Spread the love

ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಭಯಾನಕ ಸಾಮೂಹಿಕ ಅತ್ಯಾಚಾರಗಳು ವರದಿಯಾಗಿತ್ತಿರುವುದು ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿಯಲ್ಲಿ. ಪ್ರತಿನಿತ್ಯ ಒಂದಲ್ಲ ಒಂದು ಸುದ್ದಿಗಳು ಈ ರಾಜ್ಯಗಳಿಂದ ಹೆಚ್ಚಾಗಿ ಕೇಳಿಬರುತ್ತಿದೆ.

ಬಹುಶಃ ಈ ವಿಷಯದಲ್ಲಿ ಅಲ್ಲಿನ ಆಡಳಿತಾತ್ಮಕ ಮತ್ತು ಸಾಮಾಜಿಕ ವ್ಯವಸ್ಥೆ ಬಹುತೇಕ ವಿಫಲವಾಗಿದೆ ಎಂದು ನೇರವಾಗಿ ಹೇಳಬಹುದು…

ಭಾರತದ ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗಗಳಿಗೆ ಹೋಲಿಸಿದರೆ ಉತ್ತರ ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತುಸು ಹೆಚ್ಚೇ ಇದೆ.

ಮನುಷ್ಯ ಕ್ರೌರ್ಯದ ಉತ್ತುಂಗ ತಲುಪುವುದೇ ಸಾಮೂಹಿಕ ಅತ್ಯಾಚಾರದ ಸಂದರ್ಭದಲ್ಲಿ. ಆ ಮನೋಭಾವವೇ ವಿಷಪೂರಿತ ಮತ್ತು ‌ರಾಕ್ಷಸತ್ವದ ಗುಣ ಹೊಂದಿರುತ್ತದೆ.

ಇದನ್ನು ಕೇವಲ ಕಾನೂನಾತ್ಮಕವಾಗಿ ಪರಿಹರಿಸುವುದು ಕಷ್ಟ. ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣಿನ ಬಗೆಗಿನ ನಿರೀಕ್ಷೆಗಳನ್ನೇ ಗಂಡು ಮಕ್ಕಳಲ್ಲಿ ಬದಲಾಯಿಸಬೇಕು. ಲೈಂಗಿಕತೆಯ ಅರ್ಥವನ್ನು ಪುನರ್ ರೂಪಿಸಬೇಕು. ವ್ಯಕ್ತಿ ಸ್ವಾತಂತ್ರ್ಯ ಮತ್ತು ಬಲಾತ್ಕಾರದ ನಡುವಿನ ಅಂತರವನ್ನು ಮನದಟ್ಟು ಮಾಡಿಸಬೇಕು.

ಕೌಟುಂಬಿಕ ವ್ಯವಸ್ಥೆಯಲ್ಲಿ ಮೊಲೆ ಹಾಲಿನ ಪಾವಿತ್ರ್ಯದ ಭಾವನೆಯನ್ನು ಕೇವಲ ತಾಯಿ ಮತ್ತು ಒಡಹುಟ್ಟಿದವರಿಗೆ ಮಾತ್ರವಲ್ಲದೆ ಇತರ ಹೆಣ್ಣುಗಳು ಸಹ ಅದೇ ಮಟ್ಟದ ಪ್ರೀತಿ ಗೌರವ ಸಮಾನತೆಗೆ ಅರ್ಹರು ಎಂಬುದನ್ನು ಅರ್ಥಮಾಡಿಸಬೇಕು.

ಇದನ್ನು ಅತಿ ಮುಖ್ಯವಾಗಿ,
ತಾಯಿ ತಂಗಿ ಅಕ್ಕಂದಿರು, ಶಾಲಾ ಶಿಕ್ಷಕರು, ಧಾರ್ಮಿಕ ಮುಖಂಡರು ಅತ್ಯಂತ ಆಪ್ತವಾಗಿ ಪ್ರೀತಿಯಿಂದ ಮನವೊಲಿಸಲು ಪ್ರಯತ್ನಿಸಿದರೆ ಅತ್ಯಾಚಾರದ ಪ್ರಕರಣಗಳು ಖಂಡಿತ ಕಡಿಮೆಯಾಗುತ್ತದೆ. ಲೈಂಗಿಕತೆಯ ಬಗೆಗಿನ ಅತಿ ರಂಜಿತ ಮನೋಭಾವ ಮತ್ತು ಅನವಶ್ಯಕ ಗೌಪ್ಯತೆಯನ್ನು ಮುಂದಿನ ಪೀಳಿಗೆಗೆ ಒಂದು ಸಹಜ ಕ್ರಿಯೆ ಎಂಬುದಾಗಿ ಅರ್ಥ ಮಾಡಿಸಿದರೆ ಅತ್ಯಾಚಾರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಅತಿಯಾದ ಅನಾವಶ್ಯಕ ಮಡಿವಂತಿಕೆಯೇ ಹದಿಹರೆಯದ ಯುವಕರಲ್ಲಿ ತಪ್ಪು ಅಭಿಪ್ರಾಯ ‌ಶಾಶ್ವತವಾಗಿ ನೆಲೆ ನಿಲ್ಲಲು ಕಾರಣವಾಗಿದೆ.

ತಾಯಿ ಪ್ರೀತಿಗೆ ಮಾತ್ರ ಅತ್ಯಾಚಾರದ ಬಗ್ಗೆ ಜಾಗೃತಿ ಮೂಡಿಸುವ ಶಕ್ತಿ ಇದೆ. ಲೈಂಗಿಕತೆ ಕೆಟ್ಟದ್ದಲ್ಲ. ಬಲಾತ್ಕಾರ ಮಾತ್ರ ಅತ್ಯಂತ ಅಮಾನವೀಯ ಮತ್ತು ಹಿಂಸೆ ಹಾಗು ಲೈಂಗಿಕತೆ ಒಂದು ಮಿತಿಗೆ ಒಳಪಟ್ಟ ಸುಖವೇ ಹೊರತು ಅದೇ ಅಂತಿಮ ಎಂಬ ತಪ್ಪು ಕಲ್ಪನೆ ಮತ್ತು ಭ್ರಮೆ ಎಂಬುದನ್ನು ಒಬ್ಬ ಆರೋಗ್ಯವಂತ ವ್ಯಕ್ತಿಗೆ ಅರ್ಥಮಾಡಿಸಲು ಸಮಾಜ ಮತ್ತು ಧರ್ಮಗಳಿಗೆ ಸಾಧ್ಯವಾಗದಿದ್ದರೆ ಅದು ನಾಗರಿಕ ಸಮಾಜದ ದುರಂತ ಎಂದೇ ಪರಿಗಣಿಸಬೇಕು.

ಇದು‌ ಸಾಧ್ಯವಾಗದಿದ್ದರೆ ‌ಎಲ್ಲಾ ಧರ್ಮಗಳು ಅಧಿಕೃತವಾಗಿ………

ಘೋಷಿಸಿ ಬಿಡಿ,
ಹೆಣ್ಣು ಭೋಗದ ವಸ್ತುವೆಂದು…..

ಘೋಷಿಸಿ ಬಿಡಿ,
ಹೆಣ್ಣು ಇರುವುದೇ ಗಂಡಿಗಾಗಿ ಎಂದು…..

ಘೋಷಿಸಿ ಬಿಡಿ,
ಹೆಣ್ಣು ಸುಖ ನೀಡುವ ಯಂತ್ರವೆಂದು……

ತಾಖತ್ತಿದ್ದವರು ಬೆಲೆ ಕೊಟ್ಟು ಕೊಂಡುಕೊಳ್ಳಲಿ,
ಶಕ್ತಿ ಇದ್ದವರು ಹೊಡೆದಾಡಿ ಪಡೆದುಕೊಳ್ಳಲಿ,……….

ಗಂಡಸ್ತನವಿದ್ದವರು ಭರವಸೆ ನೀಡಿ ಉಪಯೋಗಿಸಿಕೊಳ್ಳಲಿ,
ಧೈರ್ಯವಿದ್ದವರು ಪ್ರೀತಿಯ ನಾಟಕವಾಡಿ ಬಳಸಿಕೊಳ್ಳಲಿ,……….

ಸಂಪ್ರದಾಯವಾದಿಗಳು ಮದುವೆಯಾಗಿ ಅನುಭವಿಸಲಿ,
ಖದೀಮರು ಅತ್ಯಾಚಾರ ಮಾಡಿ ಸುಖಿಸಲಿ,………….

ಬೆಲೆ ನಿಗದಿ ಮಾಡಿ,
ಆಕೆಯ ಸೌಂದರ್ಯ ಆಧರಿಸಿ,
ಆಕೆಯ ಬಣ್ಣ ನೋಡಿ,…….

ಆಕೆಯ ಅಲಂಕಾರ ಗಮನಿಸಿ,
ಆಕೆಯ ನಗುವ ರೀತಿ ನೋಡಿ,
ಆಕೆಯ ಉಡುಪಿನ ಭಿನ್ನತೆ ಗಮನಿಸಿ…..

ಆಗ ಅಕ್ಕ ತಂಗಿ ತಾಯಿ ಹೆಂಡತಿಯೂ ಸೇರಿ ನಮಗೆ ನಿಯಂತ್ರಣವಿರುವ ಎಲ್ಲರನ್ನೂ ಮಾರಿ ಲಾಭ ಗಳಿಸಬಹುದು……

ಆಗಲಾರದರೂ ಕನಿಷ್ಠ ಈ ಅತ್ಯಾಚಾರವೆಂಬ ಸುದ್ದಿಗಳಿಂದ ದೂರವಿರಬಹುದು….

ಆಗ ಅತ್ಯಾಚಾರವೂ ನೇರ – ದಿಟ್ಟ – ನಿರಂತರ ಮತ್ತು ಅಧೀಕೃತ……….

ಆಹಾರಕ್ಕಾಗಿ ಪ್ರಾಣಿ ವಧೆ ಮಾಡುವುದಿಲ್ಲವೇ, ಹಾಗೆ ಪುರುಷ ಸುಖಕ್ಕಾಗಿ ಹೆಣ್ಣಿನ ಮೇಲೆ ಅತ್ಯಾಚಾರ…………

ಆಗ, ಈ ಸುದ್ದಿಯೂ ಸಹಜ ಸ್ವಾಭಾವಿಕವಾಗುತ್ತದೆ. ಯಾವುದೇ ಮಾನಸಿಕ ಹಿಂಸೆ ಇರುವುದಿಲ್ಲ,
ಹೆಣ್ಣೆಂಬ ಮಮಕಾರವೂ ಉಳಿಯುವುದಿಲ್ಲ……..

ಛೆ..‌…ಛೆ…….ಛೆ……,,,,,,

ಅಯ್ಯಾ ,
ದೇವರುಗಳ ಆರಾಧಕರೇ,
ಧರ್ಮಗಳ ಅನುಯಾಯಿಗಳೇ,
ಧಾರ್ಮಿಕ ಚಿಂತಕರೇ,
ಕಾನೂನು ಪಾಲಕರೇ,
ಆಧ್ಯಾತ್ಮಿಕ ಮನಸ್ಸುಗಳೇ,…….

ಬಿಡಿ ಈ ಕಪಟ ನಾಟಕ,

ಹೆಣ್ಣು ದೈವ ಸ್ವರೂಪಿ,
ಹೆಣ್ಣು ಪ್ರಕೃತಿ,
ಹೆಣ್ಣು ಪೂಜನೀಯಳು,
ಹೆಣ್ಣು ಶಕ್ತಿ ಮಾತೆ,……..

ಇದೆಲ್ಲಾ ಸುಮ್ಮನೆ ನಾಟಕವೇಕೆ,

ಪ್ರತಿನಿತ್ಯ ,
ಮಗುವಿನಿಂದ ಮುದುಕಿಯವರೆಗೆ,
ಭಿಕ್ಷುಕಿಯಿಂದ ಸನ್ಯಾಸಿನಿಯವರೆಗೆ,
ವಿದ್ಯಾರ್ಥಿನಿಯಿಂದ ಮಾನಸಿಕ ಅಸ್ವಸ್ಥತೆಯವರೆಗೆ,
ಹೆಣ್ಣು ಎಂಬ ಒಂದೇ ಕಾರಣದಿಂದ ಈ ಅತ್ಯಾಚಾರದ ಸುದ್ದಿ ಕೇಳಿ ಕೇಳಿ ಸಾಕಾಗಿದೆ………..

ಸುದ್ದಿಯಾಗದ ಲೈಂಗಿಕ ಶೋಷಣೆಯ ಸಭ್ಯ ಮುಖವಾಡಗಳೆಷ್ಟೋ.
ಪಕ್ಷ ಪಂಥಗಳ ಆಧಾರದ ಮೇಲೆ ಅತ್ಯಾಚಾರ ಸಮರ್ಥಿಸುವವರೆಷ್ಟೋ,………

ಇಂತಹವರನ್ನು ಯಾವುದಕ್ಕೆ ಹೋಲಿಸಿದರೂ ಅದಕ್ಕೆ ಅವಮಾನವಾಗುತ್ತದೆ.
ನನಗೆ ಪದಗಳೇ ಸಿಗುತ್ತಿಲ್ಲ………

ಈ ರಕ್ಕಸತನಕ್ಕೆ ಕೊನೆ ಎಂದು,………..
ಅತ್ಯಾಚಾರದ ಸುದ್ದಿಗಳಿಲ್ಲದ ದಿನಗಳು ಬರುವುದು ಎಂದು,…….
ನಾಗರಿಕ ಸಮಾಜ ನಿರ್ಮಾಣ ಆಗುವುದು ಎಂದು,……………

ನಿರೀಕ್ಷೆ ,
ಕನಸಾಗುವುದೇ….
ಅಥವಾ,
ನನಸಾಗುವುದೇ…….
ಅಥವಾ
ಈ ಸುದ್ದಿಗಳೊಂದಿಗೇ ನಮ್ಮ ಬದುಕು ಕೊನೆಯಾಗುವುದೇ ??????

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……

error: No Copying!