ಅಜ್ಜೀ ಹೇಗಿದ್ದೀರಿ? ಔಷಧ ಎಲ್ಲ ಉಂಟಾ? ಮನೆಯಲ್ಲಿ ಒಬ್ಬರೇ ಇರುವಾಗ ಬಾಗಿಲು ಭದ್ರ ಮಾಡಿ, ಅಪರಿಚಿತರಿಗೆ ಬಾಗಿಲು ತೆರೆಯಬೇಡಿ, ಮನೆ ಮಂದಿಯ ಫೋನ್ ನಂಬ್ರ ಇಟ್ಟುಕೊಳ್ಳಿ!
ಇದು ಸಂಬಂಧಿಕರೋ, ಬೀಟ್ ಪೊಲೀಸರೋ ತೋರುವ ಕಾಳಜಿ ಎಂದುಕೊಂಡಿದ್ದೀರಾ? ಅಲ್ಲ. ನಮ್ಮ ಮೂಡುಬೆಳ್ಳೆಯ ಅಂಚೆಯಣ್ಣ ರಮೇಶ್ ನಾಯಕ್ ಪೆರಣಂಕಿಲ ಅವರು ಮನೆ ಮನೆಗೆ ತೆರಳುವಾಗ ಹಿರಿಯರಲ್ಲಿ ಹಂಚಿಕೊಳ್ಳುವ ಪ್ರೀತಿಯ ಟಪ್ಪಾಲು.
ತಾವು ಅಂಚೆ ಬಟವಾಡೆಗೆ ತೆರಳುವ ಮನೆಗಳನ್ನು ತಮ್ಮ ಸ್ವಂತದವರದ್ದೇ ಎಂದು ಭಾವಿಸುವ ಅವರು ಮನೆಯ ಮಕ್ಕಳಿಂದ ಹಿಡಿದು ಅಜ್ಜ – ಅಜ್ಜಿಯರಿಗೂ ಪ್ರೀತಿಪಾತ್ರರು. ಅವರಲ್ಲಿ ಕಾಳಜಿಯ ಮಾತುಗಳನ್ನಾಡುತ್ತಾ ಅವರೊಂದಿಗೆ ಒಬ್ಬರಾಗುವ ಸಹೃದಯಿ ಅವರು.
ಸರಕಾರದ ಯೋಜನೆಗಳ ಬಗ್ಗೆ, ಅಂಚೆ ಇಲಾಖೆಯ ಸೇವೆಗಳ ಬಗ್ಗೆ ಪ್ರತಿ ಮನೆಗೂ ಮಾಹಿತಿ ಮುಟ್ಟಿಸುವ ಇವರು, ಇವರ ಬೀಟಿನಲ್ಲಿ ಅರ್ಹರು ಸರಕಾರದ ಸವಲತ್ತುಗಳಿಂದ ವಂಚಿತರಾಗಬಾರದು ಎಂಬ ಕಾಳಜಿ ಉಳ್ಳವರು. ಕೆಲಸದಲ್ಲಿ ನಿಷ್ಠೆ, ಪ್ರಾಮಾಣಿಕತೆ ಹೊಂದಿರುವ ಜತೆಗೆ ತನ್ನ ಕೆಲಸವನ್ನು ಇಷ್ಟಪಟ್ಟು ಮಾಡುವ ಅಪರೂಪದ ವ್ಯಕ್ತಿ.
ಕೋವಿಡ್ ಸಂದರ್ಭದಲ್ಲಿ ಟಪ್ಪಾಲು ಒಯ್ಯುವಾಗ ‘ಮನೆಯಲ್ಲೇ ಇರಿ, ಸುರಕ್ಷಿತರಾಗಿರಿ’, ‘ಹೊರಗಿನಿಂದ ಬಂದವರು ಕೈಕಾಲು, ಮುಖ ತೊಳೆದುಕೊಳ್ಳಿ’ ಹೀಗೆ ಸುರಕ್ಷತಾ ಸಂದೇಶವನ್ನು ಯಾವ ಮೇಲಧಿಕಾರಿಗಳ ಸೂಚನೆ ಇಲ್ಲದೆಯೇ ಅಭಿಯಾನವೆಂಬಂತೆ ನಡೆಸಿದವರು. ಕೋವಿಡ್ ಲಸಿಕೆಯ ಮಾಹಿತಿಯನ್ನು ಮನೆ ಮನೆಗೆ ಮುಟ್ಟಿಸಿದವರು.
ಹೀಗೆ ಅಂಚೆಯಣ್ಣನ ಬಾಂಧವ್ಯ, ಸ್ನೇಹ, ಕಾಳಜಿಗೆ ಮೂಡುಬೆಳ್ಳೆಯ ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ರಾಷ್ಟ್ರೀಯ ಅಂಚೆ ದಿನದ ಪ್ರಯುಕ್ತ (ಅ. 10) ಪ್ರೀತಿಯ ಟಪ್ಪಾಲು ವಿತರಿಸುವ ರಮೇಶಣ್ಣನಿಗೆ ನನ್ನ ಅಭಿಮಾನದ ವಂದನೆಗಳು.
-ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ