ಯಾರಾದರೂ ನಮ್ಮನ್ನು ಟೀಕಿಸಿದರೆ, ನಿಂದಿಸಿದರೆ, ಹೊಡೆದರೆ ನಾವು ಅದಕ್ಕೆ ಒಂದಷ್ಟು ನಮ್ಮ ಮಿತಿಯಲ್ಲಿ ಅದೇ ರೀತಿ ಪ್ರತಿಕ್ರಿಯಿಸಬಹುದು ಅಥವಾ ನಿರ್ಲಕ್ಷಿಸಬಹುದು. ಆದರೆ ಪ್ರೀತಿ ಅಭಿಮಾನದ ನುಡಿಗಳಿಗೆ ಪ್ರತಿ ವಂದನೆ ತುಂಬಾ ಕಷ್ಟ. ಅಕ್ಷರಗಳಿಗೆ ನಿಲುಕದ ಭಾವವದು.
ಮಾನವೀಯ ಮೌಲ್ಯಗಳ ಪುನರುತ್ಥಾನದ ಕನಸಿನ ಯಾತ್ರೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಾರಂಭಿಸಿ ಮುಂದೆ ಅದರ ಸಹಾಯದಿಂದಲೇ ರಾಜ್ಯಾದ್ಯಂತ ಪಾದಯಾತ್ರೆ ಮಾಡಿ ಈಗಲೂ ಓದು ಬರಹ ಮತ್ತು ಕಾರ್ಯಕ್ರಮಗಳ ಮೂಲಕ ಒಂದಷ್ಟು ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ.
ಅದಕ್ಕೆ ಸಿಗುತ್ತಿರುವ ಸ್ಪಂದನೆಗೆ ಸಾಕ್ಷಿಯಾಗಿ ಜನ್ಮದಿನದ ನೆನಪಿನಲ್ಲಿ ನೀವುಗಳು ಶುಭ ಕೋರಿರುವುದು ನನಗೆ ತಲುಪಿದೆ.
ಇಂದಿನ ಆಧುನಿಕ ಸಮಾಜದಲ್ಲಿ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವುದೇ ಒಂದು ಸವಾಲು.
ವಿಚಿತ್ರವೆಂದರೆ, ಆತ್ಮ ವಂಚನೆ ಮಾಡಿಕೊಂಡು ಬದುಕುವುದು ಸುಲಭ. ಆತ್ಮಸಾಕ್ಷಿಗೆ ಅನುಗುಣವಾಗಿ ಜೀವಿಸುವುದು ತುಂಬಾ ಕಷ್ಟ.
ವೈಯಕ್ತಿಕ ಬದುಕು, ಆರ್ಥಿಕ ಅವಶ್ಯಕತೆಗಳು, ಸೈದ್ಧಾಂತಿಕ ಭಿನ್ನತೆಗಳು, ಭವಿಷ್ಯದ ಆತಂಕಗಳು, ಎಲ್ಲವನ್ನೂ ಸಮನ್ವಯ ಗೊಳಿಸುವುದು ಜೊತೆಗೆ ಸಂಪರ್ಕದ ಕೊರತೆಯಿಂದ ಅಥವಾ ಉದ್ದೇಶಪೂರ್ವಕವಾಗಿ ಮಾಡುವ ನಿಂದನೆಗಳ ಸಹಿಸುವಿಕೆ ಎಲ್ಲವೂ ದೊಡ್ಡ ಸವಾಲನ್ನು ಒಡ್ಡುತ್ತದೆ.
ಅಸಲಿಗಳು ಯಾರು ನಕಲಿಗಳು ಯಾರು ಎಂಬ ಗೊಂದಲದ ನಡುವೆ ಕೃತಕತೆ ಸಹಜವಾಗುತ್ತಾ ಸಹಜತೆ ಕೃತಕವಾಗುತ್ತಾ ಬಲವೇ ನ್ಯಾಯ ಎಂಬ ಸಿದ್ದಾಂತ ಬದುಕಿನ ಭಾಗವಾಗಿರುವಾಗ ಮಾನವೀಯ ಮೌಲ್ಯಗಳನ್ನು ಅವುಗಳ ನಿಜ ಅರ್ಥ ಮತ್ತು ಆಚರಣೆಯಲ್ಲಿ ಪುನರ್ ಸ್ಥಾಪಿಸಬೇಕಾದ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರದು.
ಕೊಳ್ಳುಬಾಕ ಸಂಸ್ಕೃತಿ ಬಿತ್ತುತ್ತಿರುವ ವಿಷ ಬೀಜಗಳನ್ನು ಬಡ ಸಮೇತ ಕಿತ್ತು ಹಾಕಿ ನೈತಿಕ ನೆಲೆಯ ನಾಗರಿಕ ಸಮಾಜ ನಿರ್ಮಿಸಲು ಶ್ರಮ ಪಡಬೇಕಾಗಿದೆ. ಭ್ರಷ್ಟಾಚಾರ ಮತ್ತು ಜಾತಿ ಪದ್ದತಿ ಒಂದು ಸಾಂಕ್ರಾಮಿಕ ರೋಗವಾಗಿ ಪರಿಣಮಿಸಿದೆ. ಮಾನವೀಯತೆಗೆ ವಿರುದ್ದವಾದ ಮೌಲ್ಯಗಳು ಸಮಾಜದಲ್ಲಿ ಮಾನ್ಯತೆ ಪಡೆಯುತ್ತಿದೆ.
ಇಷ್ಟೆಲ್ಲದರ ನಡುವೆ ಸಹ ಅನೇಕ ಪ್ರಬುದ್ಧ ಮನಸ್ಸುಗಳು ಈಗಲೂ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿವೆ. ಜನರ ಒಳಿತನ್ನೇ ಬಯಸುತ್ತಿವೆ. ಕೆಟ್ಟದ್ದು ಹೆಚ್ಚಾಗುತ್ತಿದೆ. ಅದು ಅತಿರೇಕ ತಲುಪುತ್ತಿದೆ ಎಂದು ಭಾವನೆ ಬಲವಾಗುತ್ತಿದೆ. ಇದೇ ಬದಲಾವಣೆಯ ಹೊಸ ಆಶಾಕಿರಣ.
ಅದು ಒಂದು ಸಾಮುದಾಯಿಕ ಪ್ರಜ್ಞೆಯಾಗಿ ಪರಿವರ್ತನೆ ಹೊಂದಿದರೆ ನಿಶ್ಚಿತವಾಗಿ ಸಮಾಜ ಒಳ್ಳೆಯ ದಿಕ್ಕಿನತ್ತ ಮುನ್ನಡೆಯುತ್ತದೆ.
ನಿಮ್ಮೆಲ್ಲರ ಪ್ರೀತಿಯ ಮನ ತುಂಬಿದ ಶುಭ ಹಾರೈಕೆಗಳು ನುಡಿದಂತೆ ನಡೆಯುವ ಅಥವಾ ನಡೆದಂತೆ ನುಡಿಯುವ ಆತ್ಮ ಸ್ಥೈರ್ಯ ನೀಡಿದೆ.
ಹಣ ಅಧಿಕಾರಿ ಪ್ರಚಾರ ಪ್ರಶಸ್ತಿಗಳನ್ನು ತಿರಸ್ಕರಿಸಿ ನಿಷ್ಠೆಯಿಂದ ಮತ್ತು ನಿರಂತರವಾಗಿ ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ಜೀವನ ಕೊನೆಯವರೆಗೂ ಪ್ರಯತ್ನಿಸುವ ಸಂಕಲ್ಪಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಇಡೀ ವಿಶ್ವದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿರುವ ಕನ್ನಡದ ಅನೇಕರು ಶುಭ ಕೋರಿದ್ದಾರೆ. ಆ ಹಾರೈಕೆಯ ನೆನಪಿನಲ್ಲಿ ಮುಂದಿನ ಹೆಜ್ಜೆಗಳು ಮತ್ತಷ್ಟು ಹುರುಪಿನಿಂದ ಸಾಗುತ್ತದೆ.
ಎಲ್ಲರಿಗೂ ಮತ್ತೊಮ್ಮೆ ತುಂಬು ಹೃದಯದಿಂದ ಧನ್ಯವಾದಗಳು………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……