ಆಯಸ್ಸು…….
ಬದುಕಿನ ಸಮಯ……
ಸರಳ ಸಹಜ ಸಾಮಾನ್ಯ ಸಾರ್ವತ್ರಿಕ ವಿಷಯಗಳಿಗೆ ಅನ್ವಯಿಸಿ ಮಾತ್ರ,………
ನೀವು ಮಹಾನ್ ದೈವ ಭಕ್ತರಾಗಿದ್ದರೂ ನಿಮ್ಮ ಆಯಸ್ಸು ಸುಮಾರು 60 ದಿಂದ 80 ಮಾತ್ರ,
ನೀವು ಉಗ್ರ ದ್ಯೆವವಿರೋಧಿಯಾಗಿದ್ದರೂ ನಿಮ್ಮ ಆಯಸ್ಸು ಸುಮಾರು ಇಷ್ಟೆ,
ನೀವು ಅತ್ಯುಗ್ರ ಯೋಗ ಧ್ಯಾನದ ಮಹರ್ಷಿಗಳಾಗಿದ್ದರೂ ಬದುಕುವುದು ಇಷ್ಟೆ,
ನೀವು ಲಫಂಗ, ದುಷ್ಟ ಸೋಮಾರಿಯಾಗಿದ್ದರೂ ನಿಮ್ಮ ಆಯಸ್ಸು ಇಷ್ಟೆ,
ನೀವು ಗಿಡಮೂಲಿಕೆ, ಸಸ್ಯಾಹಾರ ಮುಂತಾದ ಆಯುರ್ವೇದದ ರೀತಿಯಲ್ಲಿ ಆಹಾರ ಸೇವಿಸಿದರೂ ಅಷ್ಟೆ,
ನೀವು ಸಿಕ್ಕಸಿಕ್ಕ ಪ್ರಾಣಿ, ಪಕ್ಷಿ , ಮಾಂಸಾಹಾರ ತಿಂದರೂ ಅಷ್ಟೆ,
ನೀವು ವಿಶ್ವದ ಬಹುದೊಡ್ಡ ಶ್ರೀಮಂತರಾದರೂ ಅಷ್ಟೆ,
ನೀವು ಬೀದಿಯಲ್ಲಿ ಅಲೆದು ತಿನ್ನುವ ಭಿಕ್ಷುಕರಾದರೂ ಅಷ್ಟೆ.
ನೀವು ಪ್ರಖ್ಯಾತ, ಪ್ರಕಾಂಡ, ಸಕಲಕಲಾವಲ್ಲಭ ಮೇಧಾವಿಗಳಾದರೂ ಅಷ್ಟೆ,
ನೀವು ನನ್ನಂತ ದಡ್ಡ, ಅಪ್ರಯೋಜಕರಾದರೂ ಬದುಕುವುದು ಅಷ್ಟೆ .
ನೀವು ಯಾವ ಧರ್ಮ, ಜಾತಿ, ಭಾಷೆ, ಲಿಂಗ, ಪ್ರದೇಶದವರಾದರೂ ಅಷ್ಟೆ,
ನೀವು ಮನುಷ್ಯನ ಎಲ್ಲಾ ಖಾಯಿಲೆಗಳನ್ನು ಗುಣಪಡಿಸುವ ವೈದ್ಯರಾದರೂ ಅಷ್ಟೆ.
ನೀವು ಬುದ್ದ, ಮಹಾವೀರ, ಯೇಸು, ಪ್ಯೆಗಂಬರ್, ಗುರುನಾನಕ್, ಬಸವ, ಗಾಂಧಿ, ಅಂಬೇಡ್ಕರ್ ಆಗಿದ್ದರೂ ಅಷ್ಟೆ,
ನೀವು ಮೋದಿ, ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ , ಮಮತ, ಮಾಯಾವತಿ ಆಗಿದ್ದರೂ ಅಷ್ಟೆ,.
ನೀವು ಯಂಕ, ಸೀನ, ಲಕ್ಷ್ಮೀ, ಕಮಲ, ನಿರ್ಮಲ ಆಗಿದ್ದರೂ ಅಷ್ಟೆ,
ನೀವು ಒಮ್ಮೆಯೂ ಸುಳ್ಳಾಡದ, ಮೋಸಮಾಡದ, ಅತ್ಯಂತ ಕರುಣಾಮಯಿ ಆಗಿದ್ದರೂ ಅಷ್ಟೆ,
ನೀವು ಭ್ರಷ್ಟ, ವಂಚನೆ, ಸುಳ್ಳಗಳನ್ನೇ ಜೀವನ ಮಾಡಿಕೊಂಡಿದ್ದರೂ ಅಷ್ಟೆ,
ಇದೇ ಸೃಷ್ಟಿಯ ಅದ್ಭುತ, ಆಶ್ಚರ್ಯಕರ ನಿಯಮ,
ಹುಟ್ಟು ಸಾವಿನಲ್ಲಿ ಸೃಷ್ಟಿ ಮಾಡಿರುವ ಸಮಾನತೆ ಇದು.
ಹಾಗಾದರೆ ಜೀವನ ಮಟ್ಟಗಳಲ್ಲಿ ವ್ಯತ್ಯಾಸ ಇಲ್ಲವೇ ?,
ಖಂಡಿತವಾಗಿ ಇದೆ.
ಕೆಲವರು ಅತ್ಯುತ್ತಮ ಮಟ್ಟದ ಸುಖಕರ ಜೀವನ ನಡೆಸಿದರೆ,
ಇನ್ನೂ ಕೆಲವರು ಅತ್ಯಂತ ಕೆಟ್ಟ ,ಕಷ್ಟಕರ ಜೀವನ ಸಾಗಿಸುತ್ತಾರೆ.
ಇಲ್ಲೂ ಇರುವ ಮತ್ತೊಂದು ಆಶ್ಚರ್ಯಕರ ಸಂಗತಿ,……
ವ್ಯಕ್ತಿಯ ಮಾನಸಿಕ ಸ್ಥಿತಿ,
ಅಜ್ಞಾನ, ಮೌಡ್ಯ, ನಂಬಿಕೆ, ಭಕ್ತಿ, ತಿಳಿವಳಿಕೆ ಎಂಥಾ ಬಡವರಿಗೂ ಸ್ವಲ್ಪ ನೆಮ್ಮದಿ ನೀಡಿದರೆ,
ಹಣ, ಅಧಿಕಾರ, ಅರಿವು, ಆರೋಗ್ಯ ಎಲ್ಲಾ ಇದ್ದರೂ ನೆಮ್ಮದಿ ಇಲ್ಲದವರ ಬದುಕೂ ಇಲ್ಲಿದೆ.
ಬದುಕಿಗೆ ನಿರ್ದಿಷ್ಟವಾದ ಮಾನದಂಡಗಳು ಇಲ್ಲವೆನಿಸುತ್ತದೆ,
ಕೆಲವು ಅಸಹಜ ಖಾಯಿಲೆ, ಅಪಘಾತ, ಕೊಲೆ, ಪ್ರಾಕೃತಿಕ ವಿಕೋಪ ಇತ್ಯಾದಿ ಅನಿರೀಕ್ಷಿತಗಳನ್ನು ಹೊರತುಪಡಿಸಿದರೆ ಮತ್ತು ಕೆಲವು ಅಪರೂಪದ ಶತಾಯುಷಿಗಳನ್ನು ಬಿಟ್ಟರೆ,
ಮನುಷ್ಯನ ಆಯಸ್ಸು ಸುಮಾರು ಇಷ್ಟೇ ಎಲ್ಲಾ ಕಡೆಯೂ.
ಹಾಗಾದರೆ ಇದಕ್ಕೆ ಉತ್ತರ, ಪರಿಹಾರ, ?
ಸೃಷ್ಟಿಯ ರಚನೆಯೇ ಹೀಗಿರಬಹುದೇ ?
ಅಥವಾ ಇನ್ನೇನಾದರೂ ಒಳ ಮರ್ಮ ಇದೆಯೇ ?
ನನಗೂ ಸ್ಪಷ್ಟವಾಗಿ ಅರ್ಥವಾಗಿಲ್ಲ.
ಧರ್ಮದಲ್ಲಿದೆ, ದೇವರಲ್ಲಿದೆ, ಗ್ರಂಥಗಳಲ್ಲಿ ಇದೆ ಎಂದು ಅತಿಮಾನುಷ ಶಕ್ತಿಯ ಪ್ರತಿಕ್ರಿಯೆ ನೀಡದೆ,
ನಿಮ್ಮ ಇಂದಿನ ಅರಿವಿನ ಮಿತಿಯಲ್ಲಿ ಮಾಹಿತಿ ಹಂಚಿಕೊಂಡರೆ
ಸ್ವಲ್ಪ ಮಟ್ಟಿಗೆ ಅರ್ಥಮಾಡಿಕೊಳ್ಳಬಹುದು……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……