ವ್ಯಕ್ತಿ ಗೌರವ – ವೃತ್ತಿ ಗೌರವ – ಹಣದ ಗೌರವ………..
ಕೂಲಿ, ಸಂಬಳ, ಶುಲ್ಕ, ಸಂಭಾವನೆ, ಗೌರವಧನ ಎಲ್ಲವೂ ಶ್ರಮಕ್ಕೆ ಅಥವಾ ಪ್ರತಿಭೆಗೆ ಅಥವಾ ಮಾಡುವ ಕೆಲಸಕ್ಕೆ ಪಡೆಯುವ ಹಣ ರೂಪದ ಪ್ರತಿಫಲ……….
ಆದರೆ, ಆ ಪದಗಳಲ್ಲಿ ಅಸಮಾನತೆ, ಮೇಲು ಕೀಳು ಎಂಬ ಅರ್ಥವೂ ಅಡಕವಾಗಿದೆ.
ಕೂಲಿ ಅತ್ಯಂತ ಕೆಳಮಟ್ಟದ ಮತ್ತು ಗೌರವಧನ ಅತ್ಯಂತ ಮೇಲ್ಮಟ್ಟದ ಭಾವವನ್ನು ಉಂಟು ಮಾಡುತ್ತದೆ.
ಕಸ ಗುಡಿಸುವ, ಮೂಟೆ ಹೊರುವ, ಕಲ್ಲು ಒಡೆಯುವ, ಮಣ್ಣು ಅಗೆಯುವ ಮುಂತಾದ ಕೆಲಸಗಳಿಗೆ ಪಡೆಯುವ ಹಣವನ್ನು ಕೂಲಿ ಎಂತಲೂ, ಕಾರ್ಮಿಕರು, ಅಧಿಕಾರಿಗಳು, ನೌಕರರು ಮುಂತಾದವರು ಪಡೆಯುವ ಹಣವನ್ನು ಸಂಬಳ ಎಂತಲೂ, ಸಿನಿಮಾ ನಟ ನಟಿಯರು, ಕಲಾವಿದರು, ಮಾಡೆಲ್ ಗಳು ಮುಂತಾದವರು ಪಡೆಯುವ ಹಣವನ್ನು ಸಂಭಾವನೆ ಎಂತಲೂ, ಸಾಹಿತಿಗಳು, ಸಂಗೀತಗಾರರು ಮುಂತಾದವರಿಗೆ ನೀಡುವ ಹಣವನ್ನು ಗೌರವಧನ ಎಂತಲೂ ಸಾಮಾನ್ಯವಾಗಿ ಕರೆಯಲಾಗುತ್ತದೆ.
ವೃತ್ತಿ ಪರ ವೈದ್ಯರು, ವಕೀಲರು, ಆಡಿಟರ್ ಮುಂತಾದವರು ತಮ್ಮ ಸೇವೆಗೆ ಪಡೆಯುವುದು ಶುಲ್ಕ ಎಂದು ಕರೆಯಲ್ಪಡುತ್ತದೆ.
ಆಧ್ಯಾತ್ಮಿಕವಾಗಿ ವೇದಾಂತಿಯಂತೆ ಮಾತನಾಡುವಾಗ ಯಾವ ಕೆಲಸವೂ ಮೇಲಲ್ಲ, ಯಾವ ಕೆಲಸವೂ ಕೀಳಲ್ಲ ಎಲ್ಲಕ್ಕೂ ಅದರದೇ ಮಹತ್ವವಿದೆ. ಶ್ರದ್ಧೆಯಿಂದ ಸಮರ್ಪಣಾ ಮನೋಭಾವದಿಂದ, ಖುಷಿ ಖುಷಿಯಿಂದ ಮಾಡಿದರೆ ಎಲ್ಲವೂ ಶ್ರೇಷ್ಠ ಎಂದು ಹೇಳಲಾಗುತ್ತದೆ.
ಆದರೆ ವಾಸ್ತವದಲ್ಲಿ ಈ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ನಮ್ಮ ಸಮಾಜದಲ್ಲಿ ಇವುಗಳ ಆಧಾರದ ಮೇಲೆಯೇ ವ್ಯಕ್ತಿಗಳ ವ್ಯಕ್ತಿತ್ವ ಅಥವಾ ಬೆಲೆ ಅಥವಾ ಮರ್ಯಾದೆ ನಿರ್ಧರಿಸಲ್ಪಡುತ್ತದೆ. ಸಾರ್, ಧಣಿಗಳೆ, ಸಾವುಕಾರರೇ, ಬುದ್ದಿಯವರೇ, ಬನ್ನಿ, ಹೋಗಿ, ಬಾ, ಹೋಗು, ಬಾರೋ, ಹೋಗೋ ಹೀಗೆ ಅವರ ಬಗ್ಗೆ ಉಪಯೋಗಿಸುವ ಪದಗಳೇ ಸಾಕಷ್ಟು ಮಾಹಿತಿ ನೀಡುತ್ತದೆ.
ಹಣದ ಮೌಲ್ಯವೂ ಸಹ ಈ ಪದಗಳ ಮೇಲೆಯೇ ನಿರ್ಧರಿಸಬಹುದು.
ಕೂಲಿ ಅತಿಹೆಚ್ಚು ಎಂದರೆ ಕೇವಲ 1000 ರೂಪಾಯಿಗಳು ಇರಬಹುದು. ಆದರೆ ಉಳಿದ ಸಂಬಳ ಸಂಭಾವನೆ ಶುಲ್ಕ ಗೌರವಧನಗಳಿಗೆ ಮಿತಿಯೇ ಇಲ್ಲ. 1000 ದಿಂದ ಅವರವರ ಯೋಗ್ಯತೆಗೆ, ಅನಿವಾರ್ಯತೆಗೆ, ಪ್ರತಿಭೆಗೆ ತಕ್ಕಂತೆ ಇರುತ್ತದೆ. ಇಲ್ಲಿ ಸಾಮರ್ಥ್ಯ ವ್ಯಕ್ತಪಡಿಸಲು ಸಾಕಷ್ಟು ಅವಕಾಶ ಇದೆ. ಕೂಲಿ ವಿಷಯದಲ್ಲಿ ಪ್ರತಿಭೆ ಸಾಮರ್ಥ್ಯ ಪ್ರದರ್ಶಿಸಲು ಅಂತಹ ಅವಕಾಶ ಇರುವುದಿಲ್ಲ. ತೀರಾ ಅಪರೂಪ ಸಂದರ್ಭಗಳಲ್ಲಿ ಮಾತ್ರ ಅದು ಸಾಧ್ಯ. ಬಹುತೇಕ ದೈಹಿಕ ಶ್ರಮವೇ ಹೆಚ್ಚು.
ಕೊರೋನಾ ವೈರಸ್ ದಾಳಿಯ ಸಂದರ್ಭದಲ್ಲಿ ಅತಿಹೆಚ್ಚು ಸಂಕಷ್ಟಕ್ಕೆ ಒಳಗಾದವರು ಈ ಕೂಲಿಗಳು. ಅವರಿಗೆ ವೈರಸ್ ಗಿಂತ ಲಾಕ್ ಡೌನ್ ಮೃತ್ಯುಕೂಪವಾಗಿ ಪರಿಣಮಿಸಿತು. ಬೇರೆ ವರ್ಗದವರಿಗೆ ಲಾಕ್ ಡೌನ್ ಒಂದು ವರ ಅಥವಾ ಸುರಕ್ಷತಾ ಕ್ರಮವಾದರೆ ಈ ಕೂಲಿಗಳಿಗೆ ಒಂದು ಶಾಪವಾಯಿತು.
ಭಾರತದ ಬಹಳಷ್ಟು ಕೂಲಿಗಳು ಅನಕ್ಷರಸ್ಥರು. ಕಡು ಬಡವರು, ಸಾಮಾನ್ಯ ಜ್ಞಾನದ ಕೊರತೆ ಇರುವವರು. ಸಮಾಜದ ಇತರ ಆಗುಹೋಗುಗಳ ಬಗ್ಗೆ ಮಾಹಿತಿ ಇಲ್ಲದವರು, ಮೂಡ ನಂಬಿಕೆಗಳಿಗೆ ದಾಸರಾಗಿರುವವರು, ಸಾಮಾನ್ಯ ಜನರಿಂದ ನಿರ್ಲಕ್ಷಿಸಲ್ಪಟ್ಟವರು, ಹಸಿವಿನ ಅನಿವಾರ್ಯತೆಗಾಗಿ ಕೆಲಸ ಮಾಡುವವರು, ಬದುಕಿನ ಬಗ್ಗೆ ಜಿಗುಪ್ಸೆ ಹೊಂದಿರುವವರು. ಸ್ವಚ್ಚತೆಯ ಬಗ್ಗೆ ಕಾಳಜಿ ಇಲ್ಲದವರು.
ಹೌದು ಎಲ್ಲಾ ಕೆಲಸಗಳು ಒಂದು ಸಮಾಜದ ಜೀವನ ಶೈಲಿಯ ಬದುಕಿಗೆ ಅನಿವಾರ್ಯ ಮತ್ತು ಮಹತ್ವ ಪಡೆದಿದೆ. ಅದನ್ನು ಯಾರಾದರೂ ಮಾಡಲೇ ಬೇಕು. ಇಲ್ಲದಿದ್ದರೆ ಸಮಾಜ ದೈಹಿಕವಾಗಿ ಮತ್ತು ಮಾನಸಿಕವಾಗಿ ಅಸ್ವಸ್ಥವಾಗುತ್ತದೆ. ಆದರೆ ಬದಲಾಗಬೇಕಿರುವುದು ನಮ್ಮ ಮನೋಭಾವಗಳಲ್ಲಿ. ಮಾತುಗಳಲ್ಲಿ ಹೇಳುವ ಎಲ್ಲಾ ಕೆಲಸಗಳು ಪವಿತ್ರವೇ ಯಾವುದು ಮೇಲೂ ಅಲ್ಲ ಕೀಳೂ ಅಲ್ಲ ಎಂಬುದು ನಮ್ಮ ನಡವಳಿಕೆಯಾಗಬೇಕು.
ಕನಿಷ್ಠ ವ್ಯಕ್ತಿ ಗೌರವ ಆತ ಮನುಷ್ಯ ಎಂಬ ಕಾರಣಕ್ಕಾಗಿ ಸಿಗಬೇಕೆ ಹೊರತು ಆತನ ಉದ್ಯೋಗ ಆತ ಪಡೆಯುವ ಹಣದ ಆಧಾರ ಮೇಲಲ್ಲ. ಎಷ್ಟೋ ಕೂಲಿ ಕೆಲಸ ಮಾಡುವ ಸ್ಥಳಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳು ಇರುವುದಿಲ್ಲ, ಅವರಿಗೆ ಸರಿಯಾದ ಸಮಯಕ್ಕೆ ಆಹಾರ ಒದಗಿಸುವುದಿಲ್ಲ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳವುದಿಲ್ಲ.
ಈ ತಾರತಮ್ಯಗಳು ನಿವಾರಣೆ ಆಗಬೇಕಾಗಿದೆ. ಸಂಖ್ಯೆಗಳ ಆಧಾರದ ಮೇಲೆ, ಹಣದ ಆಧಾರದ ಮೇಲೆ, ವೃತ್ತಿಯ ಆಧಾರದ ಮೇಲೆ ವ್ಯಕ್ತಿ ಗೌರವ ನಿರ್ಧರಿಸಬಾರದು. ಉದ್ಯೋಗ ಏನೇ ಆಗಿರಲಿ ವ್ಯಕ್ತಿಗೆ ಸಿಗಬೇಕಾದ ಕನಿಷ್ಠ ಮಾನ್ಯತೆ ನೀಡಬೇಕು. ಆಗಲೇ ನಮ್ಮ ನಮ್ಮ ಧರ್ಮಗಳಿಗೆ, ದೇವರುಗಳಿಗೆ, ಕಾನೂನಿಗೆ, ಸಮಾಜಕ್ಕೆ, ಮಾನವೀಯತೆಗೆ ಒಂದು ಅರ್ಥ ಬರುತ್ತದೆ. ಸಮಾಜದಲ್ಲಿ ಕೆಟ್ಟ ಚಟುವಟಿಕೆಗಳು ಕಡಿಮೆಯಾಗಿ ಶಾಂತಿ ನೆಲೆಸುತ್ತದೆ. ಹಣದ ಪ್ರಾಬಲ್ಯ ಕಡಿಮೆಯಾಗುತ್ತದೆ. ಮಾನವೀಯ ಮೌಲ್ಯಗಳು ವೃದ್ದಿಸುತ್ತದೆ.
ಇಂದಿನಿಂದಲೇ ನಾವು ಈ ವಿಷಯದಲ್ಲಿ ಕನಿಷ್ಠ ಮಟ್ಟದ ಬದಲಾವಣೆಗೆ ಸಾಧ್ಯವಾದಷ್ಟು ಪ್ರಯತ್ನಿಸೋಣ. ನಾವು ಇರುವ ಜಾಗದಿಂದಲೇ ನಮ್ಮ ಸುತ್ತಮುತ್ತಲಿನ ಜನರ ಬಗ್ಗೆ ನಮ್ಮ ಅಭಿಪ್ರಾಯ ಆತ ಮನುಷ್ಯ ಜೀವಿ ಎಂಬಂತೆ ವರ್ತಿಸೋಣ. ಆತನ ವೃತ್ತಿ ಏನೇ ಆಗಿರಲಿ ಆತನಿಗೂ ಗೌರವ ಕೊಟ್ಟು ಮಾತನಾಡೋಣ, ಆತನ ಮೂಲಭೂತ ಸೌಕರ್ಯಗಳಿಗೂ ಮಾನ್ಯತೆ ನೀಡೋಣ.
ಇದೇ ಧರ್ಮ, ಇದೇ ದೇಶಭಕ್ತಿ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……