Spread the love

ಸಾಮಾಜಿಕ ಜಾಲತಾಣಗಳಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲೆ ಬೀರಿದ ಪ್ರಭಾವ…………..

ಸುಮಾರು 10/15 ವರ್ಷಗಳ ಹಿಂದೆ ಇದ್ದ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗೆಗಿನ ಆತಂಕ ಈಗ ಅಷ್ಟಾಗಿ ಕಾಣುತ್ತಿಲ್ಲ. ಫೇಸ್ ಬುಕ್, ವಾಟ್ಸ್ ಆಪ್, ಟ್ವಿಟರ್, ಇನ್ಸ್ಟಾಗ್ರಾಂ ಮುಂತಾದ ಜಾಲತಾಣಗಳ ಸಂಪರ್ಕ ಕ್ರಾಂತಿಯಿಂದ ಆದ ಕೆಲವು ಒಳ್ಳೆಯ ಬೆಳವಣಿಗೆಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಬಹಳ ಉಪಯೋಗವಾಗಿದೆ ಎಂಬುದನ್ನು ಗಮನಿಸಬಹುದು.

ಮೊದಲೆಲ್ಲಾ ಕೇವಲ ಪತ್ರಿಕೆಗಳು, ನಿಯತಕಾಲಿಕೆಗಳು , ಒಂದಷ್ಟು ಸಾಂಸ್ಕೃತಿಕ ವೇದಿಕೆಗಳು, ಪ್ರಕಾಶನಗಳು ಮತ್ತು ಬೆರಳೆಣಿಕೆಯ ಬರಹಗಾರರು ಬಿಟ್ಟರೆ ಸಾಮಾನ್ಯರಿಂದ ಸಾಹಿತ್ಯ ದೂರವೇ ಇತ್ತು. ಸಿನಿಮಾ ಜನಪ್ರಿಯತೆಗೆ ಹೋಲಿಸಿದರೆ ಸಾಹಿತ್ಯ ಕೆಲವೇ ಜನರ ಆಸಕ್ತಿದಾಯಕ ಕ್ಷೇತ್ರವಾಗಿತ್ತು.

ಆದರೆ ಈಗ ನೋಡಿ ಸಾಮಾನ್ಯ ಜನರೂ ತಮ್ಮ ಭಾವನೆ ಅಭಿಪ್ರಾಯಗಳನ್ನು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅದೂ ಕನ್ನಡದಲ್ಲಿಯೇ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಯುವ ಪ್ರತಿಭೆಗಳಂತೂ ಮೂಕವಿಸ್ಮಿತರಾಗುವಂತೆ ತಮ್ಮ ಬರಹಗಳನ್ನು ಮೂಡಿಸುತ್ತಿದ್ದಾರೆ. ಅವರ ಭಾಷೆ ಕಲ್ಪನೆ ನಿರೂಪಣೆ ಹಿಂದಿನ ಕನ್ನಡ ಸಾಹಿತ್ಯದ ಸ್ವರ್ಣಯುಗ ಮತ್ತೆ ಮರುಕಳಿಸುತ್ತಿದೆಯೇನೋ ಎಂಬ ಭಾವನೆ ಉಂಟುಮಾಡುತ್ತಿದೆ.
FACEBOOK /WATSAPP ಗ್ರೂಪ್ ಗಳ ಹೆಸರನ್ನೇ ಗಮನಿಸಿ, ಎಷ್ಟೊಂದು
ಆಕರ್ಷಕ, ಎಷ್ಟೊಂದು ಮುದ್ದು.

ಎಲ್ಲೋ ಆಗಾಗ ಕೆಲವೇ ಸಾಹಿತ್ಯಾಸಕ್ತ ಗುಂಪುಗಳಲ್ಲಿ ನಡೆಯುತ್ತಿದ್ದ ಕವಿಗೋಷ್ಟಿ, ವಿಚಾರ ಸಂಕಿರಣ, ಸಾಹಿತ್ಯ ಸ್ಪರ್ಧೆ ಈಗ ರಾಜ್ಯಾದ್ಯಂತ ಆಗಾಗ ನಡೆಯುತ್ತಲೇ ಇದೆ. ತಮ್ಮದೇ ಗ್ರೂಪ್ ಗಳಲ್ಲಿ ಸಾಹಿತ್ಯದ ಬಗ್ಗೆ ನಿರಂತರ ಚರ್ಚೆಗಳಾಗುತ್ತಲೇ ಇದೆ. ಅದರಲ್ಲೂ ಶಾಲಾ ಶಿಕ್ಷಕ/ಶಿಕ್ಷಕಿಯರು, ಮಾಹಿತಿ ತಂತ್ರಜ್ಞಾನದ ಆಧುನಿಕ ಜೀವನ ಶೈಲಿಯ ಹುಡುಗ/ಹುಡುಗಿಯರು, ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು , ಇನ್ನೂ ಆಶ್ಚರ್ಯವೆಂದರೆ ಉರ್ದು ಮಾತೃಭಾಷೆಯ ಮುಸ್ಲಿಂಮರೂ ಕೂಡ ಕನ್ನಡದ ಅತ್ಯಂತ ಪ್ರತಿಭಾವಂತ ಬರಹಗಾರರಾಗಿ ಮೂಡಿಬರುತ್ತಿರುವುದು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಹೆಮ್ಮೆಪಡುವ ಸಂಗತಿ.

ಇದೇನು ಕಡಿಮೆ ಸಾಧನೆಯಲ್ಲ. ಹಳೆಯ ತಲೆಮಾರಿನ ಕೆಲವು ಬರಹಗಾರರು ಒಂದಷ್ಟು ಅಸೂಯೆ ಪಡುವಷ್ಟು, ತಳಮಳಗೊಳ್ಳುವಷ್ಟು ಇದು ಬೆಳೆದಿದೆ. ಬದಲಾವಣೆಯ ಸಂದರ್ಭಗಳಲ್ಲಿ ಇದು ಸಹಜ ಇರಲಿ. ಅದೂ ಅಲ್ಲದೆ ಸಾಹಿತ್ಯ ಪ್ರಕಾರದ ಅತ್ಯಂತ ಕಠಿಣ ರೂಪವಾದ ವಿಮರ್ಶಾ ವಿಭಾಗದಲ್ಲಿಯೂ ಹೊಸ ರೀತಿಯ ಚಿಂತನಾ ನೋಟ ಕಾಣುತ್ತಿರುವುದು ತುಂಬಾ ಸಂತೋಷ ಉಂಟುಮಾಡುತ್ತಿದೆ .

ಎಂದಿನಂತೆ ಒಂದಷ್ಟು ಉಢಾಪೆ, ಜೊಳ್ಳು ಇದ್ದದ್ದೇ. ಅದು ಅನುಭವದೊಂದಿಗೆ ಪಕ್ವವಾಗುತ್ತಾ ಸಾಗುತ್ತದೆ ಎಂದು ನಿರೀಕ್ಷಿಸೋಣ.

ಕೊನೆಯದಾಗಿ ಒಂದು ಕಾಡುವ ಕೊರತೆಯೆಂದರೆ ಕನ್ನಡ ಶಾಲೆಗಳ ಅಧೋಗತಿ ಮತ್ತು ಅಲ್ಲಿ ಕಲಿಯುವವರ ಸಂಖ್ಯೆ ಗಾಬರಿಯಾಗುವಷ್ಟು ಕಡಿಮೆಯಾಗಿರುವುದು. ಅದು ದೀರ್ಘಾವಧಿಯಲ್ಲಿ ಖಂಡಿತ ಕೆಟ್ಟ ಪರಿಣಾಮ ಬೀರುತ್ತದೆ. ಇದು ಆಡಳಿತಾಗಾರರ – ವ್ಯವಸ್ಥೆಯ ಲೋಪ.

ಅದು ಬಿಟ್ಟರೆ ಕನ್ನಡ ಭಾಷೆ ಮತ್ತು ಸಾಹಿತ್ಯ ಅತ್ಯಂತ ಉಲ್ಲಾಸದಾಯಕವಾಗಿದೆ.

ಸಹಜತೆಯತ್ತ ಮರಳುತ್ತಿದೆ ನನ್ನ ತಾಯಿಭಾಷೆ – ಅದೇ ಕನ್ನಡ,

ಮರಳಿ ಪಡೆಯುತ್ತಿದೆ ಮಣ್ಣಿನ ಗುಣ – ಅದೇ ಕನ್ನಡ,

ಹೊಸ ಉತ್ಸಾಹದಲ್ಲಿ ಚಿಗುರುತ್ತಿದೆ, ಚಿಮ್ಮುತ್ತಿದೆ – ಅದೇ ಕನ್ನಡ,

ಜೀನ್ಸ್ ಪ್ಯಾಂಟ್ ಹುಡುಗಿಯರ ತುಟಿಗಳಲ್ಲೂ ನಲಿಯುತ್ತಿದೆ – ಅದೇ ಕನ್ನಡ,

ಟೆಕ್ಕಿಗಳ ಮನದಲ್ಲೂ ನುಡಿಯುತ್ತಿದೆ – ಅದೇ ಕನ್ನಡ,

ಕಾರ್ಮೆಂಟ್ ಶಾಲೆಗಳಲ್ಲೂ ಮತ್ತೆ ಸಿಗುತ್ತಿದೆ ಪ್ರಾಮುಖ್ಯತೆ – ಅದೇ ಕನ್ನಡ,

ಸಿನಿಮಾ ಮಾಲ್ ಗಳಲ್ಲೂ ಮತ್ತೆ ಕೇಳಿ ಬರುತ್ತಿದೆ – ಅದೇ ಕನ್ನಡ ,

ಬ್ಯಾಂಕು, ಅಂಚೆ ಕಚೇರಿಗಳಲ್ಲೂ ಬದಲಾಗುತ್ತಿದೆ ಧ್ವನಿಗಳು – ಅದೇ ಕನ್ನಡ,

ಆಸ್ಪತ್ರೆ, ಹೋಟೆಲ್ ಗಳಲ್ಲಿ ಸರಾಗವಾಗುತ್ತಿದೆ – ಅದೇ ಕನ್ನಡ,

ಮತ್ತೆ ಬೆಳೆಯುತ್ತಿದೆ ಟಿವಿ, ಪತ್ರಿಕೆಗಳಲ್ಲಿ ನನ್ನ ಭಾಷೆ – ಅದೇ ಕನ್ನಡ,

ಫೇಸ್ ಬುಕ್, ಟ್ವಿಟರ್, ವಾಟ್ಸಾಪ್ ಗಳಲ್ಲೂ ಮಿಂಚುತ್ತಿದೆ – ಅದೇ ಕನ್ನಡ,

ಆಶ್ಚರ್ಯವೆಂಬಂತೆ ಯುವ ಜನಾಂಗದಿಂದ ಮುದ್ದಿಸಲ್ಪಡುತ್ತಿದೆ – ಅದೇ ಕನ್ನಡ ,

ಸಾಮಾನ್ಯರಲ್ಲೂ ಠಸ್ ಪುಸ್ ಇಂಗ್ಲಿಷ್ ಬದಲು ಶಾಸ್ತ್ರೀಯವಾಗುತ್ತಿದೆ – ಅದೇ ಕನ್ನಡ,

ಮತ್ತೆ ಮರುಕಳಿಸುತ್ತಿದೆ ನಿತ್ಯೋತ್ಸವ – ಅದೇ ಕನ್ನಡ,

ಸಮೃದ್ಧವಾಗುತ್ತಿದೆ ಕಲೆ, ಸಾಹಿತ್ಯ, ಸಂಗೀತ – ಅದೇ ಕನ್ನಡ,

ಮರೆಯಾಗುತ್ತಿದೆ MUMMY DADDY,
ಹೊಮ್ಮುತ್ತಿದೆ ಅಪ್ಪ ಅಮ್ಮ — ಅದೇ ಕನ್ನಡ,

ಕಡಿಮೆಯಾಗುತ್ತಿದೆ SORRY, THANKS,
ಹೆಚ್ಚಾಗುತ್ತಿದೆ ಕ್ಷಮಿಸಿ, ಧನ್ಯವಾದಗಳು — ಅದೇ ಕನ್ನಡ,

ಕೇಳುತ್ತಿಲ್ಲ IDIOT, BASTARD, SCOUNDREL,
ಬಾಯಿಗೆ ಬರುತ್ತಿದೆ ಅಮ್ಮನ್, ಅಕ್ಕನ್, ಅಯ್ಯನ್ — ಅದೇ ಕನ್ನಡ,

ಹೊಟ್ಟೆ ಕೆಡಿಸುತ್ತಿವೆ PIZZA, BURGER,
ಆರೋಗ್ಯ ಹೆಚ್ಚಿಸುತ್ತಿವೆ ಮುದ್ದೆ, ರೊಟ್ಟಿ — ಅದೇ ಕನ್ನಡ,

ದ್ವೇಷಿಸಲ್ಪಡುತ್ತಿವೆ KFC, McDONALD,
ಪ್ರೀತಿಸಲ್ಪಡುತ್ತಿವೆ ನಾಟಿಕೋಳಿ, ತುಪ್ಪಾ ಹೋಳಿಗೆ — ಅದೇ ಕನ್ನಡ,

ನಮಗಂತೂ ಬರುವುದೂ, ಇರುವುದೂ, ನುಡಿವುದೂ ಒಂದೇ ——
ಅದೇ ಕನ್ನಡ ಕನ್ನಡ ಕನ್ನಡ…………‌‌‌‌‌‌…


ಮೊನ್ನೆ 16/10/2022 ಭಾನುವಾರ ವಿಶ್ವ ಆಹಾರ ದಿನದ ಪ್ರಯುಕ್ತ ಬೆಂಗಳೂರಿನ ಚಾಮರಾಜಪೇಟೆಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪದವಿ ಪೂರ್ವ ಕಾಲೇಜಿನಲ್ಲಿ ನಾವು ಕೆಲವು ಗೆಳೆಯರು ಒಂದಷ್ಟು ಶಾಲಾ ಮಕ್ಕಳೊಂದಿಗೆ ಆಹಾರ ಮಹತ್ವದ ಬಗ್ಗೆ ಹಾಡು ಚರ್ಚೆ ಸಂವಾದ ಮಾತುಕತೆ ನಡೆಸಿದೆವು. ಮೂರು ದಿನದಿಂದ ನಗರದ ವಿವಿಧ ಭಾಗಗಳಲ್ಲಿ ನಡೆಸಿದ ಆಹಾರ ಜಾಗೃತಿ ಅಭಿಯಾನ ಕಾರ್ಯಕ್ರಮ ನಮ್ಮೆಲ್ಲರ ಮನಸ್ಸಿಗೆ ಸ್ವಲ್ಪ ತೃಪ್ತಿ ನೀಡಿದೆ. ಆದರೆ ಆಹಾರ ವ್ಯರ್ಥವಾಗುತ್ತಿರುವ ಪ್ರಮಾಣಕ್ಕೆ ಹೋಲಿಸಿದರೆ ಈ ಪ್ರಯತ್ನ ಅತ್ಯಂತ ಸಣ್ಣದು ಮತ್ತು ಅಣುವಿನ ಕಣದಷ್ಟು ಚಿಕ್ಕದು. ಏನು ಮಾಡುವುದು ಸದ್ಯ ನಮಗಿರುವ ಸಾಮರ್ಥ್ಯ ಅಷ್ಟೇ. ಮುಂದೆ ಖಂಡಿತ ದೊಡ್ಡ ಪ್ರಮಾಣದಲ್ಲಿ ಪ್ರಯತ್ನ ಮಾಡುವ ಕನಸಿದೆ.

ಕನಿಷ್ಠ ಆಹಾರದ ಮತ್ತು ರೈತರ ಮೇಲಿನ ಒಂದು ಸಣ್ಣ ಕೃತಜ್ಞತೆಗಾಗಿಯಾದರೂ ಯಾವುದೇ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಮಾಧ್ಯಮ ರಂಗ ಧಾರ್ಮಿಕ ನಾಯಕರಗಳು ಸೌಜನ್ಯಕ್ಕಾದರೂ ಆಹಾರ ವ್ಯರ್ಥವಾಗುವಿಕೆಯ ಬಗ್ಗೆ ಮಾತನಾಡುವ ಆಸಕ್ತಿ ತೋರಲಿಲ್ಲ. ಮಾಧ್ಯಮಗಳಲ್ಲಿ ಯಾವುದೇ ಸುದ್ದಿ ಪ್ರಸಾರವಾಗಲಿಲ್ಲ. ಅವರ ನಿರ್ಲಕ್ಷ್ಯ ಮತ್ತು ದುರಹಂಕಾರಕ್ಕೆ ವಿಷಾದ ವ್ಯಕ್ತಪಡಿಸುತ್ತಾ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……

error: No Copying!