಅವರನ್ನು ಎಲ್ಲರ ಮುಂದೆ ಕ್ಷಮೆ ಕೋರುವಂತೆ ಮಾಡಿದರು.
ಆದರೆ ದಲಿತರು ಇದೇ ಕಾಂತಾರ ಚಿತ್ರ ಅಸ್ಪೃಶ್ಯತೆಯನ್ನೇ ತನ್ನ ಬಂಡವಾಳವಾಗಿ ಮಾಡಿಕೊಂಡು ಧರ್ಮ ದೇವರು ಜಾತಿಯ ಹೆಸರಿನಲ್ಲಿ ಮತ್ತೆ ಅದೇ ಅಸ್ಪೃಶ್ಯತೆಯನ್ನೇ ಪೋಷಿಸಿ ಬೆಳಸುವಂತಹ ವಿಚಾರವನ್ನು ಹೊಂದಿದ್ದರೂ ದಲಿತರು ಯಾರು ಪ್ರತಿಭಟನೆ ಮಾಡಲೇ ಇಲ್ಲ. ಅಂತಹ ಆಲೋಚನೆಯನ್ನು ಸಹ ದಲಿತರು ಯಾರು ಮಾಡಲಿಲ್ಲ. ಈ ಕಾಂತಾರಾ ಚಿತ್ರದಲ್ಲಿ ತೋರಿಸಿರುವಂತೆ ದೇವರು ಎಂಬ ಕಾರಣಕ್ಕೇ ಎಲ್ಲರ ಅಥವಾ ದಲಿತರ ಬಾಯಿಯನ್ನು ಮುಚ್ಚಿಸಿದಂತಾಯಿತೇ? ಅಥವಾ ಮುಚ್ಚಲಾಯಿತೇ?

ಜೊತೆಗೆ ಈ ನೆಗೆಟಿವ್ ಟ್ರೆಂಡ್ ಮೂಲಕವೇ ತನ್ನ ಚಿತ್ರಗಳನ್ನು ತೆಗೆದು ಜನರಿಗೆ ಅದನ್ನೇ ಹೊಸತನವೆಂದು ತೋರಿಸಿ
ಹಣ ಮಾಡಿಕೊಂಡ ಕನ್ನಡದ ನಟ ನಿರ್ದೇಶಕ ತನ್ನ ಚಿತ್ರಗಳಲ್ಲೇ ಗಣೇಶ ಹಾಗು ಇತರೇ ದೇವರುಗಳನ್ನು
ಯಾವ ಸೀಮೆ ಗಣೇಶ ನೀನು, ನಾನೇ ಗಾಡ್, ನಾನು ಹುಟ್ಟಿದ ಮೇಲೆಯೇ ನೀನು ಹುಟ್ಟಿದ್ದು
ನೀನು ಇಲ್ಲಿರುವುದು ಸರಿಯಲ್ಲ ಎಂದು ವಾಚಮಗೋಚರವಾಗಿ ಬೈದು ಬಾವಿಗೆ ಬಿಸಾಕಿದಾಗಾ
ಮತ್ತು ಪೂಜಾರಿಗಳನ್ನು ಅವಹೇಳನಾಕಾರಿಯಾಗಿ ಚಿತ್ರಿಸಿ ಅವರ ವೈಯಕ್ತಿಕ ಜೀವನದಲ್ಲಿ ಅಷ್ಟು ಅಸಹ್ಯವಾಗಿರುತ್ತಾರೆ ಎಂದು ತೋರಿಸಿದ ನಿರ್ದೇಶಕನನ್ನೂ ಎನನ್ನೂ ಕೇಳದೆ ಅವರನ್ನೂ ಕನ್ನಡ ಚಿತ್ರದ ಹೊಸ ಅಲೆಯ ನಿರ್ದೇಶಕ ಎಂದು ಬಿರುದಾಂಕಿತರಾದರು. ಆದರೆ ಅಂದು ಹಿಂದೂ ಧಾರ್ಮಿಕ ಸಂಕುಚಿತ ಮನಸ್ಸಿನವರಿಗೆ ಯಾವ ವಿಷಯವೂ ಹೊಳೆಯದೆ ತೆಪ್ಪಗಿದ್ದರು ಏಕೆಂದರೆ ಆ ನಿರ್ದೇಶಕ ತೆಗೆದ ಆ ಚಿತ್ರಗಳಲ್ಲಿ ನೆಗಟಿವ್ ಟ್ರೆಂಡ್ ಅತಿ ಹೆಚ್ಚಾಗಿ ರಂಜನೆಯನ್ನು ಕೊಟ್ಟಿತ್ತು ಹಾಗು ಅದು ಮುಖಕ್ಕೆ ನೇರ ನೇರವಾಗಿಯೇ ಹೊಡೆದಂತಿತ್ತು ಜೊತೆಗೆ ಆ ನಿರ್ದೇಶಕ ಮೇಲ್ವರ್ಗದವನು. ಅವನ ಆಲೋಚನೆಯನ್ನು ಹಾಗು ಅವನನ್ನು ಮುಟ್ಟುವ ಯಾವ ದೈರ್ಯವು ಯಾರಿಗೂ ಇರಲಿಲ್ಲ.

ಇದೇ ವರ್ಗಕ್ಕೆ ಸೇರಿದ ಮತ್ತೊಬ್ಬ ನಟ ತನ್ನ ಚಲನಚಿತ್ರದಲ್ಲಿ
ದಕ್ಷಿಣ ಕರ್ನಾಟಕದ ಮಲೇ ಮಹದೇಶ್ವರನ ಹುಲಿ ವೇಷವನ್ನು ಹಾಕಿ ನರ್ತಿಸುವಾಗ ಆ ಪಾತ್ರದಾರಿಯನ್ನು ಕೊಲೆ ಮಾಡಿದರೂ ತಪ್ಪನ್ನು ಗುರುತಿಸಲು ಸಾದ್ಯವೇ ಆಗಲಿಲ್ಲ ಹಾಗು ಅವರಿಗೆ ಅದು ತಪ್ಪು ಎಂದು ಎನಿಸಲೇ ಇಲ್ಲವೇ?
ಆದರೆ ಈಗ ಈ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಯ ಕುಣಿತವನ್ನು ಅತ್ಯಂತ ಹೀನಾಯವಾಗಿ ಚಿತ್ರಿಸಿದ್ದಾರೆ ಎಂದು
ವೀರಗಾಸೆ ಕುಣಿತದಲ್ಲಿನ‌ ಆ ದೃಶ್ಯದಲ್ಲಿ ಅಥವಾ ಆ ಪಾತ್ರದಾರಿಯ ತಪ್ಪನ್ನು ಹುಡುಕಿ ದೂರುವ ಮೂಲಕ ತೇಜೋವಧೆ ಮಾಡಿ ಕ್ಷಮೆ ಕೇಳುವಂತೆ ಮಾಡಿ ಆ ಚಿತ್ರದಿಂದ ಆ ವೀರಗಾಸೆ ಕುಣಿತದ ದೃಶ್ಯಕ್ಕೆ ಕತ್ತರಿ ಹಾಕಿಸಲಾಯಿತು.

ನಟ ಹಾಗು ನಿರ್ಮಾಪಕರಾಗಿದ್ದ ಧನಂಜಯ್ ಅವರು ಆ ವೀರಗಾಸೆ ಕುಣಿತವನ್ನು ಹೇಗೆ ತಮ್ಮ ಚಿತ್ರದಲ್ಲಿ ಬಳಸಿಕೊಂಡಿದ್ದೇವೆಂದು ಎಳೆ ಎಳೆಯಾಗಿ ಬಿಚ್ಚಿ ಹೇಳಿದರೂ ಒಪ್ಪದೇ ಆ ವೀರಗಾಸೆ ಕುಣಿತವನ್ನು ತೆಗೆದು ಹಾಕಿಸುವಲ್ಲಿ ಯಶಸ್ವಿಯಾದರು.

ಕನ್ನಡದ ಕ್ಷುದ್ರ ಮನಸ್ಸುಗಳು ಇದೇ ಕಾಂತಾರ ಚಿತ್ರದಲ್ಲಿ ನಾಯಕ ನಟ ಇತರ ವರ್ಗದವನಾಗಿದ್ದು ಅವನು ದಲಿತರ ಜಾತಿಯ ಪಾತ್ರ ಪೋಷಣೆ ಮಾಡಿ ಅದೇ ಅಸ್ಪೃಶ್ಯತೆಯ‌ನ್ನು ತಾನು ಆಚರಣೆ ಮಾಡುತ್ತಾ ಅದೇ ಅಸ್ಪೃಶ್ಯತೆಯೂ ಇನ್ನೂ ಜೀವಂತವಾಗಿದೆ ಹಾಗು ಜೀವಂತವಾಗಿರಲೇಬೇಕು ಎಂದು ಬಯಸಿ, ಈ ನಮ್ಮ ಕಾಂತಾರಾ ಚಿತ್ರ ನೋಡುವಾಗ ಯಾರು ಹೆಚ್ಚು ಶಬ್ದ ಮಾಡಬೇಡಿ ಓ ಎಂದು ಕೂಗಬೇಡಿ ದೈವ ಮುನಿಸಿಕೊಳ್ಳುತ್ತದೆ ಎಂಬ ಮೂಢನಂಬಿಕೆಯ‌ನ್ನು ಹರಡುವಾಗಲೂ ತೆಪ್ಪಗಿದ್ದ ಜನತೆ
ವೀರಗಾಸೆಯ ವಿರುದ್ದ ನಿಂತಿದ್ದಾರೆ.

ಇದೇ ಕಾಂತಾರ ಚಿತ್ರದಲ್ಲೇ ದಲಿತರನ್ನು ಹೀನಾಯವಾಗಿ ತೋರಿಸಿದ್ದರೂ, ಅಸ್ಪೃಶ್ಯತೆ ಆಚರಣೆಯನ್ನು ಬಲವಾಗಿಯೇ ಪ್ರತಿಪಾದಿಸಿದ್ದರೂ, ದಲಿತರನ್ನು ಮುಟ್ಟಿದೆ ಎಂಬ ಕಾರಣಕ್ಕೆ ಕೈ ತೊಳೆದು ಕೊಂಡು ಶ್ರೇಷ್ಠತೆ ಮೆರೆಯುವುದು, ದಲಿತನಿಗೆ ತೆಂಗಿನ ಕಾಯಿಯ ಚಿಪ್ಪಿನಲ್ಲಿ ನೀರು ಕೊಡುವುದು, ದಲಿತ ಕೀಳು ಎಂದು ಭಾವಿಸಿ ಮನೆಯಿಂದ ಹೊರಗಡೆ ಊಟ ಕೊಡುವ ದೃಶ್ಯ, ಮಹಿಳೆ ಆಸ್ತಿಯಲ್ಲಿ ಪಾಲು ಕೇಳುತ್ತಾಳೆ ಎಂದು ಸಾಯಿಸುವುದು, ತನ್ನ ಪತಿ ಮರಣಹೊಂದಿದ ಮಹಿಳೆಗೆ ನಾನಿದ್ದೇನೆ ಎಂಬ ಮೇಲ್ಜಾತಿಯವರು ದರ್ಪ ತೋರಿಸುವುದು, ದಲಿತರು ಅನ್ಯ ಜಾತಿಯ ಸೇವೆಗೆ ಮಾತ್ರ ಸೀಮಿತ ಎಂಬಂತಹ ಅತ್ಯಂತ ಹೀನ ಕೀಳು ದೃಶ್ಯಗಳನ್ನು ಈ ಕಾಂತಾರಾ ಚಿತ್ರದಲ್ಲಿ ಸೂಕ್ಷ್ಮವಾಗಿ ತೋರಿಸಿದ್ದಾರೆ. ಇದು ಪ್ರತಿನಿತ್ಯ ದಲಿತರ ಮೇಲಾಗುತ್ತಿರುವ ಹಲ್ಲೆ ದಬ್ಬಾಳಿಕೆ ದೌರ್ಜನ್ಯಗಳು ಜಾತಿ ತಾರತಮ್ಯ ಅಸ್ಪೃಶ್ಯತೆಯನ್ನು ಎತ್ತಿ ತೋರಿಸುವಂತಹ ದೃಶ್ಯಾವಳಿಯಿಂದಲೇ ಈ ಚಿತ್ರವೂ ಮೂಡಿಬಂದಿದೆ.
ಆದರೆ ಧನಂಜಯರವರ ಹೆಡ್ ಬುಷ್ ಗೆ ಅಂಟಿಕೊಂಡ ವೀರಾಗಾಸೆ ಕುಣಿತದ ವಿವಾದ ರಿಷಬ್ ಶೆಟ್ಟಿಯವರ ಅಸ್ಪೃಶ್ಯತೆಯ ಪಾತ್ರಕ್ಕೆ ಏಕೆ ಅಂಟಿಕೊಳ್ಳಲಿಲ್ಲ. ಧನಂಜಯ ಬಡವರ ಮಕ್ಳು ಬೆಳೆಯಬೇಕು ಕಣ್ರಾಯ್ಯಾ ಅಂತಾ ಹೇಳಿದ್ದೇ ತಪ್ಪೇ ಅಥವಾ ರಿಷವ್ ಶೆಟ್ಟಿ ಎಂದ ಶೆಟ್ಟರ ಹುಡುಗ ದಲಿತನ ಪಾತ್ರ ಮಾಡಿದ್ದಾನೆ? ಎಂಬ ಶ್ರೇಷ್ಟತೆಯೆ ಹುಚ್ಚೇ? ಯಾವುದು?
ಎಲ್ಲರಿಗೂ ಕಾಣಿಸುತ್ತಿರುವ ಪ್ರಕಾರ ಈ ಶ್ರೇಷ್ಠತೆಯೆ ಹುಚ್ಚು ಈ ಕಾಂತಾರದಲ್ಲಿನ ಅಸ್ಪೃಶ್ಯತೆಯನ್ನು ಆಚರಣೆ ಮಾಡಿ ಪ್ರೋತ್ಸಾಹ ಮಾಡಿದರೂ ತೆಪ್ಪಗಾಗಿಸಿದೆ ಎಂದರೂ ತಪ್ಪಾಗುವುದಿಲ್ಲ. ಅಲ್ಲವೇ?

ಈ ಚಲನಚಿತ್ರಗಳಲ್ಲಿ ಬರುವ ಸನ್ನಿವೇಶಗಳು ಕಾಲ್ಪನಿಕ ದೃಶ್ಯಗಳು ಹಾಗು ಇನ್ನಿತರ ವಿಷಯಗಳಿಗೆ ಕಡಿವಾಣ ಹಾಕಲು ಒಂದು ಸಂಸ್ಥೆಯೇ ಇದ್ದರೂ ಅಲ್ಲು ಕೂಡ ಪಟ್ಟಭದ್ರ ಹಿತಾಸಕ್ತಿಗಳ ಹುಚ್ಚಾಟದಿಂದಾಗಿ ಮೇಲ್ವರ್ಗದವರ ಕಿರಿಕ್, ಸಮಸ್ಯೆಗಳು ಅವರ ಕಿವಿಗೆ ತಲುಪುವುದೇ ಇಲ್ಲ. ಆದರೆ ಅದೇ ಧನಂಜಯ್ ಅಥವಾ ಅಹಿಂಸಾ ಚೇತನ್ ರಂತಹ ಉದಯೋನ್ಮುಖ ಹಾಗು ಸಾಮಾಜಿಕ ಕಳಕಳಿಯುಳ್ಳ ನಟರ ವಿರುದ್ಧ ಉದ್ದೇಶಪೂರ್ವಕವಾಗಿಯೇ ಕಾಣದ ಕೈಗಳ ಕೈವಾಡಗಳು ನಡೆಯುತ್ತವೆ ಎಂಬುದರಲ್ಲಿ ಸಂದೇಹವೇ ಇಲ್ಲ.
ಚಲನಚಿತ್ರದಲ್ಲಿನ ಒಂದು ದೃಶ್ಯದಲ್ಲಿ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಹೇಳಿ ಕರ್ನಾಟಕದಾದ್ಯಂತ ಹೋರಾಟ ರೂಪಿಸುವ ಯಾವುದೇ ಸಂಘ ಸಂಸ್ಥೆಗಳು, ಚಳುವಳಿಗಳ ನಾಯಕರು, ಪ್ರಗತಿಪರ ವೇದಿಕೆಗಳು ಧರ್ಮ ಜಾತಿ ದೇವರು ಹೆಸರಿನಲ್ಲಿ ಹುಟ್ಟಿಕೊಂಡಿರುವ ಹಲಾಲ್ಕೋರ ಸಂಘ ಸಂಸ್ಥೆಗಳಿಗೆ ದೇಶ, ರಾಜ್ಯ ಹಾಗು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿನಿತ್ಯವೂ ಅಸ್ಪೃಶ್ಯತೆ ಮಹಿಳೆಯರ ಮೇಲೆ ದಬ್ವಾಳಿಕೆ, ದೌರ್ಜನ್ಯ, ಅತ್ಯಾಚಾರ ಕೊಲೆಗಳು ಕೊನೆಗೆ ಮಠದ ಒಳಗಡೆ ಹಾಗು ಹೊರಗಡೆ ನಡೆಯುತ್ತಿರುವ ತಲೆಹಿಡುಕರ ವಿಷಯಗಳು ಯಾವುದು ಕಾಣುತ್ತಿಲ್ಲ. ಆದರೆ ಕೇವಲ ಕಾಲ್ಪನಿಕ ಆಧಾರದ ಮೇಲೆ ಚಿತ್ರೀಕರಣಗೊಳ್ಳುವ ಈ ಚಲನಚಿತ್ರಗಳ ಮೇಲೆ ಇಲ್ಲ ಸಲ್ಲದ ಹೇಳಿಕೆ ನೀಡಿ ಜನರ ವಾಸ್ತವ ಸಮಸ್ಯೆಗಳು ಹಾಗು ಸರ್ಕಾರದ ಬೇಜವಾಬ್ದಾರಿ ವಿಷಯಗಳ ಬಗ್ಗೆ ಚರ್ಚಿಸದೆ ಇಂತಹ ಕ್ಷುಲ್ಲಕ ವಿಷಯಗಳಿಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ.

ಇಂತಹ ಕ್ಷುಲ್ಲಕ ವಿಷಯಗಳಿಗೆ ಮನ್ನಣೆ ನೀಡದೇ ಸಿನಿಮಾವನ್ನು ಕೇವಲ ಸಿನಿಮಾವಾಗಿಯೇ ನೋಡುವ ಅದನ್ನು ಬೆಳೆಸುವ ಮನಸ್ಸುಗಳು ಒಂದುಗೂಡುವುದು ಯಾವಾಗ?
ನಮ್ಮ ದೇಶ ಹಾಗು ರಾಜ್ಯದಲ್ಲಿರುವ ಕೇವಲ ಧರ್ಮ ಹಾಗು ಜಾತಿಯ ಸಂಘಟನೆಗಳ ಮುಖಂಡರುಗಳು ನಾವು ಹೇಳಿದ್ದೇ ಸರಿ ಎಂದು ವಾದಿಸುವ ಮೂರ್ಖತನ ಬಿಡುವುದು ಯಾವಾಗ?

ಈ ರೀತಿಯಲ್ಲಿ ವಿಶ್ಲೇಷಣೆ ಮಾಡುವ ಅವಶ್ಯಕತೆ ಇಂದು ಅನಿವಾರ್ಯವಾಗಿದ್ದು
ಈ ಎಲ್ಲ ಪ್ರಕರಣಗಳ ಬೆನ್ನ ಹಿಂದೆ ಯಾರಿದ್ದಾರೆ ಎಂಬುದು ಸಹ ಮುಖ್ಯವಾಗುತ್ತದೆ‌. ದಲಿತರ ಅಥವಾ ಒಂದು ಜಾತಿಯ ಸಮುದಾಯದ ಪರವಾಗಿ ವಾದಿಸುವ ಜನನಾಯಕನೆಂದೆನಿಸಿಕೊಂಡ ಪ್ರತಿಯೊಬ್ಬನೂ ತನ್ನ ವಿಚಾರಗಳನ್ನು ದಲಿತರ ಪರವಾಗಿದೆಯಾ ಅಥವಾ ರಾಜಕೀಯ ಹಾಗು ಇನ್ನಿತರ ಕ್ಷೇತ್ರದಲ್ಲಿ ಬಳಕೆಯಾಗುವಂತಹ ದಲಿತ ಗಿಮಿಕ್ ಎಂಬ ಪರಿಭಾಷೆಯೇ ಎಂದು ತಿಳಿದುಕೊಳ್ಳಬೇಕಾದ ಅವಶ್ಯಕತೆ ಅತ್ಯಂತ ಜರೂರತ್ತಾಗಿದೆ ಎಂದು ಭಾವಿಸಬೇಕಾದ ಅನಿವಾರ್ಯತೆ ಇದೆ ಅಲ್ಲವೇ.?

  • ದಿವಾಕರ್ ಡಿ ಮಂಡ್ಯ
error: No Copying!