ಒಂದು ಸಣ್ಣ ಕುತೂಹಲಕ್ಕಾಗಿ ನಿಮ್ಮ ಮುಂದೆ ಕನಸಿನ ರಾಷ್ಟ್ರಗಳ ಪಟ್ಟಿ………
ವಿಶ್ವದಲ್ಲಿ ಸುಮಾರು 200 ದೇಶಗಳಿವೆ. ಅತ್ಯಂತ ಕಡುಬಡತನದ, ಅತ್ಯಂತ ಹೆಚ್ಚು ಹಿಂಸೆಯ, ಅತ್ಯಂತ ಹೆಚ್ಚು ಭ್ರಷ್ಟಾಚಾರದ, ಅತ್ಯಂತ ಹೆಚ್ಚು ಧಾರ್ಮಿಕ ಅಂಧತ್ವದ, ಅತ್ಯಂತ ಹೆಚ್ಚು ಅಸಮಾನತೆಯ, ಅತ್ಯಂತ ಹೆಚ್ಚು ಗುಲಾಮಿತನದ, ಅತ್ಯಂತ ಮಲಿನ ವಾತಾವರಣದ ದೇಶಗಳ ಜೊತೆಗೆ ಅತ್ಯಂತ ಶ್ರೀಮಂತ, ಅತ್ಯಂತ ಪ್ರಾಮಾಣಿಕತೆಯ, ಅತ್ಯಂತ ಸುರಕ್ಷತೆಯ, ಅತ್ಯಂತ ಸ್ವತಂತ್ರದ, ಅತ್ಯಂತ ಶುದ್ಧ ಪರಿಸರದ ಅತ್ಯಂತ ನೆಮ್ಮದಿಯ ದೇಶಗಳು ಸಹ ಇವೆ.
ಆಫ್ರಿಕಾದ ಕೆಲವು ದೇಶಗಳು ಅತ್ಯಂತ ಬಡತನದ, ಮಧ್ಯಪ್ರಾಚ್ಯದ ಕೆಲವು ದೇಶಗಳು ಅತ್ಯಂತ ಹಿಂಸಾತ್ಮಕವಾದ, ಏಷ್ಯಾದ ಕೆಲವು ದೇಶಗಳು ಅತ್ಯಂತ ಅಸಮಾನತೆಯ – ಭ್ರಷ್ಟತೆಯ, ದಕ್ಷಿಣ ಅಮೆರಿಕದ ಕೆಲವು ದೇಶಗಳು ಅತ್ಯಂತ ಮಾದಕ ವ್ಯಸನಗಳ ಬಲೆಯೊಳಗೆ ಸಿಲುಕಿ ನರಳುತ್ತಿವೆ.
ಹಾಗೆಯೇ ಇನ್ನೂ ಕೆಲವು ದೇಶಗಳು ಅತ್ಯಂತ ಆದರ್ಶ ಅಥವಾ ಮಾದರಿಯ ದೇಶಗಳಾಗಿ ನಮ್ಮ ಕಣ್ಣ ಮುಂದಿವೆ. ಅದೇ ಸ್ಕ್ಯಾನ್ಡಿನೋವಿಯಾ ದೇಶಗಳು (Scandinavian country’s )
ನಾರ್ವೆ – ಡೆನ್ಮಾರ್ಕ್ – ಸ್ವೀಡನ್ – ಫಿನ್ಲ್ಯಾಂಡ್ – ಐಸ್ಲ್ಯಾಂಡ್ – ಗ್ರೀನ್ಲೆಂಡ್ – ಫೆರೋರ್ ಐಲ್ಯಾಂಡ್ಸ್ – ಅಲ್ಯಾಂಡ್…. ಜೊತೆಗೆ ಯುರೋಪಿನ ಸ್ವಿಟ್ಜರ್ಲೆಂಡ್, ಆಸ್ಟ್ರಿಯ ಬೆಲ್ಜಿಯಂ ಮುಂತಾದ ಕೆಲವೇ ದೇಶಗಳು.
ಇಲ್ಲಿ ಅತ್ಯಂತ ಕಡಿಮೆ ಭ್ರಷ್ಟಾಚಾರ, ದರೋಡೆ, ಅತ್ಯಾಚಾರ, ಅಸಮಾನತೆ, ಮೋಸ ವಂಚನೆ, ಪ್ರಾಕೃತಿಕ ಸಂಪನ್ಮೂಲಗಳ ದುರುಪಯೋಗ, ಪರಿಸರ ನಾಶ, ಭಯೋತ್ಪಾದನೆ, ಮತಾಂಧತೆ ನಮಗೆ ಮಾದರಿಯಾಗಬೇಕಿದೆ.
ಈ ವ್ಯತ್ಯಾಸಗಳಿಗೆ ಕಾರಣವೇನೆ ಇರಲಿ ಅಂತಿಮವಾಗಿ ಫಲಿತಾಂಶಗಳ ಮೇಲೆಯೇ ನಾವು ಗಮನ ಕೇಂದ್ರೀಕರಿಸಬೇಕು…..
ಅಂದರೆ ಒಂದು ನಾಗರಿಕ ಸಮಾಜದ ಜನರ ಬದುಕಿನಲ್ಲಿ ಸಂತೋಷದ ದಿನಗಳು ಹೆಚ್ಚಾಗಿರಬೇಕು. ದಿನನಿತ್ಯದ ಅವಶ್ಯಕತೆಗಳ ಪೂರೈಕೆ, ದೈಹಿಕ ಮತ್ತು ಮಾನಸಿಕ ದೃಢತೆ, ಶಿಕ್ಷಣ ಆರೋಗ್ಯ ಮತ್ತು ರಕ್ಷಣೆ, ದೇಶ ಮತ್ತು ದೇಶದ ಜನಗಳ ಬಗ್ಗೆ ನಂಬಿಕೆ ಮತ್ತು ಪ್ರೀತಿ ಇವು ಸಾಮಾನ್ಯ ರೀತಿಯಲ್ಲಿ ಇದ್ದರೆ ಅಷ್ಟೇ ಸಾಕು ಬದುಕು ಎಲ್ಲಾ ಏರಿಳಿತಗಳ ನಡುವೆಯೂ ಸಹಜವಾಗಿರುತ್ತದೆ.
ಆದರೆ ಭಾರತದಂತ ನಮ್ಮ ದೇಶದಲ್ಲಿ ಬದುಕೇ ಒಂದು ಸಂಘರ್ಷಮಯ ವಾತಾವರಣದಲ್ಲಿ ಸಾಗುತ್ತದೆ. ಕೆಲವು ಜನರನ್ನು ಹೊರತುಪಡಿಸಿ ಬಹುತೇಕರು ಜೀವನದ ಕೊನೆಯವರೆಗೂ ಹೋರಾಡುತ್ತಲೇ ಇರುತ್ತಾರೆ. ಹಣ ಅಧಿಕಾರ ಆಸ್ತಿ ಇಲ್ಲದವರನ್ನು ಬಿಡಿ ದಿನವೂ ಗೋಳೇ. ಒಂದು ವೇಳೆ ನಿಮ್ಮ ಬಳಿ ಒಂದಷ್ಟು ಉತ್ತಮ ಸೌಕರ್ಯಗಳು ಇದ್ದರು ಆಗಲೂ ನೆಮ್ಮದಿ ಇರುವುದಿಲ್ಲ. ಇನ್ನೇನೋ ಸಮಸ್ಯೆಗಳು ಕಾಡುತ್ತಿರುತ್ತವೆ.
ಮನುಷ್ಯ ಸಂಬಂಧಗಳ ಮುಖವಾಡಗಳು, ವ್ಯಾವಹಾರಿಕ ಜಗತ್ತಿನ ಮೋಸ ಅಥವಾ ಅಪನಂಬಿಕೆಗಳು, ಸಾರ್ವಜನಿಕ ಬದುಕಿನ ಅಸಮಾನತೆ ಮತ್ತು ಭ್ರಷ್ಟಾಚಾರ, ಜಾತಿ ಮತ್ತು ಧಾರ್ಮಿಕ ಶೋಷಣೆಗಳು, ಒಟ್ಟು ತಿಳಿವಳಿಕೆಯ ಕೊರತೆ, ದುಷ್ಟರ ವಿಜೃಂಭಣೆ – ಒಳ್ಳೆಯವರ ಅಸಹಾಯಕತೆ ಎಲ್ಲವೂ ಸೇರಿ ಜೀವನ ಭಾರ ಎನಿಸುತ್ತದೆ.
ಭಾರತದ ಮಟ್ಟಿಗೆ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು ನಮ್ಮನ್ನು ಬಹುವಾಗಿ ಕಾಡುತ್ತವೆ. ಅದು ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ. ಅದಕ್ಕೆ ಒಂದು ಪರಿಹಾರ…….
ಮಾನವೀಯ ಮೌಲ್ಯಗಳ ಪುನರುತ್ಥಾನ.
ಏಕೆಂದರೆ ಸ್ವಾತಂತ್ರ್ಯ ನಂತರ ಇಲ್ಲಿಯವರೆಗೆ ಭಾರತದ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಆಡಳಿತಾತ್ಮಕ ಸುಧಾರಣೆ ಸಮಾಧಾನಕರವಾಗಿದೆ. ಅನೇಕ ಕೊರತೆಗಳ ನಡುವೆಯೂ ಹೇಗೋ ಬದುಕಬಹುದು. ಆದರೆ ಮಾನವೀಯ ಮೌಲ್ಯಗಳು ಎಲ್ಲಾ ಉತ್ತಮ ಸುಧಾರಣೆಗಳನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಹಣದ ಮುಂದೆ ಇಡೀ ಮನುಷ್ಯ ಸಂಬಂಧಗಳು ಶಿಥಿಲವಾಗಿದೆ. ಅಪನಂಬಿಕೆಗಳು ಪ್ರತಿ ಹೆಜ್ಜೆಯಲ್ಲೂ ಕಾಡುತ್ತಿದೆ. ನೀರು ಆಹಾರ ಗಾಳಿ ಮಲಿನವಾಗಿದೆ.
ಇವುಗಳಲ್ಲಿ ಸುಧಾರಣೆಯಾದಾಗ ಮಾತ್ರ ಭಾರತೀಯರ ನೆಮ್ಮದಿಯ ಮಟ್ಟ ಹೆಚ್ಚಾಗಬಹುದು. ಕೇವಲ ರಸ್ತೆಗಳ ಅಭಿವೃದ್ಧಿ, ಪೋಲೀಸ್ ಆಸ್ಪತ್ರೆಗಳ ಹೆಚ್ಚಳ, ಸಂಬಳ ಸಾರಿಗೆ ಹೆಚ್ಚಳ, ಶಾಲಾ ಕಟ್ಟಡಗಳ ಭವ್ಯತೆ, ಟಿವಿ ಮೊಬೈಲುಗಳ ಹೆಚ್ಚಳ, ಬುಲೆಟ್ ಟ್ರೈನ್, ಸ್ಮಾರ್ಟ್ ಸಿಟಿಗಳ ನಿರ್ಮಾಣ ಮುಂತಾದ ಯಾವುದೇ ಅಭಿವೃದ್ಧಿ ಜನರ ನೆಮ್ಮದಿಯ ಮಟ್ಟ ಹೆಚ್ಚಿಸುವುದಿಲ್ಲ. ನಮ್ಮ ಕನಸಿನ ನಾಗರಿಕ ಸಮಾಜ ನಿರ್ಮಾಣ ಆಗುವುದಿಲ್ಲ.
ಈ ಎಲ್ಲಾ ಅಭಿವೃದ್ಧಿಗಳ ಜೊತೆಗೆ ಅದಕ್ಕೆ ಪೂರಕವಾಗಿ ಮಾನವೀಯ ಮೌಲ್ಯಗಳ ಮರು ಸ್ಥಾಪನೆ ಮಾಡಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಶಾಲೆ ಆಸ್ಪತ್ರೆ ಆಹಾರ ಮಕ್ಕಳು ಎಲ್ಲವೂ ನೆಮ್ಮದಿ ಕಾಣಲು ಸಾಧ್ಯ.
ಆ ನಿಟ್ಟಿನಲ್ಲಿ ಪ್ರಯತ್ನಗಳು ಆರಂಭವಾಗಲಿ ಮತ್ತು ನಮ್ಮ ನಮ್ಮ ವೈಯಕ್ತಿಕ ನೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಬದಲಾಗೋಣ ಎಂದು ಮನವಿ ಮಾಡಿಕೊಳ್ಳುತ್ತಾ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……