ಯಾವಾಗ ಮಠಗಳು ಶಿಕ್ಷಣ ದಾಸೋಹವನ್ನು ಮರೆತು ಲಕ್ಷ ಅಥವ ಕೋಟಿ ರೂಪಾಯಿಗಳ ಕಪ್ಪುಹಣ ಪಡೆದು ಇಂಜಿನಿಯರಿಂಗ್ ಮತ್ತು ಮೆಡಿಕಲ್ ಸೀಟುಗಳ ಮಾರಾಟಕ್ಕೆ ಇಳಿದವೋ, ಆಗಲೇ ರಾಜ್ಯದ ಬಹುತೇಕ ಮಠಾಧೀಶರ ನೈತಿಕ ಅಧಃಪತನ ದೊಡ್ಡಮಟ್ಟದಲ್ಲಿ ಆರಂಭವಾಯಿತು. ಅಲ್ಲಿಯವರೆಗೂ ಸನ್ಯಾಸ ಮತ್ತು ಬ್ರಹ್ಮಚರ್ಯವನ್ನು ಪಾಲಿಸಲಾಗದ ಅಲ್ಲೊಬ್ಬ ಇಲ್ಲೊಬ್ಬ ಮಾತ್ರ ಆಗಾಗ ಸಮಾಜದ ವಿಶ್ವಾಸ ಕಳೆದುಕೊಳ್ಳುತ್ತಿದ್ದರು.
ಈಗ ಮಠಾಧೀಶರು ಸರ್ವಸಂಗ ಪರಿತ್ಯಾಗಿಗಳೂ ಅಲ್ಲ, ಸಮಾಜಕ್ಕೆ ಆದರ್ಶಗಳೂ ಅಲ್ಲ, ಆಧ್ಯಾತ್ಮ ಮತ್ತು ವೈರಾಗ್ಯ ಬೋಧಿಸುವ ಋಷಿಮುನಿಗಳೂ ಅಲ್ಲ.
ಇಷ್ಟೇ ಆಗಿದ್ದರೆ ಅದು ಒಂದು ಹಂತ. ಆದರೆ ಯಾವಾಗ ಮಠಾಧೀಶರು ಭ್ರಷ್ಟ ರಾಜಕಾರಣಿಗಳ ಸಂಗ ಮಾಡಿ, ಅವರಿಂದ ಲಾಭ ಪಡೆದು, ಅಥವ ಹೆಣ್ಣು-ಹೊನ್ನು-ಮಣ್ಣಿನ ಆಸೆಗೆ ರಾಜಕಾರಣಿಗಳ ಹಂಗಿಗೆ, ಬಲೆಗೆ ಬಿದ್ದರೋ, ಆಗ ಎಲ್ಲವೂ ಸರ್ವನಾಶವಾಯಿತು. ಯಾವುದೇ ನೈತಿಕತೆ ಇಲ್ಲದ ಲಂಪಟ, ಭ್ರಷ್ಟ, ದುಷ್ಟ, ಸ್ವಾರ್ಥ ರಾಜಕಾರಣಿಗಳಿಗೆ ಮಠದಲ್ಲಿ ಸನ್ಮಾನ ಮಾಡಿ ಆಶೀರ್ವದಿಸಲು ಆರಂಭಿಸಿದರೋ, ಆಗ ಮಠಗಳಿಗೆ ಅದರ ಪರಂಪರೆಯಲ್ಲಿ ಹಿಂದಿನವರು ಸಂಪಾದಿಸಿಟ್ಟಿದ್ದ ಅಷ್ಟೋ ಇಷ್ಟೋ ಪಾವಿತ್ರ್ಯವೂ ನಶಿಸಿ ಹೋಯಿತು.
ಮುಂದುವರೆದು, ರಾಜಕಾರಣಿಗಳ ಪರವಾಗಿ ಓಟಿಗೆ ತಲೆಹಿಡಿಯುವ ಕೆಲಸವೂ ನಡೆಯಿತು. ಸಹವಾಸದಿಂದ ಸನ್ಯಾಸಿ ಕೆಟ್ಟ.
ಕರ್ನಾಟಕದ ಈಗಿನ ಬಹುತೇಕ ದೊಡ್ಡ ಮಠಾಧೀಶರು ಕಾವಿ ಬಟ್ಟೆ ಧರಿಸಿ ದೊಡ್ಡದೊಡ್ಡ ಆರ್ಥಿಕ ಸಾಮ್ರಾಜ್ಯಗಳನ್ನು ನಿಭಾಯಿಸುವ Chief Executive Officer ಮತ್ತು Chairman of the Board’ಗಳು. ಸಮಾಜ ಸುಧಾರಣೆ, ನೈತಿಕ ಮೌಲ್ಯಗಳ ಉದ್ದೀಪನ, ಆಧ್ಯಾತ್ಮ, ವೈರಾಗ್ಯ, ಸರಳ ಜೀವನ, ಅಹಿಂಸೆ, ಸಮಾಜಕ್ಕೆ ಮಾರ್ಗದರ್ಶನ, ಅಬಲರಿಗೆ ಅಭಯ, ನೊಂದವರಿಗೆ ಸಾಂತ್ವನ, ಬೆಂದವರಿಗೆ ಅಮೃತಸಿಂಚನ, ಇವೆಲ್ಲವೂ ಈಗ ಮಠಗಳಲ್ಲಿ ಗಾಳಿಗೆ ತೂರಿದ ವಿಚಾರಗಳು. ಮೈಮೇಲೆ ಕಾವಿ, ಒಳಗೆ ಅರಿಷಡ್ವರ್ಗಗಳಿಂದ ಕೂಡಿದ ಭವಿ. ಇದರಲ್ಲಿ ಕಾಮ ಸಹಜವಾಗಿಯೇ ಇದೆ. ಆದರೆ ಕೆಲವರು ವಿಕೃತ ಕಾಮಿಗಳೂ ಆಗಿದ್ದಾರೆ. ಸನ್ಯಾಸಿಗೆ ಸಲ್ಲದ ಅರಿಷಡ್ವರ್ಗ ಮತ್ತು ಅದರ ಮೇಲೆ ಮತ್ತಿನ್ನೊಂದು ವಿಕೃತದ ದಾಸ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಶಿವರಾಮ ಕಾರಂತ, ರಾವ್ ಬಹದ್ದೂರ್, ಬಸವರಾಜ್ ಕಟ್ಟೀಮನಿ ಸೇರಿದಂತೆ ಹಲವು ಉದ್ದಾಮ ಸಾಹಿತಿಗಳು ಕಾವಿ ಧರಿಸಿದವರಲ್ಲಿಯೂ ದುರುಳರಿದ್ದಾರೆ ಎಂದು ತಮ್ಮ ಕೃತಿಗಳಲ್ಲಿ ಪರಿಚಯಿಸಿದ್ದಾರೆ.
ಕಾನೂನು ಎಲ್ಲರಿಗೂ ಒಂದೇ; ಪ್ರಬುದ್ಧ ಪ್ರಜಾಪ್ರಭುತ್ವದಲ್ಲಿ. ನಮ್ಮದಿನ್ನೂ ವಿಕಾಸದ ಹಾದಿಯಲ್ಲಿಯೇ ಇರುವ ಪ್ರಜಾಪ್ರಭುತ್ವ. ಹಾಗಾಗಿಯೇ ಇಲ್ಲಿ ಪಟ್ಟಭದ್ರರಿಗೆ ಕಾನೂನುಗಳು ವಿಶೇಷವಾಗಿ ಅನ್ವಯಿಸಲ್ಪಡುತ್ತವೆ.
ತಮ್ಮ ಮಠದ ವಸತಿಗೃಹದಲ್ಲಿ ಆಶ್ರಯ ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಹುಡುಗಿಯರನ್ನು ಚಿತ್ರದುರ್ಗದ ಚಾರಿತ್ರಿಕ ಮುರುಘಾ ಮಠದ ಮಠಾಧೀಶ ಡಾ. ಶಿವಮೂರ್ತಿ ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ದೂರು ದಾಖಲಾಗಿ ನಾಲ್ಕೈದು ದಿನಗಳಾದ ನಂತರ ನೆನ್ನೆ ರಾತ್ರಿ ಅವರ ಬಂಧನವಾಗಿದೆ. ಇಡೀ ಪ್ರಕರಣ ನಮ್ಮ ರಾಜ್ಯದ ಕಾನೂನು ಮತ್ತು ನ್ಯಾಯ ಪ್ರಕ್ರಿಯೆಯ ಯೋಗ್ಯತೆಯನ್ನು ಹಾಗೂ ಅದರ ಮೇಲೆ ರಾಜಕಾರಣಿಗಳಿಗೆ ಹಾಗೂ ಪಟ್ಟಭದ್ರರಿಗೆ ಇರುವ ಹತೋಟಿಯನ್ನು ಎತ್ತಿ ತೋರಿಸಿದೆ. ಪಿತೂರಿಗಳ ಮೂಲಕ ಸಂತ್ರಸ್ತರನ್ನೇ ದೋಷಿಗಳನ್ನಾಗಿ ಮಾಡುವಷ್ಟು ನೀಚ ವ್ಯವಸ್ಥೆ ಈಗಿನದು. ಇದು ಬದಲಾಗಬೇಕಾದರೆ, ಪರಮ ಪವಿತ್ರವಾದ ರಾಜಕಾರಣದಿಂದ ಭ್ರಷ್ಟರು ಮತ್ತು ದುಷ್ಟರು ತೊಲಗಬೇಕು.
ಮಠಗಳಲ್ಲಿ ಹಣದ ಪ್ರಭಾವ ಕಡಿಮೆ ಆಗಲಿ. ಮಠಾಧೀಶರು ಭ್ರಷ್ಟ ರಾಜಕಾರಣಿಗಳ ಓಲೈಕೆಯನ್ನು ನಿಲ್ಲಿಸಿ, ಆರೋಗ್ಯಕರ ಅಂತರ ಕಾಪಾಡಿಕೊಳ್ಳಲಿ. ಅನುಯಾಯಿಗಳ ಹಾಗೂ ಮಠಕ್ಕೆ ನಡೆದುಕೊಳ್ಳುವ ಭಕ್ತರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪ್ರಾಮಾಣಿಕತೆಯಿಂದ ಬದುಕಲಿ. ಸನ್ಯಾಸಿಗೆ ತಕ್ಕುದಲ್ಲದ ಅನೀತಿಯ ಮತ್ತು ಅನೈತಿಕ ಬದುಕನ್ನು ತ್ಯಜಿಸಲಿ.
ಬಡವರು ತಮ್ಮ ಮಕ್ಕಳನ್ನು ಶಿಕ್ಷಣಕ್ಕೆಂದು ಉತ್ತರದಾಯಿತ್ವ ಇಲ್ಲದ ಕಡೆಗಳಲ್ಲಿ ಕಳುಹಿಸುವ ದೈನೇಸಿ ವ್ಯವಸ್ಥೆ ಕೊನೆಯಾಗಿ, ಸರ್ಕಾರವೇ ಅದರ ಹೊಣೆ ಹೊರಲಿ. ಜನರ ತೆರಿಗೆಯ ಗಣನೀಯ ಪ್ರಮಾಣದ ಹಣ ಸರ್ಕಾರಿ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ಬಲವರ್ಧನೆಗೆ ಮೀಸಲಾಗಲಿ.
ಅನ್ಯಾಯ ಮತ್ತು ಶೋಷಣೆಗೆ ಒಳಗಾದವರಿಗೆ ನ್ಯಾಯ ಸಿಗಲಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ.
ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
ಎಲ್ಲರಿಗೂ ಶುಭವಾಗಲಿ.
ವಂದನೆಗಳೊಂದಿಗೆ,
ರವಿ ಕೃಷ್ಣಾರೆಡ್ಡಿ
ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.
02-09-2022.