ಬೆಂಗಳೂರು: ಸೆಪ್ಟೆಂಬರ್ 26 ( ಹಾಯ್ ಉಡುಪಿ ನ್ಯೂಸ್) ಉತ್ತರಾಖಂಡದಲ್ಲಿ ರೆಸಾರ್ಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 19ರ ಹರೆಯದ ಯುವತಿ ಅಂಕಿತಾ ಭಂಡಾರಿಯನ್ನು ರೆಸಾರ್ಟ್ ಮಾಲಕ ಕೊಲೆ ಮಾಡಿರುವ ಘಟನೆ ರಾಷ್ಟ್ರಾದ್ಯಂತ ಸಂಚಲನ ಮೂಡಿಸಿದೆ.
ಕೊಲೆಯಾದ ಯುವತಿ ಕೆಲಸ ಮಾಡುತ್ತಿದ್ದ ರೆಸಾರ್ಟ್ ಬಿಜೆಪಿ ನಾಯಕರೊಬ್ಬರ ಮಗನದ್ದಾಗಿದ್ದು ,ತನ್ನ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸ್ವಾಗತಕಾರಿಣಿ ಅಂಕಿತ ಭಂಡಾರಿ ಯ ಕೊಲೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವುದನ್ನು ಕಾಂಗ್ರೆಸ್ ಪಕ್ಷ ಕಟು ಶಬ್ದಗಳಿಂದ ಟೀಕಿಸಿದೆ.
ಅತ್ಯಾಚಾರಿಗಳು, ಕೊಲೆಗಡುಕರು, ಭ್ರಷ್ಟರು ಸೇರಿಕೊಂಡಿರುವ ಕೂಟಕ್ಕೆ ಇರುವ ಹೆಸರೇ ಬಿಜೆಪಿ‘ ಎಂದು ಕರ್ನಾಟಕ ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಿಂದ ಮಾಡಲಾದ ಟ್ವೀಟ್‌ನಲ್ಲಿ ಹೇಳಿದೆ.
ಹೆಣ್ಣುಮಕ್ಕಳನ್ನು ಪೀಡಿಸುವ ಬಿಜೆಪಿಗೆ ಕೀಚಕ, ದುಶ್ಯಾಸನರೇ ಆದರ್ಶ ಪುರುಷರೇ ಹೊರತು ರಾಮನಲ್ಲ’ ಎಂದು ಕಾಂಗ್ರೆಸ್ ಟೀಕಿಸಿದೆ. ಬಿಜೆಪಿಗರಿಂದ ಬೇಟಿ ಬಚಾವ್ ಆಗಬೇಕಿದೆ ಎಂದು ಕಾಂಗ್ರೆಸ್ ಗೇಲಿ ಮಾಡಿದೆ.
ಹರಿದ್ವಾರ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಮಗ ಪುಳಕಿತ್ ಆರ್ಯ ಸೇರಿದಂತೆ ಮೂವರನ್ನು ರೆಸಾರ್ಟ್ ಸ್ವಾಗತ ಕಾರಿಣಿ ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಉತ್ತರಾಖಂಡ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಪುಳಕಿತ್ ಆರ್ಯ ಅವರ ಮಾಲೀಕತ್ವದ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು. ಅವರ ಮೃತದೇಹವು ಚೀಲ ಎಂಬ ಕಾಲುವೆಯೊಂದರಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯನ್ನು ಹತ್ಯೆ ಮಾಡಿ ಮೃತ ಯುವತಿಯ ದೇಹವನ್ನು ಕಾಲುವೆಗೆ ಎಸೆದಿರುವುದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೌಡೀ ಎಎಸ್‌ಪಿ ಶೇಖರ್ ಚಂದ್ರ ಸೂಯಲ್ ಮಾಹಿತಿ ನೀಡಿದ್ದಾರೆ.
ರೆಸಾರ್ಟ್ ನ ಅತಿಥಿಗಳೊಂದಿಗೆ ಲೈಂಗಿಕ ಕ್ರಿಯೆಗೆ ಒಪ್ಪದ ಕಾರಣಕ್ಕಾಗಿ ಅಂಕಿತಾಳನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಲಭ್ಯವಾಗಿದ್ದು, 19 ವರ್ಷದ ಅಂಕಿತಾಳನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ರಿಷಿಕೇಶದ ‘ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‘ ಬಿಡುಗಡೆ ಮಾಡಿದ ಪ್ರಥಮ ವರದಿಯಲ್ಲಿ ಅಂಕಿತಾ ಭಂಡಾರಿಯವರ ದೇಹದಲ್ಲಿ ‘ಆಂಟಿಮಾರ್ಟಮ್ ಗಾಯ’ಗಳು (ಸಾವಿಗೂ ಹಿಂದೆ ಆದಂತಹ ಗಾಯಗಳು) ಕಂಡುಬಂದಿವೆ. ಇವು ಮೊಂಡಾದ ವಸ್ತುವಿನಿಂದ ಚುಚ್ಚಿದ ಗಾಯಗಳು. ಆದರೂ ಕೊನೆಗೆ ಆಕೆಯನ್ನು ನೀರಲ್ಲಿ ಮುಳುಗಿಸಿ ಸಾಯಿಸಲಾಗಿದೆ ಎಂದು ಹೇಳಲಾಗಿದೆ.