ಇಬ್ಬರು ಹುಚ್ಚ ನರರಾಕ್ಷಸರ ಕ್ರೌರ್ಯ ಮನೋಭಾವಕ್ಕೆ ನರಳುತ್ತಿರುವ ಲಕ್ಷಾಂತರ ಮಾನವ ಪ್ರಾಣಿಗಳು,
ಅದನ್ನು ಸ್ವಾರ್ಥದಿಂದ ಬೆಂಬಲಿಸುತ್ತಿರುವ ಮತ್ತಷ್ಟು ದೇಶಗಳ ನಾಯಕರು……
750 ಕೋಟಿ ಮೌನವಾಗಿ ಅನುಭವಿಸುತ್ತಿರುವ ಮೂರ್ಖ ಮುಗ್ಧ ಜನರು….
ಅವರ ಸೇತುವೆ ಕಟ್ಟಡ ಇವರಿಂದ ಧ್ವಂಸ, ಇವರ ಸೇತುವೆ ಕಟ್ಟಡ ಅವರಿಂದ ಧ್ವಂಸ, ಅವರ ಸೈನಿಕರ ಹತ್ಯೆಗೆ ಇವರಿಂದ ಪ್ರತೀಕಾರ, ಇವರ ಸೈನಿಕರ ಹತ್ಯೆಗೆ ಅವರ ಪ್ರತೀಕಾರ, ಕೊಂದವರ ರಣಕೇಕೆ ಸತ್ತ ಸಹಚರರ ಆಕ್ರಂದನ…….
ಒಂದು ಅಂದಾಜಿನಂತೆ ಎರಡೂ ಕಡೆಯ ಸೈನಿಕರು ಮತ್ತು ಸಾರ್ವಜನಿಕರು ಸೇರಿ 2 ಲಕ್ಷಕ್ಕೂ ಹೆಚ್ಚು ಜನ ಹತ್ಯೆಯಾಗಿದ್ದಾರೆ. ಗಾಯಾಳುಗಳು ಇದಕ್ಕಿಂತ ಹೆಚ್ಚು. ವಲಸಿಗರು ಮತ್ತೂ ಹೆಚ್ಚು. ಯಾವ ಸಾಧನೆಗಾಗಿ ಈ ಹುಚ್ಚಾಟ….
ಒಂದು ವೇಳೆ ರಷ್ಯಾ ಗೆದ್ದರೆ ಪುಟಿನ್ ಹೀರೋ ಆಗಬಹುದು, ಉಕ್ರೇನ್ ಶರಣಾಗತಿ ಆಗದೇ ದೀರ್ಘಕಾಲ ಪ್ರತಿರೋಧ ತೋರಿ ಮಾತುಕತೆ ಮೂಲಕ ಸಂಧಾನ ಮಾಡಿಕೊಂಡು ಯುದ್ಧ ನಿಂತರೆ ಝಲೆನ್ಸ್ಕಿ ಹೀರೋ ಆಗಬಹುದು. ಆದರೆ ಸತ್ತ ಜನರು, ಕಳೆದುಕೊಂಡ ದೇಹದ ಅಂಗಗಳು ಮತ್ತೆ ಬರಲು ಸಾಧ್ಯವೇ. ಕಟ್ಟಡ, ಸೇತುವೆ, ಶಾಲೆ, ಆಸ್ಪತ್ರೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಮತ್ತೆ ನಿರ್ಮಿಸಲು ಎಷ್ಟೊಂದು ಶ್ರಮ.
ಸುಮ್ಮನೆ ಊಹಿಸಿ ನೋಡಿ ಭಾರತ – ಪಾಕಿಸ್ತಾನ ಅಥವಾ ಭಾರತ – ಚೀನಾ ಯುದ್ಧವಾದರೆ ಭಾರತದ ಪ್ರತಿ ಹಳ್ಳಿಯ ಒಂದೊಂದು ಮನೆಯಲ್ಲಿ ಒಬ್ಬ ಸೈನಿಕರ ಸಾವು ಅಥವಾ ಗಾಯಾಳುವಾದರೆ ಪರಿಸ್ಥಿತಿ ಹೇಗಿರಬೇಡ.
ಅದಕ್ಕಾಗಿಯೇ ಹೇಳುವುದು ತೀರಾ ಅನಿವಾರ್ಯವಾಗಿ ಶತ್ರುಗಳ ನಮ್ಮ ಮೇಲೆ ಆಕ್ರಮಣ ಮಾಡುವಾಗ ಹೊರತುಪಡಿಸಿ ಬೇರೆ ಅನವಶ್ಯಕ ಕಾರಣಗಳಿಗಾಗಿ ಯುದ್ಧದ ಸಂದರ್ಭ ಬಂದರೆ ಆಯಾ ದೇಶದ ಜನರೇ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸಿ ಶಾಂತಿಯ ಪರವಾಗಿ ಧ್ವನಿ ಎತ್ತಬೇಕು. ಇಲ್ಲದಿದ್ದರೆ ಕೇವಲ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿ ಹಠ ಮಾಡಿದರೆ ಉಕ್ರೇನ್, ಇರಾಕ್, ಆಫ್ಘನಿಸ್ಥಾನದ ರೀತಿಯಲ್ಲಿ ಸಾಮಾನ್ಯ ಜನ ಪಡಬಾರದ ಕಷ್ಟ ಪಡುತ್ತಾರೆ.
ಆದ್ದರಿಂದ ಯಾವತ್ತೂ ಸಹ ಶಾಂತಿ ಪ್ರಿಯ ಮನಸ್ಸುಗಳ ಸದಾ ಜಾಗೃತವಾಗಿರಬೇಕು. ವಿಶ್ವದ ಶಸ್ತ್ರಾಸ್ತ್ರಗಳ ಮಾಫಿಯಾ ಮಾನವ ಜನಾಂಗಕ್ಕೆ ಕಂಟಕ ಪ್ರಾಯವಾಗದಂತೆ ಎಚ್ಚರಿಕೆ ವಹಿಸಬೇಕು.
ಸುಮ್ಮನೆ ಪ್ರಾಣ ಕಳೆದುಕೊಳ್ಳಲು ಯಾವುದೇ ದೇಶದ ಸೈನಿಕರು ಬಾಡಿಗೆ ಹಂತಕರಲ್ಲ. ಅವರು ದೇಶ ರಕ್ಷಕರು ಮಾತ್ರ. ಅವರನ್ನು paid killer’s ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಯಾವ ಆಡಳಿತ ವ್ಯವಸ್ಥೆಗೂ ಅವಕಾಶ ಕೊಡಬಾರದು.
ಯಾವುದೇ ದೇಶದ ಮುಖ್ಯಸ್ಥರ ಹುದ್ದೆ ಒಂದು ಅಧಿಕಾರ ಮಾತ್ರ. ಆತ ಒಬ್ಬ ಪ್ರತಿನಿಧಿ ಅಷ್ಟೇ. ದೇಶವನ್ನು ಆತನ ಮನೋಭಾವಕ್ಕೆ ತಕ್ಕಂತೆ ಸರ್ವಾಧಿಕಾರ ನಡೆಸಲು ಅವಕಾಶ ಕೊಡಬಾರದು. ಯೂರೋಪ್, ಆಸ್ಟ್ರೇಲಿಯಾ, ಅಮೆರಿಕ ಸಂಯುಕ್ತ ಸಂಸ್ಥಾನ ಮುಂತಾದ ದೇಶಗಳು ತಕ್ಷಣಕ್ಕೆ ಈ ಯುದ್ದದಲ್ಲಿ ಭಾಗವಹಿಸದಿರಲು ಕಾರಣ ಅಲ್ಲಿನ ಪ್ರಜೆಗಳ ಒತ್ತಡವು ಇದೆ. ಎರಡು ಮಹಾಯುದ್ಧಗಳ ನಂತರ ಅಲ್ಲಿನ ಜನರಲ್ಲಿ ಸ್ವಲ್ಪ ಜಾಗೃತಿ ಉಂಟಾಗಿದೆ. ಯುದ್ಧದ ಭೀಕರತೆಯ ಪರಿಣಾಮದ ನೆನಪುಗಳು ಅವರಿಗೆ ಇನ್ನೂ ಹಸಿರಾಗಿದೆ. ರಷ್ಯಾ ಮತ್ತು ಉಕ್ರೇನ್ ಸಾಮಾನ್ಯ ಜನ ಈಗಲಾದರೂ ಒಗ್ಗಟ್ಟಾಗಿ ಯುದ್ದದ ವಿರುದ್ಧ ಧ್ವನಿ ಮೊಳಗಿಸಿದಿದ್ದರೆ ಮತ್ತಷ್ಟು ಸಂಕಟ ನಿಶ್ಚಿತ…….
ಶಾಂತಿಗಿರುವ ಶಕ್ತಿ ಯುದ್ದಕ್ಕಿಲ್ಲ,
ಪ್ರೀತಿಗಿರುವ ಶಕ್ತಿ ಹಿಂಸೆಗಿಲ್ಲ,
ಮಾನವೀಯತೆಗಿರುವ ಶಕ್ತಿ ಹತ್ಯೆಗಿಲ್ಲ,
ನಗುವಿಗಿರುವ ಶಕ್ತಿ ಕೋಪಕ್ಕಿಲ್ಲ,
ಒಳ್ಳೆಯತನಕ್ಕಿರುವ ಶಕ್ತಿ ದುಷ್ಟತನಕ್ಕಿಲ್ಲ,
ಇದು ರಷ್ಯಾ ಉಕ್ರೇನ್ ಜನರಿಗೆ ಮಾತ್ರವಲ್ಲ,
ಇಡೀ ಮಾನವ ಕುಲದ – ನಾಗರಿಕ ಸಮಾಜದ ಅಂತಿಮ ಸತ್ಯ……
ನಿನ್ನೆ ದಿನಾಂಕ 11/10/2022 ಮಂಗಳವಾರ ಬೆಂಗಳೂರಿನ ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಜಯಪ್ರಕಾಶ್ ನಾರಾಯಣ್ ಅವರ ಹುಟ್ಟುಹಬ್ಬ ಮತ್ತು ಜೆಪಿ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದೆನು. ರಾಷ್ಟ್ರದ ನರ್ಮದಾ ಬಚಾವೋ ಆಂದೋಲನದ ಹೋರಾಟಗಾರ್ತಿ ಮೇದಾ ಪಾಟ್ಕರ್, ಹಿರಿಯ ರಾಜಕಾರಣಿಗಳಾದ ಪಿಜಿಆರ್ ಸಿಂಧ್ಯಾ, ಬಿ. ಎಲ್. ಶಂಕರ್, ಬಿ. ಆರ್. ಪಾಟೀಲ್, ನಾಡಗೌಡ ಅವರೊಂದಿಗೆ ವೇದಿಕೆ ಹಂಚಿಕೊಂಡು ಕೆಲ ಮಾತುಗಳನ್ನು ಆಡಿದೆನು.
ಮಹಾತ್ಮ ಗಾಂಧಿಯವರ ನಂತರ ಒಂದು ಬಲಿಷ್ಠ ಸರ್ಕಾರ ತುರ್ತು ಪರಿಸ್ಥಿತಿಯ ವಿರುದ್ಧ ಜನಾಭಿಪ್ರಾಯ ರೂಪಿಸಿ ಅದನ್ನು ಸೋಲಿಸಿ ಪರ್ಯಾಯ ಸರ್ಕಾರದ ರಚನೆಗೆ ಕಾರಣರಾದ ಮಹಾನ್ ಚೇತನ ಜಯಪ್ರಕಾಶ್ ನಾರಾಯಣ್. ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆಯಾದಾಗ ಜೆಪಿ ಯಂತವರ ಅವಶ್ಯಕತೆ ತುಂಬಾ ಇರುತ್ತದೆ. ಆ ನಿಟ್ಟಿನಲ್ಲಿ ಅವರನ್ನು ಮತ್ತೊಮ್ಮೆ ನೆನೆಯುತ್ತಾ…
ಭಾರತ ಯಾತ್ರಾ ಕೇಂದ್ರದ ಶ್ರೀ ಕೆ.ವಿ. ನಾಗರಾಜ ಮೂರ್ತಿ ಮತ್ತು ಜೆ.ಪಿ.ವಿಚಾರ ವೇದಿಕೆಯ ಆರ್. ದಯಾನಂದ್ ಅವರಿಗೆ ಕೃತಜ್ಞತೆಗಳು.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……