Spread the love

ಸಿಂಗಂ….
ಎಲ್ಲಿ ಹೋದರು ಪೋಲೀಸ್ ಸಿಂಗಂಗಳು,
ಎಲ್ಲಿ ಹೋದವು ಐಪಿಎಸ್ ಓದುಗಳು,
ಎಲ್ಲಿ ಹೋದವು ಕಾನೂನಿನ ಪಾಠಗಳು,
ಎಲ್ಲಿ ಹೋದವು ನಿಮ್ಮ ಹೆಗಲ ಮೇಲಿನ ಬ್ಯಾಡ್ಜುಗಳು,
ಎಲ್ಲಿ ಹೋದವು ನಿಮ್ಮ ಮಾನವೀಯ ಮೌಲ್ಯಗಳು,…….

ಬೇರೆಯವರ ತಪ್ಪುಗಳು – ಒತ್ತಡಗಳು ಬಿಡಿ. ಕಾರ್ಯಾಂಗದ ಬಹುದೊಡ್ಡ ಜವಾಬ್ದಾರಿ ಮತ್ತು ಸಾರ್ವಜನಿಕ ತೆರಿಗೆ ಹಣ ಪಡೆದು ಡೆಹ್ರಾಡೂನ್ ನಲ್ಲಿ ಸಂವಿಧಾನಾತ್ಮಕ ಪ್ರತಿಜ್ಞೆ ಮಾಡುವ ನಿಮ್ಮ ದೇಶ ಸೇವೆಯ ನಿಯತ್ತು ಎಲ್ಲಿಗೆ ಹೋಯಿತು….

ಗೊತ್ತೇ ನೀವು ಮಾಡುತ್ತಿರುವ ತಪ್ಪು. ನೆನಪಿದೆಯೇ ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣ. ಪೋಕ್ಸೋ ದಂತ ಅತ್ಯಂತ ಪರಿಣಾಮಕಾರಿ ಕಾನೂನೇ ಈ ರೀತಿ ಮೀನಾ ಮೇಷಕ್ಕೆ ಒಳಗಾದರೆ ಬೇರೆಯ ಕಾನೂನುಗಳ ಗತಿ ಏನು ?

ಮುರುಘಾ ಮಠದ ಸ್ವಾಮೀಜಿ ತಪ್ಪು ಮಾಡಿದ್ದಾರೋ ಇಲ್ಲವೋ ನಮಗೆ ಗೊತ್ತಿಲ್ಲ. ಆದರೆ ಪೋಲೀಸ್ ಇಲಾಖೆಯೇ ಅವರ ಮೇಲೆ ಫೋಕ್ಸೋ ಕಾಯ್ದೆಯ ಅನ್ವಯ ಮೊದಲಾ ತನಿಖಾ ವರದಿ ( FIR ) ಹಾಕಿದೆ. ಅಂದರೆ ನಿಮಗೆ ಅಪರಾಧ ಸಾಧ್ಯತೆಯ ಮಾಹಿತಿ ಸಿಕ್ಕಿರಲೇ ಬೇಕು. ಇಲ್ಲದಿದ್ದರೆ ಅಷ್ಟು ದೊಡ್ಡ ಸ್ವಾಮಿಯ ಮೇಲೆ ಸುಳ್ಳು FIR ದಾಖಲಿಸುವಷ್ಟು ತಪ್ಪು ಮಾಡುವುದಿಲ್ಲ.

ಈಗ ಕನಿಷ್ಠ ಅವರನ್ನು ವಶಕ್ಕೆ ಪಡೆದು ಗೌರವಯುತವಾಗಿಯೇ ವಿಚಾರಣೆ ನಡೆಸಿ ಕಾನೂನಿನ ಕ್ರಮಗಳನ್ನು ಕೈಗೊಳ್ಳಬಹುದಲ್ಲವೇ ?

ಈಗ ನೀವು ಅವರಿಗೆ ರಾಜಾರೋಷವಾಗಿ ತಿರುಗಾಡಲು ಬಿಟ್ಟು ಅವರು ಈ ಮಕ್ಕಳ ಮೇಲೆ ಪ್ರಭಾವ ಬೀರಿ ಘಟನೆ ನಡದೇ ಇಲ್ಲ ಎಂದು ‌ನ್ಯಾಯಾಲಯದ ಮುಂದೆ ಆ ಮಕ್ಕಳು ಹೇಳಬಹುದಲ್ಲವೇ….

ಮುಂದೆ ಅನೇಕ ಸಾಮಾನ್ಯ ಜನ ನೀವು ಅವರ ಮೇಲೆ ಏನಾದರೂ ಕ್ರಮ ಕೈಗೊಳ್ಳಲು ಮುಂದಾದರೆ ಖಂಡಿತ ಈ ಸ್ವಾಮಿಗಳ ಪ್ರಕರಣವನ್ನು ಪ್ರಸ್ತಾಪಿಸಿ ನಿಮಗೆ ಛೀಮಾರಿ ಹಾಕುವ ಸಾಧ್ಯತೆ ಖಂಡಿತ ಇದೆ.

ದಯವಿಟ್ಟು ಕೂಡಲೇ ‌ಈ ಪ್ರಕರಣದಲ್ಲಿ ನ್ಯಾಯಯುತ ಕಾನೂನು ಕ್ರಮ ಕೈಗೊಂಡು ನಿಮ್ಮ ಇಲಾಖೆಯ ಮತ್ತು ರಾಜ್ಯದ ಹಾಗೂ ಕಾನೂನಿನ ಮರ್ಯಾದೆ ಉಳಿಸಿ. ಇದು ನಿಮ್ಮ ಸ್ವಂತ ವಿಷಯವಲ್ಲ. ಭವಿಷ್ಯದ ಸಮಾಜದ ಮೌಲ್ಯಗಳ ಅಳಿವು ಉಳಿವಿನ ಪ್ರಶ್ನೆ….

ಸಿನಿಮಾಗಳಲ್ಲಿ ಈ ರೀತಿಯ ಘಟನೆಗಳ ಸಂದರ್ಭದಲ್ಲಿ ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಾ ಬಂಧಿಸಿ ಕರೆದುಕೊಂಡು ಹೋಗಿ ಸಿಂಗಂ ಎನಿಸಿಕೊಂಡು ಜನರಿಂದ ಚಪ್ಪಾಳೆ ಗಿಟ್ಟಿಸುವ ಮತ್ತು ಚಪ್ಪಾಳೆ ಹೊಡೆಯುವ ಜನರೇ ವಾಸ್ತವ ಬದುಕಿನಲ್ಲಿ ಏಕೆ ನಿರ್ವೀರ್ಯರಾಗಿರುವಿರಿ….

ಹಾಗೆಯೇ ‌ಈ ರಾಜಕೀಯ ಪಕ್ಷಗಳ ಮಾನಸಿಕ ದಿವಾಳಿತನ ಸಹ ಬಯಲಾಗಿದೆ. ಮೊದಲಿಗೆ ಈ ಸ್ವಾಮಿ ಕಾಂಗ್ರೇಸ್ ಪರವಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಪರ ವಾಲಿದ್ದರು. ಮೊನ್ನೆ ಮತ್ತೆ ರಾಹುಲ್ ಗಾಂಧಿ ಬಂದಾಗ ಅವರಿಗೆ ಲಿಂಗ ದೀಕ್ಷೆ ನೀಡಿ ಪ್ರಧಾನ ಮಂತ್ರಿ ಆಗುತ್ತೀರಿ ಎಂದು ಆಶೀರ್ವಾದ ಮಾಡಿದರು. ಅದಕ್ಕೆ ರಾಜಕಾರಣಿಗಳಿಗೆ ಗೊಂದಲವಾಗಿದೆ. ಬೆಂಬಲಿಸಬೇಕೇ ಅಥವಾ ವಿರೋಧಿಸ ಬೇಕೇ ಎಂಬ ಸ್ವಾರ್ಥದ ಜಿಜ್ಞಾಸೆಗೆ ಬಿದ್ದಿದ್ದಾರೆ. ಏಕೆಂದರೆ ಲಿಂಗಾಯತರ ಮತಗಳು ಇವರಿಗೆ ಮುಖ್ಯ.

ಆ ದೌರ್ಜನ್ಯಕ್ಕೆ ಒಳಗಾದ ಮಕ್ಕಳಾಗಲಿ ಅಥವಾ ಈ ನೆಲದ ಕಾನೂನಿನ ರಕ್ಷಣೆಯಾಗಲಿ ಇವರಿಗೆ ಮುಖ್ಯವಲ್ಲ. ಸಾಮಾನ್ಯ ಜನರಾದ ನಮ್ಮ ಜವಾಬ್ದಾರಿ ಈ ನಿರ್ವಹಿಸ ಬೇಕಾಗಿದೆ….

ಇದು ಸ್ವಾಮಿಗಳ ಬೆಂಬಲ ಅಥವಾ ವಿರೋಧದ ಪ್ರಶ್ನೆಯಲ್ಲ. ಈ ನೆಲದ ಕಾನೂನಿನ ಸಮಾನತೆ ಮತ್ತು ಸ್ವಾತಂತ್ರ್ಯದ ಪ್ರಶ್ನೆ. ಕಾನೂನು ಉಳ್ಳವರಿಗೆ ಮಾತ್ರವಲ್ಲ ಅದು ಎಲ್ಲರಿಗೂ ಒಂದೇ ಎಂದು ಸಾರ ಬೇಕಾದ ಪ್ರಶ್ನೆ. ಇಲ್ಲದಿದ್ದರೆ 75 ವರ್ಷಗಳ ನಂತರವೂ ಈ ದೇಶದ ನಿಜವಾದ ಸ್ವಾತಂತ್ರ್ಯ ಸಾಮಾನ್ಯರಿಗೆ ಇನ್ನೂ ಸಿಕ್ಕಿಲ್ಲ ಎಂದೇ ಭಾವಿಸಬೇಕಾಗುತ್ತದೆ.

ಒಬ್ಬ ಫೋಕ್ಸೋ ಕಾನೂನಿನ ಆರೋಪಿಯನ್ನು ಬಂಧಿಸಲಾಗದ ಕಾನೂನು ಎಷ್ಟೊಂದು ದುರ್ಬಲ ಎಂದು ಜಗಜ್ಜಾಹೀರಾಗುತ್ತದೆ. ಇನ್ನೂ ಮಹಿಳೆಯರಿಗೆ ರಕ್ಷಣೆ ಎಲ್ಲಿ.

ಬಡವರಿಗೆ ಎನ್ ಕೌಂಟರ್. ಬಲಾಡ್ಯರಿಗೆ ಸರೆಂಡರ್‌…..

ಪೋಲೀಸರನ್ನೇ ಗುರಿಯಾಗಿಸಿ ಇದನ್ನು ಹೇಳಲು ಕಾರಣ ಯಾರು ಏನೇ ಹೇಳಿದರು ವಾಸ್ತವ ನೆಲೆಯಲ್ಲಿ ಈ ದೇಶದ ಕಾನೂನು ರಕ್ಷಿಸುವ ಮತ್ತು ನಮ್ಮನ್ನು ರಕ್ಷಿಸುವ ಶಕ್ತಿ ಇರುವುದು ಪೋಲೀಸರಿಗೆ ಮಾತ್ರ. ಆ ನಿರೀಕ್ಷೆಯಿಂದಲೇ ಗೌರವದಿಂದ ಪ್ರೀತಿ ಪೂರ್ವಕ ಆಕ್ರೋಶದ ನುಡಿಗಳು…..

( ಇದೀಗ ಮುರುಘಾ ಮಠದ ಸ್ವಾಮಿಗಳ ಬಂಧನದ ಸುದ್ದಿ ಬಂದಿದೆ. ಆದರೂ ಬಂಧನ ತುಂಬಾ ತಡವಾಯಿತು. ಅದಕ್ಕಾಗಿ ಈ ಆಕ್ರೋಶದ ಲೇಖನ ಈಗಲೂ ಪ್ರಸ್ತುತ…..)

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……

error: No Copying!