ಪ್ರಶಸ್ತಿ ವಾಪಸಾತಿ ಮತ್ತು ಬಾಯ್ಕಾಟ್ ಚಳವಳಿ ಎರಡೂ ಅಪಾಯಕಾರಿ ಮತ್ತು ಮತ್ತಷ್ಟು ದ್ವೇಷ ಅಸೂಯೆಗಳ ಕಂದಕ ಹೆಚ್ಚಿಸುತ್ತದೆ…….
ಹೌದು ಇದು ಪ್ರಜಾಪ್ರಭುತ್ವದ ಪ್ರತಿಭಟನೆಯ – ವಿರೋಧದ ಶಾಂತಿಯುತ ಮಾರ್ಗಗಳು ಅಥವಾ ಅಸ್ತ್ರಗಳು ಎಂಬುದನ್ನು ಒಪ್ಪುತ್ತಾ…..
ಬಹಳಷ್ಟು ಪ್ರಕರಣಗಳಲ್ಲಿ ಎಡಪಂಥೀಯ ಮತ್ತು ಪ್ರಗತಿಪರ ಚಿಂತಕರು ವ್ಯವಸ್ಥೆಯ ವಿರುದ್ದದ ಪ್ರತಿಭಟನೆಯನ್ನು ತಾವು ಹಿಂದೆ ಸ್ವೀಕರಿಸಿದ ಪ್ರಶಸ್ತಿಯನ್ನು ಹಿಂತಿರುಗಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದು ಅವರ ಸ್ವಾತಂತ್ರ್ಯ. ಅದನ್ನು ಪ್ರಶ್ನಿಸುವ ಅಧಿಕಾರ ನಮಗಿಲ್ಲ. ಅವರ ಬದುಕನ್ನು ಅವರ ಇಷ್ಟದಂತೆ ನಿರ್ದೇಶಿಸುವ ಹಕ್ಕು ಅವರಿಗಿದೆ. ಆದರೆ ಸಮಾಜದ ಒಟ್ಟು ಹಿತದೃಷ್ಟಿಯಿಂದ ನಾವು ಅದನ್ನು ವಿಮರ್ಶಿಸಬಹುದು. ಅದು ನಮ್ಮ ಸ್ವಾತಂತ್ರ್ಯ…..
ನೋಡಿ ಇತಿಹಾಸವನ್ನು ಬದಲಿಸಲು ಸಾಧ್ಯವಿಲ್ಲ ಅಥವಾ ಅಷ್ಟು ದೂರ ಬೇಡ ನಿನ್ನೆಯನ್ನು ಇಂದು ಪುನರ್ ಸೃಷ್ಟಿಸಲೂ ಸಾಧ್ಯವಿಲ್ಲ. ಅಂದರೆ ನಿನ್ನೆಯ ವಾತಾವರಣ ಇಂದು ಇರಬಹುದು ಅಥವಾ ಇಲ್ಲದೇ ಇರಬಹುದು.
ಪ್ರಶಸ್ತಿ ಒಪ್ಪಿಕೊಂಡು ಸ್ವೀಕರಿಸುವಾಗ ಖಂಡಿತ ಆತ್ಮಸಾಕ್ಷಿಯ ಒಪ್ಪಿಗೆ ಮತ್ತು ಒಂದಷ್ಟು ಸಂಭ್ರಮ ಇರುತ್ತದೆ ಮತ್ತು ಸಾಮಾನ್ಯವಾಗಿ ಇರಲೇ
ಬೇಕು. ಆಗಿನ ರಾಜಕೀಯ ಸಾಮಾಜಿಕ ಪರಿಸ್ಥಿತಿ ಪ್ರಶಸ್ತಿ ಸ್ವೀಕರಿಸಲು ಅಂತಹ ಅಡ್ಡಿ ಇರುವುದಿಲ್ಲ. ಆದರೆ ದಿನ ಕಳೆದಂತೆ ಸಾಮಾಜಿಕ ವಾತಾವರಣ ಬದಲಾಗುತ್ತದೆ. ಪ್ರಶಸ್ತಿ ಸ್ವೀಕರಿಸುವಾಗ ಇದ್ದ ಒಳ್ಳೆಯವರು ಎಂದು ಭಾವಿಸಲಾದ ವ್ಯಕ್ತಿಯೇ ಬದಲಾಗಿ ಆ ಸ್ಥಾನದಲ್ಲಿ ಇನ್ನೊಬ್ಬರು ಬಂದಿರಬಹುದು ಅಥವಾ ಆ ಒಳ್ಳೆಯ ವ್ಯಕ್ತಿಯು ಅದೇ ಸ್ಥಾನದಲ್ಲಿ ಮುಂದುವರಿದು ಈಗ ನಮಗೆ ಕೆಟ್ಟವರಾಗಿ ಕಾಣಬಹುದು. ಈಗ ನಾವು ಅಂದು ನೀಡಿದ ಪ್ರಶಸ್ತಿಯನ್ನು ಈಗ ವಾಪಸ್ಸು ನೀಡಿದರೆ ಪ್ರಶಸ್ತಿಗಳ ಮೌಲ್ಯ ಶಿಥಿಲವಾಗುವುದಿಲ್ಲವೇ. ಕಾಲಕ್ಕೆ ತಕ್ಕಂತೆ, ವ್ಯಕ್ತಿಗೆ ತಕ್ಕಂತೆ, ಆಡಳಿತಕ್ಕೆ ತಕ್ಕಂತೆ ಪ್ರಶಸ್ತಿ ಸ್ವೀಕರಿಸುವ ಮತ್ತು ಹಿಂತಿರುಗಿಸವ ಆಯ್ಕೆ ಇತಿಹಾಸದ ಅಥವಾ ಕಾಲದ ವ್ಯಂಗ್ಯದಂತೆ ಕಾಣುತ್ತದೆ. ನೀವು ಅಷ್ಟೊಂದು ಸೂಕ್ಷ್ಮಗ್ರಾಹಿಗಳಾದರೆ ಸರ್ಕಾರದ ಪ್ರಶಸ್ತಿಗಳನ್ನು ಸ್ವೀಕರಿಸಲೇ ಬೇಡಿ ಅಥವಾ ಸ್ವೀಕರಿಸಿದರೆ ಅದನ್ನು ವಾಪಸ್ಸು ಮಾಡಬೇಡಿ. ಆದರೆ ಯಾವುದೇ ರೀತಿಯ ಯಾವುದೇ ಕಾಲದ ಯಾವುದೇ ಸಂದರ್ಭದ ಪ್ರತಿಭಟನೆಯ ನೈತಿಕ ಮತ್ತು ಕಾನೂನಾತ್ಮಕ ಹಕ್ಕು, ಕರ್ತವ್ಯ ಮತ್ತು ಸ್ವಾತಂತ್ರ್ಯ ಸದಾ ಜಾಗೃತವಾಗಿರಲಿ. ಅದು ಬಿಟ್ಟು ಬೇಕೆಂದಾಗ ಪ್ರಶಸ್ತಿ ಸ್ವೀಕರಿಸುವುದು ಬೇಡವೆಂದಾಗ ಅದನ್ನು ಹಿಂತಿರುಗಿಸುವುದು ಅಷ್ಟು ಉತ್ತಮ ನಾಗರಿಕ ಲಕ್ಷಣವಲ್ಲ.
ಇದು ನನ್ನ ಅಭಿಪ್ರಾಯ. ಇದಕ್ಕಿಂತ ಭಿನ್ನ ಅಭಿಪ್ರಾಯ ನಿಮ್ಮದಾಗಿರಲೂ ಬಹುದು. ಅದಕ್ಕೂ ಸ್ವಾಗತವಿದೆ.
ಹಾಗೆಯೇ ಅತ್ಯಂತ ದ್ವೇಷ ಅಸೂಯೆ ಮತ್ತು ಸಂಕುಚಿತ ಮನೋಭಾವದ ಬಾಯ್ಕಾಟ್ ಚಳವಳಿ ಅಂದರೆ ಬಹಿಷ್ಕಾರ ಚಳವಳಿ ಸಹ ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಮಾರಕವಾಗುತ್ತಿದೆ. ಯಾವುದೋ ರಾಜಕಾರಣಿ ಅಥವಾ ಸಿನಿಮಾ ನಟ ಅಥವಾ ಜನಪ್ರಿಯ ವ್ಯಕ್ತಿ ಸೈದ್ಧಾಂತಿಕವಾಗಿ ಒಂದು ಪಕ್ಷ ಅಥವಾ ಸಿದ್ದಾಂತ ಬೆಂಬಲಿಸಿದ ಅಥವಾ ಟೀಕಿಸಿದ ಮಾತ್ರಕ್ಕೆ ಆತನ ವ್ಯವಹಾರ, ಸಿನಿಮಾ, ಜಾಹೀರಾತು ನೀಡಿದ ವಸ್ತುಗಳನ್ನು ಬಹಿಷ್ಕಾರಿಸುವುದು ಅತ್ಯಂತ ಅನಾಗರಿಕ ನಡವಳಿಕೆ. ಇದರಿಂದ ಒಬ್ಬ ವ್ಯಕ್ತಿಯ ಕ್ರಿಯಾತ್ಮಕತೆಯನ್ನು ಕೊಂದು ದೇಶದ ಸೃಜನಶೀಲ ಚಟುವಟಿಕೆಗಳೇ ಇಲ್ಲವಾಗಬಹುದು. ಜಾತಿ ಧರ್ಮ ಸಿದ್ದಾಂತದ ಆಧಾರದ ಈ ಬಹಿಷ್ಕಾರ ನಿರ್ಧಾರಗಳು ದ್ವೇಷ ಅಸೂಯೆ ಒಡಕು ಬಿಟ್ಟು ಇನ್ನೇನು ಒಳ್ಳೆಯ ಪರಿಣಾಮ ಬೀರುವುದಿಲ್ಲ.
ಒಬ್ಬ ವ್ಯಕ್ತಿ ನಮಗೆ ಇಷ್ಟವಿಲ್ಲದಿದ್ದರೆ ವೈಯಕ್ತಿಕವಾಗಿ ನಾವು ಅದನ್ನು ಟೀಕಿಸಿ ಆತನಿಗೆ ಯಾವುದೇ ಪ್ರೋತ್ಸಾಹ ಕೊಡದೆ ನಿರ್ಲಕ್ಷಿಸೋಣ. ಆದರೆ ಸಾಮೂಹಿಕ ಬಹಿಷ್ಕಾರ ಮುಂದೆ ವ್ಯವಸ್ಥೆಯೇ ಕುಸಿಯುವಂತೆ ಮಾಡಿ ಆರ್ಥಿಕ ಅಭಿವೃದ್ಧಿ ಕುಂಠಿತವಾಗುತ್ತದೆ. ಭಯದಿಂದ ಬಹಿಷ್ಕಾರದಿಂದ ಯಾರನ್ನೂ ಹೆದರಿಸಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ ಎಂಬ ಸತ್ಯ ಅರ್ಥಮಾಡಿಕೊಳ್ಳಬೇಕು.
ಅವರನ್ನು ಬಹಿಷ್ಕರಿಸಿ, ಇವರನ್ನು ಬಹಿಷ್ಕರಿಸಿ ಎಂದು ಸಾಮಾಜಿಕ ಜಾಲತಾಣಗಳ ಅಭಿಯಾನವನ್ನು ಇನ್ನು ಮುಂದೆ ಪ್ರೋತ್ಸಾಹಿಸದಿರೋಣ. ಆದರೆ ಒಳ್ಳೆಯ – ಪರಿಣಾಮಕಾರಿ ಮತ್ತು ಸಮಾಜಮುಖಿ ವಿಷಯಗಳಲ್ಲಿ ಇದೇ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಜಾಗೃತಿ ಮೂಡಿಸೋಣ………
ಎಲ್ಲವನ್ನೂ – ಎಲ್ಲರನ್ನೂ ಒಳಗೊಂಡ ಪ್ರೀತಿಯ ಅಪ್ಪಿಕೋ ಚಳವಳಿ ಮಾತ್ರ ದೇಶದ ಸಕಾರಾತ್ಮಕ ಬೆಳವಣಿಗೆಗೆ ಪೂರಕ. ಇಲ್ಲದಿದ್ದರೆ ಮಕ್ಕಳಾಟದ ಬಹಿಷ್ಕಾರಗಳು ಮುಂದೆ ಗಂಭೀರ ಪರಿಣಾಮ ಬೀರುತ್ತದೆ ಎಚ್ಚರಿಕೆ….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……