Spread the love

ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ – ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ – ಇಡೀ ಶಿಕ್ಷಕ ಸಮೂಹ ಎಲ್ಲರನ್ನೂ ಗೌರವ ಮತ್ತು ಪ್ರೀತಿ ಪೂರ್ವಕವಾಗಿ ನೆನೆಯುತ್ತಾ……..

ಮಾತನಾಡಬೇಕಿದೆ ಶಿಕ್ಷಕರೇ ನೀವು ಧ್ವನಿ ಎತ್ತಿ – ಮನ ಬಿಚ್ಚಿ – ಮುಂದಿನ 25 ವರ್ಷಗಳಲ್ಲಿ ಮೌಲ್ಯಯುತ ಬಲಿಷ್ಠ ಭಾರತ ನಿರ್ಮಾಣವಾಗಲು……..

ಅಕ್ಷರ ಕಲಿಸುವವರು ನೀವಲ್ಲವೇ – ಅಧ್ಯಯನ ಮಾಡಲು ಮಾರ್ಗ ಸೂಚಿಸುವವರು ನೀವಲ್ಲವೇ –
ಚಿಂತಿಸಲು ಪ್ರೇರೇಪಿಸುವವರು ನೀವಲ್ಲವೇ –
ಅನ್ಯಾಯದ ವಿರುದ್ಧ ಸಿಡಿದೇಳಲು ಪ್ರೋತ್ಸಾಹಿಸುವವರು ನೀವಲ್ಲವೇ –
ಬದುಕು ರೂಪಿಸಿಕೊಳ್ಳಲು ಸಹಾಯ ಮಾಡುವವರು ನೀವಲ್ಲವೇ……

ಭ್ರಷ್ಟ ವ್ಯವಸ್ಥೆಯ ವಿರುದ್ಧ ನೀವೇ ಮೌನವಾದರೆ,
ಮೌಡ್ಯಗಳ ವಿರುದ್ಧ ನೀವೇ ಮೌನವಾದರೆ,
ಜಾತಿ ಪದ್ದತಿಯು ವಿರುದ್ಧ ನೀವೇ ಮೌನವಾದರೆ,
ಚುನಾವಣಾ ಅಕ್ರಮಗಳ ವಿರುದ್ಧ ನೀವೇ ಮೌನವಾದರೆ ಸಮಾಜದ ಭವಿಷ್ಯವೇನು……

ಸತ್ಯದ ಪರವಾಗಿ ಮಾತನಾಡಲು ಹೇಳಿ ಕೊಟ್ಟವರು ನೀವು,
ದೇಶ ಭಕ್ತಿಯ ಪಾಠ ಮಾಡಿದವರು ನೀವು,
ಮಾನವೀಯ ಮೌಲ್ಯಗಳನ್ನು ಬಿತ್ತಿದವರು ನೀವು,
ಸಂವಿಧಾನ ಹಕ್ಕು – ಕರ್ತವ್ಯಗಳ ಬಗ್ಗೆ ಎಚ್ಚರಿಸಿದವರು ನೀವು……

ಈಗ ನೀವೇ ರಾಜಿಯಾದರೆ ಮುಂದೇನು ?

” ಚೋರ್ ಗುರು ಚಂಡಾಲ್ ಶಿಷ್ಯ “
ಎಂಬ ಆಡುಮಾತಿನ ಒಂದು ವಾಕ್ಯವನ್ನು ಹಾಸ್ಯದ ಅರ್ಥದಲ್ಲಿ,
ಶಿಕ್ಷಕರ ದಿನ ಆಚರಣೆಯಾದ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾ……………..

ಈಗಲೂ ಸಮಾಜದಲ್ಲಿ ಅಲ್ಪ ಸ್ವಲ್ಪ ಮರ್ಯಾದೆ ಗೌರವ ಉಳಿಸಿಕೊಂಡಿರುವ ಏಕೈಕ ವೃತ್ತಿ ಶಿಕ್ಷಕರದು……..

ಪೋಲೀಸರು, ಡಾಕ್ಟರುಗಳು, ಬ್ಯಾಂಕಿನವರು, ಪತ್ರಕರ್ತರು,
ಅಧಿಕಾರಿಗಳು,
ರಾಜಕಾರಣಿಗಳು,
ಸಾಹಿತಿಗಳು,
ಕಲಾವಿದರು,
ಸಮಾಜ ಸೇವಕರು ಮುಂತಾದ ಎಲ್ಲರೂ ವೇಗದ, ಆಧುನಿಕ, ವ್ಯಾವಹಾರಿಕ ಜಗತ್ತಿನಲ್ಲಿ ಮೌಲ್ಯ ಮತ್ತು ಕರ್ತವ್ಯ ಪಾಲನೆಯಲ್ಲಿ ಶಿಥಿಲವಾಗುತ್ತಾ ಸಾಗುತ್ತಿದ್ದಾರೆ.

ಆದರೆ,
ಕೆಲವು ಅಪರೂಪದ ನೀತಿಗಟ್ಟ ಶಿಕ್ಷಕರನ್ನು ಹೊರತುಪಡಿಸಿ ಬಹುತೇಕ ಎಲ್ಲರೂ ಒಂದಷ್ಟು ಸಭ್ಯತೆ, ಜವಾಬ್ದಾರಿ ಮತ್ತು ಸಾಮಾಜಿಕ ಕಾಳಜಿ ಉಳ್ಳವರಾಗಿದ್ದಾರೆ. ಆ ಕಾರಣಕ್ಕಾಗಿಯೇ ಸಮಾಜ ಇನ್ನೂ ನಾಶವಾಗದೆ ಉಳಿದಿದೆ.

ಒಂದು ಪ್ರಖ್ಯಾತ ಶಾಲೆಯ ಮುಖ್ಯೋಪಾಧ್ಯಾಯಿನಿಯೊಬ್ಬರು ಹೀಗೆ ಹೇಳಿದರು ” ಇತ್ತೀಚಿನ ವರ್ಷಗಳಲ್ಲಿ ಶಿಕ್ಷಕರು ಮತ್ತು ಪೋಷಕರು ತೆಗೆದುಕೊಳ್ಳುವ ಶ್ರಮ ಮತ್ತು ಜವಾಬ್ದಾರಿಯ ಶೇಕಡಾ 25% ರಷ್ಟು ಸಹ ವಿದ್ಯಾರ್ಥಿಗಳು ತೆಗೆದುಕೊಳ್ಳುವುದಿಲ್ಲ. ಶಿಕ್ಷಕರು ಮತ್ತು ಪೋಷಕರಿಗೆ ಹೊರೆಯಾಗುತ್ತಾ ಮಕ್ಕಳಿಗೆ ಹಗುರವಾಗುತ್ತಾ ಸಾಗುತ್ತಿದೆ ಇಂದಿನ ಶಿಕ್ಷಣ ವ್ಯವಸ್ಥೆ ” ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಅಕಾಡೆಮಿಕ್ ಆಗಿ ಇಂದು ಕಲಿಕೆ ಬಹಳ ಸುಲಭವಾಗಿದೆ. ಅಂದಿನ 10th ಅಥವಾ SSLC ಯನ್ನು ಮಾನದಂಡವಾಗಿ ಇಟ್ಟುಕೊಂಡು ಹೇಳಬೇಕೆಂದರೆ ಅದನ್ನು ಪಾಸು ಮಾಡುವುದೇ ಬಹುದೊಡ್ಡ ‌ಸಾಧನೆಯಾಗಿತ್ತು.
ಫಸ್ಟ್ ಕ್ಲಾಸ್ ( ಶೇಕಡ 6೦% ) ಬಂದರೆ ಆತನೇ ಅತಿ ಬುದ್ದಿವಂತನೆಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ನಗರದ ಎಷ್ಟೋ ಶಾಲೆಗಳಲ್ಲಿ ಶೇಕಡಾ 9೦% ಅಂಕಗಳು ಬಂದರೂ ಪ್ರವೇಶ ಸಿಗುವುದು ಕಷ್ಟವಾಗಿದೆ…..

ಶಿಕ್ಷಕನೇ ಸಮಾಜದ ಅತಿಮುಖ್ಯ ವ್ಯಕ್ತಿ ಎಂಬ ವ್ಯವಸ್ಥೆಯಿಂದ ಆಧುನಿಕ ಶಿಕ್ಷಣ ಬದಲಾದ ಪರಿಸ್ಥಿತಿಯನ್ನು
ತೆಲುಗಿನಲ್ಲಿ ಹೀಗೆ ವರ್ಣಿಸಲಾಗಿದೆ. ಅದರ ಕನ್ನಡ ಅರ್ಥ ” ಎಲ್ಲೂ ಕೆಲಸ ಮಾಡಲು ಯೋಗ್ಯನಲ್ಲದ ಅಯೋಗ್ಯನಿಗೆ ಉದ್ಯೋಗ ನೀಡುವ ಕೊನೆಯ ಇಲಾಖೆ ಎಜುಕೇಶನ್ ಡಿಪಾರ್ಟ್ಮೆಂಟ್ “
ಹಾಸ್ಯ ಭರಿತ ವ್ಯಂಗ್ಯ ಇಲ್ಲಿದ್ದರು ವಾಸ್ತವವೂ ಆಗಿದೆ.

ಹುಟ್ಟಿನಿಂದ ಸಾಯುವವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಪ್ರತಿಯೊಬ್ಬರು ಗುರುಗಳೇ ಮತ್ತು ಪ್ರತಿಯೊಬ್ಬರೂ ಶಿಕ್ಷಕರೇ. ಕಲಿಕೆ ಕಲಿಸುವಿಕೆ ಮಾನವ ಜನಾಂಗದ ಅಂತ್ಯದವರೆಗೂ ಸಾಗುತ್ತಲೇ ಇರುತ್ತದೆ.

ಆದರೆ,
ಅಕ್ಷರಗಳೋ, ಕಲೆಯೋ, ತಾಂತ್ರಿಕತೆಯೋ, ಚಾಕಚಕ್ಯತೆಯೋ ಇನ್ನೇನೋ ಕಲಿಕೆಗಿಂತ ಮುಖ್ಯವಾಗಿ ಪ್ರೀತಿ ವಿಶ್ವಾಸ ವಿನಯ ಮಾನವೀಯತೆ, ಜೀವಪರ ಸಹಜೀವನ ಪರಿಸರ ರಕ್ಷಣೆ ಮುಂತಾದ ಅಂಶಗಳ ಕಲಿಕೆಯೇ ಅತ್ಯುತ್ತಮ ಮತ್ತು ಮೊದಲ ಆಧ್ಯತೆಯಾಗಬೇಕು. ಆಗ ಮಾತ್ರ ನಾಗರಿಕ ಸಮಾಜ ಸುಸ್ಥಿತಿಯಲ್ಲಿ ಇರಲು ಸಾಧ್ಯ.

ಹೊಟ್ಟೆ ಪಾಡಿನ ಆಧುನಿಕ ಶಿಕ್ಷಣ ಹೊಟ್ಟೆ ತುಂಬಿದಂತೆ ಬದುಕಿನ ಸಾರ್ಥಕತೆಯ ಶಿಕ್ಷಣವಾಗಲಿ ಎಂಬ ನಿರೀಕ್ಷೆಯಲ್ಲಿ…..

ಗುರುಗಳೆಂಬ ಕಲಿಸುವವರು ನಮ್ಮ ಸಮಾಜದಲ್ಲಿ ಇನ್ನು ಮುಂದಾದರು ಅತ್ಯುತ್ತಮ ‌ಸ್ಥಾನ ಗೌರವ ಮತ್ತು ಯೋಗ್ಯತೆ ಪಡೆಯಲಿ ಎಂದು ಆಶಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……

error: No Copying!