Spread the love

ಬೆಂಗಳೂರು ನಮ್ಮದಲ್ಲ, ಬೀದರ್ ನಿಮ್ಮದಲ್ಲ, ಜೇವರ್ಗಿ ನಮ್ಮದಲ್ಲ,
ಬೆಳ್ತಂಗಡಿ ನಿಮ್ಮದಲ್ಲ……

ಈ ಭೂಮಿಗೆ ಎಲ್ಲರೂ ವಲಸಿಗರೇ……..

ಬೆಂಗಳೂರಿನ ಅತಿಯಾದ ಮಳೆಗೆ‌ ಆದ ಹಾನಿಯಿಂದ ಬೇಸತ್ತು ಕೆಲವರು ಟೀಕಿಸಿರಬಹುದು. ಹಾಗೆಯೇ ಕೆಲವೊಮ್ಮೆ ಮಲೆನಾಡು, ಕರಾವಳಿ ಪ್ರದೇಶಗಳ ಮಳೆಗೆ ಪ್ರಾಕೃತಿಕ ವಿಕೋಪದಿಂದ ಆ ಜಾಗವನ್ನು ಟೀಕಿಸಬಹುದು. ಮತ್ತೆ ಕೆಲವರು ಬರಗಾಲ ಭೂಕಂಪದ ಕಾರಣದಿಂದ ಮತ್ತಷ್ಟು ಊರುಗಳಿಗೆ ಮನಸ್ಸಿನಲ್ಲೇ ಶಾಪ ಹಾಕಬಹುದು.

ಅದು ಕೆಲವು ವ್ಯಕ್ತಿಗಳ ಆ ಕ್ಚಣದ ಸಹಜ ಅಭಿಪ್ರಾಯ.

ಹಳ್ಳಿ ನಗರ ಎಂಬ ಬೇದ ಬೇಡ. ಅವರವರ ಇಚ್ಚೆಗೆ – ಅನುಕೂಲಕ್ಕೆ ಅನುಗುಣವಾಗಿ ಎಲ್ಲಿ ಬೇಕಾದರೂ ವಾಸಿಸುವ ಹಕ್ಕು ಮತ್ತು ಸ್ವಾತಂತ್ರ್ಯ ಎಲ್ಲರಿಗೂ ಇದೆ…..

ನಗರ ಬಿಡುತ್ತಿರುವವರ ಬಗ್ಗೆ ಅಪಹಾಸ್ಯ ಬೇಡ, ವಲಸೆಗಾರರ ಬಗ್ಗೆ ವ್ಯಂಗ್ಯ ಬೇಡ, ಹಳ್ಳಿಗಳ ಕಡೆ ಮುಖ ಮಾಡುತ್ತಿರುವವರ ಬಗ್ಗೆ ತಾತ್ಸಾರ ಬೇಡ, ನಗರಕ್ಕೆ ಬರುತ್ತಿರುವವರ ಬಗ್ಗೆ ಮತ್ಸರ ಬೇಡ, ಮತ್ಯಾರ ಬಗ್ಗೆಯೋ ಕೊಂಕು ಬೇಡ, ಇನ್ಯಾರ ಬಗ್ಗೆಯೋ ಪ್ರಶಂಸೆಯೂ ಬೇಡ ……

ಈ ಬದಲಾವಣೆಯ ಬಗ್ಗೆ ಸ್ಪಷ್ಟವಾದ ಅಭಿಪ್ರಾಯ ಹೊಂದುವ ಮೊದಲು ದಯವಿಟ್ಟು ನಾಗರಿಕತೆಯ ಉಗಮ, ಬೆಳವಣಿಗೆ, ಅವಸಾನಗಳ ಬಗ್ಗೆ ಒಂದಷ್ಟು ಚಿಂತಿಸಿ.

ಮೂಲತಃ ಮನುಷ್ಯನ ನಾಗರಿಕತೆಗಳು ನದಿ ತೀರಗಳಲ್ಲಿ ಬೆಳವಣಿಗೆ ಹೊಂದಿವೆ. ಮುಂದೆ ಜನಸಂಖ್ಯೆ ಹೆಚ್ಚಳ, ಅವಶ್ಯಕತೆ, ಅನಿವಾರ್ಯತೆ, ಪ್ರಾಕೃತಿಕ ವಿಕೋಪ, ಮಹತ್ವಾಕಾಂಕ್ಷೆ, ದುರಾಸೆ, ತಪ್ಪು ನಿರ್ಧಾರಗಳ ಕಾರಣದಿಂದ ಅದು ಬೆಳೆಯುತ್ತಾ, ಹಳ್ಳಿ, ಗ್ರಾಮ, ಪಟ್ಟಣ, ನಗರ, ಮೆಟ್ರೋಪಾಲಿಟನ್ ಸಿಟಿಗಳಾಗಿ ಅಭಿವೃದ್ಧಿ ಹೊಂದಿದವು. ನದಿ ಸಮುದ್ರ ಬೆಟ್ಟ ಗುಡ್ಡ ಕಾಡು ಮೇಡು ಮರುಭೂಮಿ ಬಯಲು ಪ್ರದೇಶ ಎಲ್ಲವನ್ನೂ ದಾಟಿ ಎಲ್ಲೆಂದರಲ್ಲಿ ವಾಸಿಸಲು ಸ್ಥಳಾವಕಾಶ ಸೃಷ್ಟಿಸಿಕೊಂಡ. ಭವಿಷ್ಯದಲ್ಲಿ ಚಂದ್ರನಲ್ಲಿಯೂ ವಾಸಿಸುವ ಯೋಜನೆ ರೂಪಿಸುತ್ತಿರುವ ಮಾಹಿತಿ ಇದೆ.

ಈ ಭೂಮಿ ಯಾರ ಅಪ್ಪನ ಆಸ್ತಿಯೂ ಅಲ್ಲ. ಮೂಲತಃ ಯಾರಿಗೂ ಸೇರಿದ್ದಲ್ಲ. ಆದರೆ ಸಾಕಷ್ಟು ಹೋರಾಟ, ಹಾರಾಟ, ರಕ್ತಪಾತದ ನಂತರ ದೇಶಗಳಾಗಿ ವಿಭಜನೆ ಹೊಂದಿ ಒಂದು ರೂಪಕ್ಕೆ ಬಂದಿದೆ. ಸದ್ಯ ನಮ್ಮ ಭಾರತ ದೇಶ ಎಂಬುದು ಅನೇಕ ದಾಳಿಗಳ ನಡುವೆ ಒಂದು ಗಣರಾಜ್ಯಗಳ ಒಕ್ಕೂಟವಾಗಿ ಸಂಸದೀಯ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಾಗಿ ರೂಪಗೊಂಡಿದೆ.

ಸ್ವಾತಂತ್ರ್ಯ ನಂತರ ಹಳ್ಳಿಗಳ ದೇಶ ಭಾರತ ನಿಧಾನವಾಗಿ ನಗರೀಕರಣದ ರೂಪ ಪಡೆದು, ಜಾಗತೀಕರಣದ ನಂತರ ಬಹುತೇಕ ಹಳ್ಳಿಗಳ ಮೂಲ ಸ್ವರೂಪಗಳೇ ಬದಲಾದವು.

ಕೃಷಿ, ಕೃಷಿ ಆಧಾರಿತ ಪಶುಸಂಗೋಪನೆ ಮುಂತಾದ ಕೆಲಸಗಳಲ್ಲಿ, ಕಡಿಮೆ ಬೇಡಿಕೆ ಮತ್ತು ಅವಶ್ಯಕತಗೆ ಅನುಗುಣವಾಗಿ ಜೀವನ ಕ್ರಮ ಸಾಮಾನ್ಯ ಹಳ್ಳಿಯ ಜೀವನಶೈಲಿಯಾಗಿತ್ತು.

ನಂತರದಲ್ಲಿ ಜನಸಂಖ್ಯೆ ಸ್ಪೋಟ, ಕೃಷಿ ರಂಗದ ಸವಾಲುಗಳು, ನಗರಗಳ ಬೆಳವಣಿಗೆ ಮತ್ತು ಆಕರ್ಷಣೆ, ಶೈಕ್ಷಣಿಕ ಕ್ರಾಂತಿ ಎಲ್ಲವೂ ಸೇರಿ ಒಂದು ಇಡೀ ಜನಾಂಗ ನಗರಗಳತ್ತ ಮುಖ ಮಾಡಿತು.

ಅನಿವಾರ್ಯತೆ ಇದ್ದ, ಬೇರೆ ಪರ್ಯಾಯ ಮಾರ್ಗಗಳು ಇಲ್ಲದ, ನಗರ ಜೀವನದ ಬಗ್ಗೆ ಬೇಸರವಿದ್ದ, ಕೃಷಿ ಮತ್ತು ಹಳ್ಳಿಯ ಬಗ್ಗೆ ಅಭಿಮಾನವಿದ್ದ ಜನ ಮಾತ್ರ ಕೃಷಿಯಲ್ಲಿ ತೊಡಗಿಕೊಂಡು ಹಳ್ಳಿಗಳಲ್ಲಿ ವಾಸವಿದ್ದರು.

ತಿಂಗಳ ಸಂಬಳದ ಜೊತೆಗೆ ಮನರಂಜನೆಯ ಸುಖ, ಇತರ ಚಟುವಟಿಕೆಗಳ ಮೋಹ ಮತ್ತು ಸಾಧನೆಯ ಬಗ್ಗೆ ಒಂದು ಛಲ ಎಲ್ಲವೂ ಸೇರಿ ನಗರಗಳು ಬೆಳೆಯುತ್ತಾ ಹೋದವು. ಕೊನೆಗೆ ಇದೇ ಕಾರಣದಿಂದ ಉದ್ಯೋಗವಕಾಶಗಳು ಸೃಷ್ಟಿಯಾಗಿ ನಗರಗಳಿಗೆ ಎಲ್ಲಾ ಕಡೆಯಿಂದ ವಲಸೆ ಪ್ರಾರಂಭವಾಯಿತು.

ನಗರಗಳು ತುಂಬಿ ತುಳುಕಿ ನಿಧಾನವಾಗಿ ಅದೇ ಸಮಸ್ಯೆಯಾಗಿ ಎಲ್ಲಾ ರೀತಿಯ ಮಾಲಿನ್ಯಗಳು ಹೆಚ್ಚಾಗಿ ವಾಸಿಸಲು ಯೋಗ್ಯವಲ್ಲದ ನಗರಗಳಾಗಿ ಮಾರ್ಪಟ್ಟವು. ಮೂಲಭೂತ ಸೌಕರ್ಯಗಳಿಗೆ ತೊಂದರೆಗಳಾದವು.

ಆದರೂ ಅನಿವಾರ್ಯವಾಗಿ ಗೊಣಗುತ್ತಲೇ ಜನ ಇಲ್ಲಿಯೇ ವಾಸಿಸುತ್ತಿದ್ದರು. ಒಳಗೊಳಗೆ ಒಂದಷ್ಟು ಅಸಮಾಧಾನ ಇದ್ದೇ ಇತ್ತು. ಆದರೆ ದಿಢೀರನೆ ಆಕ್ರಮಣ ಮಾಡಿದ ಕೊರೋನಾ ವೈರಸ್ ಮತ್ತು ಅದರಿಂದಾಗಿ ಲಾಕ್ ಡೌನ್, ಉದ್ಯೋಗ ನಷ್ಟ, ಸಾವಿನ ಭಯ ಎಲ್ಲವೂ ಸೇರಿ ಸ್ವಂತ ಮನೆ ಇಲ್ಲದ, ಬಾಡಿಗೆಗೆ ಇದ್ದ ಬಹಳಷ್ಟು ಜನ, ಜೊತೆಗೆ ದಿನಗೂಲಿ ಕಾರ್ಮಿಕರು ಹೇಗೋ ಬದುಕುವ ಆಸೆಯಿಂದ ತಮ್ಮ ತಮ್ಮ ಅನುಕೂಲಕರ ಸ್ಥಳಗಳಿಗೆ ವಲಸೆ ಹೋದರು. ಅದರಲ್ಲಿ ಅಸಹಜವಾದದ್ದು‌ ಅವರ ಬಗ್ಗೆ ಕೆಟ್ಟದ್ದಾಗಿ ಮಾತನಾಡುವಂತದ್ದು ಏನೂ ಇಲ್ಲ. ಏಕೆ ಅನೇಕ ಜನ ಅನಿವಾರ್ಯವಲ್ಲದಿದ್ದರೂ ವಿದೇಶಗಳಿಗೇ ನಾನಾ ಕಾರಣಗಳಿಂದ ವಲಸೆ ಹೋಗಿಲ್ಲವೇ, ಹಾಗೆಯೇ ಮತ್ತೆ ವಾಪಸ್ಸು ಬಂದಿಲ್ಲವೇ….

ಆಗಿನ ವಲಸೆ ಸಹ ತಾತ್ಕಾಲಿಕ. ಹಳ್ಳಿಗಳು ಅಥವಾ ತಮ್ಮ ಊರಿಗೆ ಹೋದ ತಕ್ಷಣ ಅಲ್ಲಿಯೂ ಎಲ್ಲಾ ಸರಿ ಹೋಗುವುದಿಲ್ಲ. ಅನೇಕ ವ್ಯಾವಹಾರಿಕ ಸಮಸ್ಯೆಗಳು ಭುಗಿಲೇಳುತ್ತವೆ. ನಗರ ಜೀವನಕ್ಕೆ ಹೊಂದಿಕೊಂಡಿದ್ದ ಬಹಳಷ್ಟು ಜನ ಈ ಒತ್ತಡ ಕಡಿಮೆಯಾಗುತ್ತಿದ್ದಂತೆ ಮತ್ತೆ ನಗರಗಳ ಕಡೆ ಮುಖ ಮಾಡಿದರು.
ಏಕೆಂದರೆ ಭಾರತದ ಹಳ್ಳಿಗಳು ಸುಸಜ್ಜಿತವಾಗಿಲ್ಲ. ಅನೇಕ ಕುಂದುಕೊರತೆಗಳ ಗೂಡು ಈ ಹಳ್ಳಿಗಳು. ಗ್ರಾಮ ಸ್ವರಾಜ್ಯದ ಕನಸು ನನಸಾಗುವಷ್ಟು ಮೂಲ ಸೌಕರ್ಯಗಳನ್ನು ಹೊಂದಿಲ್ಲ.

ಆದ್ದರಿಂದ ವಲಸೆ ಎಂಬುದು ಮನುಷ್ಯ ಪ್ರಾಣಿಯ ಸಹಜ ಸ್ವಭಾವ. ಅನುಕೂಲಕ್ಕೆ ತಕ್ಕಂತೆ ನಡೆಯುತ್ತಿರುತ್ತದೆ. ಯುದ್ದವೇ ಇರಲಿ, ಪ್ರಾಕೃತಿಕ ವಿಕೋಪವೇ ಇರಲಿ ಸುರಕ್ಷಿತ ಸ್ಥಳಕ್ಕೆ ಹೋಗುವುದು ತಪ್ಪಲ್ಲ. ಒಬ್ಬೊಬ್ಬರ ಮನಸ್ಥಿತಿ ಒಂದೊಂದು ರೀತಿ ಇರುತ್ತದೆ. ಕೆಲವರು ಧೈರ್ಯ ಮಾಡಿ ಒಂದೇ ಸ್ಥಳದಲ್ಲಿ ಉಳಿಯಲೂ ಬಹುದು, ಅಳಿಯಲೂ ಬಹುದು.

ಮೂಲಭೂತವಾಗಿ ಮನುಷ್ಯರೆಲ್ಲಾ ಈ ಭೂಮಿಗೆ ವಲಸಿಗರೇ ಎಂಬುದನ್ನು ಮರೆಯದಿರಿ. ಬೆಂಗಳೂರು ನಮ್ಮದಲ್ಲ, ಬೆಳಗಾವಿ ನಿಮ್ಮದಲ್ಲ, ಮಂಗಳೂರು ಅವರದಲ್ಲ, ಮೈಸೂರು ಯಾರದೂ ಅಲ್ಲ. ಯಾರು ಎಲ್ಲಿ ವಾಸ ಮಾಡುವರೋ ಅದೇ ಅವರೂರು. ಸ್ವಂತ ಮನೆಯಿರಲಿ, ಬಾಡಿಗೆಯೇ ಇರಲಿ ಸ್ಥಳ ಬದಲಾವಣೆ ನಮ್ಮ ಹಕ್ಕು ಮತ್ತು ಸ್ವಾತಂತ್ರ್ಯ….

ಕಷ್ಟ ಕಾಲದಲ್ಲಿ ಮನುಷ್ಯನ ನಿಜ ರೂಪ ಬಯಲಾಗುತ್ತದೆ. ಈ ಬದಲಾವಣೆ ಮಾನವೀಯ ಅಂತಃಕರಣವನ್ನು ಹೊಮ್ಮಿಸಬೇಕೆ ಹೊರತು ರಾಕ್ಷಸ ಗುಣವನ್ನಲ್ಲ. ಮಾಧ್ಯಮಗಳ ವಿವೇಚನಾ ರಹಿತ ಮಾತುಗಳ ಪ್ರಭಾವಕ್ಕೆ ಒಳಗಾಗದಿರಿ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……

error: No Copying!