ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ ಸ್ವಾಮಿ ವಿವೇಕಾನಂದರ ಐತಿಹಾಸಿಕ ಸೆಪ್ಟೆಂಬರ್ 11 ರ ಚಿಕಾಗೋ ಭಾಷಣದ ವಾರ್ಷಿಕೋತ್ಸವ…..
ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ ಸೆಪ್ಟೆಂಬರ್ 10 ಕ್ರಾಂತಿಕಾರಿ ಚಿಂತಕ ನಾರಾಯಣ ಗುರು ಹುಟ್ಟು ಹಬ್ಬದ ನೆನಪು….
ಬ್ರೇಕಿಂಗ್ ನ್ಯೂಸ್ ಆಗುವುದು ಇಲ್ಲ ಇಂದು ಸೆಪ್ಟೆಂಬರ್ 11 ಭಾರತ ರತ್ನ ಭೂದಾನ ಚಳುವಳಿಯ ನೇತಾರ ಆಚಾರ್ಯ ವಿನೋಬಾ ಭಾವೆಯವರ ಜನ್ಮದಿನ……
ಲೈಂಗಿಕ ಹಗರಣಗಳು, ಸುಳ್ಳು ಚುನಾವಣಾ ಭರವಸೆಗಳು – ಸರ್ಕಾರದ ಸಾಧನೆಗಳ ಜಾಹೀರಾತುಗಳು, ಈದ್ಗಾ ಮೈದಾನದ ವಿವಾದಗಳು ಬ್ರೇಕಿಂಗ್ ನ್ಯೂಸ್ ಆಗುತ್ತಲೇ ಇದೆ.
129 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಅಮೆರಿಕದ ಚಿಕಾಗೊ ನಗರದ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾರತದ ಸಾಂಸ್ಕೃತಿಕ ಮಹತ್ವವನ್ನು ವಿಶ್ವಕ್ಕೇ ಸಾರಿದ ಅಂಶಗಳನ್ನು ಮತ್ತು ವಿವೇಕಾನಂದರ ವಿಚಾರಗಳನ್ನು ಚರ್ಚೆ ಸಂವಾದ ಅಂಕಣ ಸಾಕ್ಷ್ಯಚಿತ್ರಗಳ ಮೂಲಕ ಯುವ ಪೀಳಿಗೆಗೆ ತಿಳಿಸುವ ಮತ್ತು ಮಾರ್ಗದರ್ಶನ ಮಾಡುವ ಕೆಲಸವನ್ನು ಎಲ್ಲಾ ರೀತಿಯ ಮಾಧ್ಯಮಗಳು ಸ್ವಲ್ಪ ಪ್ರಮಾಣದಲ್ಲಿ ಆದರೂ ಮಾಡಿದ್ದರೆ ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದು ಕರೆದಿದ್ದಕ್ಕೆ ಸ್ವಲ್ಪಮಟ್ಟಿಗೆ ಸಾರ್ಥಕತೆ ಬರುತ್ತಿತ್ತು. ಪತ್ರಕರ್ತರಿಗೆ ತಾವು ತಿಂದ ಅನ್ನದ ಋಣ ಸ್ವಲ್ಪವಾದರೂ ತೀರಿಸಿದಂತಾಗುತ್ತಿತ್ತು. ಆದರೆ….
ಕರ್ನಾಟಕದ ಬಸವಣ್ಣನವರಂತೆ ಸಮ ಸಮಾಜದ ಕನಸಿನಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕ್ರಾಂತಿಗೆ ಕಾರಣವಾದ ವಿಚಾರವಾದಿ ಕೇರಳದ ನಾರಾಯಣ ಗುರುಗಳ ಜನ್ಮದಿನದ ಸಂದರ್ಭದಲ್ಲಿ ಅವರ ಬಗ್ಗೆ ಕೆಲವು ಕಾರ್ಯಕ್ರಮಗಳನ್ನು ಬರಹಗಳನ್ನು ಪ್ರಸಾರ ಮಾಡಿದ್ದರೆ ನಿಮ್ಮನ್ನು ಬೇಷ್ ಎನ್ನಬಹುದಿತ್ತು. ನಾರಾಯಣ ಗುರು ಅನೇಕ ಯುವ ಮನಸ್ಸುಗಳಿಗೆ ಪ್ರೇರೇಪಣೆ ಆಗುವಂತೆ ಮಾಡಬಹುದಿತ್ತು. ನಿಮ್ಮ ಗಮನ ಆ ಕಡೆ ಸುಳಿಯಲೇ ಇಲ್ಲ. ಆದರೆ…..
ಇನ್ನು ಭೂದಾನ ಚಳವಳಿ ಎಂಬ ಭಾರತದ ಸ್ವಾತಂತ್ರ್ಯ ನಂತರದ ಒಂದು ಅತ್ಯುತ್ತಮ ಹೋರಾಟದ ವಿಧಾನವನ್ನು ಮಾಧ್ಯಮಗಳು ಅದರ ಹರಿಕಾರ ವಿನೋಬಾ ಭಾವೆಯವರ ಜನ್ಮದಿನದ ಸಮಯದಲ್ಲಿ ನೆನಪು ಮಾಡಿಕೊಳ್ಳಲೇ ಇಲ್ಲ. ಆದರೆ…..
ಬೇರೆಯವರ ಆಸ್ತಿಗಳನ್ನು, ಸರ್ಕಾರಿ ಕೆರೆ ಕಾಲುವೆಗಳನ್ನು ನುಂಗುತ್ತಿರುವ ಈ ಹೊತ್ತಿನಲ್ಲಿ ಭೂದಾನ ಎಂಬ ಉದ್ದಾತ್ತ ಚಿಂತನೆ ನೆನಪಾಗುವುದಾದರೂ ಹೇಗೆ ?
ಬಹುಶಃ 1952 ರಲ್ಲಿ ಮಹಾತ್ಮ ಗಾಂಧಿಯವರ ಸಾಮಾಜಿಕ ಸೇವೆಗಳಿಂದ ಸ್ಪೂರ್ತಿ ಪಡೆದ ಅವರದೇ ಅನುಯಾಯಿ ಬಳಗದ ವಿನೋಬಾ ಭಾವೆಯವರು ಈ ಚಳವಳಿಯನ್ನು ಪ್ರಾರಂಭಿಸಿದರು.
ಪ್ರಾರಂಭದಲ್ಲಿ ರಾಮಚಂದ್ರ ರೆಡ್ಡಿ ಎಂಬುವವರು ತಮ್ಮ 80 ಎಕರೆ ಜಮೀನನ್ನು ತಮ್ಮದೇ ಊರಿನ ಜಮೀನಿಲ್ಲದ 80 ಕುಟುಂಬಗಳಿಗೆ ಒಂದೊಂದು ಎಕರೆಯನ್ನು ದಾನ ಮಾಡುವ ಮೂಲಕ ಈ ಚಳವಳಿ ವೇಗ ಪಡೆಯುತ್ತದೆ.
ನಂತರ ವಿನೋಬಾ ಭಾವೆಯವರು ಪಾದಯಾತ್ರೆಯ ಮೂಲಕ ದೇಶಾದ್ಯಂತ ಸಂಚರಿಸಿ ಹೆಚ್ಚು ಭೂಮಿ ಇರುವವರಿಂದ ಪಡೆದು ಅದನ್ನು ಜಮೀನಿಲ್ಲದ ನಿರ್ಗತಿಕರಿಗೆ ದಾನ ಮಾಡುವ ಚಳವಳಿಯಿದು. ಆಗಿನ ಕಾಲದಲ್ಲೇ ಎಂತಹ ಅದ್ಬುತ ಕಲ್ಪನೆ ಎಂದು ಯೋಚಿಸಿ ನೋಡಿ…..
ಸ್ವಾತಂತ್ರ್ಯ ಲಭಿಸಿದ ಪ್ರಾರಂಭದಲ್ಲಿ ಜಮೀನ್ದಾರಿ ವ್ಯವಸ್ಥೆಯು ಇನ್ನೂ ಜೀವಂತ ಇದ್ದ ಸಮಯದಲ್ಲಿ ಈ ರೀತಿಯ ಪರಿಕಲ್ಪನೆಯನ್ನು ಜಾರಿ ಮಾಡಲು ಪ್ರಯತ್ನಿಸಿದ ವ್ಯಕ್ತಿಯ ಬಗ್ಗೆ ಮಾಧ್ಯಮಗಳು ಮಾತನಾಡದಿದ್ದರೆ ಹೇಗೆ….
ಈ ಎಲ್ಲವನ್ನೂ ಸಾಮಾನ್ಯ ಜನರಿಗೆ ತಿಳಿಸುವುದು ಹೇಗೆ ಮತ್ತು ಯಾರು ? ಸಹಜವಾಗಿ ಇದು ಮಾಧ್ಯಮಗಳ ಜವಾಬ್ದಾರಿ ಮತ್ತು ಕರ್ತವ್ಯ ಅಲ್ಲವೇ ?
ಹೇಳುವುದು ಮಾತ್ರ ಸದಾ ಪ್ರಾಮಾಣಿಕತೆ ಸತ್ಯ ಧರ್ಮ ದೇವರು ದೇಶಭಕ್ತಿ ಶ್ರದ್ಧೆ ನ್ಯಾಯ ನೀತಿ ಒಳ್ಳೆಯತನ ಮುಂತಾದ ವಿಷಯಗಳು ಆದರೆ ಪ್ರಚಾರ ಮಾಡುವುದು ಮಾತ್ರ ವಿಷಪೂರಿತ ಕಾರ್ಯಕ್ರಮಗಳನ್ನು..
ಬಾರ್ ಗಳನ್ನು ಹೆಚ್ಚಿಸಿ, ರಿಯಲ್ ಎಸ್ಟೇಟ್ ಉದ್ಯಮವನ್ನು ಪ್ರೋತ್ಸಾಹಿಸಿ, ಶಿಕ್ಷಣ ಆರೋಗ್ಯ ಆಹಾರಗಳನ್ನು ದಂಧೆ ಮಾಡಿ ಇತಿಹಾಸದ ಮಹಾಪುರುಷರನ್ನು ಮರೆ ಮಾಡಿ ದೇಶದ ಅಭಿವೃದ್ಧಿಯ ಬಗ್ಗೆ ಆತ್ಮ ವಂಚನೆ ಮಾಡಿಕೊಳ್ಳುವ ಜನರಿರುವಾಗ ಸುಧಾರಣೆ ಹೇಗೆ ಸಾಧ್ಯ….
ಇಂದು ದೇವನಹಳ್ಳಿ ತಾಲ್ಲೂಕಿನ ಬಳಿಯ ಕುಂದಾಣ ಗ್ರಾಮದ ಬೆಟ್ಟದಲ್ಲಿ ಪ್ರಥಮ ಕರ್ನಾಟಕ ರಾಜ್ಯ ಬೌದ್ದ ಸಮ್ಮೇಳನ ನಡೆಯುತ್ತಿದೆ. ಅದರ ಬಗ್ಗೆಯೂ ಯಾವುದೇ ಸುದ್ದಿ ಪ್ರಸಾರ ಮಾಡುತ್ತಿಲ್ಲ.
ಒಟ್ಟಿನಲ್ಲಿ ಅತ್ಯಂತ ಕೆಟ್ಟ ವಿಷಯಗಳನ್ನು ಪ್ರಚಾರ ಮಾಡುತ್ತಾ ಒಳ್ಳೆಯದನ್ನು ನಿರ್ಲಕ್ಷ್ಯ ಮಾಡುತ್ತಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಮಾಧ್ಯಮಗಳನ್ನು
ಎಚ್ಚರಿಕೆಯಿಂದ ಗಮನಿಸಿ ಎಂದು ಮನವಿ ಮಾಡಿಕೊಳ್ಳುತ್ತಾ…….
ಅವರು ಮಾಡದಿದ್ದರೂ ಸಾಮಾಜಿಕ ಜಾಲತಾಣಗಳ ಮೂಲಕ ನಾವು ಒಳ್ಳೆಯದನ್ನು ನೆನಪು ಮಾಡಿಕೊಳ್ಳುತ್ತಾ, ಕೆಟ್ಟದ್ದನ್ನು ನಿರ್ಲಕ್ಷಿಸುತ್ತಾ ಮುನ್ನಡೆಯೋಣ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……