ಬೆಂಗಳೂರು: ನವೆಂಬರ್ 4 (ಹಾಯ್ ಉಡುಪಿ ನ್ಯೂಸ್) ತುಮಕೂರಿನ ಭಾರತಿ ನಗರದ ನಿವಾಸಿ ವಿಧವೆ, ಅನಾಥೆ,ಬಾಣಂತಿ ಕಸ್ತೂರಿ ಹಾಗೂ ಅವಳ ನವಜಾತ ಅವಳಿ ಶಿಶುಗಳು ಮೃತಪಟ್ಟಿರುವ ದುರಂತದ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ರಾಜೀನಾಮೆ ನೀಡಬೇಕು, ರಾಜೀನಾಮೆ ಕೊಡದಿದ್ದರೆ ಮುಖ್ಯಮಂತ್ರಿಯೇ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ,ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ತುಮಕೂರಿನಲ್ಲಿ ಕರುಳು ಹಿಂಡುವಂತಹ, ರಾಜ್ಯವೇ ತಲೆ ತಗ್ಗಿಸುವ ಘಟನೆ ನಡೆದಿದೆ . ತುಂಬು ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಲು ನಿರಾಕರಿಸಿ ಆಕೆಯ ಹಾಗೂ ಆಕೆಯ ಅವಳಿ ಮಕ್ಕಳ ಸಾವಿಗೆ ಕಾರಣರಾಗಿದ್ದಾರೆ. ಮಗುವೊಂದು ತಂದೆ,ತಾಯಿ ಇಲ್ಲದೆ ಅನಾಥವಾಗುವಂತೆ ಮಾಡಿದ್ದಾರೆ ಎಂದಿದ್ದಾರೆ.
ಸ್ವತಃ ವೈದ್ಯರೆಂದು ಹೇಳಿಕೊಳ್ಳುವ ಸಚಿವ ಸುಧಾಕರ್ ಉಸ್ತುವಾರಿಯಲ್ಲಿ ಆರೋಗ್ಯ ಇಲಾಖೆ ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವುದಕ್ಕೆ ಈ ಸಾವುಗಳೇ ಸಾಕ್ಷಿ. ಆರೋಗ್ಯ ಇಲಾಖೆಯಲ್ಲಿ ಮಾನವೀಯತೆ ಇಲ್ಲದ ವೈದ್ಯ ರುಗಳಿಂದಾಗಿ ಅಮಾಯಕರ ಬಲಿಯಾಗಿದೆ , ಸರ್ಕಾರವೇ ಮಾಡಿದ ಕೊಲೆಗಳಿವು. ಅನಾಥವಾಗಿರುವ ಮಗುವಿನ ಪಾಲನೆ ಯ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.