, ಗಂಗೊಳ್ಳಿ: ನವೆಂಬರ್ 1 (ಹಾಯ್ ಉಡುಪಿ ನ್ಯೂಸ್) ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ನಡೆಸಲು ಹೊಂಚು ಹಾಕುತ್ತಿದ್ದ ದರೋಡೆಕೋರರ ಸಂಚನ್ನು ಪೊಲೀಸರು ವಿಫಲ ಗೊಳಿಸಿದ್ದಾರೆ.ದರೋಡೆಕೋರರು ಓಡಿ ತಪ್ಪಿಸಿಕೊಂಡಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ವಿನಯ ಎಂ ಕೊರ್ಲಹಳ್ಳಿ ಇವರು ದಿನಾಂಕ 30-10-2022 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಸಮೀಪದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ 5 ಜನ ಅನುಮಾನಾಸ್ಪದ ವ್ಯಕ್ತಿಗಳು ಅನುಮಾನಾಸ್ಪದವಾಗಿ ವರ್ತಿಸುತ್ತಿರುವ ಬಗ್ಗೆ ಮಾಹಿತಿದಾರರಿಂದ ಮಾಹಿತಿ ಬಂದ ಕೂಡಲೇ ವಿನಯ ಎಂ ಕೊರ್ಲಹಳ್ಳಿ ಯವರು ಠಾಣಾ ಸಿಬ್ಬಂದಿಯವರೊಂದಿಗೆ ರಾತ್ರಿ 12:05 ಗಂಟೆಗೆ ಕುಂದಾಪುರ ತಾಲೂಕು ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಸಮೀಪದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನ ಬಳಿ ತೆರಳಿ ಅಲ್ಲಿ ಸ್ವಲ್ಪ ಹಿಂದೆ ಜೀಪನ್ನು ನಿಲ್ಲಿಸಿ ಮಾಹಿತಿ ಬಂದ ಸ್ಥಳವನ್ನು ಗಮನಿಸಿದಾಗ ರಾ.ಹೆ-66 ರ ರಸ್ತೆಯ ಬದಿಯಲ್ಲಿ ಒಂದು ಸಿಲ್ವರ್ ಬಣ್ಣದ ಕಾರು ನಿಂತಿದ್ದು, ಅಲ್ಲಿ 5 ಜನರು ಇದ್ದು, ಅವರಲ್ಲಿ ಮೂವರು ಮುಖಕ್ಕೆ ಕರ್ಚಿಪ್ ಕಟ್ಟಿಕೊಂಡಿದ್ದು, ಇಬ್ಬರು ತಮ್ಮ ಕೈಯಲ್ಲಿ ಮರದ ದೊಣ್ಣೆಗಳನ್ನು ಹಿಡಿದುಕೊಂಡು ನಿಂತಿರುವುದು ಪೊಲೀಸರಿಗೆ ಕಂಡು ಬಂದಿರುತ್ತದೆ.
ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ದೊಣ್ಣೆಯನ್ನು ಅಲ್ಲಿಯೇ ಬಿಸಾಡಿ, ಎಲ್ಲರೂ ಓಡಿ ಹೋಗಿದ್ದು ಇವರುಗಳಲ್ಲಿ ಇಬ್ಬರನ್ನು ಪೊಲೀಸರು ಗುರುತಿಸಿದ್ದು ಪರಿಚಯದ ರಿಲ್ವಾನ್ ಯಾನೆ ರಿಝ್ವಾನ್ ಹಾಗೂ ಮೊಹಮ್ಮದ್ ಆಸಿಫ್ ಎಂಬವರಾಗಿರುತ್ತಾರೆ.
ಅವರು ಬಿಟ್ಟು ಹೋದ ಕಾರನ್ನು ಪೊಲೀಸರು ಪರಿಶೀಲಿಸಿದಾಗ ಕಾರಿನಲ್ಲಿ 2 ಪ್ಯಾಕೇಟ್ ಮೆಣಸಿನ ಹುಡಿ ಹಾಗೂ ಆಸಿಫ್ ನ ಆಧಾರ ಕಾರ್ಡ್, ಬ್ಯಾಂಕ್ ಪಾಸ್‌ಪುಸ್ತಕ, ಚೆಕ್‌ಪುಸ್ತಕ ಇರುವುದು ಕಂಡುಬಂದಿರುತ್ತದೆ. ಪರಾರಿಯಾದ ರಿಲ್ವಾನ್ ಯಾನೆ ರಿಝ್ವಾನ್ , ಮೊಹಮ್ಮದ್ ಆಸಿಫ್ ಹಾಗೂ ಇತರ ಅಪರಿಚಿತ 3 ಜನರು ಸೇರಿ ರಾ.ಹೆ -66 ರಲ್ಲಿ ದರೋಡೆ ಮಾಡುವ ಉದ್ದೇಶದಿಂದ ಮಾರಕ ಆಯುಧಗಳನ್ನು ಹಿಡಿದುಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ವಾಹನ ಮಾಲೀಕರನ್ನು ದರೋಡೆ ಮಾಡಲು ಸಜ್ಜಾಗಿ ನಿಂತಿದ್ದು ಗಂಗೊಳ್ಳಿ ಠಾಣಾ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಅಪರಾಧ ಕ್ರತ್ಯಕ್ಕೆ ತಡೆಯಾಗಿದೆ .
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.