ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭ್ರಷರಾದರೆ ಖಾಸಗೀಕರಣದ ವ್ಯವಸ್ಥೆಯಲ್ಲಿ ಉದ್ದಿಮೆದಾರರೇ ಜನರನ್ನು ಪರೋಕ್ಷವಾಗಿ ಭ್ರಷ್ಟರನ್ನಾಗಿ ಮಾಡುತ್ತಾರೆ.
ಕೇವಲ ಒಂದೇ ದಿನದಲ್ಲಿ 7.6 ಲಕ್ಷ ಕೋಟಿ ಹಣ ಬಂಡವಾಳ ರೂಪದಲ್ಲಿ ಕರ್ನಾಟಕಕ್ಕೆ ಹರಿದು ಬಂದಿದೆ ಅಥವಾ ಆ ರೀತಿಯ ಒಪ್ಪಂದ ರಾಜ್ಯ ಸರ್ಕಾರ ಮತ್ತು ಉದ್ಯಮಿಗಳ ನಡುವೆ ಆಗಿದೆ…..
ಕರ್ನಾಟಕದ ಈಗಿನ ವಾರ್ಷಿಕ ಬಜೆಟ್ ಸುಮಾರು 2.6 ಲಕ್ಷ ಕೋಟಿ, ಕರ್ನಾಟಕದ ನಿವ್ವಳ ಆದಾಯ ಸುಮಾರು 1.5 ಲಕ್ಷ ಕೋಟಿ…..
ಈ ಅಂಕಿಅಂಶಗಳ ಆಧಾರದ ಮೇಲೆ ನೋಡಿದಾಗ 7.6 ಲಕ್ಷ ಮತ್ತು ಇನ್ನೊಂದು ದಿನದಲ್ಲಿ ಮತ್ತಷ್ಟು ಕೋಟಿ ಸೇರಿ 8/10 ಲಕ್ಷ ಕೋಟಿ ಹಣ ಮುಂದಿನ ವರ್ಷಗಳಲ್ಲಿ ಕರ್ನಾಟಕದ ನೆಲದಲ್ಲಿ ಹರಿಯಲಿದೆ. ಇದು ಅತ್ಯಂತ ದೊಡ್ಡ ಮೊತ್ತ ಎಂಬುದು ತಿಳಿದುಬರುತ್ತದೆ.
ಕೊರೋನಾ ನಂತರ ಕರ್ನಾಟಕ ವೇಗವಾಗಿ ಅಭಿವೃದ್ಧಿಯ ಪಥದಲ್ಲಿ ಚಲಿಸುತ್ತಿರುವ ಸೂಚನೆ ಎಂದು ಭಾವಿಸಬಹುದು.
ಕರ್ನಾಟಕದ ಹಿಂದಿನ ಸರ್ಕಾರಗಳ ಆಡಳಿತದ ಅವಧಿಯಲ್ಲಿ ಸಹ ಈ ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿತ್ತು…..
ಇಷ್ಟು ದೊಡ್ಡ ಮೊತ್ತದ ಹಣ ಹೂಡಿಕೆಯಾದಾಗ ಲಕ್ಷ ಲಕ್ಷ ಉದ್ಯೋಗ, ಜನರ ಆದಾಯದಲ್ಲಿ ಗಣನೀಯ ಏರಿಕೆ, ಅವರ ಜೀವನಮಟ್ಟದಲ್ಲಿ ಸುಧಾರಣೆ, ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಅತ್ಯುತ್ತಮ ಬೆಳವಣಿಗೆ, ನೆಮ್ಮದಿಯ ಮಟ್ಟದಲ್ಲಿ ಸಂತೋಷ ಸಮಾಧಾನ, ಪರಿಸರದಲ್ಲಿ ಆರೋಗ್ಯಕರ ಬದಲಾವಣೆ ಎಲ್ಲವೂ ಸಾಧ್ಯವಾಗಿರಬಹುದು ಅಥವಾ ಸಾಧ್ಯವಾಗುತ್ತದೆ ಎಂಬುದು ಎಲ್ಲರ ಸಹಜ ನಿರೀಕ್ಷೆ……
ಇದರಲ್ಲಿ ಸ್ವಲ್ಪ ಭಾಗ ಮಾತ್ರ ನಿಜ. ಉಳಿದದ್ದು ಅದಕ್ಕೆ ವಿರುದ್ಧವಾದ ಪ್ರಕ್ರಿಯೆಗಳು ನಡೆಯುತ್ತವೆ.
ಖಾಸಗೀಕರಣದ ನಿಜವಾದ ಮುಖಗಳು ಮತ್ತು ಸರ್ಕಾರಗಳ ಗೊಸುಂಬೆತನ ಬಯಲಾಗುವುದೇ ಇಲ್ಲಿ.
ಮೊದಲನೆಯದಾಗಿದೆ,
ಈ ಉದ್ಯಮಿಗಳು ಬಂಡವಾಳ ಹೂಡಲು ಆಯ್ಕೆ ಮಾಡಿಕೊಳ್ಳುವ ಉದ್ಯಮ ಸಹಜವಾಗಿ ಅವರಿಗೆ ಭವಿಷ್ಯದಲ್ಲಿ ಅತಿಹೆಚ್ಚು ಲಾಭ ತರುವಂತಿರಬೇಕು. ಇಲ್ಲಿ ಸಾಮಾಜಿಕ ಕಳಕಳಿ ಇರುವುದೇ ಇಲ್ಲ. ವ್ಯಾಪಾರದ ದೃಷ್ಟಿಯಿಂದ ಇದು ಸರಿಯಾದ ನಿರ್ಧಾರ ಎಂದೇ ಭಾವಿಸೋಣ.
ಎರಡನೆಯದಾಗಿ,
ಈಗ ನಡೆದಿರುವುದು ಕೇವಲ ಹಣ ಮೌಲ್ಯದ ಮೇಲ್ನೋಟದ ಒಪ್ಪಂದ ಮಾತ್ರ. ಮುಂದೆ ಈ ಯೋಜನೆಯ ಡಿಪಿಆರ್ ಅಂದರೆ ಸಂಪೂರ್ಣ ಯೋಜನಾ ವರದಿ ಸಲ್ಲಿಸುವಾಗ ಸರ್ಕಾರದಿಂದ ಸಾಕಷ್ಟು ಕೊಡುಗೆಗಳನ್ನು ನಿರೀಕ್ಷಿಸುತ್ತಾರೆ. ಕೆಲವು ಪ್ರಾಯೋಗಿಕ ಮತ್ತೆ ಕೆಲವು ದುರಾಸೆಯಿಂದ ಅತಿಹೆಚ್ಚು ಬೇಡಿಕೆ ಸರ್ಕಾರದ ಮುಂದಿಡುತ್ತಾರೆ.
ಮೂರನೆಯದಾಗಿ,
ಈ ಬೇಡಿಕೆಗಳ ಅರ್ಜಿ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದ್ದಂತೆ ದೊಡ್ಡ ಮಟ್ಟದ ಪ್ರಭಾವಶಾಲಿ ಏಜೆಂಟರ ಪ್ರವೇಶವಾಗುತ್ತದೆ. ಕಂಪನಿ ಮತ್ತು ಸರ್ಕಾರದ ಮಧ್ಯೆ ಇವರು ಅನಧಿಕೃತವಾಗಿ ಫೈಲ್ ಹಿಂದೆ ಸುತ್ತುತ್ತಾರೆ. ಇದನ್ನು ಸಂಬಂಧಪಟ್ಟವರು ನಿರಾಕರಿಸುತ್ತಾರೆ ಮತ್ತು ಇದಕ್ಕೆ ಯಾವುದೇ ಸಾಕ್ಷ್ಯ ಇರುವುದಿಲ್ಲ. ಆದರೆ ಇದು ವಾಸ್ತವದಲ್ಲಿ ಅಗೋಚರವಾಗಿ ನಡೆಯುತ್ತದೆ.
ನಾಲ್ಕನೆಯದಾಗಿ,
ಈ ಹಂತದಲ್ಲಿ ಮೇಲ್ದರ್ಜೆಯ ಅಧಿಕಾರಿ ವರ್ಗ ಪ್ರಮುಖ ಪಾತ್ರ ವಹಿಸುತ್ತದೆ. ಇಡೀ ಯೋಜನೆಯ ಬೇಡಿಕೆ ಪೂರೈಕೆಯ ಸಾಧ್ಯತೆಗಳು, ಕಾನೂನಾತ್ಮಕ ಸಮಸ್ಯೆಗಳು ಎಲ್ಲವೂ ಪರಿಶೀಲನೆಗೆ ಒಳಪಡುತ್ತದೆ ಮತ್ತು ಅಧಿಕಾರಿಗಳ ವಿವೇಚನೆಗೆ ಒಳಪಟ್ಟಿರುತ್ತದೆ.
ಐದನೆಯದಾಗಿ,
ಈ ಹಂತದಲ್ಲಿಯೇ ಭ್ರಷ್ಟಾಚಾರದ ಬಾಗಿಲು ತೆರೆಯುತ್ತದೆ ಮತ್ತು ಯೋಜನೆ ನಿಧಾನವಾಗುತ್ತಾ ಸಾಗುತ್ತದೆ. ಹಾಗೆಯೇ ಕೆಲವೊಂದು ಸಂದರ್ಭಗಳಲ್ಲಿ ಒಂದು ವೇಳೆ ಉದ್ಯಮಿಗಳಿಗೆ ಲಾಭದ ಕಾರ್ಯಾಚರಣೆಯ ದೃಷ್ಟಿಯಿಂದ ತೀರಾ ಬೇಗ ಯೋಜನೆ ಜಾರಿಗೊಳಿಸುವ ಆಸಕ್ತಿ ಇದ್ದರೆ ಅವರ ಹಣಕಾಸಿನ ಸಾಮರ್ಥ್ಯದ ಮೇಲೆ ಲಂಚದ ಹಣವನ್ನು ಸರಿಯಾದ ವ್ಯಕ್ತಿಗೆ ಸರಿಯಾದ ಸಮಯದಲ್ಲಿ ನೀಡಿ ಅನುಮತಿಗೆ ಇರಬಹುದಾದ ಎಲ್ಲಾ ತಾಂತ್ರಿಕ ತೊಂದರೆಗಳನ್ನು ಬೇಗ ನಿವಾರಿಸಿಕೊಂಡು ಯೋಜನೆಯನ್ನು ಪ್ರಾರಂಭಿಸಲು ಬಹುದು. ಇದು ಕೆಲವೇ ಕಂಪನಿಗಳಿಗೆ ಮಾತ್ರ ಸಾಧ್ಯ. ಅದಕ್ಕೂ ಸಾಕಷ್ಟು ಅನುಭವ ಮತ್ತು ರಾಜಕೀಯ ಪ್ರಬಲ ಪ್ರಭಾವ ಹೊಂದಿರಬೇಕಾಗುತ್ತದೆ.
ಆರನೆಯದಾಗಿ,
ಕರ್ನಾಟಕದ ಚುನಾವಣಾ ರಾಜಕೀಯ ಇತಿಹಾಸದಲ್ಲಿ ಕಳೆದ 40 ವರ್ಷಗಳಿಂದ ಪ್ರತಿ ಚುನಾವಣೆಯಲ್ಲಿ ಸರ್ಕಾರಗಳು ಬದಲಾಗುತ್ತಲೇ ಇದೆ. ಅಂದರೆ ಇತಿಹಾಸದ ಪ್ರಕಾರ ಈ ಬಾರಿ ಸರ್ಕಾರ ಬದಲಾಗುವ ಸಾಧ್ಯತೆ ಇದೆ. ಈ ಮಾಹಿತಿ ಮತ್ತು ಆತಂಕ ಈ ಉದ್ಯಮಿಗಳಿಗೂ ಇರುತ್ತದೆ. ನಾವು ಸರ್ಕಾರವೇ ಬೇರೆ ಪಕ್ಷವೇ ಬೇರೆ ಎಂದು ವಾದ ಮಾಡಬಹುದಾದರೂ ಪಕ್ಷ ಬದಲಾವಣೆಯೊಂದಿಗೆ ಸರ್ಕಾರದ ಆಡಳಿತ ಕ್ರಮವೂ ಬದಲಾಗುತ್ತದೆ. ಆಗ ಮತ್ತೆ ಭ್ರಷ್ಟ ಹಣ ನೀಡಬೇಕಾಗುತ್ತದೆ ಮತ್ತು ಈ ಒಪ್ಪಂದವೇ ರದ್ದಾಗಬಹುದು ಅಥವಾ ನಿರ್ಲಕ್ಷ್ಯಕ್ಕೆ ಒಳಗಾಗಬಹುದು.
ಏಳನೆಯದಾಗಿ,
ಇದು ತಾಂತ್ರಿಕ ಅಡಚಣೆಗಳು. ಇದನ್ನು ಮೀರಿ ಈ ಖಾಸಗಿ ಉದ್ಯಮಿಗಳು ಇಷ್ಟೊಂದು ಬೃಹತ್ ಪ್ರಮಾಣದ ಹಣ ತೊಡಗಿಸಿ ಈ ನೆಲ ಈ ಜಲ ಈ ಮಣ್ಣು ಈ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಲಾಭದ ಯೋಚನೆ ಮಾಡುತ್ತಾರೆ ಎಂಬುದು ಅವಾಸ್ತವ. ಅವರು ನೇರವಾಗಿ ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲಗಳನ್ನು ವಿವೇಚನೆಯಿಲ್ಲದೆ ಬಳಸಿಕೊಳ್ಳುತ್ತಾರೆ ಎಂಬುದು ಈಗಾಗಲೇ ದೃಢಪಟ್ಟಿದೆ. ತನ್ನ ಬಂಡವಾಳಕ್ಕೆ ಎಷ್ಟು ಗರಿಷ್ಠ ಪ್ರಮಾಣದ ಲಾಭವನ್ನು ಗಳಿಸಬಹುದು ಎಂಬುದೇ ಅವರ ಆಧ್ಯತೆಯಾಗಿರುತ್ತದೆ. ಅದರ ಪರಿಣಾಮ ಗಾಳಿ ನೀರು ಆಹಾರ ಆಡಳಿತ ಮನುಷ್ಯ ಎಲ್ಲರೂ ನಿಧಾನವಾಗಿ ಮಲಿನವಾಗುತ್ತಾ ಹೋಗುತ್ತಾರೆ. ಒಂದು ವೇಳೆ ಇದೇ ಉದ್ಯಮಗಳನ್ನು ಸರ್ಕಾರಗಳ ನಿರ್ವಹಿಸಿದರೆ ಭ್ರಷ್ಟಾಚಾರ ಹೆಚ್ಚಾಗಬಹುದು ಆದರೆ ಮಾಲಿನ್ಯ ಖಂಡಿತ ನಿಯಂತ್ರಣದಲ್ಲಿರುತ್ತದೆ.
ಎಂಟನೆಯದಾಗಿ,
ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಪ್ರಗತಿ ಮಾತ್ರವಲ್ಲ. ಆರ್ಥಿಕತೆ ಅಭಿವೃದ್ಧಿಯ ಒಂದು ಭಾಗ ಮಾತ್ರ. ಎಲ್ಲಾ ಜನರ ಜೀವನಮಟ್ಟ ಸುಧಾರಣೆ ಮತ್ತು ಸಂತೃಪ್ತಿಯೇ ನಿಜವಾದ ಅಭಿವೃದ್ಧಿ. ಅದನ್ನು ಸಾಧಿಸಲು ಒಂದು ಮಿತಿಗೆ ಒಳಪಟ್ಟು ಮಾತ್ರ ಪ್ರಕೃತಿಯನ್ನು ಉಪಯೋಗಿಸಿಕೊಳ್ಳಬೇಕು. ಇಲ್ಲದಿದ್ದರೆ ಅಭಿವೃದ್ಧಿ ವಿನಾಶಕಾರಿ ಎಂಬುದು ಈಗಾಗಲೇ ಸಾಬೀತಾಗಿದೆ. ಖಾಸಗಿ ಕಂಪನಿಗಳು ಉದ್ಯೋಗ ಸೃಷ್ಟಿಯ ಹೆಸರಿನಲ್ಲಿ ಪರೋಕ್ಷ ಮತ್ತು ಆಧುನಿಕ ಜೀತದಾಳುಗಳನ್ನು ಸೃಷ್ಡಿಸುವುದೇ ಹೆಚ್ಚು.
ಇಡೀ ಕುಟುಂಬಗಳೇ ಇವರಿಗೆ ಗುಲಾಮರಾಗಬೇಕಾದ ಪರಿಸ್ಥಿತಿ ನಿರ್ಮಿಸುತ್ತಾರೆ.
ಕೊನೆಯದಾಗಿ,
ಯಾವುದೇ ಖಾಸಗಿ ಕಂಪನಿಗಳು ಎಲ್ಲಾ ಕೆರೆಗಳ ಪುನರ್ ನವೀಕರಣ, ಇಡೀ ಸರ್ಕಾರಿ ಆಸ್ಪತ್ರೆ ಅಥವಾ ಶಾಲೆಗಳ ಸಂಪೂರ್ಣ ಆಧುನೀಕರಣ, ಕಾಡುಗಳ ಬೆಳವಣಿಗೆ ಮತ್ತು ಸಂರಕ್ಷಣೆ, ಕೃಷಿ ಉತ್ಪನ್ನಗಳ ಸಂಗ್ರಹ ಮತ್ತು ಸಾಗಾಣಿಕೆ,
ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಜಾಗೃತಿ,
ಚುನಾವಣಾ ಅಕ್ರಮಗಳ ತಡೆ ಮತ್ತು ಮತದಾರರ ಪ್ರಬುದ್ಧತೆ ಹೆಚ್ಚಿಸುವ ಕಾರ್ಯಕ್ರಮ, ಜಾತಿ ಪದ್ದತಿಯ ನಾಶಕ್ಕಾಗಿ ಕೆಲವು ಯೋಜನೆಗಳು ಮುಂತಾದ ಸಾಮಾಜಿಕ ಜವಾಬ್ದಾರಿಗಳನ್ನು ಇಡಿಯಾಗಿ ನಿರ್ವಹಿಸುವುದಿಲ್ಲ. ಭ್ರಷ್ಟ ಸರ್ಕಾರ ಮತ್ತು ವಿಭಜಿತ ಮಧ್ಯಮ ವರ್ಗವೇ ಅವರಿಗೆ ಹೆಚ್ಚು ಲಾಭ ಗಳಿಸಿಕೊಡುತ್ತದೆ.
ಮಾನವೀಯ ಮೌಲ್ಯಗಳಿಲ್ಲದ ಎಲ್ಲಾ ಅಭಿವೃದ್ಧಿ ವಿನಾಶಕಾರಿ. ಆದ್ದರಿಂದಲೇ ಬಂಡವಾಳ ಹೂಡಿಕೆದಾರರನ್ನು ಸರ್ಕಾರಗಳು ಸಂಪೂರ್ಣ ನಿಯಂತ್ರಿಸಬೇಕೆ ಹೊರತು ಸರ್ಕಾರವೇ ಅವರ ನಿಯಂತ್ರಣಕ್ಕೆ ಒಳಪಡಬಾರದು…………
ಆ ಕ್ರಾಂತಿಕಾರಿ ದಿನಗಳ ನಿರೀಕ್ಷೆಯಲ್ಲಿ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……