ಎಷ್ಟೊಂದು ಬದುಕುಗಳು ನಮಗಾಗಿ ನೊಂದಿವೆ, ಬೆಂದಿವೆ, ಮಡಿದಿವೆ ನೆನಪಿರಲಿ……
ಸ್ವಾತಂತ್ರ್ಯದ ಕರೆಗಾಗಿ
ಮನೆ ಮಠಗಳ ಮರೆತು
ಬಂಧು ಬಳಗದವರ ತೊರೆದು,
ಶಿಕ್ಷಣಕ್ಕೆ ಮಂಗಳ ಹಾಡಿ ಹೋರಾಟದಲ್ಲಿ ಧುಮಕಿ ಬದುಕಿಗೇ ವಿದಾಯ ಹೇಳಿದ ತ್ಯಾಗ ಜೀವಿಗಳ ಮರೆಯದಿರೋಣ….
ನಗುನಗುತ್ತಾ ಗಲ್ಲಿಗೇರಿದ,
ಧೈರ್ಯದಿಂದ ಬಂದೂಕಿನ ಗುಂಡಿಗೆ ಎದೆಯೊಡ್ಡಿದ,
ಜೈಲಿನ ಗೋಡೆಗಳ ನಡುವೆ ಪ್ರಾಣ ಬಿಟ್ಟ ನಮ್ಮ ಪೂರ್ವಿಕರ ನೆನಪಾಗಲಿ……
ಮೋಹನ್ ದಾಸ್ ಕರಮಚಂದ್ ಗಾಂಧಿ ಎಂಬ ವ್ಯಕ್ತಿ ನಮ್ಮ ಸ್ವಾತಂತ್ರ್ಯದ ಪ್ರತಿ ಉಸಿರಿನಲ್ಲಿ ನೆನಪಾಗದಿದ್ದರೆ ನಮ್ಮಷ್ಟು ನಮಕ್ ಹರಾಮ್ ಗಳು ಯಾರೂ ಇಲ್ಲ…..
ಭೀಮ್ ರಾವ್ ರಾವ್ ಜಿ ಅಂಬೇಡ್ಕರ್ ಎಂಬ ವ್ಯಕ್ತಿ ನಮ್ಮ ಬದುಕಿನ ಪ್ರತಿ ಕ್ಷಣದಲ್ಲಿ ನೆನಪಾಗದಿದ್ದರೆ ನಮ್ಮಷ್ಟು ನಂಬಿಕೆ ದ್ರೋಹಿಗಳು ಮತ್ಯಾರು ಇಲ್ಲ…….
ಸುಭಾಷ್ ಚಂದ್ರ ಬೋಸ್ ಎಂಬ ವ್ಯಕ್ತಿ ನಮ್ಮ ಬಾವುಟದ ಹಾರಾಟದಲ್ಲಿ ನಮ್ಮ ಮನಸ್ಸಿಗೆ ನೆನಪಾಗದಿದ್ದರೆ ನಮ್ಮ ಸ್ವಾತಂತ್ರ್ಯ ಅಮೃತ ಮಹೋತ್ಸವ ವ್ಯರ್ಥ……
ಚಂದ್ರ ಶೇಖರ್ ಆಜಾದ್ – ಭಗತ್ ಸಿಂಗ್ – ಮಂಗಲ್ ಪಾಂಡೆ – ಖುದಿರಾಂ ಭೋಸ್ – ಉದಂಮ್ ಸಿಂಗ್ ಈ ಸಮಯದಲ್ಲಿ ನೆನಪಾಗದಿದ್ದರೆ ನಮ್ಮಷ್ಟು ಕೃತಜ್ನರು ಯಾರೂ ಇರುವುದಿಲ್ಲ……
ಪಂಡಿತ್ ಜವಹರಲಾಲ್ ನೆಹರು – ಸರ್ದಾರ್ ವಲ್ಲಭಭಾಯ್ ಪಟೇಲ್ ನೀಡಿದ ಕೊಡುಗೆಗಳು ನೆನಪಾಗದಿದ್ದರೆ ನಮ್ಮ ಸ್ವಾತಂತ್ರ್ಯದ ಅರ್ಥ ಪರಿಪೂರ್ಣವಾಗುವುದಿಲ್ಲ.
ವೀರ ಸಾರ್ವರ್ಕರ್ ಅಂಡಮಾನಿನ ಜೈಲಿನಲ್ಲಿ ಅನುಭವಿಸಿದ ನರಕಯಾತನೆ ನೆನಪಾಗದಿದ್ದರೆ ನಮ್ಮ ಸ್ವಾತಂತ್ರ್ಯದ ಇತಿಹಾಸಕ್ಕೆ ಅರ್ಥವೇ ಇರುವುದಿಲ್ಲ…..
ಝಾನ್ಸಿ ರಾಣಿ ಲಕ್ಷ್ಮೀಬಾಯಿ – ಕಿತ್ತೂರು ಚೆನ್ನಮ್ಮ ಈ ಸಂದರ್ಭದಲ್ಲಿ ನಮ್ಮ ಮನಸ್ಸಿನಲ್ಲಿ ಮೂಡದಿದ್ದರೆ ನಮ್ಮಷ್ಟು ಮೂಢರು ಯಾರು ಇಲ್ಲ ಎಂದು ನಾವೇ ಭಾವಿಸಬಹುದು……
ಜಲಿಯನ್ ವಾಲಾಬಾಗ್ ಹತ್ಯಾಕಾಂಡ – ಭೀಮ ಕೊರೆಗಾಂವ್ ಹೋರಾಟ ನಮ್ಮ ಮನದಾಳದಲ್ಲಿ ನೆನಪಾಗದಿದ್ದರೆ ನಮ್ಮಷ್ಟು ಆತ್ಮವಂಚಕರು ಮತ್ಯಾರು ಇರುವುದು ಸಾಧ್ಯವಿಲ್ಲ…….
1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ಗುಂಡಿಗೆ ಬಲಿಯಾದ ವೀರ ಯೋಧರು ಈ ಕ್ಷಣದಲ್ಲಿ ನಮಗೆ ನೆನಪಾಗದಿದ್ದರೆ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕೆ ಬೆಲೆಯೇ ಇರುವುದಿಲ್ಲ……
ಗೋಪಾಲ ಕೃಷ್ಣ ಗೋಖಲೆ – ಬಾಲ ಗಂಗಾಧರ ತಿಲಕ್ – ದಾದಾಭಾಯ್ ನವರೋಜಿ – ಛತ್ರಪತಿ ಶಿವಾಜಿ – ಡಬ್ಲ್ಯೂ ಸಿ ಬ್ಯಾನರ್ಜಿ – ಬಿಪಿನ್ ಚಂದ್ರ ಪಾಲ್ – ಲಾಲ ಲಜಪತ್ ರಾಯ್ – ಮೌಲಾನ ಅಬ್ದುಲ್ ಕಲಾಂ ಆಜಾದ್ – ಸರೋಜಿನಿ ನಾಯ್ಡು – ಅರುಣ ಅಸ್ರಪ್ ಅಲಿ – ರಾಮ್ ಪ್ರಸಾದ್ ಬಿಸ್ಮಿಲ್ಲಾ – ಅಲ್ಲೂರಿ ಸೀತಾ ರಾಮ ರಾಜು – ಅರವಿಂದ್ ಘೋಷ್ – ಲಾಲ್ ಬಹಾದ್ದೂರ್ ಶಾಸ್ತ್ರಿ – ಲಕ್ಷ್ಮೀ ಸೆಹಗಲ್ – ಸಾವಿತ್ರಿ ಬಾಯಿ ಪುಲೆ ನೆನಪಾಗದಿದ್ದರೆ ನಮ್ಮ ಧ್ವಜಗಳ ಹಾರಾಟದ ಸಂಭ್ರಮಕ್ಕೆ ಸರಿಯಾದ ಅರ್ಥ ಇರುವುದಿಲ್ಲ…..
ಟಿಪ್ಪು ಸುಲ್ತಾನ್ – ಸಂಗೊಳ್ಳಿ ರಾಯಣ್ಣ – ಹರ್ಡಿಕರ್ ಮಂಜಪ್ಪ – ಕಾರ್ನಾಡ್ ಸದಾಶಿವರಾಯರು – ಒನಕೆ ಓಬವ್ವ – ಸೇವಾದಳ ಸ್ಥಾಪಿಸಿದ ಎನ್. ಎಸ್ .ಹರ್ಡೇಕರ್ ನೆನಪಾಗದಿದ್ದರೆ ಅದು ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಪೂರ್ಣ ಆಚರಣೆಯಾಗುತ್ತದೆ…..
ಇದು ಕೆಲವು ಸಾಂಕೇತಿಕ ಹೆಸರುಗಳು. ಇದನ್ನು ಮೀರಿ ಲಕ್ಷ – ಕೋಟಿ ಜನರ ತ್ಯಾಗ ಬಲಿದಾನಗಳ ಫಲ ನಾವು ಉಣ್ಣುತ್ತಿದ್ದೇವೆ. ಬಾವುಟಗಳ ಹಾರಾಟದ ನೆಪದಲ್ಲಿ ಈ ವ್ಯಕ್ತಿಗಳು ನಮಗೆ ಸ್ಪೂರ್ತಿಯಾಗಿ ನಮ್ಮ ಸಾಕ್ಷಿ ಪ್ರಜ್ಞೆ ಜಾಗೃತವಾಗಿ ಒಂದಷ್ಟು ಪ್ರಾಮಾಣಿಕತೆ – ಒಂದಷ್ಟು ಬದ್ದತೆ – ಒಂದಷ್ಟು ಶುದ್ಧತೆ – ಒಂದಷ್ಟು ಜೀವಪರತೆ – ಒಂದಷ್ಟು ದೇಶಭಕ್ತಿ ನಮ್ಮಲ್ಲಿ ಮೊಳಕೆಯೊಡೆಯಲಿ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……