ತುಳು ಭಾಷೆ ,ತುಳು ಸಂಸ್ಕೃತಿ ಮತ್ತು ಶತಶತಮಾನಗಳ ಕಾಲ ತುಳುನಾಡಿನ ರಾಜಧರ್ಮವಾಗಿ ಮೆರೆದ ತುಳುನಾಡಿನ ಮೂಲ ಧರ್ಮ ಮಾತೃಮೂಲೀಯ ಅವೈದಿಕ ತೌಳವ ಧರ್ಮ ಭಿನ್ನ ಭಿನ್ನವಾಗಿ ಕಾಣಲು ಅಥವಾ ಬೇರ್ಪಡಿಸಲು ಸಾಧ್ಯವೇ ಇಲ್ಲದಂತೆ ಪರಸ್ಫರ ಹೆಣೆದು ಕೊಂಡಿವೆ . ಒಂದನ್ನು ಬಿಟ್ಟರೆ ಇನ್ನೊಂದಕ್ಕೆ ಅಸ್ತಿತ್ವವೇ ಇರುವುದಿಲ್ಲ !
” ಬೆರ್ಮೆರ್ ” ಅವೈದಿಕ ತೌಳವ ಧರ್ಮದ ಮೂಲ ಹಾಗೂ ಏಕೈಕ ದೇವರು . ತುಳುನಾಡು , ತುಳುನಾಡಿನ ಸಾರತ್ತೊಂಜಿ ದೈವಗಳು ,ನಾಗೆ , ಮೈಸಂದಾಯೆ ಹಾಗೂ ಏಳ್ವೆರ್ ಸಿರಿಗಳ ಸೃಷ್ಟಕರ್ತ ಈ ಬೆರ್ಮೆರ್ ಎಂಬುದು ಅವೈದಿಕ ತೌಳವ ಧರ್ಮದ ಪ್ರಾಚೀನ ಮೂಲ ನಂಬಿಕೆ . ತುಳುನಾಡಿನ ಎಲ್ಲಾ ಪ್ರಾಚೀನ ದೈವ ಪಾಡ್ದನ ಹಾಗೂ ಸಂಧಿ ಪಾಡ್ದನಗಳಲ್ಲಿ ಈ ವಿಚಾರವನ್ನು ಸ್ಪಷ್ಟವಾಗಿ ಹಾಗೂ ನಿಸ್ಸಂದಿಗ್ಧವಾಗಿ ಸಾರಲಾಗಿದೆ .
ತುಳುನಾಡಿನಾದ್ಯಂತವಿರುವ ತೌಳವರ ಮೂಲ ಆರಾಧನಾ ಕೇಂದ್ರಗಳಾದ “ಆದಿ ಆಲಡೆ” ಹಾಗೂ “ಮೂಲಸ್ಥಾನ” ಗಳಲ್ಲಿ ಹಾಗೂ “ಗರಡಿ” ಗಳಲ್ಲಿ “ಪ್ರಧಾನ ದೇವರು” ಎಂದು ಇಂದಿಗೂ ಆರಾಧಿಸಲ್ಪಡುತ್ತಿರುವುದು ಇದೇ “ಬೆರ್ಮೆರ್” .
ಸುಮಾರು ಕ್ರಿಸ್ತ ಪೂರ್ವ ಒಂದನೇ ಶತಮಾನದಲ್ಲಿ ಜೀವಿಸಿದ್ದ “ತುಳುನಾಡ ಸಿರಿ” – ಸುಮಾರು ಕ್ರಿ . ಶ .6 ನೇ ಶತಮಾನದಿಂದ ಕ್ರಿ.ಶ . 14 ನೆ ಶತಮಾನದವರೆಗೆ ತುಳುನಾಡನ್ನು ಸುಮಾರು ಒಂದು ಸಾವಿರ ವರ್ಷಗಳ ದೀರ್ಘ ಕಾಲ ಸ್ವತಂತ್ರ ರಾಜರಾಗಿ ಆಳಿದ್ದ
” ಆಲುಪ ರಾಜವಂಶ ” – ಹಾಗೂ ಕ್ರಿ . ಶ . ಹದಿನಾರನೇ ಶತಮಾನದಲ್ಲಿ ಜೀವಿಸಿದ್ದರೆನ್ನಲಾದ ತುಳುನಾಡಿನ ಕಾರಣೀಕ ಪುರುಷರಾದ ಕೋಟಿ ಚೆನ್ನಯರ “ಕುಲದೇವರು” ಎಂದು ಆರಾಧಿಸಲ್ಪಟ್ಟದ್ದು ಇದೇ “ಬೆರ್ಮೆರ್ “.
ತುಳುನಾಡಿನ ಮೂಲ ಧರ್ಮ ಮಾತೃಮೂಲೀಯ ಅವೈದಿಕ ತೌಳವ ಧರ್ಮೀಯರ ಮೂರು ಮೂಲ ಧಾರ್ಮಿಕ ಆಚರಣೆಗಳಾದ ಬೆರ್ಮೆರಾಧನೆ , ನಾಗಾರಾಧನೆ ಹಾಗೂ ದೈವಾರಾಧನೆಗಳು “ತುಳುನಾಡು ಬೆರ್ಮೆರ್ ನ ಸೃಷ್ಟಿ” ಎಂಬ ಈ ಮೂಲ ಧಾರ್ಮಿಕ ನಂಬಿಕೆಯ ಮೇಲೆ ಸಂಪೂರ್ಣವಾಗಿ ನಿರ್ಭರವಾಗಿವೆ ಹಾಗೂ ತುಳುನಾಡಿನ ಈ ಆರಾಧನೆಗಳಿಗೆ ಸಂಬಂಧಿಸಿದ ಎಲ್ಲಾ ಪಾಡ್ದನ ಹಾಗೂ ಸಂಧಿ ಪಾಡ್ದನಗಳು ತುಳು ಭಾಷೆಯಲ್ಲಿಯೇ ಇವೆ .
ತುಳುನಾಡಿನ ಮೂಲ ಧರ್ಮ ಮಾತೃಮೂಲೀಯ ಅವೈದಿಕ ತೌಳವ ಧರ್ಮೀಯರು ವೇದಗಳನ್ನಾಗಲೀ , ವೈದಿಕ ಶಾಸ್ತ್ರಗಳನ್ನಾಗಲೀ ಅನುಸರಿಸುವರಲ್ಲ . ಧಾರ್ಮಿಕವಾಗಿ ಹದಿನಾರು ಕಟ್ಟಳೆಗಳು ಹಾಗೂ ಸಾಮಾಜಿಕವಾಗಿ ಹದಿನಾಲ್ಕು ಕಟ್ಟುಗಳನ್ನು ರೂಪಿಸಿಕೊಂಡು ಶತಶತಮಾನಗಳ ಕಾಲ ತುಳು ಸಂಸ್ಕೃತಿ ಹಾಗೂ ಅವೈದಿಕ ತೌಳವ ಧರ್ಮವನ್ನು ತುಳುನಾಡಿನಾದ್ಯಂತ ಕಟ್ಟಿ ಬೆಳೆಸಿ ಸಮೃದ್ಧ ಹಾಗೂ ಸಂತೃಪ್ತ ಜೀವನವನ್ನು ಬಾಳಿದವರು . ಬ್ರಿಟಿಷರ ಆಡಳಿತ ಕಾಲದಿಂದಲೂ ಅಂದರೆ ಕ್ರಿ.ಶ. 1872 ನೇ ಇಸವಿಯಿಂದಲೂ ತುಳುನಾಡಿನ ಈ ಹದಿನಾಲ್ಕು ಕಟ್ಟುಗಳು ಹಾಗೂ ಹದಿನಾರು ಕಟ್ಟಳೆಗಳಿಂದ ಪ್ರಣೀತವಾದ “ಅಳಿಯ ಕಟ್ಟ್ ಆಕ್ಟ್ ” ಎಂಬ ಪ್ರತ್ಯೇಕ ಹಿಂದೂ ನಾಗರಿಕ ಸಂಹಿತೆಯನ್ನು ಶಾಸನಾತ್ಮಕವಾಗಿ ಪಡೆದವರು ನಮ್ಮ ತುಳುನಾಡಿನ ಅವೈದಿಕ ತೌಳವ ಧರ್ಮೀಯರು.
” ತುಳುನಾಡು ಬೆರ್ಮೆರ್ ನ ಸೃಷ್ಟಿ” ಎಂಬ ತುಳುನಾಡಿನ ಮೂಲ ಧರ್ಮ ಮಾತೃಮೂಲೀಯ ಅವೈದಿಕ ತೌಳವ ಧರ್ಮದ ಮೂಲ ನಂಬಿಕೆಯನ್ನೇ ವಿಕೃತಗೊಳಿಸಿ ಅದರ ಮೂಲ ಧಾರ್ಮಿಕ ಅಸ್ಮಿತೆಯನ್ನೇ ಸರ್ವನಾಶಗೊಳಿಸಲು ಹಾಗೂ ಮೂಲತ: ತುಳುನಾಡಿಗೆ ಹೊರಪ್ರಾಂತ್ಯಗಳಿಂದ ವಲಸೆ ಬಂದಿರುವ ವೈದಿಕ ಪಂಗಡಗಳನ್ನು ತುಳುನಾಡಿನ ಯಜಮಾನರೆಂದೂ ಇಲ್ಲಿನ ಮೂಲ ನಿವಾಸಿಗಳಾದ ಅವೈದಿಕ ತೌಳವ ಧರ್ಮೀಯರನ್ನು ವೈದಿಕರ ಒಕ್ಕಲುಗಳು ಎಂದು ಬಿಂಬಿಸಲು ಕೇವಲ 350 ವರ್ಷಗಳ ಹಿಂದೆ ಕೇರಳದ ಮಲಬಾರ್ ಪ್ರಾಂತ್ಯದ ಕೆಲವು ಕುತಂತ್ರಿ ವೈದಿಕರಿಂದ ರಚಿಸಲ್ಪಟ್ಟಿರುವ “ಕೇರಳೋತ್ಪತ್ತಿ” ಎಂಬ ಕಪೋಲಕಲ್ಪಿತ ಪೌರಾಣಿಕ ಕಾದಂಬರಿಯ “ತುಳುನಾಡು ಪರಶುರಾಮ ಸೃಷ್ಟಿ ” ಎಂಬ ಸುಳ್ಳು ಕಥೆಯನ್ನು ವೈಭವೀಕರಿಸಲು ತುಳುನಾಡಿನ ಕಾರ್ಕಳ ತಾಲೂಕಿನ ಬೈಲೂರು ಗ್ರಾಮದಲ್ಲಿ ಕೋಟ್ಯಂತರ ರೂಪಾಯಿ ಸಾರ್ವಜನಿಕ ತೆರಿಗೆ ಹಣವನ್ನು ಖರ್ಚು ಮಾಡಿ “ತುಳುನಾಡಿನ ಸೃಷ್ಟಿ ಕರ್ತ” ಪರಶುರಾಮರಿಗೆ “ಥೀಮ್ ಪಾರ್ಕ್ ” ಒಂದನ್ನು ರಚಿಸಿರುವ ತುಳುನಾಡಿನ ಹಿಂದೂ ಧರ್ಮರಕ್ಷಕರು
” ಪರಶುರಾಮರು ಹುಟ್ಟುವುದಕ್ಕಿಂತ ಸಾವಿರಾರು ವರ್ಷಗಳ ಮೊದಲೇ ಘಟಿಸಿದ್ದ ವಾಮನ ಅವತಾರದ ಕಾಲದಲ್ಲಿ ಬಲಿ ಚಕ್ರವರ್ತಿಯಿಂದ ಆಳಲ್ಪಡುತ್ತಿದ್ದ ಈ ನಮ್ಮ ತುಳುನಾಡನ್ನು ಪರಶುರಾಮರು ಸೃಷ್ಟಿಸಿದಾದ್ದರೂ ಹೇಗೆ ?! ” ಎಂಬ ಮೂಲಭೂತ ಪ್ರಶ್ನೆಗೆ ಸರಿಯಾದ ಹಾಗೂ ತಾರ್ಕಿಕವಾದ ಉತ್ತರವನ್ನು ನೀಡ ಬೇಕು .
ಜೈ ತುಳುನಾಡು !
- ಶಶಿಕಾಂತ ಆರ್ . ಶೆಟ್ಟಿ , ಕಟಪಾಡಿ .
( 29-09-2022 )