ಶಿವಮೊಗ್ಗ: ನವೆಂಬರ್ 5 (ಹಾಯ್ ಉಡುಪಿ ನ್ಯೂಸ್) ನಗರದಲ್ಲಿ ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಲ್ಲೆಕೋರರನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ಮಾಡಿದ ಆರೋಪಿಯ ಕಾಲಿಗೆ ದೊಡ್ಡಪೇಟೆ ಠಾಣೆ ಸಬ್ ಇನ್ ಸ್ಪೆಕ್ಟರ್ ವಸಂತ್ ಶುಕ್ರವಾರ ತಡರಾತ್ರಿ ಗುಂಡು ಹೊಡೆದಿದ್ದಾರೆ.
ನಗರದ ಕುಂಸಿ ಠಾಣೆ ಸಮೀಪದ ನಿವಾಸಿ ಅಸ್ಲಂ (20) ಪೊಲೀಸರ ಗುಂಡೇಟಿನಿಂದ ಗಾಯಗೊಂಡವನಾಗಿದ್ದು ; ಈತ ಕ್ರಿಮಿನಲ್ ಹಿನ್ನೆಲೆ ಉಳ್ಳವನಾಗಿದ್ದು ಈಗಾಗಲೇ ಈತನ ಮೇಲೆ 9 ಪ್ರಕರಣಗಳು ದಾಖಲಾಗಿವೆ. ಕೊಲೆ ಯತ್ನ ಪ್ರಕರಣಗಳೂ ಇವೆ ಎನ್ನಲಾಗಿದೆ.
ನಗರದಲ್ಲಿ ಐದು ದಿನಗಳ ಹಿಂದೆ ಅಕ್ಟೋಬರ್ 30 ರಂದು ರಾತ್ರಿ ಬಿ.ಹೆಚ್ ರಸ್ತೆ ಯಲ್ಲಿ ವಾಕಿಂಗ್ ಮಾಡುತ್ತಿದ್ದ ಅಶೋಕ್ ಪ್ರಭು ಎಂಬುವವರಿಗೆ ರಾಯಲ್ ಆರ್ಕಿಡ್ ಹೋಟೆಲ್ ಬಳಿ ಅಡ್ಡಹಾಕಿದ್ದ ನಾಲ್ವರು ಯುವಕರು ಅವರ ಮೇಲೆ ಮಾರಕಾಯುಧದಿಂದ ಅವರ ಎಡ ಗಲ್ಲದ ಮೇಲೆ ಹಲ್ಲೆ ನಡೆಸಿ ಅವರ ಬಳಿ ಇದ್ದ ಮೊಬೈಲ್ ಫೋನ್ ಕಿತ್ತುಕೊಳ್ಳಲು ಮುಂದಾಗಿದ್ದರು. ಈ ವೇಳೆ ಅಶೋಕ್ ಪ್ರಭು ಪಕ್ಕದ ವಾಣಿಜ್ಯ ಸಂಕೀರ್ಣದೊಳಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಘಟನೆಯ ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಶುಕ್ರವಾರ ಸಾಗರ ಪಟ್ಟಣದ ಹೊಸನಗರ ರಸ್ತೆ ನಿವಾಸಿ ಆಸಿಫ್ ಯಾನೆ ಚೆಲ್ಲಿ (26) ಎಂಬುವವನನ್ನು ಬಂಧಿಸಿದ್ದರು.ಈತನೂ ಕ್ರಿಮಿನಲ್ ಹಿನ್ನೆಲೆ ಉಳ್ಳವನಾಗಿದ್ದು ಈತನ ಮೇಲೆ ಈ ಹಿಂದೆ ಎರಡು ಪ್ರಕರಣಗಳು ದಾಖಲಾಗಿವೆ.
ಆಸಿಫ್ ನೀಡಿದ ಮಾಹಿತಿ ಆಧರಿಸಿ ಇಂದು ಮುಂಜಾನೆ ಪಿಎಸ್ಐ ವಸಂತ್ ಅವರಿಗೆ ಮತ್ತೊಬ್ಬ ಆರೋಪಿ ಅಸ್ಲಾಂ ಪುರಲೆ ಬಳಿಯ ನಿರ್ಮಾಣ ಹಂತದ ಲೇಔಟ್ ನಲ್ಲಿ ಅಡಗಿಕೊಂಡಿರುವ ಮಾಹಿತಿ ಲಭಿಸಿತ್ತು.ಪೊಲೀಸರ ತಂಡ ಅಸ್ಲಂನನ್ನು ಬಂಧಿಸಲು ತೆರಳಿದ್ದು, ಈ ವೇಳೆ ಆತ ಚಾಕುವಿನಿಂದ ದೊಡ್ಡ ಪೇಟೆ ಠಾಣೆಯ ರಮೇಶ್ ಎಂಬುವವರ ಮೇಲೆ ಹಲ್ಲೆ ಮಾಡಿ ಓಡಿ ಹೋಗಲು ಮುಂದಾಗಿದ್ದು, ಆಗ ಸಿಬ್ಬಂದಿಯ ರಕ್ಷಣೆಗೆ ಹಾಗೂ ಆತ್ಮ ರಕ್ಷಣೆಗಾಗಿ ಪಿಎಸ್ ಐ ವಸಂತ್ ಅಸ್ಲಂ ನ ಎಡ ಕಾಲಿಗೆ ಗುಂಡು ಹೊಡೆದಿದ್ದಾರೆ ಎಂದು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ವಿಚಾರಿಸಿದ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾಧ್ಯಮ ಗಳಿಗೆ ತಿಳಿಸಿದ್ದಾರೆ.