ಸಮಾಜವಾದಿ ಕವಿ ಡಾ || ದಿನಕರ ದೇಸಾಯಿ ನೆನಪಿನಲ್ಲಿ
ನಾನು ಹೆಚ್ಚೆಂದರೆ ನೂರು ಚುಟುಕು ಬರೆದಿರಬಹುದೇನೋ. ನನ್ನ ಚುಟುಕು ರಚನೆಗಳ ಮೂಲಸ್ಪೂರ್ತಿ ದಿನಕರ ದೇಸಾಯಿಯವರು. ಓದುವ ಹವ್ಯಾಸದ ಆರಂಭಿಕ ಕಾಲದಲ್ಲಿ ದೇಸಾಯಿಯವರ ಚುಟುಕುಗಳನ್ನು ಓದುತ್ತಾ ಓದುತ್ತಾ, ನಾನೂ ಯಾಕೆ ಚುಟುಕು ಬರೆಯಬಾರದೆಂದು ಅನಿಸಿದಾಗ ಬರೆಯಲು ಆರಂಭಿಸಿದ್ದೆ.
ಮೊದಮೊದಲು ಬರೆದುದರಲ್ಲಿ ಕೆಲವು ಚುಟುಕುಗಳನ್ನು ಪ್ರಕಟಣೆಗೆ ಕಳಿಸುತ್ತಿದ್ದೆ. ಇವುಗಳಲ್ಲಿ ಕೆಲವು ಚುಟುಕುಗಳು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದದ್ದಿದೆ. ಕಾರ್ಯನಿರತ ಪತ್ರಕರ್ತನಾದ ಬಳಿಕ ಚುಟುಕು ಬರೆಯುವುದು ನಿಂತೇ ಹೋಯಿತು. ಈಗ ಮತ್ತೆ ಆಗೊಮ್ಮೆ ಈಗೊಮ್ಮೆ ಎಂಬಂತೆ ಬರೆಯುವುದಿದೆ. ಈಗ ನನ್ನ ಹೆಚ್ಚಿನ ಚುಟುಕುಗಳು ವಾಟ್ಸಾಪ್ ಸ್ಟೇಟಸ್ ಗಷ್ಟೇ ಸೀಮಿತ.
ಚುಟುಕುಗಳ ರಚನೆಗೆ ಮೂಲಸ್ಪೂರ್ತಿಯಾದ ದಿನಕರ ದೇಸಾಯಿಯವರ ಬಗ್ಗೆ ಅಂದು ನನಗೇನೂ ಹೆಚ್ಚು ಗೊತ್ತಿರಲಿಲ್ಲ. ಚುಟುಕು ಕವಿ ಎಂಬುದಷ್ಟೇ ನನಗೆ ಗೊತ್ತಿದ್ದುದು. ಹಿರಿಯ ಪತ್ರಕರ್ತರೂ, ಲೇಖಕರೂ, ರೈತ – ಕಾರ್ಮಿಕ ಹೋರಾಟಗಾರರೂ ಆದ ಅಮ್ಮೆಂಬಳ ಆನಂದರ ಪರಿಚಯ, ಆತ್ಮೀಯತೆಯ ಯೋಗ ಭಾಗ್ಯ ಲಭಿಸಿದ ಬಳಿಕ ದಿನಕರ ದೇಸಾಯಿ ಎಂಬ ಮಹಾಶಕ್ತಿಯನ್ನು ತಿಳಿದುಕೊಂಡೆ. ದೇಸಾಯಿಯವರ ಮೇಲಿದ್ದ ಅಭಿಮಾನ ಹೆಚ್ಚಾಯಿತು.
ಸೆಪ್ಟೆಂಬರ್ ಹತ್ತು, ದಿನಕರ ದೇಸಾಯಿಯವರ ಜನ್ಮದಿನ. ನೂರ ಹದಿಮೂರನೆಯ ಜನ್ಮದಿನೋತ್ಸವ. ಇವರು ಜನಿಸಿದ್ದು 1909ರ ಸೆಪ್ಟೆಂಬರ್ ಹತ್ತರಂದು. ಉತ್ತರ ಕನ್ನಡ ಜಿಲ್ಲೆ ಅಂಕೋಲೆ ತಾಲೂಕಿನ ಹೊನ್ನೆಕೇರಿಯಲ್ಲಿದ್ದ ಅಜ್ಜಿ ಮನೆಯಲ್ಲಿ. ದೇಸಾಯಿಯವರ ಊರು ಅಲಗೇರಿ. ಪ್ರಾಥಮಿಕ ಶಿಕ್ಷಣ ಪಡೆದದ್ದೂ ಇಲ್ಲಿಯೇ. ಬಳಿಕದ ಶಿಕ್ಷಣ ಅಂಕೋಲೆ ಮತ್ತು ಕಾರವಾರದಲ್ಲಾಯಿತು. ಬೆಂಗಳೂರು, ಮೈಸೂರು ಮತ್ತು ಮುಂಬಯಿಯಲ್ಲಿ ಬಿಎ, ಎಂಎ, ಎಲ್ ಎಲ್ ಬಿ ಪದವಿಗಳನ್ನು ಪಡೆದರು.
1935ರಲ್ಲಿ ಗೋಪಾಲಕೃಷ್ಣ ಗೋಖಲೆಯವರ ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿಗೆ ಸೇರಿದ ಬಳಿಕ ದಿನಕರ ದೇಸಾಯಿಯವರು ಜನಪರ ಹೋರಾಟಗಾರರಾಗಿ ಗುರುತಿಸಲ್ಪಟ್ಟರು. ಮುಂಬಯಿಯಲ್ಲಿ ಉಗಿಹಡಗು ಕೆಲಸಗಾರರ ಸಂಘವನ್ನು ಸ್ಥಾಪಿಸಿ ಸಂಘಟಿಸಿ ಕೆಲಸ ಮಾಡಿದ ಅವರು ಬಳಿಕ ಅಂಕೋಲೆಯಲ್ಲಿ ಗೇಣಿದಾರರ ಗೆಳೆಯರಾಗಿ ಗೇಣಿದಾರರ ಪರವಾಗಿ ಸಶಕ್ತವಾದೊಂದು ಸಂಘಟನೆ ಮತ್ತು ಹೋರಾಟವನ್ನು ಕಟ್ಟಿ ಬೆಳೆಸಿ ಸುಧೀರ್ಘ 35 ವರ್ಷಗಳ ಕಾಲ ಸಮರ್ಥವಾಗಿ ಮುನ್ನಡೆಸಿದ್ದು ಒಂದು ಐತಿಹಾಸಿಕ ದಾಖಲೆಯೇ ಆಗಿದೆ.
ಹೋರಾಟದಲ್ಲಿ ಗಡಿಪಾರು ಶಿಕ್ಷೆಯನ್ನೂ ಅನುಭವಿಸಿದ ಅವರು ಯಾವುದಕ್ಕೂ ಅಂಜದೆ ಅಳುಕದೆ, ರಾಜಿ ರಹಿತ ಹೋರಾಟಗಾರರಾಗಿ ಮುಂದುವರಿದುದನ್ನು ಈಗಲೂ ಸ್ಮರಿಸಲಾಗುತ್ತದೆ. ಜೊತೆಜೊತೆಗೆ, ಹೋರಾಟಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಪುಸ್ತಕಗಳನ್ನು (“towards literate Bombay” / “land rents in north kanara” / “report of the Bijapur famine relufe committee” / “among Indian seamen in great Britain” / “report on police firing at amalnar” / “primary education in India” / “maritime labour in India” / “the vakkals of north kanara” / “ಪ್ರಪಂಚದ ಕೆಲಸಗಾರರು” / “ರೈತರ ಹಾಡುಗಳು”) ಬರೆದು ಪ್ರಕಟಿಸುವ ಮಹತ್ಕಾರ್ಯವನ್ನೂ ದೇಸಾಯಿಯವರು ನಡೆಸಿದರು.
ಮುಂಬಯಿ ಪೋರ್ಟ್ ಟ್ರಸ್ಟ್ ನ ಟ್ರಸ್ಟಿಯಾಗಿ, ರಾಜ್ಯ ಪುನರ್ಘಟನಾ ಆಯೋಗ(ಫಜಲ್ ಅಲಿ ಕಮಿಶನ್) ಕ್ಕೆ ಸಲ್ಲಿಸಬೇಕಾಗಿದ್ದ ಮನವಿಯ ಕರಡು ಸಮಿತಿಯ ಕಾರ್ಯದರ್ಶಿಯಾಗಿ ಹೀಗೆ ಹತ್ತು ಹಲವಾರು ಜನಪರ ಹೋರಾಟ ಸಮಿತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ದಿನಕರ ದೇಸಾಯಿಯವರು ಹದಿನಾಲ್ಕು ವರ್ಷಗಳ ಕಾಲ ಮುಂಬಯಿ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಆಗಿದ್ದವರು. ಬಳಿಕ ಸಂಸದರಾಗಿಯೂ ಚುನಾಯಿತರಾದರು. ಸಂಸತ್ ನಲ್ಲಿ ಮತ್ತು ಕ್ಷೇತ್ರದಲ್ಲಿ ಹಾಗೂ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಅಚ್ಚಳಿಯದ ಛಾಪು ಮೂಡಿಸುವಲ್ಲಿ ಪೂರ್ಣ ಯಶಸ್ವಿಯಾದರು.
ಉತ್ತರ ಕನ್ನಡ ಜಿಲ್ಲೆಗೆ ಅರಣ್ಯ ಜಿಲ್ಲೆ ಎಂಬ ಹೆಸರೂ ಇದೆ.
ಬಹುತೇಕ ಕುಗ್ರಾಮಗಳನ್ನೇ ಹೊಂದಿದ್ದ ಈ ಜಿಲ್ಲೆಯಲ್ಲಿ
ಎಲ್ಲರಿಗೂ ಉಚಿತ ಶಿಕ್ಷಣ ಮತ್ತು ಸುಲಭ ಶಿಕ್ಷಣ ಎಂಬ ಗುರಿಯೊಂದಿಗೆ ದಿನಕರ ದೇಸಾಯಿಯವರು ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಒಂದು ಮಹಾಕ್ರಾಂತಿಯೇ ಹೌದು.
ಈ ನಿಟ್ಟಿನಲ್ಲಿ ಅವರು ಕೆನರಾ ವೆಲ್ ಫೆರ್ ಟ್ರಸ್ಟ್ ನ್ನು ಸ್ಥಾಪಿಸಿದರು ಮತ್ತು ಈ ಸಂಸ್ಥೆಯ ಮೂಲಕ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಒಂದೊಂದೇ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುತ್ತಾ ಹೋದರು. ಹೀಗೆ ಒಟ್ಟು ಮೂವತ್ತು ಶಿಕ್ಷಣ ಸಂಸ್ಥೆಗಳನ್ನವರು ಸ್ಥಾಪಿಸಿದರು.
ಈಗ ಈ ಸಮೂಹ ಶಿಕ್ಷಣ ಸಂಸ್ಥೆಗಳ ಸಂಖ್ಯೆ ನಲ್ವತ್ತಾಗಿದೆ. ತಮ್ಮ ಅವಧಿಯಲ್ಲಿ ಟ್ರಸ್ಟಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ದೇಸಾಯಿಯವರು ಯಾರನ್ನೆಲ್ಲ ಸೇರಿಸಿಕೊಂಡಿದ್ದರೋ, ಈಗ ಇವುಗಳಲ್ಲಿ ಯಾರೆಲ್ಲಾ ಇದ್ದಾರೆಯೋ ಇವರಿಗೆಲ್ಲ ಇರುವ ನಿಷ್ಠೆ, ಬದ್ಧತೆ, ಪ್ರಾಮಾಣಿಕತೆ, ದಕ್ಷತೆಗೆ ಕೆನರಾ ವೆಲ್ ಫೆರ್ ಟ್ರಸ್ಟ್ ಮೂಲಕ ವಿಸ್ತಾರಗೊಂಡಿರುವ ಶಿಕ್ಷಣ ಸಂಸ್ಥೆಗಳೇ ಪ್ರತ್ಯಕ್ಷ ಸಾಕ್ಷಿ. ದೇಸಾಯಿಯವರ ದೂರದೃಷ್ಟಿ ಮತ್ತು ಸೂಕ್ಷ್ಮಜ್ಞತೆಯೇ ಈ ಅಪೂರ್ವ ಮುನ್ನಡೆಗೆ ಮೂಲವಾಗಿದೆ.
ದಿನಕರ ದೇಸಾಯಿಯವರ ಸಾಹಿತ್ಯ ಸೇವೆ ಮತ್ತು ಇತಿಹಾಸದ ಮೇಲಿದ್ದ ಪ್ರೀತಿ ಹಾಗೂ ಕಾಳಜಿ ಅನನ್ಯವಾದುದು. ಕವನ ಸಂಗ್ರಹ, ಮಕ್ಕಳ ಗೀತಗಳು, ಮಕ್ಕಳ ಪದ್ಯಗಳು, ಹೂಗೊಂಚಲು, ನಾ ಕಂಡ ಪಡುವಣ, ಮಕ್ಕಳ ಪದ್ಯ (ಸಮಗ್ರ), ದಿನಕರನ ಚೌಪದಿ (2500 ಚುಟುಕುಗಳು), ಚೌಪದಿ ಸಂಗ್ರಹ, ದಾಸಾಳ, ಆಯ್ದ ಕವನಗಳು, ದಿನಕರನ ಆಯ್ದ ಚೌಪದಿ, ಸಮಗ್ರ ಕಾವ್ಯ, ದಿನಕರಾಲಿ ಕವನಾ (ಕೊಂಕಣಿ), the mahamandaeshwaras under the chalukyas of kalyani ಇವುಗಳೆಲ್ಲ ದೇಸಾಯಿಯವರ ಪ್ರಕಟಿತ ಕೃತಿಗಳು. ಇಂಥ ದೇಸಾಯಿಯವರ ಕುರಿತು ಇತರರು ಬರೆದ ಕೃತಿಗಳೇ ಹತ್ತಕ್ಕೂ ಅಧಿಕ.
ಸಾಹಿತ್ಯಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯ ಕ್ಷೇತ್ರಗಳಲ್ಲಿ ಸಮಾಜವಾದಿ ದಿನಕರ ದೇಸಾಯಿಯವರ ಕೊಡುಗೆ ಅಪಾರವಾದುದು. ಈ ಹಿನ್ನೆಲೆಯಲ್ಲಿ ಇವರಿಗೆ ಸಂದ ಪ್ರಶಸ್ತಿ – ಸನ್ಮಾನಗಳು, ಸ್ಥಾನ ಮಾನ ಗೌರವ ಪುರಸ್ಕಾರಗಳು ಹತ್ತು ಹಲವಾರು. ಕೆಲವನ್ನು ನಯವಾಗಿ ನಿರಾಕರಿಸಿದ್ದ ದೇಸಾಯಿಯವರು, ಇನ್ನು ಕೆಲವನ್ನು ಗೌರವ ಮತ್ತು ಪ್ರೀತಿಯಿಂದ ಸ್ವೀಕರಿಸಿದ್ದಾರೆ.
ದೇಸಾಯಿಯವರ ಅಭಿಮಾನಿಗಳು ಹಲವರು. ದೇಸಾಯಿಯವರ ನಿಧನಾನಂತರ ಅವರ ಅಭಿಮಾನಿಗಳು ಒಟ್ಟು ಸೇರಿಕೊಂಡು “ಡಾ || ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ (ರಿ)” ರಚಿಸಿಕೊಂಡು ದೇಸಾಯಿಯವರ ಸ್ಮರಣೆಯಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ. ಅಮ್ಮೆಂಬಳ ಆನಂದರು ಈ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದರೆ, ವಿಷ್ಣು ನಾಯ್ಕ, ಜೆ. ಪ್ರೇಮಾನಂದ ಕಾರ್ಯದರ್ಶಿಗಳು. ಶಾಂತಾರಾಮ ನಾಯಕ, ಡಾ | ರಾಮಕೃಷ್ಣ ಗುಂದಿ, ಪ್ರೊ || ಮೋಹನ ಹಬ್ಬು ಉಪಾಧ್ಯಕ್ಷರು, ಗೋಪಾಲಕೃಷ್ಣ ನಾಯಕ, ಜಗದೀಶ ನಾಯಕ ಹೊಸ್ಕೇರಿ ಸಹ ಕಾರ್ಯದರ್ಶಿಗಳು.
1982ರ ನವೆಂಬರ್ 6ರಂದು ಮುಂಬಯಿಯಲ್ಲಿ ಹೃದಯಾಘಾತದಿಂದ ನಿಧನರಾದ ದಿನಕರ ದೇಸಾಯಿಯವರ ಜನ್ಮದಿನವಿಂದು (10/09/1909). ಜನ್ಮದಿನದ ನೆನಪಿನಲ್ಲಿ ಹೀಗೊಂದು ನುಡಿನಮನ.
~ ಶ್ರೀರಾಮ ದಿವಾಣ, ಉಡುಪಿ
10/09/2022