ಜನಸಂಖ್ಯೆಯ ಸ್ಪೋಟ
ಮತ್ತು
ಜನಸಂಖ್ಯೆಯ ನಿಯಂತ್ರಣ
ಹಾಗು
ಪರ ವಿರೋಧ ಚರ್ಚೆಗಳು
ಜೊತೆಗೆ
ವಾಸ್ತವ ಅಂಶಗಳು……..
ಭಾರತದ ಜನಸಂಖ್ಯೆಯನ್ನು ನಿಯಂತ್ರಿಸುವ ಬಗ್ಗೆ ಸ್ವಲ್ಪ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಿವೆ. ಈಗ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಸಾಮಾನ್ಯ ಜನರು ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಎಂದಿನಂತೆ ಪರ ವಿರೋಧಗಳು ವ್ಯಕ್ತವಾಗುತ್ತಿವೆ.
ದೇಶ ಒಗ್ಗೂಡಿ ಸ್ವಾತಂತ್ರ್ಯ ಪಡೆದು ಸಂವಿಧಾನಾತ್ಮಕ ಸರ್ಕಾರ ರಚನೆಯಾದಾಗ ಭಾರತದ ಪ್ರಜೆಗಳ ಸಂಖ್ಯೆ ಸುಮಾರು 30 ಕೋಟಿ. ಈಗ ಸುಮಾರು 140 ಕೋಟಿಯ ಸಮೀಪವಿದೆ. ಅಂದರೆ ಸಾವಿರಾರು ವರ್ಷಗಳಿಂದ ಒಟ್ಟು ಜನಸಂಖ್ಯೆ 30 ಕೋಟಿಗೆ ಸೀಮಿತವಾಗಿದ್ದರೆ ಕೇವಲ 75 ವರ್ಷಗಳಲ್ಲಿ 110 ಕೋಟಿಯಷ್ಟು ಹೆಚ್ಚಾಗಿದೆ. ಇದನ್ನು ಯಾವುದೇ ಅನುಮಾನವಿಲ್ಲದೇ ಜನಸಂಖ್ಯೆಯಾ ಸ್ಪೋಟ ಎಂದು ಕರೆಯಬಹುದು. ಸಹಜವಾಗಿ ಅದಕ್ಕೆ ವಿರುದ್ಧವಾದ ಜನಸಂಖ್ಯೆ ನಿಯಂತ್ರಣ ಚರ್ಚೆಗೆ ಬಂದಿದೆ.
ಮೇಲ್ನೋಟಕ್ಕೆ ಜನಸಂಖ್ಯೆ ನಿಯಂತ್ರಣ ಮಾಡುವುದಕ್ಕೆ ಯಾರದೇ ವಿರೋಧ ಇರುವುದಿಲ್ಲ. ಏಕೆಂದರೆ ಇಷ್ಟೊಂದು ದೊಡ್ಡ ಪ್ರಮಾಣದ ಜನಸಂಖ್ಯೆ ಖಂಡಿತ ವ್ಯಕ್ತಿಗತ ಜೀವನಮಟ್ಟ ದೃಷ್ಟಿಯಿಂದ ಒಳ್ಳೆಯದಲ್ಲ. ಪ್ರಕೃತಿಯ ಮೇಲೆ ಮನುಷ್ಯನ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ಒತ್ತಡ ಬೀಳುತ್ತದೆ ಮತ್ತು ಅದರಿಂದ ಅಪಾರ ಕಷ್ಟ ನಷ್ಟಗಳಿಗೆ ಸಿಲುಕಬೇಕಾಗುತ್ತದೆ. ಈಗಾಗಲೇ ಅದರ ದುಷ್ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ.
ಆದರೂ ಜನಸಂಖ್ಯೆ ನಿಯಂತ್ರಣ ಮಾಡಲು ಒಂದಷ್ಟು ವಿರೋಧವು ವ್ಯಕ್ತವಾಗುತ್ತಿದೆ. ಏಕೆಂದರೆ ಭಾರತ ಒಂದು ಬೃಹತ್ ವೈವಿಧ್ಯಮಯ ದೇಶ. ಈಗ ಆ ದೇಶದಲ್ಲಿ ಮನಸ್ಸುಗಳು ಒಡೆದಿವೆ. ಧಾರ್ಮಿಕ ಮತ್ತು ರಾಜಕೀಯ ಕಾರಣಗಳಿಗಾಗಿ ಸಮನ್ವಯ ಸಾಧ್ಯವಾಗುತ್ತಿಲ್ಲ. ಕೇವಲ ಹಿಂದೂಗಳು ಮಾತ್ರವಿದ್ದು ಸಂವಿಧಾನಾತ್ಮಕವಾಗಿ ಹಿಂದೂ ಧರ್ಮದ ಆಧಾರದಲ್ಲಿ ದೇಶ ಆಡಳಿತ ನಡೆಸುತ್ತಿದ್ದಿದ್ದರೆ ಜನಸಂಖ್ಯೆ ನಿಯಂತ್ರಣ ಒಂದು ವಿವಾದ ಆಗುತ್ತಲೇ ಇರಲಿಲ್ಲ. ಆದರೆ ಇಲ್ಲಿ ಸುಮಾರು 20 ಕೋಟಿಯಷ್ಟು ಮುಸ್ಲಿಂ ಸಮುದಾಯ ಈ ದೇಶದ ಪೌರತ್ವ ಪಡೆದಿದೆ ಮತ್ತು ಅದಕ್ಕೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಹ ಇದೆ. ಅದನ್ನು ನಿರ್ಲಕ್ಷಿಸಿ ತೀರ್ಮಾನ ತೆಗೆದುಕೊಳ್ಳುವುದು ಸಮಸ್ಯೆಯ ಮರು ಸೃಷ್ಟಿಗೆ ಕಾರಣವಾಗಬಹುದು.
ಆದ್ದರಿಂದ ಇಲ್ಲಿ ವಿಷಯವನ್ನು ನೇರವಾಗಿ ಮತ್ತು ಮುಕ್ತವಾಗಿ ಚರ್ಚಿಸಬೇಕು ಮತ್ತು ವಿಷಯವನ್ನು ಸಮಗ್ರವಾಗಿ ಪರಿಶೀಲಿಸಬೇಕು.
ಇಸ್ಲಾಂ ಧಾರ್ಮಿಕ ನಂಬಿಕೆಯ ಪ್ರಕಾರ ಸಂತಾನಹರಣ ಬೇಡ ಎಂಬ ಅಭಿಪ್ರಾಯವಿದೆ. ಮಕ್ಕಳು ದೇವರ ವರ ಎಂದು ಭಾವಿಸಲಾಗುತ್ತದೆ. ಆ ಕಾರಣದಿಂದ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿ ಹಿಂದೂಗಳ ಸಂಖ್ಯೆ ಕಡಿಮೆಯಾಗಿ ಮುಂದೆ ದೇಶ ಮತ್ತೊಮ್ಮೆ ಧರ್ಮದ ಆಧಾರದ ಮೇಲೆ ವಿಭಜನೆ ಆಗಬಹುದು ಅಥವಾ ದೇಶ ಇಸ್ಲಾಮೀಕರಣಕ್ಕೆ ಒಳಗಾಗಬಹುದು ಎಂಬ ಭಯ ಮತ್ತು ಅನುಮಾನ ಕಟ್ಟಾ ಹಿಂದುತ್ವವಾದಿಗಳದು.
ಹಾಗೆಯೇ, ಹಿಂದುತ್ವದ ಪ್ರಬಲ ಪ್ರತಿಪಾದನೆಯ ಸರ್ಕಾರ ದ್ವೇಷದಿಂದ ನಮ್ಮ ಮೇಲೆ ನಿಯಂತ್ರಣ ಸಾಧಿಸಲು ಮತ್ತು ನಮ್ಮ ಜನಸಂಖ್ಯೆ ಕಡಿಮೆ ಮಾಡಲು ನಮ್ಮ ಧಾರ್ಮಿಕ ನಂಬಿಕೆಗಳ ಮೇಲೆ ಪ್ರಹಾರ ಮಾಡುತ್ತಿದೆ. ನಮ್ಮ ಮೇಲೆ ಅನುಮಾನದಿಂದ ದೌರ್ಜನ್ಯ ಮಾಡುತ್ತಿದೆ. ನಾವು ಸಹ ಈ ದೇಶದ ಸಹಜ ಪ್ರಜೆಗಳು ಎಂದು ಮುಸ್ಲಿಂಮರು ಭಾವಿಸುತ್ತಾರೆ.
ಸಮಸ್ಯೆ ಉದ್ಭವವಾಗುವುದೇ ಇಲ್ಲಿ. ಇಡೀ ದೇಶ ಸಂಪೂರ್ಣವಾಗಿ ಯಾವುದೇ ಒಂದು ಪಕ್ಷ ಅಥವಾ ಸರ್ಕಾರದ ಹಿಡಿತದಲ್ಲಿ ಇರುವುದಿಲ್ಲ. ಸ್ವಲ್ಪ ಮಟ್ಟಿಗೆ ಈ ಕ್ಷಣದಲ್ಲಿ ಜನಪ್ರತಿನಿಧಿಗಳ ಬಹುಮತ ಇರಬಹುದಷ್ಟೇ. ಇತರೆ ಬೇರೆ ಪಕ್ಷಗಳು ಸಹ ಅಷ್ಟೇ ಪ್ರಬಲವಾಗಿವೆ. ಅವು ಜನಸಂಖ್ಯೆ ನಿಯಂತ್ರಣ ವಿರೋಧಿಸಬಹುದು.
ಈಗ ಮಾಡುವುದಾದರು ಏನು ? ಮತ್ತು ಹೇಗೆ ?
ಹಿಂದೆ ಎರಡೂ ಧರ್ಮಗಳ ಜನರಲ್ಲಿ ಮಕ್ಕಳ ನಿಯಂತ್ರಣ ಇರಲೇ ಇಲ್ಲ. ಹಿಂದೂ ಮುಸ್ಲಿಂ ಎರಡೂ ಕುಟುಂಬಗಳಲ್ಲಿ 6/8/10/12/14 ಹೀಗೆ ಮಕ್ಕಳಿರುತ್ತಿದ್ದರು. ಆದರೆ ಆಧುನಿಕತೆ ಬೆಳೆದಂತೆ, ಶಸ್ತ್ರಚಿಕಿತ್ಸೆಯ ಅನುಕೂಲಗಳು ಮತ್ತು ಕಡಿಮೆ ಮಕ್ಕಳ ಪ್ರಯೋಜನ ಮನವರಿಕೆ ಆದಂತೆ ಇತ್ತೀಚೆಗೆ ಬಹುತೇಕ ಒಂದು ಅಥವಾ ಎರಡು ಮಕ್ಕಳಿಗೆ ಸೀಮಿತವಾಗುತ್ತಿದೆ. ಇದು ಸಾಮಾನ್ಯವಾಗಿ ಎರಡೂ ಪಂಗಡಗಳಿಗೆ ಅನ್ವಯಿಸುತ್ತದೆ.
ಆದರೂ ಎರಡೂ ಕಡೆಯ ಕೆಲವು ಮೂಲಭೂತವಾದಿಗಳು ದ್ವೇಷ ಅಸೂಯೆ ಒಳಗಿಟ್ಟುಕೊಂಡು ಇದನ್ನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ.
ಇರಲಿ ಸದ್ಯಕ್ಕೆ ಭಾರತದಲ್ಲಿ ಜನಸಂಖ್ಯೆಯ ನಿಯಂತ್ರಣದ ಅವಶ್ಯಕತೆ ಇದೆ. ಇದು ಸಹ ತಾತ್ಕಾಲಿಕ. ಏಕೆಂದರೆ ಮತ್ತೆ ಈ ನಿಯಂತ್ರಣ ಚೀನಾದಲ್ಲಿ ಆದಂತೆ ಮತ್ತೆ ಬೇರೆ ಸಮಸ್ಯೆಗೆ ಕಾರಣವಾಗುತ್ತದೆ. ಆಗ ಮತ್ತೆ ನಿಯಂತ್ರಣ ಸಡಿಲಿಸಬಹುದು.
ಈಗ ಸುಲಭವಾಗಿ ಈ ಸಮಸ್ಯೆ ಪರಿಹರಿಸಲು ಸರ್ಕಾರ ಏನು ಮಾಡಬಹುದು ?..
1) ಭಾರತ ಸರ್ಕಾರ ದೇಶದ ಅತ್ಯುತ್ತಮ ಸಮಾಜ ವಿಜ್ಞಾನಿಗಳು, ಆರ್ಥಿಕ ತಜ್ಞರು, ಕಾನೂನು ವಿದ್ವಾಂಸರು, ಚಿಂತಕರು ಮತ್ತು ಆಧ್ಯಾತ್ಮಿಕ ಗುರುಗಳನ್ನು ಒಳಗೊಂಡ 11 ಜನರ ಒಂದು ಸಮಿತಿ ರಚಿಸಬೇಕು. ಸುಮಾರು 6 ತಿಂಗಳು ಅಥವಾ ಒಂದು ವರ್ಷದ ಒಳಗೆ ಜನಸಂಖ್ಯೆ ನಿಯಂತ್ರಣದ ಸಾಧಕ ಭಾದಕಗಳ ಬಗ್ಗೆ ಬಹುಮತದ ಅಥವಾ ಸರ್ವಾನು ಮತದ ವರದಿ ಪಡೆಯಬೇಕು. ಒಂದು ವೇಳೆ ಜನಸಂಖ್ಯೆಯ ನಿಯಂತ್ರಣದ ಅವಶ್ಯಕತೆ ಇಲ್ಲಾ ಎಂದಾದಲ್ಲಿ ಅದನ್ನು ಪರಿಶೀಲಿಸಬೇಕು.
2) ಈಗಿನ ಬಿಜೆಪಿ ಸರ್ಕಾರ ಮುಸ್ಲಿಂ ವಿರೋಧಿ ಎಂಬ ಭಾವನೆ ಅಥವಾ ಆರೋಪವಿದೆ. ಕಾಂಗ್ರೆಸ್ ಕಮ್ಯುನಿಸ್ಟ್ ಜನತಾದಳ ಸೇರಿ ಪ್ರಾದೇಶಿಕ ಪಕ್ಷಗಳಿಗೆ ಮುಸ್ಲಿಂ ಜನರ ಮೇಲೆ ನಿಯಂತ್ರಣವಿದೆ. ಆದ ಕಾರಣ ಈ ವರದಿಯ ಆಧಾರದ ಮೇಲೆ ಸರ್ವ ಪಕ್ಷ ಸಭೆಗಳನ್ನು ನಿರಂತರವಾಗಿ ಮತ್ತು ಗಂಭೀರವಾಗಿ ನಡೆಸಿ ಒಪ್ಪಿಗೆ ಪಡೆಯುವ ಸತತ ಪ್ರಯತ್ನ ಮಾಡಬೇಕು.
3) ಇದಕ್ಕಾಗಿಯೇ ಸಂಸತ್ತಿನ ವಿಶೇಷ ಅಧಿವೇಶನ ಕರೆದು ದೀರ್ಘವಾಗಿ ಚರ್ಚಿಸಬೇಕು.
4) ಸರ್ವೋಚ್ಚ ನ್ಯಾಯಾಲಯದ ಪೂರ್ಣಪೀಠಕ್ಕೆ ಒಪ್ಪಿಸಿ ಒಂದು ಅಭಿಪ್ರಾಯ ಪಡೆಯಬೇಕು.
ಕಾನೂನು ಮಾಡಿದ ನಂತರ ಕೋರ್ಟ್ ತೀರ್ಪು ನೀಡುವ ಬದಲು ಈ ರೀತಿಯ ವಿಷಯಗಳಲ್ಲಿ ಮೊದಲೇ ಒಂದು ಅಭಿಪ್ರಾಯ ಉತ್ತಮ. ( ಇದಕ್ಕೆ ಸಂವಿಧಾನದಲ್ಲಿ ಅವಕಾಶ ಇದ್ದರೆ ಮಾತ್ರ.)
5) ಮುಸ್ಲಿಂ ಧಾರ್ಮಿಕ ಮುಖಂಡರನ್ನು ಸಹ ಮಾತುಕತೆಗೆ ಆಹ್ವಾನಿಸಿ ಅವರ ಮನವೊಲಿಸುವ ಪ್ರಯತ್ನ ಸಹ ಮಾಡಬೇಕು. ಅವರಿಗೆ ದೇಶದ ಹಿತಾಸಕ್ತಿಗೆ ತಾತ್ಕಾಲಿಕ ಜನಸಂಖ್ಯೆ ನಿಯಂತ್ರಣ ಅವಶ್ಯಕತೆ ಇದೆ. ಇದು ಧಾರ್ಮಿಕ ನಂಬಿಕೆಗಿಂತ ಮುಖ್ಯ ಎಂದು ಹೇಳಬೇಕು.
ಇಷ್ಟೊಂದು ಕ್ರಮಬದ್ಧವಾಗಿ ಮಸೂದೆಯನ್ನು ಅಂಗೀಕರಿಸಿದರೆ ಸಮರ್ಥನೆ ಮಾಡುವವರೆಗೆ ಒಂದು ಕಾರಣ ಮತ್ತು ವಿರೋಧಿಸುವವರಿಗೆ ಒಂದು ಸಮಾಧಾನ ಸಿಗಬಹುದು.
ಏಕೆಂದರೆ ದ್ವೇಷ ಅಸೂಯೆ ಒತ್ತಡದಿಂದ ಸರ್ಕಾರ ನಡೆಸಬಾರದು.
ಬುದ್ದನ ಅಹಿಂಸೆಯಿಂದ,
ಗಾಂಧಿಯ ಸತ್ಯ ಮತ್ತು ನೈತಿಕತೆಯಿಂದ,
ಅಂಬೇಡ್ಕರ್ ಅವರ ಸಂವಿಧಾನದಿಂದ ಈ ದೇಶವನ್ನು ಮುನ್ನಡೆಸಬೇಕು.
ಆಗ ಮಾತ್ರ ವಿಶ್ವಗುರುವಾಗಲು ಸಾಧ್ಯ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……