Spread the love

ಹಿರಿತನವು ಹೇಡಿಂಗೆ,
ಗುರುತನವು ಮೂಡಂಗೆ,
ದೊರೆತನವು ನಾಡ ನೀಚಂಗೆ
ದೊರೆತಿಹರೆ,
ಧರೆಯೆಲ್ಲಿ ಕೆಡುಕು
ಸರ್ವಜ್ಞ……..

ಸರ್ವರೊಳಗೊಂದೊಂದು ನುಡಿಯ ಕಲಿತ ಸುಮಾರು 16 ನೆಯ ಶತಮಾನದ ಸರ್ವಜ್ಞನೆಂಬ ಚಿಂತಕರ ನುಡಿಯಿದು.

21 ನೆಯ ಶತಮಾನದಲ್ಲಿ 2022 ರ ಇಸವಿಯಲ್ಲಿ ಶೇಕಡಾ ಸುಮಾರು 70/80 ರಷ್ಟು ಅಕ್ಷರಸ್ಥರಿರುವ ಪ್ರಜಾಪ್ರಭುತ್ವದ ದೇಶದಲ್ಲಿ ಈಗಲೂ ಈ ಮಾತು ಎಷ್ಟೊಂದು ಅರ್ಥಪೂರ್ಣವಾಗಿದೆ ಎನಿಸುವುದಿಲ್ಲವೇ….

ಇಲ್ಲಿ ನಾಯಕತ್ವವೂ ನಾಚಿಕೆ ಪಡಬೇಕು ಮತ್ತು ಮತದಾರರೂ ತಲೆತಗ್ಗಿಸಬೇಕು ಜೊತೆಗೆ ಒಟ್ಟಾರೆ ಎಲ್ಲರೂ ಪಶ್ಚಾತ್ತಾಪ ಪಡಬೇಕು.

ಜನ ಸಾಮಾನ್ಯರು ಇಷ್ಟ ಪಟ್ಟ ಊಟ, ಆಸೆ ಪಟ್ಟ ಬಟ್ಟೆ, ಬಯಸಿದ ಮನೆ, ಓಡಾಡಲು ಗಾಡಿ ಕಾರು, ಒಂದಷ್ಟು ಪ್ರವಾಸ, ಸಂಪರ್ಕ – ಮನರಂಜನೆಗೆ ಟಿವಿ ಸಿನಿಮಾ ಮೊಬೈಲು ಎಲ್ಲವೂ ದೊರೆತು ಏನೋ ಇರುವುದರಲ್ಲಿ ತಮ್ಮ ಪ್ರೀತಿ ಪಾತ್ರರ ಜೊತೆ ನೆಮ್ಮದಿಯಾಗಿ ಇರುವ ಎಲ್ಲಾ ಸೌಕರ್ಯಗಳನ್ನು ಪಡೆದಿರುವ ಈ ಸಂದರ್ಭದಲ್ಲಿ ಅದನ್ನು ಅನುಭವಿಸಲು ಸಾಧ್ಯವಾಗದೆ ಅನೇಕರು ಬರ್ಬರವಾಗಿ ದ್ವೇಷಕ್ಕೆ ಬಲಿಯಾಗುತ್ತಿರುವುದು ಹುಚ್ಚುತನದ ಅಥವಾ ದುರಹಂಕಾರದ ಪರಮಾವಧಿ.

ಬದುಕಲು ಯೋಗ್ಯವಲ್ಲದ ಜನರು ಮತ್ತು ಇತರರನ್ನು ಹಿಂಸಿಸಿ ಕೊಲ್ಲುವ ಜನರ ಸಂಖ್ಯೆ ಹೆಚ್ಚಾಗುತ್ತಿರುವುದು ಅತ್ಯಂತ ಕಳವಳಕಾರಿ.

ಕೇವಲ ಈ ಕ್ರಿಮಿನಲ್ ಚಟುವಟಿಕೆಗಳು ಮಾತ್ರವಲ್ಲ ನನ್ನ ಸುತ್ತಮುತ್ತಲಿನ ಅನುಭವದಲ್ಲಿ ಹೇಳಬೇಕೆಂದರೆ, ಬಹುತೇಕರ ಮನೆಯಲ್ಲಿ ಒಬ್ಬರಲ್ಲಾ ಒಬ್ಬರಿಗೆ ಅನಾರೋಗ್ಯ ಕಾಡುತ್ತಿದೆ. ಸಾಲಭಾದೆ ಹೆಚ್ಚಾಗುತ್ತಿದೆ, ಜಗಳಗಳು ಸಾಮಾನ್ಯವಾಗಿದೆ,
ನಂಬಿಕೆಗಳು ನಶಿಸಿ ಹೋಗಿವೆ.

ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ ಮತ್ತು ಆ ಕಾರಣಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಜನ ಪ್ರತಿನಿಧಿಗಳು ಭ್ರಷ್ಟರಾಗಿ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ ಹಾಗೆಯೇ ಜನರು ಭ್ರಷ್ಟರಾಗಿ ಭ್ರಷ್ಟ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿದ್ದಾರೆ.

ಸರ್ವಜ್ಞನ ಚಿಂತನೆಯನ್ನು ಈ‌ ದಿಕ್ಕಿನಲ್ಲಿ ನೋಡಬೇಕಿದೆ. ಅಂದರೆ ಅನರ್ಹರಿಗೆ ನಾವು ನಮ್ಮ ತಲೆ ಕಾಯುವ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದೇವೆ. ಆ ಅನರ್ಹ ಮುಂದೆ ನಮ್ಮ ಬದುಕುವ ಹಕ್ಕನ್ನೇ ಅನರ್ಹಗೊಳಿಸುತ್ತಿದ್ದಾನೆ. ಈಗ ಆ ಅನರ್ಹನನ್ನು ಅನರ್ಹ ಗೊಳಿಸಲು ಸಾಧ್ಯವಾಗದೆ ನಾವು ಬಾಯಿ ಬಡಿದುಕೊಳ್ಳುತ್ತಿದ್ದೇವೆ.

ಮತ್ತೆ ಕೆಲವೇ ತಿಂಗಳುಗಳಲ್ಲಿ ಚುನಾವಣೆ ಬರುತ್ತದೆ. ಮತ್ತೆ ಅನರ್ಹರಿಗೇ ಮತ ನೀಡುತ್ತೇವೆ. ಕುರಿಗಳನ್ನು ಕಾಯಲು ತೋಳವನ್ನು ನೇಮಿಸಿಕೊಂಡಂತೆ ನಾವು ಭ್ರಷ್ಟರಿಗೆ ಮತ ನೀಡುತ್ತೇವೆ. ಈ ವಿಷ ವರ್ತುಲದೊಳಗೆ ಸಿಲುಕಿ ನಾವು ಅನರ್ಹರಾಗುತ್ತಿದ್ದೇವೆ.

ಈಗ ನಮ್ಮ ಮುಂದೆ ಹೆಚ್ಚಿನ ಆಯ್ಕೆಗಳಿಲ್ಲ. ಆದರೆ ಸಂಪರ್ಕ ಕ್ರಾಂತಿಯ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಸ್ಥಳೀಯವಾಗಿ ಒಂದು ಪ್ರಯತ್ನ ಮಾಡಬಹುದು.

ಪಕ್ಷಗಳನ್ನು ತಿರಸ್ಕರಿಸಿ ವ್ಯಕ್ತಿಗಳಿಗೆ ಮಹತ್ವ ಕೊಡುವುದು. ಅಂದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಒಳ್ಳೆಯ ವ್ಯಕ್ತಿಗೆ ಮತ ನೀಡುವುದು. ‌ಇದು ಒಂದು ಅಭಿಯಾನವಾಗಿ ಪ್ರಾರಂಭವಾದರೆ ಸಹಜವಾಗಿ ಒಳ್ಳೆಯ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ಮುಂದೆ ಬರುತ್ತಾರೆ. ಆಗ ರಾಜಕೀಯ ಪಕ್ಷಗಳು ಸಹ ಒಳ್ಳೆಯವರಿಗೇ ಟಿಕೆಟ್ ನೀಡುವ ಸಂಪ್ರದಾಯ ಪ್ರಾರಂಭ ಮಾಡುತ್ತಾರೆ.

ಒಳ್ಳೆಯವರೇ ಇಲ್ಲ ಅಥವಾ ಚುನಾವಣೆಗೆ ಮೊದಲು ಒಳ್ಳೆಯವನಾಗಿದ್ದವನು ನಂತರ ಭ್ರಷ್ಟನಾಗುವನು ಎಂಬ ಸಿನಿಕತನ ಬೇಡ. ಕೆಲವೊಮ್ಮೆ ಹಾಗೆ ‌ಆದರು‌ ನಿಧಾನವಾಗಿ ಬದಲಾವಣೆ ಸಾಧ್ಯವಾಗುತ್ತದೆ. ಒಂದು ಒಳ್ಳೆಯ ಸಂಸ್ಕೃತಿ ಭ್ರಷ್ಟನನ್ನು ಒಳ್ಳೆಯವನಾಗಿ ಸಹ ಪರಿವರ್ತಿಸುವ ಸಾಧ್ಯತೆ ಇರುತ್ತದೆ.

ಪ್ರಯತ್ನಗಳು ಪ್ರಾಮಾಣಿಕವಾಗಿದ್ದಲ್ಲಿ ಫಲಿತಾಂಶಗಳು ಸಹ ಉತ್ತಮವಾಗಿರುತ್ತದೆ ಎಂಬ ಆಶಾಭಾವದೊಂದಿಗೆ…….

ಸರ್ವಜ್ಞನ ಮಾತುಗಳನ್ನು ಮತ್ತೊಮ್ಮೆ ನೆನಪಿಸುತ್ತಾ…….

ದಯವಿಟ್ಟು ಆತ್ಮಾವಲೋಕನ ಮಾಡಿಕೊಂಡು ನಾವು ಬದಲಾಗೋಣ, ಇತರರನ್ನು ಬದಲಾಯಿಸಲು ಪ್ರಯತ್ನಿಸೋಣ…….

ಹಿರಿತನ – ಗುರುತನ – ದೊರೆತನ
ಅರ್ಹರಿಗೆ ನೀಡೋಣ….

ಈ ರಕ್ತ ಸಿಕ್ತ ಭ್ರಷ್ಟ ಸಮಾಜದಲ್ಲಿ ಪ್ರೀತಿಯ ಹೂಮಳೆ ಮತ್ತೆ ಸುರಿಯುವಂತಾಗಲಿ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……

error: No Copying!